[1] ಆಗ ಯೆಹೋವ ದೇವರು ಬಿರುಗಾಳಿಯೊಳಗಿಂದ ಯೋಬನಿಗೆ ಹೀಗೆಂದು ಉತ್ತರಕೊಟ್ಟರು:
[2] “ಅಜ್ಞಾನದ ಮಾತುಗಳಿಂದ ನನ್ನ ಯೋಜನೆಗಳನ್ನು ಮಂಕುಮಾಡುವ ನೀನು ಯಾರು?
[3] ಶೂರನ ಹಾಗೆ ನಡುವನ್ನು ಕಟ್ಟಿಕೋ, ನಾನು ನಿನ್ನನ್ನು ಪ್ರಶ್ನೆಮಾಡುವೆನು; ನೀನೇ ನನಗೆ ಉತ್ತರಕೊಡು.
[4] “ನಾನು ಭೂಮಿಗೆ ಅಸ್ತಿವಾರ ಹಾಕಿದಾಗ, ನೀನು ಎಲ್ಲಿ ಇದ್ದೀ? ನಿನಗೆ ತಿಳುವಳಿಕೆ ಇದ್ದರೆ ನನಗೆ ಹೇಳು.
[5] ಭೂಮಿಯ ಅಳತೆಯನ್ನು ಗೊತ್ತುಮಾಡಿದವರು ಯಾರು? ನಿಶ್ಚಯವಾಗಿ ನಿನಗೆ ಗೊತ್ತಿರಬೇಕಲ್ಲಾ? ಭೂಮಿಯ ಮೇಲೆ ನೂಲು ಹಿಡಿದವರು ಯಾರು?
[6] ಯಾವುದರ ಮೇಲೆ ಭೂಮಿಯ ಅಸ್ತಿವಾರ ಸ್ಥಿರಪಡಿಸಲಾಗಿದೆ? ಅದಕ್ಕೆ ಮೂಲೆಗಲ್ಲನ್ನು ಇಟ್ಟವರು ಯಾರು?
[7] ಉದಯದ ನಕ್ಷತ್ರಗಳು ಕೂಡಿ ಹಾಡುತ್ತಿರುವಾಗ, ದೇವದೂತರೆಲ್ಲರೂ ಹರ್ಷಧ್ವನಿಮಾಡುತ್ತಿರುವಾಗ, ಭೂಮಿಗೆ ಮೂಲೆಗಲ್ಲು ಹಾಕಿದವರಾರು?
[8] “ಭೂಗರ್ಭವನ್ನು ನುಗ್ಗಿಕೊಂಡು ಬಂದ, ಸಮುದ್ರವನ್ನು ದ್ವಾರಗಳಿಂದ ಮುಚ್ಚಿದವರು ಯಾರು?
[9] ನಾನು ಸಮುದ್ರಕ್ಕೆ ಮೇಘವನ್ನು ವಸ್ತ್ರವನ್ನಾಗಿ ತೊಡಿಸಿ, ಅದಕ್ಕೆ ಕಾರ್ಗತ್ತಲನ್ನು ಉಡಿಸಿದೆನು.
[10] ನಾನು ಸಮುದ್ರಕ್ಕೆ ಮಿತಿಗಳನ್ನು ನಿಗದಿಪಡಿಸಿ, ಅಗುಳಿಗಳನ್ನೂ, ಬಾಗಿಲುಗಳನ್ನೂ ಇಟ್ಟೆನು.
[11] ‘ಇಲ್ಲಿಯ ತನಕ ಬರಬಹುದು, ಇದನ್ನು ಮೀರಿ ಬರಕೂಡದು; ಇಲ್ಲಿಗೇ ನಿನ್ನ ತೆರೆಗಳ ಹೆಮ್ಮೆ ನಿಲ್ಲಲಿ,’ ಎಂದು ಆಜ್ಞಾಪಿಸಿದೆನು.
[12] “ಯೋಬನೇ, ನಿನ್ನ ಜೀವಮಾನದಲ್ಲಿ ಎಂದಾದರೂ, ‘ಅರುಣೋದಯವಾಗಲಿ,’ ಎಂದು ಆಜ್ಞಾಪಿಸಿರುವೆಯಾ? ಮುಂಜಾನೆಯ ಬೆಳಗಿಗೆ ಅದರ ಸ್ಥಳವನ್ನು ತಿಳಿಯಪಡಿಸಿರುವೆಯಾ?
[13] ‘ದುಷ್ಟರನ್ನು ಅದರೊಳಗಿಂದ ಒದರಿಬಿಡು,’ ಎಂದು ನೀನು ಭೂಮಿಯ ಅಂಚುಗಳನ್ನು ಹಿಡಿದು ಉದಯಕ್ಕೆ ಎಂದಾದರೂ ಅಪ್ಪಣೆಮಾಡಿದೆಯಾ?
[14] ಮುದ್ರೆ ಒತ್ತಿದ ಜೇಡಿಮಣ್ಣಿನಂತೆ ಭೂಮಿ ರೂಪ ತಾಳುತ್ತದೆ; ನೆರಿಗೆ ಕಟ್ಟಿದ ಉಡಿಗೆಯಂತೆ ಭೂಮಿಯ ವಿಶೇಷತೆಗಳು ಕಾಣಿಸುತ್ತವೆ.
[15] ಅದರಂತೆ ದುಷ್ಟರಿಗೆ ಬೆಳಕು ನಿರಾಕರಿಸಲಾಗುವುದು; ಅವರ ಹಿಂಸಾಚಾರವೂ ಮುರಿದು ಹೋಗುವುದು.
[16] “ನೀನು ಎಂದಾದರೂ ಸಮುದ್ರದ ಬುಗ್ಗೆಗಳಲ್ಲಿ ನಡೆದಿರುವೆಯೋ? ಸಾಗರದ ತಳಹದಿಯಲ್ಲಿ ತಿರುಗಾಡಿರುವೆಯೋ?
[17] ನಿನಗೆ ಮರಣದ ಬಾಗಿಲುಗಳು ತೋರಿಸಲಾಗಿದೆಯೋ? ಘೋರಾಂಧಕಾರದ ಬಾಗಿಲುಗಳನ್ನು ನೀನು ಕಂಡಿರುವೆಯೋ?
[18] ಭೂವಿಸ್ತಾರಗಳನ್ನು ನೀನು ಗ್ರಹಿಸಿರುವೆಯೋ? ಇದನ್ನೆಲ್ಲಾ ನೀನು ತಿಳಿದಿದ್ದರೆ ನನಗೆ ಹೇಳು ನೋಡೋಣ.
[19] “ಬೆಳಕಿನ ನಿವಾಸಕ್ಕೆ ಹೋಗುವ ಮಾರ್ಗವೆಲ್ಲಿ? ಕತ್ತಲು ವಾಸಮಾಡುವ ಸ್ಥಳವೆಲ್ಲಿ?
[20] ನೀನು ಬೆಳಕನ್ನೂ ಕತ್ತಲನ್ನೂ ಅವುಗಳ ಸ್ಥಳಕ್ಕೆ ತೆಗೆದುಕೊಂಡು ಹೋಗಬಲ್ಲೆಯಾ? ಅವು ತಮ್ಮ ಮನೆಗಳಿಗೆ ಹೋಗುವ ಹಾದಿಗಳನ್ನು ನೀನು ಬಲ್ಲೆಯಾ?
[21] ನಿಜವಾಗಿಯೂ ನೀನು ಆಗ ಹುಟ್ಟಿದ್ದರೆ, ಇವೆಲ್ಲಾ ನಿನಗೆ ಗೊತ್ತಾಗುತಿತ್ತು. ಮತ್ತು ಈಗ ನೀನು ಬಹಳ ವರ್ಷಗಳ ವೃದ್ಧನಾಗಿರುತ್ತಿದ್ದೆ.
[22] “ಯೋಬನೇ, ನೀನು ಹಿಮದ ಉಗ್ರಾಣಗಳಲ್ಲಿ ಪ್ರವೇಶಿಸಿರುವೆಯಾ? ಕಲ್ಮಳೆಯ ಉಗ್ರಾಣಗಳನ್ನು ನೋಡಿರುವೆಯಾ?
[23] ಅವುಗಳನ್ನು ನಾನು ಇಕ್ಕಟ್ಟಿನ ಕಾಲಕ್ಕಾಗಿ ಇಟ್ಟಿರುವೆನು; ಯುದ್ಧಕದನಗಳ ದಿನಗಳಿಗಾಗಿಯೂ ಕಾದಿಟ್ಟಿರುವೆನು.
[24] ಬೆಳಕಿನ ಮೂಲ ಮಾರ್ಗ ಎಲ್ಲಿದೆ? ಪೂರ್ವ ಗಾಳಿಯ ಮಾರ್ಗವು ಯಾವುದು?
[25] ಮಳೆಯ ಪ್ರವಾಹಕ್ಕೆ ಕಾಲುವೆಗಳನ್ನು ಕಡಿದವರು ಯಾರು? ಸಿಡಿಲಿಗೆ ಮಾರ್ಗವನ್ನು ನೇಮಿಸಿದವರು ಯಾರು?
[26] ಮಳೆ ಮನುಷ್ಯರಿಲ್ಲದ ಕಾಡಿನಲ್ಲಿಯೂ ನಿರ್ಜನ ಪ್ರದೇಶದಲ್ಲಿಯೂ, ಸುರಿಯುವುದು.
[27] ಹಾಳು ಬೈಲುಗಳಿಗೆ ತೃಪ್ತಿಯನ್ನು ಉಂಟುಮಾಡುವುದು; ಹಸಿರಾದ ಹುಲ್ಲನ್ನು ಮೊಳಿಸುವುದು.
[28] ಮಳೆಗೆ ತಂದೆ ಇದ್ದಾನೆಯೇ? ಮಂಜಿನ ಹನಿಗಳನ್ನು ಹೆತ್ತವಳಿದ್ದಾಳೆಯೆ?
[29] ಯಾರ ಗರ್ಭದಿಂದ ಹಿಮಗಡ್ಡೆ ಹೊರಡುತ್ತದೆ? ಆಕಾಶದ ಇಬ್ಬನಿಯನ್ನು ಹೆತ್ತವರು ಯಾರು?
[30] ಕಲ್ಲಿನ ಹಾಗೆ ನೀರು ಗಟ್ಟಿಯಾಗುವುದು ಯಾವಾಗ? ಸಮುದ್ರದ ಮೇಲ್ಭಾಗವು ಹೆಪ್ಪುಗಟ್ಟುವುದು ಯಾವಾಗ?
[31] “ನೀನು ಕೃತ್ತಿಕೆಯ ಸರಪಣಿಯನ್ನು ಬಂಧಿಸಬಲ್ಲೆಯಾ? ಮೃಗಶಿರದ ಸಂಕೋಲೆಯನ್ನು ಬಿಚ್ಚಬಲ್ಲೆಯಾ?
[32] ನೀನು ನಕ್ಷತ್ರರಾಶಿಗಳನ್ನು ಅವುಗಳ ಕಾಲದಲ್ಲಿ ಹೊರಗೆ ಬರಮಾಡುವೆಯಾ? ಸಪ್ತರ್ಷಿ ತಾರೆಗಳನ್ನು ಅವುಗಳ ಪರಿವಾರ ಸಹಿತವಾಗಿ ನೀನು ನಡೆಸುವೆಯಾ?
[33] ಖಗೋಳದ ನಿಯಮಗಳನ್ನು ನೀನು ತಿಳಿದಿರುವೆಯಾ? ದೇವರ ಆಳಿಕೆಯನ್ನು ಭೂಮಿಯಲ್ಲಿ ಸ್ಥಾಪಿಸಿರುವೆಯಾ?
[34] “ನೀರು ಪ್ರವಾಹವಾಗಿ ನಿನ್ನನ್ನು ತಲುಪುವಂತೆ, ನಿನ್ನ ಧ್ವನಿಯೆತ್ತಿ ಮೋಡಗಳಿಗೆ ಅಪ್ಪಣೆಕೊಡುವೆಯಾ?
[35] ನಿನ್ನ ಅಪ್ಪಣೆಯಂತೆ ಸಿಡಿಲುಗಳು ಹೋಗಿಬಂದು, ‘ಇಗೋ, ನಾವು ಇಲ್ಲಿದ್ದೇವೆ,’ ಎಂದು ನಿನಗೆ ಹೇಳುತ್ತವೆಯೋ?
[36] ಇಬಿಸ್ ಪಕ್ಷಿಗೆ ಜ್ಞಾನವನ್ನು ಕೊಟ್ಟವರು ಯಾರು? ಕೋಳಿಹುಂಜಕ್ಕೆ ಅರಿವನ್ನು ಕೊಟ್ಟವರು ಯಾರು?
[37] ಮೋಡಗಳನ್ನು ಎಣಿಸುವ ಜ್ಞಾನ ಯಾರಿಗೆ ಇದೆ? ಆಕಾಶದಲ್ಲಿನ ಬುದ್ದಲಿಗಳನ್ನು ಸಾಗಿಸುವವರು ಯಾರು?
[38] ಧೂಳುಮಣ್ಣನ್ನು ಒತ್ತಟ್ಟಿಗೆ ಸೇರುವಂತೆ ಮಾಡುವವರು ಯಾರು? ಹೆಂಟೆಗಳು ಒಂದಕ್ಕೊಂದು ಅಂಟಿಕೊಳ್ಳುವಂತೆ ಯಾರು ಮಾಡುವರು?
[39] “ಗುಹೆಯಲ್ಲಿ ಮಲಗಿರುವ ಸಿಂಹದ ಆಹಾರಕ್ಕೋಸ್ಕರ ನೀನು ಬೇಟೆಯಾಡುವೆಯಾ? ಪ್ರಾಯದ ಸಿಂಹಗಳ ಹಸಿವೆಯನ್ನು ನೀನು ನೀಗಿಸುವೆಯಾ?
[40] ಪೊದೆಯಲ್ಲಿ ಹೊಂಚು ಹಾಕಿರುವ, ಪ್ರಾಯದ ಸಿಂಹಗಳ ಹಸಿವೆಯನ್ನು ತೀರಿಸುವೆಯಾ?
[41] ಹಸಿದ ಕಾಗೆ ಮರಿಗಳು ಆಹಾರ ಇಲ್ಲದೆ ಅಲೆದು, ದೇವರಿಗೆ ಮೊರೆ ಇಡುವಾಗ, ತಾಯಿ ಕಾಗೆಗೆ ಆಹಾರವನ್ನು ಒದಗಿಸುವವರು ಯಾರು?