Skip to content
Opens in a new window
Listen to this chapter • 5:34

[1] “ಕನ್ನಿಕೆಯನ್ನು ಕಾಮದೃಷ್ಟಿಯಿಂದ ನೋಡುವುದಿಲ್ಲವೆಂದು ನನ್ನ ಕಣ್ಣುಗಳೊಂದಿಗೆ ನಾನು ಒಡಂಬಡಿಕೆಯನ್ನು ಮಾಡಿಕೊಂಡೆನು.

[2] ದೇವರು ಮೇಲಣ ಲೋಕದಿಂದ ಯಾವ ಪಾಲನ್ನು ವಿಧಿಸುವರು? ಸರ್ವಶಕ್ತರು ಉನ್ನತಾಕಾಶದಿಂದ ಕೊಡುವ ಬಾಧ್ಯತೆ ಯಾವುದು?

[3] ದುಷ್ಟರಿಗೆ ವಿಪತ್ತು ಇಲ್ಲವೋ? ಕೆಡುಕರಿಗೆ ವಿನಾಶ ಇಲ್ಲವೋ?

[4] ದೇವರು ನನ್ನ ಮಾರ್ಗಗಳನ್ನು ನೋಡಿ, ನನ್ನ ಹೆಜ್ಜೆಗಳನ್ನೆಲ್ಲಾ ಎಣಿಸುತ್ತಾರಲ್ಲವೆ?

[5] “ನಾನು ಕಪಟವಾಗಿ ನಡೆದುಕೊಂಡಿದ್ದರೆ, ಮೋಸಕ್ಕೆ ನನ್ನ ಕಾಲು ತ್ವರೆಪಟ್ಟಿದ್ದರೆ,

[6] ದೇವರು ನ್ಯಾಯದ ತಕ್ಕಡಿಯಲ್ಲಿ ನನ್ನನ್ನು ತೂಗಿ ನೋಡಲಿ; ನಾನು ನಿರ್ದೋಷಿ ಎಂದು ದೇವರು ತಿಳಿದುಕೊಳ್ಳಲಿ.

[7] ನಾನು ದಾರಿತಪ್ಪಿ ನಡೆದಿದ್ದರೆ, ನನ್ನ ಕಣ್ಣು ಕಂಡವುಗಳ ಹಿಂದೆ ನನ್ನ ಹೃದಯವು ಹೋಗಿದ್ದರೆ, ನನ್ನ ಅಂಗೈಗಳಲ್ಲಿ ದೋಷ ಅಂಟಿಕೊಂಡಿದ್ದರೆ,

[8] ನಾನು ಬಿತ್ತುವುದನ್ನು ಬೇರೊಬ್ಬನು ಉಣ್ಣಲಿ; ನನ್ನ ಬೆಳೆಯು ಬುಡಮೇಲಾಗಲಿ.

[9] “ನನ್ನ ಹೃದಯವು ಪರಸ್ತ್ರೀಗೆ ಮರುಳಾಗಿ, ನನ್ನ ನೆರೆಯವನ ಬಾಗಿಲ ಹತ್ತಿರ ನಾನು ಹೊಂಚುಹಾಕಿದ್ದರೆ,

[10] ನನ್ನ ಹೆಂಡತಿ ಮತ್ತೊಬ್ಬನಿಗೋಸ್ಕರ ಧಾನ್ಯಬೀಸಲಿ, ಮತ್ತೊಬ್ಬರು ಅವಳ ಸಂಗಡ ಮಲಗಲಿ.

[11] ಏಕೆಂದರೆ ನಾನು ಹಾಗೆಲ್ಲಾ ಮಾಡಿದ್ದರೆ, ಅಂಥ ನಡತೆ ದುಷ್ಕಾರ್ಯವಾಗುತ್ತಿತ್ತು, ಆ ಅಪರಾಧವು ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾಗುತ್ತಿತ್ತು.

[12] ಅದು ನಾಶಲೋಕದವರೆಗೆ ದಹಿಸುವಂಥಾ ಅಗ್ನಿಯಾಗುತ್ತಿತ್ತು, ಅದು ನನ್ನ ಆದಾಯವನ್ನೆಲ್ಲಾ ನಿರ್ಮೂಲ ಮಾಡುತ್ತಿತ್ತು.

[13] “ಒಂದು ವೇಳೆ ನನಗೂ ನನ್ನ ದಾಸದಾಸಿಯರಿಗೂ ನನ್ನ ಮೇಲೆ ವ್ಯಾಜ್ಯವಾದಾಗ, ನಾನು ಅವರ ನ್ಯಾಯವನ್ನು ತಿರಸ್ಕರಿಸಿದ್ದರೆ,

[14] ದೇವರು ನ್ಯಾಯಸ್ಥಾಪನೆಗೆ ಏಳುವಾಗ ನಾನು ಏನು ಮಾಡುತ್ತಿದ್ದೆನು? ದೇವರು ವಿಚಾರಿಸುವಾಗ, ನಾನು ಅವರಿಗೆ ಏನು ಉತ್ತರಕೊಡುತ್ತಿದ್ದೆನು?

[15] ಗರ್ಭದಲ್ಲಿ ನನ್ನನ್ನು ಉಂಟುಮಾಡಿದ ದೇವರೇ ಅವರನ್ನೂ ಉಂಟು ಮಾಡಿದ್ದಾರಲ್ಲವೇ? ಅವರನ್ನೂ, ನನ್ನನ್ನೂ ತಾಯಂದಿರ ಗರ್ಭದಲ್ಲಿ ರೂಪಿಸಿದ ದೇವರು ಒಬ್ಬರೇ ಅಲ್ಲವೇ?

[16] “ನಾನು ಬಡವರ ಬಯಕೆಗಳನ್ನು ಭಂಗಪಡಿಸಿದೆನೋ? ವಿಧವೆಯ ಕಣ್ಣುಗಳನ್ನು ನಾನು ಮಂಕಾಗಿಸಿದೆನೋ?

[17] ದಿಕ್ಕಿಲ್ಲದವರು ಊಟ ಉಣ್ಣದ ಹಾಗೆ, ನಾನು ಮಾತ್ರ ತುತ್ತನ್ನೆಲ್ಲಾ ಒಂಟಿಯಾಗಿ ತಿಂದೆನೋ?

[18] ಇಲ್ಲಾ, ನನ್ನ ಯೌವನಕಾಲದಿಂದ ನಾನು ಅನಾಥರನ್ನು ತಂದೆಯಂತೆ ಬೆಳೆಸಿದೆನು. ಹುಟ್ಟಿದಂದಿನಿಂದ ವಿಧವೆಯರಿಗೆ ಮಾರ್ಗದರ್ಶಿಯಾಗಿದ್ದೆನು.

[19] ಬಟ್ಟೆ ಇಲ್ಲದೆ ಕಷ್ಟಪಡುವವರನ್ನೂ, ಹೊದಿಕೆ ಇಲ್ಲದೆ ನಡುಗುವವರನ್ನೂ ನಾನು ನೋಡಿದಾಗೆಲ್ಲಾ,

[20] ಆ ಬಡವರು ನನ್ನ ಕುರಿ ಉಣ್ಣೆಯಿಂದ ಬೆಚ್ಚಗಾಗಿ, ತಮ್ಮ ಅಂತರಾಳದಿಂದ ನನ್ನನ್ನು ಹರಸಲಿಲ್ಲವೋ?

[21] ನ್ಯಾಯಸ್ಥಾನದಲ್ಲಿ ನನಗೆ ಬೆಂಬಲ ಉಂಟೆಂದು ಕಂಡು, ನಾನು ದಿಕ್ಕಿಲ್ಲದವರ ಮೇಲೆ ನನ್ನ ಕೈಮಾಡಿದ್ದರೆ,

[22] ನನ್ನ ಹೆಗಲು, ಬೆನ್ನಿನ ಕೀಲು ತಪ್ಪಿಹೋಗಲಿ; ನನ್ನ ತೋಳು ಅದರ ಸಂದಿನಿಂದ ಕಳಚಿಬೀಳಲಿ.

[23] ಏಕೆಂದರೆ ದೇವರಿಂದ ಬರುವ ವಿಪತ್ತಿನ ಬಗ್ಗೆ ನನಗೆ ಹೆದರಿಕೆಯಾಯಿತು; ದೇವರ ಪ್ರಭಾವದ ಭಯದ ನಿಮಿತ್ತ ನಾನು ಇಂಥ ಕೃತ್ಯವನ್ನು ಮಾಡುವುದಕ್ಕೆ ಸಾಧ್ಯವಾಗಲಿಲ್ಲ.

[24] “ನಾನು ಬಂಗಾರದಲ್ಲಿ ನನ್ನ ನಿರೀಕ್ಷೆಯನ್ನು ಇಟ್ಟಿದ್ದರೆ, ಅಪರಂಜಿಗೆ, ‘ನೀನು ನನ್ನ ಭದ್ರತೆ,’ ಎಂದು ಹೇಳಿದ್ದರೆ,

[25] ನನ್ನ ಐಶ್ವರ್ಯವು ಬಹಳ ಎಂದು ಕೊಚ್ಚಿಕೊಂಡಿದ್ದರೆ, ನನ್ನ ಕೈ ಬಹಳ ಸಂಪಾದಿಸಿದೆ ಎಂದು ನಾನು ಸಂತೋಷಪಟ್ಟಿದ್ದರೆ,

[26] ನಾನು ಸೂರ್ಯನು ಹೊಳೆಯುವುದನ್ನು ಗಮನಿಸಿ, ಚಂದ್ರನು ಪ್ರಭೆಯಲ್ಲಿ ಚಲಿಸುವುದನ್ನು ನೋಡಿ,

[27] ನನ್ನ ಹೃದಯವು ಮರುಳುಗೊಂಡು, ನನ್ನ ಕೈ ಅವುಗಳನ್ನು ನನ್ನ ಬಾಯಿಂದ ಗೌರವದಿಂದ ಮುಗಿದಿದ್ದರೆ,

[28] ಇದು ಸಹ ನ್ಯಾಯಾಧಿಪತಿಯ ದಂಡನೆಗೆ ಯೋಗ್ಯವಾಗುತ್ತಿತ್ತು; ಏಕೆಂದರೆ, ಆಗ ನಾನು ಉನ್ನತದಲ್ಲಿರುವ ದೇವರಿಗೆ ದ್ರೋಹಿಯಾಗುತ್ತಿದ್ದೆನು.

[29] “ವೈರಿಯ ನಾಶಕ್ಕೆ ನಾನು ಸಂತೋಷಪಟ್ಟು, ವೈರಿಗೆ ಕೇಡು ಬಂದಾಗ ಹಿಗ್ಗಿಕೊಂಡು ಗರ್ವಪಟ್ಟೆನೋ?

[30] ಇಲ್ಲ, ಅವನ ಸಾಯಲಿ ಎಂದು ನಾನು ಶಾಪ ಕೊಡಲಿಲ್ಲ. ನಾನು ನನ್ನ ಬಾಯಿಂದ ಅಂಥ ಪಾಪಮಾಡಲಿಲ್ಲ.

[31] ನನ್ನ ಮನೆಯ ಕೆಲಸದವರು, ‘ಯೋಬನು ನೀಡಿದ ಭೋಜನದಿಂದ ತೃಪ್ತರಾಗದವರು ಯಾರು?’ ಎಂದು ಹೇಳಿಕೊಳ್ಳುತ್ತಿದ್ದರಲ್ಲವೆ?

[32] ಆದರೆ ಯಾವ ಪರದೇಶಸ್ಥರೂ ಬೀದಿಯಲ್ಲಿ ತಂಗಬೇಕಾಗಿರಲಿಲ್ಲ; ಪ್ರಯಾಣಿಕರಿಗೆ ನನ್ನ ಬಾಗಿಲು ಸದಾ ತೆರೆದಿಟ್ಟಿದ್ದೆನು.

[33] ನಾನು ಹೃದಯದಲ್ಲಿ ನನ್ನ ಅಪರಾಧ ಪ್ರಜ್ಞೆಯನ್ನು ಅಡಗಿಸಿ, ಮಾನವರಂತೆ ನನ್ನ ದ್ರೋಹವನ್ನು ಮುಚ್ಚಿಕೊಳ್ಳಲಿಲ್ಲ.

[34] ನಾನು ದೊಡ್ಡ ಸಮೂಹಕ್ಕೆ ಹೆದರಿದೆನೋ? ಕುಲಗಳ ಅವಹೇಳನಕ್ಕೆ ಕಳವಳಗೊಂಡರೂ, ಬಾಗಿಲಿನಿಂದ ಹೊರಗೆ ಹೋಗದೆ ಮೌನವಾಗಿದ್ದೆನೋ?

[35] “ನನ್ನ ಕರೆಗೆ ಕಿವಿಗೊಡತಕ್ಕವರು ಒಬ್ಬರು ಈಗ ಇದ್ದರೆ ಎಷ್ಟೋ ಲೇಸು! ಸರ್ವಶಕ್ತರು ನನಗೆ ಉತ್ತರಕೊಡಲಿ; ನನ್ನ ವಿರೋಧಿಯು ನನ್ನ ಆಪಾದನಾ ಪತ್ರವನ್ನು ಬರೆದು ಕೊಡಲಿ.

[36] ನಾನು ನನ್ನ ಹೆಗಲಲ್ಲಿ ಆ ಲಿಖಿತವನ್ನು ನಿಶ್ಚಯವಾಗಿ ಹೊತ್ತು ನಡೆಯುತ್ತಿದ್ದೆ; ಅದನ್ನು ಕಿರೀಟವಾಗಿ ಧರಿಸಿಕೊಳ್ಳುತ್ತಿದ್ದೆನು.

[37] ನನ್ನ ಹೆಜ್ಜೆಗಳ ಲೆಕ್ಕವನ್ನು ದೇವರಿಗೆ ಒಪ್ಪಿಸುತ್ತಿದ್ದೆನು; ಒಬ್ಬ ಅಧಿಪತಿಯಂತೆ ನಾನು ದೇವರನ್ನು ಸಮೀಪಿಸುತ್ತಿದ್ದೆನು.

[38] “ನನ್ನ ಹೊಲ ನನಗೆ ವಿರೋಧವಾಗಿ ಪ್ರತಿಭಟಿಸಿದ್ದರೆ, ಅದರ ನೇಗಿಲ ಗೆರೆಗಳೆಲ್ಲಾ ದೂರಿ ಅಳುತ್ತಿದ್ದರೆ,

[39] ಕೂಲಿಕೊಡದೆ ಭೂಮಿಯ ಫಲವನ್ನು ನಾನು ತಿಂದಿದ್ದರೆ, ಅದರ ಯಜಮಾನರ ಪ್ರಾಣಹಾನಿಗೆ ಕಾರಣನಾಗಿದ್ದರೆ,

[40] ಗೋಧಿಗೆ ಬದಲಾಗಿ ಮುಳ್ಳುಗಳೂ, ಜವೆಗೋಧಿಗೆ ಬದಲಾಗಿ ಕಳೆಗಳೂ ಬೆಳೆಯಲಿ.” ಹೀಗೆ ಯೋಬನ ಮಾತುಗಳು ಮುಗಿದವು.

ಯೋಬ — Chapters