[1] ಎಲೀಹು ಮತ್ತೆ ಹೇಳಿದ್ದೇನೆಂದರೆ:
[2] “ಯೋಬನೇ, ‘ನನ್ನ ನೀತಿಯು ದೇವರ ನೀತಿಗಿಂತ ದೊಡ್ಡದು,’ ಎಂದು ನೀನು ಹೇಳಿದ್ದು ಸರಿಯೆಂದು ನೆನಸುತ್ತೀಯೋ?
[3] ಏಕೆಂದರೆ, ‘ನೀತಿಯಿಂದ ನನಗೇನು ಪ್ರಯೋಜನವಾಯಿತು? ನಾನು ಪಾಪಮಾಡದೆ ಇದ್ದುದರಿಂದ ನನಗೆ ಲಾಭವೇನು? ಎಂದು ನೀನು ದೇವರಿಗೆ ಕೇಳಿದಿ.’
[4] “ನಾನು ನಿನಗೂ, ನಿನ್ನ ಸಂಗಡ ಇರುವ ಸ್ನೇಹಿತರಿಗೂ ಈಗ ಉತ್ತರ ಕೊಡುತ್ತೇನೆ.
[5] ಆಕಾಶಗಳನ್ನು ದೃಷ್ಟಿಸಿ ನೋಡು; ನಿನಗಿಂತಲೂ ಎತ್ತರವಾಗಿರುವ ಮೇಘಗಳನ್ನು ದೃಷ್ಟಿಸು.
[6] ನೀನು ಪಾಪಮಾಡಿದರೆ, ಅದು ದೇವರನ್ನು ಹೇಗೆ ಬಾಧಿಸುತ್ತದೆ? ನಿನ್ನ ಪಾಪಗಳು ಹೆಚ್ಚಾಗಿದ್ದರೆ, ಅದು ದೇವರಿಗೆ ಏನು ಮಾಡುವುದು?
[7] ನೀನು ನೀತಿವಂತನಾಗಿದ್ದರೆ, ದೇವರಿಗೇನು ಕೊಟ್ಟಂತಾಯಿತು? ಅಥವಾ ದೇವರು ನಿನ್ನ ಕೈಯಿಂದ ಏನು ತೆಗೆದುಕೊಂಡಂತಾಯಿತು?
[8] ನಿನ್ನ ದುಷ್ಟತನವು ನಿನ್ನಂಥವರನ್ನೇ ಬಾಧಿಸುವುದು; ನಿನ್ನ ನೀತಿಯಿಂದ ಬೇರೆ ಜನರಿಗೆ ಮಾತ್ರ ಲಾಭವಾಗುವುದು.
[9] “ಅಪಾರ ಹಿಂಸೆಗಳಿಗೆ ಒಳಪಟ್ಟವರು ಮೊರೆಯಿಡುತ್ತಾರೆ; ಬಲಿಷ್ಠರ ಭುಜಬಲದಿಂದ ಪೀಡಿತರು ಕಿರಿಚಿಕೊಳ್ಳುತ್ತಾರೆ.
[10] ಆದರೆ, ‘ರಾತ್ರಿಯಲ್ಲಿ ಗೀತೆಗಳನ್ನು ಕೊಡುವ ನನ್ನ ಸೃಷ್ಟಿಕರ್ತರಾದ ದೇವರು ಎಲ್ಲಿ?
[11] ಭೂಮಿಯ ಮೃಗಗಳಿಗಿಂತ ನಮಗೆ ಹೆಚ್ಚು ಬುದ್ಧಿಕಲಿಸಿಕೊಡುವ ದೇವರು ಎಲ್ಲಿ? ಆಕಾಶದ ಪಕ್ಷಿಗಳಿಗಿಂತ ನಮಗೆ ಅಧಿಕ ಜ್ಞಾನವನ್ನು ಕೊಡುವ ದೇವರು ಎಲ್ಲಿ?’ ಎಂದು ಯಾರೂ ಹೇಳುವುದಿಲ್ಲ.
[12] ಜನರು ದುಷ್ಟರ ಸೊಕ್ಕಿನಿಂದ ನೊಂದು ಗೋಳಾಡುತ್ತಾರೆ; ಆದರೂ ದೇವರು ಅವರಿಗೆ ಉತ್ತರವನ್ನು ದಯಪಾಲಿಸುವುದಿಲ್ಲ.
[13] ನಿಶ್ಚಯವಾಗಿ ವ್ಯರ್ಥಮಾತನ್ನು ದೇವರು ಕೇಳುವುದಿಲ್ಲ; ಸರ್ವಶಕ್ತರು ಬರೀಮಾತನ್ನು ಲಕ್ಷಿಸುವುದಿಲ್ಲ.
[14] ಹೀಗಿರಲು, ‘ದೇವರು ಕಾಣುವುದಿಲ್ಲ, ನನ್ನ ವ್ಯಾಜ್ಯವು ದೇವರ ಮುಂದೆ ಇದೆ; ದೇವರಿಗಾಗಿ ಕಾದಿರುತ್ತೇನೆ,’ ಎಂದು ನೀನು ಹೇಳಿದರೆ, ದೇವರು ನಿನಗೆ ಕಿವಿಗೊಡುವರೋ?
[15] ದೇವರು ಕೋಪದಿಂದ ದುಷ್ಟರನ್ನು ದಂಡಿಸದೆ ಇರುವ ಕಾರಣ, ‘ಆಹಾ, ದೇವರು ದ್ರೋಹವನ್ನು ಅಷ್ಟಾಗಿ ಗಮನಿಸುವುದಿಲ್ಲ,’ ಎಂದು ನೀನು ಹೇಳುವಾಗ ದೇವರು ಕೇಳಿಸಿಕೊಳ್ಳುವರೋ?
[16] ಆದ್ದರಿಂದ ಯೋಬನಾದ ನೀನು ವ್ಯರ್ಥವಾಗಿ ಬಾಯಿತೆರೆದು, ತಿಳುವಳಿಕೆಯಿಲ್ಲದೆ ಬಹಳ ಮಾತಾಡಿರುವಿ.”