Skip to content
Opens in a new window
Listen to this chapter • 2:58

[1] ತೇಮಾನ್ಯನಾದ ಎಲೀಫಜನು ಉತ್ತರಕೊಟ್ಟನು:

[2] “ಒಬ್ಬನು ನಿನ್ನ ಸಂಗಡ ಮಾತಾಡ ತೊಡಗಿದರೆ, ನಿನಗೆ ಬೇಸರಿಕೆ ಉಂಟಾಗುವುದೋ? ಮಾತಾಡದೆ ಸುಮ್ಮನೆ ಇರುವುದಕ್ಕೆ ಯಾರಿಂದಾದೀತು?

[3] ಅನೇಕರಿಗೆ ನೀನು ಶಿಕ್ಷಣ ಕೊಟ್ಟದ್ದನ್ನೂ ಬಲಹೀನ ಕೈಗಳನ್ನು ಬಲಪಡಿಸಿದ್ದನ್ನೂ ಯೋಚಿಸು.

[4] ಎಡವಿ ಬೀಳುವವನನ್ನು ನಿನ್ನ ನುಡಿಗಳು ಎದ್ದು ನಿಲ್ಲಿಸಿದವು. ಬಲಹೀನವಾದ ಮೊಣಕಾಲುಗಳನ್ನು ಬಲಪಡಿಸಿದೆ.

[5] ಈಗ ಆಪತ್ತು ನಿನ್ನ ಮೇಲೆ ಬಂದದ್ದರಿಂದ ನೀನು ದಣಿಯುತ್ತಿರುವೆ; ನಿನಗೂ ಕಡುಕಷ್ಟ ತಟ್ಟಿದ್ದರಿಂದ ಕಳವಳಪಡುತ್ತಿರುವೆ.

[6] ನಿನ್ನ ಭಯಭಕ್ತಿಯೇ ನಿನಗೆ ಭರವಸೆಯೂ ನಿನ್ನ ಸನ್ಮಾಮಾರ್ಗಗಳು ನಿನ್ನ ನಿರೀಕ್ಷೆಯೂ ಆಗಿರಬೇಕಲ್ಲವೇ?

[7] “ನೆನಪುಮಾಡಿಕೋ, ನಿರಪರಾಧಿಯಾಗಿ ನಾಶವಾದವನು ಯಾವನು? ನೀತಿವಂತರು ಅಳಿದು ಹೋದದ್ದು ಎಲ್ಲಿ?

[8] ನಾನು ಕಂಡ ಹಾಗೆ ಕೆಟ್ಟತನವನ್ನು ಊಳುವವರೂ ದುಷ್ಟತನವನ್ನು ಬಿತ್ತುವವರೂ ಅದನ್ನೇ ಕೊಯ್ಯುವರು.

[9] ದೇವರ ಉಸಿರಿನಿಂದ ಅವರು ಕ್ಷಯಿಸಿ ಹೋಗುತ್ತಾರೆ. ದೇವರ ದಂಡನೆಯಿಂದ ಅಂಥವರು ನಾಶವಾಗುತ್ತಾರೆ;

[10] ಸಿಂಹಗಳು ಗರ್ಜಿಸಬಹುದು ಮತ್ತು ಕೂಗಬಹುದು, ಆದರೂ ಪ್ರಾಯದ ಸಿಂಹಗಳ ಹಲ್ಲುಗಳು ಮುರಿದುಹೋಗಿವೆ.

[11] ಸಿಂಹವು ಬೇಟೆ ಇಲ್ಲದ್ದರಿಂದ ನಾಶವಾಗುತ್ತದೆ; ಸಿಂಹದ ಮರಿಗಳು ಚದರಿಹೋಗುವವು.

[12] “ಒಂದು ಮಾತು ನನಗೆ ಗುಟ್ಟಾಗಿ ತಿಳಿದುಬಂತು, ಅದರ ಪಿಸುಮಾತು ನನ್ನ ಕಿವಿಗೆ ಬಿತ್ತು.

[13] ರಾತ್ರಿ ಕನಸಿನ ಆಲೋಚನೆಗಳಲ್ಲಿಯೂ ಗಾಢನಿದ್ರೆಯು ಜನರಿಗೆ ಹತ್ತುವಾಗಲೂ

[14] ಭಯವೂ ನಡುಕವೂ ನನ್ನನ್ನು ಹಿಡಿದು, ನನ್ನ ಎಲ್ಲಾ ಎಲುಬುಗಳನ್ನು ನಡುಗಿಸಿತು.

[15] ಒಂದು ಆತ್ಮವು ನನ್ನ ಮುಂದೆ ಹಾದುಹೋಯಿತು, ಆಗ ನನ್ನ ಮೈ ರೋಮವೆಲ್ಲಾ ನಿಮಿರಿ ನಿಂತವು.

[16] ಆ ಆತ್ಮ ನಿಂತಿದ್ದರೂ ಅದು ಏನೆಂದು ನನಗೆ ತಿಳಿಯಲಿಲ್ಲ. ಅದರ ರೂಪವು ನನ್ನ ಕಣ್ಣು ಮುಂದೆ ನಿಂತಿತ್ತು, ಆಗ ಒಂದು ಸೂಕ್ಷ್ಮ ಸ್ವರವು ಕೇಳಿಸಿತು:

[17] ‘ಮನುಷ್ಯನು ದೇವರಿಗಿಂತ ಹೆಚ್ಚು ನೀತಿವಂತನಾಗಿರಲು ಸಾಧ್ಯವೇ? ಮಾನವನು ಸೃಷ್ಟಿಕರ್ತ ದೇವರಿಗಿಂತಲೂ ಶುದ್ಧನಾಗಿರಲು ಸಾಧ್ಯವೇ?

[18] ತಮ್ಮ ಸೇವಕರಲ್ಲಿ ದೇವರು ನಂಬದೆ, ತಮ್ಮ ದೂತರಲ್ಲಿಯೇ ತಪ್ಪು ಕಂಡಿರಲು,

[19] ಧೂಳಿನಲ್ಲಿರುವ ಅಸ್ತಿವಾರದ ಮೇಲೆ ಮಣ್ಣಿನ ಮನೆಗಳ ನಿವಾಸಿಗಳು, ನುಸಿಗಿಂತಲೂ ಹೆಚ್ಚಾಗಿ ಜಜ್ಜಿಹೋದವರು, ಇನ್ನೂ ಹೆಚ್ಚಾಗಿ ದಂಡನೆಗೆ ಒಳಪಡುವರಲ್ಲವೇ?

[20] ಬೆಳಿಗ್ಗೆಯಿಂದ ಸಂಜೆಯವರೆಗೆ ಜೀವಿಸಿದ ಅವರು ನಾಶವಾಗುತ್ತಾರೆ; ಯಾರ ಗಮನಕ್ಕೂ ಬಾರದೇ ನಿತ್ಯ ನಾಶವಾಗುತ್ತಾರೆ.

[21] ಅವರ ಗುಡಾರದ ಹಗ್ಗವು ಬಿಚ್ಚಿಹೋಗುವುದು, ಅವರು ಜ್ಞಾನವಿಲ್ಲದೆ ಸಾಯುವರು.’

ಯೋಬ — Chapters