[1] ಯೋಬನು ಉತ್ತರಕೊಟ್ಟು ಹೇಳಿದ್ದೇನೆಂದರೆ:
[2] “ನನ್ನ ಮಾತನ್ನು ಲಕ್ಷ್ಯವಿಟ್ಟು ಕೇಳಿರಿ, ಇವು ನೀವು ನನಗೆ ನೀಡುವ ಆದರಣೆಗಳಾಗಿರಲಿ.
[3] ನಾನು ಮಾತನಾಡುವಾಗ, ನನ್ನನ್ನು ಸಹಿಸಿಕೊಳ್ಳಿರಿ; ನಾನು ಮಾತನಾಡಿದ ಮೇಲೆ ನೀವು ಪರಿಹಾಸ್ಯ ಮಾಡಬಹುದು.
[4] “ನಾನೇನು ಮನುಷ್ಯನ ವಿಷಯವಾಗಿ ದೂರು ಹೇಳುತ್ತಿದ್ದೇನೋ? ನಾನೇಕೆ ಬೇಸರಪಡಬಾರದು.
[5] ನನ್ನ ಕಡೆಗೆ ಗಮನಿಸಿರಿ; ನೀವು ನಿಮ್ಮ ಬಾಯಿಯ ಮೇಲೆ ಕೈ ಇಟ್ಟು ಬೆರಗಾಗಿರಿ.
[6] ನಾನು ಈ ವಿಷಯವನ್ನು ನೆನಪು ಮಾಡಿಕೊಂಡಾಗ ಭಯಪಡುತ್ತೇನೆ; ನನ್ನ ದೇಹಕ್ಕೆ ನಡುಕ ಹಿಡಿಯುತ್ತದೆ.
[7] ದುಷ್ಟರು ವೃದ್ಧರಾಗುವವರೆಗೆ ಏಕೆ ಬದುಕುತ್ತಾರೆ? ಅಂಥವರು ಬಲಿಷ್ಠರಾಗಿ ಪ್ರಬಲಿಸುವುದಕ್ಕೂ ಕಾರಣವೇನು?
[8] ಅವರೊಂದಿಗೆ ಅವರ ಸಂತಾನದವರು ಅವರ ಮುಂದೆ ಸುಸ್ಥಿರವಾಗುವುದನ್ನೂ, ಅವರ ಮಕ್ಕಳು ನೆಲೆಯಾಗಿರುವುದನ್ನೂ ನೋಡುವರು.
[9] ಅವರ ಮನೆ ಸುರಕ್ಷಿತವಾಗಿ ನಿರ್ಭಯದಿಂದಿರುವುದು; ದೇವರ ದಂಡನೆಯ ಕೋಲು ಅವರ ಮೇಲೆ ಬೀಳದಿರುವುದು.
[10] ಅವರ ಹೋರಿಯು ಅಭಿವೃದ್ಧಿಯಾಗಿರುವುದು; ಅವರ ಆಕಳು ತಪ್ಪದೆ ಈಯುವುದು.
[11] ಅವರ ಮಕ್ಕಳು ಮಂದೆಯಾಗಿ ಹೊರನಡೆಯುತ್ತಾರೆ; ಅವರ ಚಿಕ್ಕವರು ಕುಣಿದಾಡುತ್ತಾ ಹೋಗುತ್ತಾರೆ.
[12] ಅವರು ದಮ್ಮಡಿಯಿಂದಲೂ, ಕಿನ್ನರಿಯಿಂದಲೂ ಹಾಡುತ್ತಾರೆ; ಕೊಳಲಿನ ಶಬ್ದಕ್ಕೆ ಸಂತೋಷಿಸುತ್ತಾರೆ.
[13] ಅವರು ಸಂಪತ್ತಿನಲ್ಲಿ ತಮ್ಮ ದಿನಗಳನ್ನು ಕಳೆಯುತ್ತಾರೆ; ಕೊನೆಗೆ ಸಮಾಧಾನದಿಂದ ಸಮಾಧಿಗೆ ಸೇರುತ್ತಾರೆ.
[14] ಆದರೂ ಇವರು ದೇವರಿಗೆ, ‘ನಮ್ಮನ್ನು ಬಿಟ್ಟುಬಿಡು, ನಿಮ್ಮ ಮಾರ್ಗಗಳ ತಿಳುವಳಿಕೆ ನಮಗೆ ಬೇಡ.
[15] ಸರ್ವಶಕ್ತರು ಯಾರು, ನಾವು ಅವರ ಸೇವೆ ಏಕೆ ಮಾಡಬೇಕು? ನಾವು ದೇವರಿಗೆ ಪ್ರಾರ್ಥನೆಮಾಡಿ ನಮಗೆ ಪ್ರಯೋಜನವೇನು?’ ಎಂದಿದ್ದಾರೆ.
[16] ಆದರೆ ಅವರ ಸುಖವು ಅವರ ಕೈಯಲ್ಲಿ ಇಲ್ಲ; ಆದ್ದರಿಂದ ಆ ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ.
[17] “ಆದರೂ ಎಷ್ಟು ಸಾರಿ ದುಷ್ಟರ ದೀಪವು ಆರಿಹೋಗುತ್ತದೆ? ಎಷ್ಟು ಸಾರಿ ವಿಪತ್ತು ಅವರ ಮೇಲೆ ಬರುತ್ತದೆ? ದೇವರು ವೇದನೆಗಳನ್ನು ತಮ್ಮ ಬೇಸರದಿಂದ ಹಂಚುವುದು ಎಷ್ಟು ಸಾರಿ?
[18] ಅವರು ಗಾಳಿಯ ಮುಂದೆ ಹುಲ್ಲಿನ ಹಾಗೆ ಆದದ್ದು ಎಷ್ಟು ಸಾರಿ? ಬಿರುಗಾಳಿಯು ಹೊಡಕೊಂಡು ಹೋಗುವ ಹೊಟ್ಟಿನ ಹಾಗೆ ಕೊಚ್ಚಿಕೊಂಡು ಹೋದದ್ದು ಎಷ್ಟು ಸಾರಿ?
[19] ‘ದೇವರು ದುಷ್ಟರ ಮಕ್ಕಳಿಗೆ ಅವರ ಅಪರಾಧ ಫಲವನ್ನು ಕಾದಿಡುತ್ತಾರೆ,’ ಎಂದು ಹೇಳುತ್ತಾರಲ್ಲಾ? ಆ ದುಷ್ಟರು ಅನುಭವಿಸುವ ಹಾಗೆ ದೇವರು ಅವನಿಗೆ ಮುಯ್ಯಿಗೆ ಮುಯ್ಯಿ ತೀರಿಸಲಿ.
[20] ದುಷ್ಟರು ತಮ್ಮ ವಿನಾಶವನ್ನು ತಾವಾಗಿಯೇ ನೋಡಲಿ; ಸರ್ವಶಕ್ತರ ದಂಡನೆಯನ್ನು ಅವನು ಅನುಭವಿಸಲಿ.
[21] ದುಷ್ಟರಿಗೆ ನೇಮಕವಾದ ತಿಂಗಳುಗಳು ಮುಗಿದು ಹೋದ ಮೇಲೆ ತಾವು ಬಿಟ್ಟುಹೋಗುವ ಕುಟುಂಬದವರ ಚಿಂತೆ ಅವರಿಗೆ ಎಲ್ಲಿ?
[22] “ದೇವರಿಗೆ ಅರಿವನ್ನು ಬೋಧಿಸಬಹುದೇ? ಉನ್ನತರಿಗೂ ನ್ಯಾಯತೀರಿಸುವುದು ದೇವರೇ ಅಲ್ಲವೇ?
[23] ಒಬ್ಬ ವ್ಯಕ್ತಿಯು ಸುಖವಾಗಿಯೂ, ಸಮೃದ್ಧನಾಗಿಯೂ, ನೆಮ್ಮದಿಯಿಂದ ಇರುವಾಗಲೂ ಸಾಯುತ್ತಾನೆ.
[24] ಅವನ ದೇಹ ಚೆನ್ನಾಗಿ ಬೆಳೆದು ಪೋಷಣೆಯಾಗಿರುತ್ತದೆ; ಅವನ ಎಲುಬುಗಳು ಮಜ್ಜೆಯಿಂದ ತುಂಬಿರುತ್ತದೆ.
[25] ಮತ್ತೊಬ್ಬನು ಎಂದಿಗೂ ಒಳ್ಳೆಯದನ್ನು ಅನುಭವಿಸದೆ, ಕಹಿಯಾದ ಮನೋವ್ಯಥೆಪಡುತ್ತಾ ಸಾಯುತ್ತಾನೆ.
[26] ಇವರಿಬ್ಬರೂ ಮಣ್ಣಿಗೆ ಸೇರುತ್ತಾರೆ; ಹುಳುಗಳು ಅವರನ್ನು ಮುತ್ತಿಕೊಳ್ಳುತ್ತವೆ.
[27] “ನೋಡಿರಿ, ನಿಮ್ಮ ಆಲೋಚನೆಗಳನ್ನು ನಾನು ಬಲ್ಲೆನು. ನೀವು ನನಗೆ ವಿರೋಧವಾಗಿ ಮಾಡುವ ಕುಯುಕ್ತಿಗಳನ್ನೂ ತಿಳಿದಿದ್ದೇನೆ.
[28] ನೀವು, ‘ಪ್ರಧಾನನ ಮನೆ ಈಗ ಎಲ್ಲಿದೆ? ದುಷ್ಟರು ವಾಸಿಸಿದ ಗುಡಾರ ಎಲ್ಲಿ?’ ಎನ್ನುತ್ತೀರಿ.
[29] ಮಾರ್ಗದಲ್ಲಿ ಹಾದು ಹೋಗುವವರನ್ನು ನೀವು ವಿಚಾರಿಸಲಿಲ್ಲವೋ? ಅವರ ಅನುಭವಗಳು ನಿಮಗೆ ಹಿಡಿಸಲಿಲ್ಲವೋ?
[30] ಹೀಗೆ ಆಪತ್ತಿನ ದಿನ ದುಷ್ಟರು ತಪ್ಪಿಸಿಕೊಳ್ಳುತ್ತಾರೆ; ದೇವರ ದಂಡನೆಯ ದಿನದಲ್ಲಿ ಅವರು ಬಿಡುಗಡೆಯಾಗುತ್ತಾರೆ.
[31] ದುಷ್ಟರ ಮಾರ್ಗವನ್ನು ಮುಖಾಮುಖಿಯಾಗಿ ಅವರಿಗೆ ತೋರಿಸುವವರು ಯಾರು? ಅವರು ಮಾಡಿದ ದುಷ್ಕೃತ್ಯಗಳಿಗೆ ಮುಯ್ಯಿ ತೀರಿಸುವವರು ಯಾರು?
[32] ದುಷ್ಟರನ್ನು ಸಮಾಧಿಗೆ ಒಯ್ಯುತ್ತಾರೆ. ಅವರ ಗೋರಿಗೆ ಕಾವಲು ಇಡುತ್ತಾರೆ.
[33] ಕಣಿವೆಯಲ್ಲಿನ ಮಣ್ಣು ಅವರಿಗೆ ಸಿಹಿಯಾಗಿರುತ್ತದೆ; ಪ್ರತಿಯೊಬ್ಬರೂ ಅವರನ್ನು ಹಿಂಬಾಲಿಸುತ್ತಾರೆ. ಹೀಗೆ ಅವರನ್ನು ಲೆಕ್ಕವಿಲ್ಲದಷ್ಟು ಜನರು ಹಿಂಬಾಲಿಸುತ್ತಾರೆ.
[34] “ವ್ಯರ್ಥವಾದ ನಿಮ್ಮ ಮಾತುಗಳಿಂದ ನೀವು ನನ್ನನ್ನು ಸಂತೈಸುವುದು ಹೇಗೆ? ನಿಮ್ಮ ಉತ್ತರಗಳಲ್ಲಿ ವಿಶ್ವಾಸದ್ರೋಹ ಬಿಟ್ಟು ಮತ್ತೇನೂ ಉಳಿದಿರುವುದಿಲ್ಲ.”