[1] “ಸ್ತ್ರೀಯಿಂದ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನೂ, ಕಷ್ಟಸಂಕಟಗಳಿಂದ ತುಂಬಿದವನೂ ಆಗಿದ್ದಾನೆ.
[2] ಅವನು ಹೂವಿನ ಹಾಗೆ ಅರಳಿ ಬಾಡುವನು; ಅವನು ನೆರಳಿನಂತೆ ಓಡಿಹೋಗುತ್ತಾನೆ, ಶಾಶ್ವತವಾಗಿರುವದಿಲ್ಲ.
[3] ಹಾಗಾದರೆ ಇಂಥವನ ಮೇಲೆ ದೇವರೇ, ನೀವು ನಿಮ್ಮ ಕಣ್ಣಿಟ್ಟೀದೀರಲ್ಲಾ? ನಿಮ್ಮ ನ್ಯಾಯಸ್ಥಾನಕ್ಕೆ ನನ್ನನ್ನು ಬರಮಾಡುತ್ತೀರೋ?
[4] ಅಶುದ್ಧತೆಯಿಂದ ಶುದ್ಧವಾದದ್ದನ್ನು ತರುವವನು ಯಾರು? ಯಾರೂ ತರಲಾರರು!
[5] ಮನುಷ್ಯನ ದಿನಗಳು ಇಷ್ಟೇ ಎಂದು ತೀರ್ಮಾನವಾಗಿದೆ; ಅವನ ತಿಂಗಳುಗಳ ಲೆಕ್ಕ ದೇವರೇ ನಿಮ್ಮ ಬಳಿಯಲ್ಲಿ ಇದೆ; ಅವನು ದಾಟಲಾರದ ಹಾಗೆ ಅವನಿಗೆ ಮೇರೆಗಳನ್ನು ನೇಮಿಸಿದ್ದೀರಿ.
[6] ಆದ್ದರಿಂದ ಅವನು ವಿಶ್ರಾಂತಿ ಪಡೆಯಲೆಂದು ನಿಮ್ಮ ದೃಷ್ಟಿಯನ್ನು ಅವನ ಕಡೆಯಿಂದ ತಿರುಗಿಸಿಬಿಡಿರಿ; ಅವನು ಕೂಲಿಯವನಿಗಿರುವಷ್ಟು ಸಂತೋಷದಿಂದಾದರೂ ತನ್ನ ದಿನವನ್ನು ಕಳೆಯಲಿ.
[7] “ಮರಕ್ಕೆ ಸಹ ಒಂದು ನಿರೀಕ್ಷೆ ಇದೆ: ಅದೇನೆಂದರೆ, ಮರವನ್ನು ಕಡಿದು ಹಾಕಿದರೂ ತಾನು ಮತ್ತೆ ಚಿಗುರುವೆನೆಂಬ ನಿರೀಕ್ಷೆ ಅದಕ್ಕಿದೆ; ಚಿಗುರುವುದನ್ನು ಆ ಮರವು ನಿಲ್ಲಿಸುವುದೇ ಇಲ್ಲ.
[8] ಅದರ ಬೇರು ಭೂಮಿಯಲ್ಲಿ ಹಳೆಯದಾದರೂ, ನೆಲದಲ್ಲಿ ಅದರ ಬುಡ ಸತ್ತಿದ್ದರೂ,
[9] ನೀರಿನ ವಾಸನೆಯಿಂದ ಅದು ಮೊಳೆತು, ಗಿಡದ ಹಾಗೆ ಅದು ಕೊಂಬೆಗಳನ್ನು ಬಿಡುವುದು.
[10] ಆದರೆ ಮನುಷ್ಯನು ಸತ್ತು ಬಿದ್ದಿರುತ್ತಾನೆ; ಅವನು ಕೊನೆಯುಸಿರೆಳೆದಾಗ ಅವನ ಅಂತ್ಯವಾಗುತ್ತದೆ.
[11] ಸರೋವರದ ನೀರು ಒಣಗಿ ಹೋಗುವಂತೆಯೂ, ಬರಗಾಲದಲ್ಲಿ ನದಿಗಳು ಬತ್ತಿಹೋಗುವಂತೆಯೂ,
[12] ಮನುಷ್ಯನು ಸತ್ತು ಮಲಗಿದರೆ ಏಳುವುದೇ ಇಲ್ಲ; ಆಕಾಶಗಳು ಅಳಿದು ಹೋಗುವವರೆಗೆ ಅವನು ಎಚ್ಚರಗೊಳ್ಳುವುದಿಲ್ಲ; ನಿದ್ರೆಯಿಂದ ಎಬ್ಬಿಸಲಾಗುವುದೂ ಇಲ್ಲ.
[13] “ದೇವರೇ, ನೀವು ನನ್ನನ್ನು ಸಮಾಧಿಯಲ್ಲಿ ಮರೆಮಾಡಿ, ನಿಮ್ಮ ಶಿಕ್ಷೆ ಮುಗಿಯುವವರೆಗೂ ನನ್ನನ್ನು ಅಡಗಿಸಿರಿ! ನೀವು ನನಗೆ ಒಂದು ಕಾಲವನ್ನು ನಿಗದಿಪಡಿಸಿ, ಅನಂತರ ನನ್ನನ್ನು ಜ್ಞಾಪಕಮಾಡಿಕೊಂಡರೆ ಲೇಸು!
[14] ಒಬ್ಬ ಮನುಷ್ಯನು ಸತ್ತರೆ ಅವನು ತಿರುಗಿ ಬದುಕುವನೋ? ಆದರೂ ನನಗೆ ನೇಮಕ ಮಾಡಿದ ಪರಿಶ್ರಮದ ದಿನವೆಲ್ಲಾ, ನನಗೆ ಬಿಡುಗಡೆಯಾಗುವವರೆಗೆ ನಾನು ಕಾದುಕೊಂಡಿರುವೆನು.
[15] ದೇವರೇ, ನೀವು ನನ್ನನ್ನು ಕರೆಯುವಿರಿ, ನಾನು ನಿಮಗೆ ಉತ್ತರಕೊಡುವೆನು; ನಿಮ್ಮ ಈ ಸೃಷ್ಟಿಯ ಮೇಲೆ ನೀವು ಹಂಬಲಿಸುವಿರಿ.
[16] ಆಗ ನೀವು ನನ್ನ ಹೆಜ್ಜೆಗಳನ್ನು ಲೆಕ್ಕಿಸುವಿರಿ; ಆದರೆ ನೀವು ನನ್ನ ಪಾಪದ ಬಗ್ಗೆ ದಾಖಲೆ ಇಡುವುದಿಲ್ಲ.
[17] ನನ್ನ ಅಪರಾಧಗಳನ್ನು ಮೂಟೆಕಟ್ಟಿ ಮುದ್ರೆ ಹಾಕಿಬಿಡುವಿರಿ; ನೀವು ನನ್ನ ಅನ್ಯಾಯವನ್ನು ಮರೆಮಾಡುವಿರಿ.
[18] “ಆದರೂ ಬೆಟ್ಟವು ಬಿದ್ದು ಹಾಳಾಗುವಂತೆಯೂ, ಬಂಡೆಯು ತನ್ನ ಸ್ಥಳದಿಂದ ತೊಲಗುವಂತೆಯೂ,
[19] ನೀರು ಕಲ್ಲುಗಳನ್ನು ಸವೆಯಿಸುವಂತೆಯೂ, ಪ್ರವಾಹಗಳು ಭೂಮಿಯ ಮಣ್ಣನ್ನು ಕೊಚ್ಚಿಕೊಂಡು ಹೋಗುವಂತೆಯೂ, ಮನುಷ್ಯನ ನಿರೀಕ್ಷೆಯನ್ನು ನೀವು ನಾಶಮಾಡುತ್ತೀರಿ.
[20] ನೀವು ಅವನ ಮೇಲೆ ಶಾಶ್ವತವಾಗಿ ಮೇಲುಗೈ ಸಾಧಿಸಿರುವದರಿಂದ ಅವನು ಹೊರಟು ಹೋಗುವನು; ನೀವು ಅವನ ಮುಖಭಾವವನ್ನು ಮಾರ್ಪಡಿಸಿ, ಅವನನ್ನು ಕಳುಹಿಸಿಬಿಡುತ್ತೀರಿ.
[21] ಮಕ್ಕಳು ಘನತೆಯನ್ನು ಹೊಂದಿದರೆ, ಅದು ಸತ್ತವರಿಗೆ ತಿಳಿಯುವುದಿಲ್ಲ; ಅವರ ಮಕ್ಕಳು ಕಡಿಮೆ ಸ್ಥಿತಿಗೆ ಬಂದರೆ ಸಹ, ಅದನ್ನು ಸತ್ತವರು ಗ್ರಹಿಸಿಕೊಳ್ಳುವುದಿಲ್ಲ.
[22] ಆದರೆ ಸತ್ತವರು ತಮ್ಮ ದೇಹದ ನೋವನ್ನು ಅನುಭವಿಸುವರು, ಅವರ ಆತ್ಮವು ಅವರಿಗಾಗಿ ಮಾತ್ರ ಪ್ರಲಾಪಿಸುತ್ತಿರುವುದು.”