Skip to content
Opens in a new window
Listen to this chapter • 3:25

[1] “ನನ್ನ ಜೀವನವೇ ನನಗೆ ಬೇಸರವಾಗಿದೆ; ನನ್ನ ದೂರುಗಳನ್ನು ಮನಬಿಚ್ಚಿ ನುಡಿಯುವೆನು; ನನ್ನ ಪ್ರಾಣದ ಕಹಿಯಿಂದ ಮಾತನಾಡುವೆನು.

[2] ನಾನು ದೇವರಿಗೆ ಹೀಗೆ ಹೇಳುತ್ತೇನೆ: ನನ್ನನ್ನು ಅಪರಾಧಿ ಎಂದು ನಿರ್ಣಯಿಸಬೇಡಿರಿ. ನನ್ನ ಮೇಲೆ ನಿಮಗಿರುವ ಆಪಾದನೆಗಳನ್ನು ನನಗೆ ತಿಳಿಸಿರಿ.

[3] ದೇವರೇ, ನಿಮ್ಮ ಕೈಕೃತಿಯಾಗಿರುವ ನನ್ನನ್ನು ಜಜ್ಜುವುದೂ ನಿಮಗೆ ಮೆಚ್ಚಿಕೆಯೋ? ನೀವು ನನ್ನನ್ನು ಅಲಕ್ಷ್ಯ ಮಾಡುವಿರೋ? ನೀವು ದುಷ್ಟರ ಯೋಜನೆಯನ್ನು ಮೆಚ್ಚುವಿರೋ?

[4] ನಿಮಗೆ ಮಾಂಸದ ಕಣ್ಣುಗಳುಂಟೋ? ಮನುಷ್ಯರು ನೋಡುವಂತೆಯೇ ನೀವೂ ನೋಡುತ್ತೀರೋ?

[5] ದೇವರೇ, ನಿಮ್ಮ ದಿನಗಳು ಮನುಷ್ಯರ ದಿನಗಳ ಹಾಗಿವೆಯೋ? ನಿಮ್ಮ ವರ್ಷಗಳು ಮನುಷ್ಯರ ವರ್ಷಗಳಂತಿವೆಯೋ?

[6] ಏಕೆಂದರೆ ನನ್ನ ತಪ್ಪುಗಳನ್ನು ಹುಡುಕುವ ನಿಮಗೆ ಗೊತ್ತಿದೆ; ಹೌದು, ನನ್ನ ಪಾಪವನ್ನು ವಿಚಾರಿಸುವ ನಿಮಗೇ ಗೊತ್ತಿದೆ.

[7] ನಾನು ಅಪರಾಧಿಯಲ್ಲವೆಂದು ನಿಮಗೆ ಗೊತ್ತಿದೆ, ನಿಮ್ಮ ಕೈಯಿಂದ ತಪ್ಪಿಸುವವರು ಯಾರೂ ಇಲ್ಲವೆಂದೂ ನಿಮಗೆ ಗೊತ್ತಿದೆಯಲ್ಲವೇ?

[8] “ನಿಮ್ಮ ಕೈಗಳು ನನ್ನನ್ನು ನಿರ್ಮಿಸಿದೆ, ನೀವೇ ನನ್ನನ್ನು ರೂಪಿಸಿದವರು; ಈಗ ನೀವೇ ನನಗೆ ವಿಮುಖರಾಗಿ ನನ್ನನ್ನು ತೆಗೆದುಹಾಕುವಿರಾ?

[9] ನೀವು ಕುಂಬಾರನ ಮಣ್ಣಿನಂತೆ ನನ್ನನ್ನು ರೂಪಿಸಿದ್ದೀರಿ ಎಂದು ಜ್ಞಾಪಕಮಾಡಿಕೊಳ್ಳಿರಿ. ಈಗ ನೀವೇ ನನ್ನನ್ನು ಮಣ್ಣಿಗೆ ಸೇರಿಸುವಿರೋ?

[10] ನೀವು ಹಾಲಿನಂತೆ ನನ್ನನ್ನು ಸುರಿಸಲಿಲ್ಲವೋ? ಮೊಸರಿನ ಹಾಗೆ ಹೆಪ್ಪುಗಟ್ಟಿಸಲಿಲ್ಲವೋ?

[11] ದೇವರೇ, ನೀವು ಚರ್ಮವನ್ನೂ, ಮಾಂಸವನ್ನೂ ನನಗೆ ಹೊದಿಸಿದ್ದೀರಿ; ನೀವು ಎಲುಬು ನರಗಳಿಂದಲೂ ನನ್ನನ್ನು ಹೆಣೆದಿರುವಿರಿ.

[12] ದೇವರೇ, ನೀವು ನನಗೆ ಜೀವ ಕೊಟ್ಟಿರಿ, ನೀವು ನನಗೆ ಒಡಂಬಡಿಕೆಯ ಪ್ರೀತಿಯನ್ನೂ ತೋರಿಸಿದ್ದೀರಿ; ನಿಮ್ಮ ಪರಾಮರಿಕೆಯಿಂದ ನನ್ನ ಆತ್ಮವನ್ನು ಕಾಪಾಡಿದ್ದೀರಿ.

[13] “ಆದರೂ ನೀವು ಇವುಗಳನ್ನು ನಿಮ್ಮ ಹೃದಯದಲ್ಲಿ ಮರೆಮಾಡಿಕೊಂಡಿದ್ದೀರಿ; ಇದು ನಿಮ್ಮ ಉದ್ದೇಶ ಎಂದು ನನಗೆ ಗೊತ್ತಿದೆ:

[14] ಅದೇನೆಂದರೆ, ನಾನು ಒಂದು ವೇಳೆ ಪಾಪಮಾಡಿದರೆ, ನೀವು ಅದನ್ನು ಕಂಡುಹಿಡಿದು ನನ್ನ ಅಪರಾಧಕ್ಕಾಗಿ ನನ್ನನ್ನು ದಂಡಿಸದೇ ಬಿಡುವುದಿಲ್ಲ ಎಂಬುದೇ.

[15] ನಾನು ಅಪರಾಧಿಯಾಗಿದ್ದರೆ ನನಗೆ ಕಷ್ಟ! ನಾನು ನೀತಿವಂತನಾಗಿದ್ದರೂ ನನ್ನ ತಲೆ ಎತ್ತಲಾರೆ; ಏಕೆಂದರೆ, ನಾಚಿಕೆಯಿಂದ ನಾನು ತುಂಬಿದ್ದೇನೆ, ನಾನು ಬಾಧೆಯಿಂದ ಮುಳುಗಿಹೋಗಿದ್ದೇನೆ.

[16] ನಾನು ತಲೆಯೆತ್ತಿದರೆ, ಸಿಂಹದಂತೆ ನನ್ನನ್ನು ಬೇಟೆಯಾಡುತ್ತೀರಿ; ನನ್ನ ವಿರುದ್ಧ ನಿಮ್ಮ ಅದ್ಭುತ ಶಕ್ತಿಯನ್ನು ಪ್ರದರ್ಶಿಸುವಿರಿ.

[17] ಹೊಸ ಸಾಕ್ಷಿಗಳನ್ನು ನನಗೆ ವಿರೋಧವಾಗಿ ತರುತ್ತೀರಿ; ನನ್ನ ಮೇಲೆ ಅಧಿಕಬೇಸರಗೊಳ್ಳುತ್ತೀರಿ; ಅಲೆ ಅಲೆಯಾಗಿ ನಿಮ್ಮ ಸೈನ್ಯವು ನನಗೆ ಎದುರಾಗಿವೆ.

[18] “ಹಾಗಾದರೆ ಏಕೆ ನನ್ನನ್ನು ಗರ್ಭದಿಂದ ಹೊರಡ ಮಾಡಿದ್ದೀರಿ? ಯಾರೂ ನನ್ನನ್ನು ನೋಡದ ಹಾಗೆ ನಾನು ಸತ್ತಿದ್ದರೆ ಎಷ್ಟೋ ಒಳ್ಳೆಯದಾಗಿತ್ತು.

[19] ನಾನು ಬದುಕಿರದೇ, ಗರ್ಭದೊಳಗಿಂದಲೇ ಸಮಾಧಿ ಸೇರುತ್ತಿದ್ದೆನು.

[20] ನನ್ನ ಅಲ್ಪದಿನಗಳು ಮುಗಿದಿಲ್ಲವೋ? ಸ್ವಲ್ಪ ಹೊತ್ತು ಆನಂದಿಸಲು ನನ್ನನ್ನು ಬಿಟ್ಟುಬಿಡಿರಿ.

[21] ನಾನು ಹಿಂದಿರುಗಲಾಗದ ಮಬ್ಬಾಗಿರುವ ಕತ್ತಲೆಯ ದೇಶಕ್ಕೆ ಸೇರಲಿರುವೆನು.

[22] ಆ ದೇಶದಲ್ಲಿ ಕಾರ್ಗತ್ತಲೂ, ಗಾಢಾಂಧಕಾರವೂ ಮರಣದ ತುಂಬಿರುವುದು. ಕ್ರಮವಿಲ್ಲದ ಆ ದೇಶದಲ್ಲಿ ಬೆಳಕೂ ಕತ್ತಲೆಯೇ.”

ಯೋಬ — Chapters