Skip to content
Opens in a new window
Listen to this chapter • 5:27

[1] ಯೋತಾಮನ ಮಗನೂ, ಉಜ್ಜೀಯನ ಮೊಮ್ಮಗನೂ, ಯೆಹೂದದ ಅರಸನೂ ಆದ ಆಹಾಜನ ಕಾಲದಲ್ಲಿ, ಅರಾಮ್ಯರ ಅರಸನಾದ ರೆಚೀನ, ರೆಮಲ್ಯನ ಮಗನೂ, ಇಸ್ರಾಯೇಲರ ಅರಸನೂ ಆದ ಪೆಕಹ ಎಂಬುವರು ಯೆರೂಸಲೇಮಿನ ವಿರುದ್ಧವಾಗಿ ಯುದ್ಧಕ್ಕೆ ಹೋದರು. ಆದರೆ ಅದನ್ನು ಜಯಿಸಲು ಸಾಧ್ಯವಾಗಲಿಲ್ಲ.

[2] ಸಿರಿಯಾದವರು ಎಫ್ರಾಯೀಮ್ಯರೊಂದಿಗೆ ಜತೆಗೂಡಿದ್ದಾರೆಂದು ದಾವೀದನ ವಂಶದವರಿಗೆ ತಿಳಿದಾಗ, ಆಹಾಜನ ಮತ್ತು ಅವರ ಪ್ರಜೆಯ ಹೃದಯವು ಅರಣ್ಯದ ಮರಗಳು ಗಾಳಿಗೆ ಅಲುಗಾಡುವಂತೆ ನಡುಗಿದವು.

[3] ಆಗ ಯೆಹೋವ ದೇವರು ಯೆಶಾಯನಿಗೆ, “ನೀನು ನಿನ್ನ ಮಗ ಶೆಯಾರ್ ಯಾಶೂಬನನ್ನು ಕರೆದುಕೊಂಡು ಹೋಗಿ, ಅಗಸರ ಹೊಲದ ಮೇಲೆ ಹೋಗುವ ದಾರಿಯಲ್ಲಿ ಮೇಲಿನ ಕೆರೆಯ ಕಾಲುವೆಯ ಕೊನೆಯ ಹತ್ತಿರ ಆಹಾಜನನ್ನು ಎದುರುಗೊಳ್ಳು.

[4] ಅವನಿಗೆ, ಈ ಪ್ರಕಾರ ಹೇಳಬೇಕು: ‘ಜಾಗರೂಕನಾಗಿ ಸುಮ್ಮನಿರು, ಭಯಪಡಬೇಡ. ರೆಚೀನ, ಅರಾಮ್ಯರು, ಮತ್ತು ರೆಮಲ್ಯನ ಮಗ ಇವರ ಕೋಪವು ಎಷ್ಟು ಹೆಚ್ಚಿದರೂ ಹೊಗೆಯಾಡುವ ಈ ಎರಡು ಮೋಟುಕೊಳ್ಳಿಗಳಿಗೆ ನಿನ್ನ ಹೃದಯವು ಕುಂದದಿರಲಿ.

[5] ಏಕೆಂದರೆ, ಸಿರಿಯಾದವರೂ ಎಫ್ರಾಯೀಮಿನವರೂ ರೆಮಲ್ಯನ ಮಗನೂ ನಿನಗೆ ವಿರೋಧವಾಗಿ ಒಳಸಂಚುಮಾಡಿ,

[6] “ನಾವು ಯೆಹೂದಕ್ಕೆ ವಿರೋಧವಾಗಿ ಹೋಗಿ, ಅದನ್ನು ವ್ಯಥೆಪಡಿಸಿ, ಅದರಲ್ಲಿ ನಮಗಾಗಿ ಮಾಡಿಕೊಂಡಿರುವ ಒಪ್ಪಂದವನ್ನು ಉಲ್ಲಂಘಿಸಿ, ಅದರ ಮಧ್ಯದಲ್ಲಿ ಒಬ್ಬ ಅರಸನನ್ನು ಅಂದರೆ ಟಾಬೆಯೇಲನ ಮಗನನ್ನು ನೇಮಿಸಿಕೊಳ್ಳೋಣ,” ಎಂದುಕೊಂಡಿದ್ದಾರೆ.

[7] ಅದಕ್ಕೆ ಸಾರ್ವಭೌಮ ಯೆಹೋವ ದೇವರು, “ ‘ಅದು ನಿಲ್ಲುವುದಿಲ್ಲ, ಅದು ಆಗುವುದೇ ಇಲ್ಲ.

[8] ಏಕೆಂದರೆ, ದಮಸ್ಕವು ಸಿರಿಯಾದ ರಾಜಧಾನಿ ಮತ್ತು ದಮಸ್ಕದ ತಲೆಯು ರೆಚೀನ ಮಾತ್ರ, ಅರವತ್ತೈದು ವರುಷಗಳೊಳಗೆ ಎಫ್ರಾಯೀಮರು ರಾಷ್ಟ್ರವಾಗದೆ ಭಂಗಪಡುವರು.

[9] ಎಫ್ರಾಯೀಮಿನ ರಾಜಧಾನಿ ಸಮಾರ್ಯ. ಸಮಾರ್ಯದ ರಾಜಧಾನಿ ರೆಮಲ್ಯನ ಮಗನು. ನೀವು ನಂಬದೆ ಹೋದರೆ ನೀವು ನಿಜವಾಗಿಯೂ ನೆಲೆಗೊಳ್ಳುವುದಿಲ್ಲ,’ ಎಂದು ಹೇಳುತ್ತಾರೆ.”

[10] ಯೆಹೋವ ದೇವರು ಆಹಾಜನಿಗೆ ಹೇಳಿದ್ದೇನೆಂದರೆ:

[11] “ನಿನ್ನ ದೇವರಾದ ಯೆಹೋವ ದೇವರಿಂದ ಒಂದು ಗುರುತನ್ನು ಕೇಳು. ಅದು ಕೆಳಗೆ ಆಳದಲ್ಲಿದ್ದರೂ, ಮೇಲೆ ಎತ್ತರಲ್ಲಿದ್ದರೂ ಅದನ್ನು ಕೇಳಿಕೋ,” ಎಂದು ಹೇಳಿದರು.

[12] ಆದರೆ ಆಹಾಜನು, “ನಾನು ಕೇಳಿಕೊಳ್ಳುವುದಿಲ್ಲ; ಯೆಹೋವ ದೇವರನ್ನು ಪರೀಕ್ಷಿಸುವುದೂ ಇಲ್ಲ” ಎಂದನು.

[13] ಅದಕ್ಕೆ ಯೆಶಾಯನು, “ದಾವೀದನ ವಂಶದವರೇ! ಈಗ ಕೇಳಿರಿ, ಮನುಷ್ಯರ ತಾಳ್ಮೆಯನ್ನು ಪರೀಕ್ಷಿಸುವುದು ಸಾಕಾಗುವುದಿಲ್ಲವೇ? ನೀವು ನನ್ನ ದೇವರ ತಾಳ್ಮೆಯನ್ನು ಪರೀಕ್ಷಿಸುವಿರಾ?

[14] ಆದಕಾರಣ ಯೆಹೋವ ದೇವರು ತಾವೇ ಒಂದು ಗುರುತನ್ನು ನಿನಗೆ ಕೊಡುವರು. ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹೆರುವಳು. ಆ ಮಗುವಿಗೆ, ‘ಇಮ್ಮಾನುಯೇಲ್’ ಎಂದು ಹೆಸರಿಡುವರು.

[15] ಆ ಮಗು ಬೆಳೆದು, ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವಷ್ಟು ತಿಳುವಳಿಕೆಯು ಬರುವ ತನಕ ಮೊಸರನ್ನು ಮತ್ತು ಜೇನನ್ನು ತಿನ್ನುವುದು.

[16] ಹೌದು, ಆ ಮಗುವು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವುದಕ್ಕಿಂತ ಮುಂಚೆಯೇ, ನೀನು ಭಯಪಡುವ ಆ ಅರಸರುಗಳ ದೇಶ ನಿರ್ಜನವಾಗುವುದು.

[17] ಯೆಹೋವ ದೇವರು ನಿನ್ನ ಮೇಲೆಯೂ, ನಿನ್ನ ಜನರ ಮೇಲೆಯೂ, ನಿನ್ನ ತಂದೆಯ ಮನೆಯ ಮೇಲೆಯೂ ಯೆಹೂದದಿಂದ ಎಫ್ರಾಯೀಮು ಅಗಲಿದ ದಿನದಿಂದ ಅಂದರೆ ಅಸ್ಸೀರಿಯದ ಅರಸನ ಕಾಲದಿಂದಲೂ ಬಾರದೆ ಇದ್ದ ದಿವಸಗಳನ್ನು ಬರಮಾಡುವರು.”

[18] ಆ ದಿನದಲ್ಲಿ ಈಜಿಪ್ಟಿನ ನದಿಗಳ ಕಟ್ಟಕಡೆಯಿಂದ ನೊಣಕ್ಕೂ, ಅಸ್ಸೀರಿಯ ದೇಶದ ಜೇನುಹುಳಕ್ಕೂ ಯೆಹೋವ ದೇವರು ಸಿಳ್ಳುಹಾಕುವರು.

[19] ಅವು ಬಂದು ಹಾಳಾದ ಕಣಿವೆಗಳಲ್ಲಿಯೂ ಬಂಡೆಗಳ ಬಿರುಕುಗಳಲ್ಲಿಯೂ ಎಲ್ಲಾ ಮುಳ್ಳಿನ ಮೇಲೆಯೂ ಎಲ್ಲಾ ಪೊದೆಗಳಲ್ಲಿಯೂ ಮುತ್ತಿಕೊಳ್ಳುವುವು.

[20] ಅದೇ ದಿನದಲ್ಲಿ ಯೆಹೋವ ದೇವರು ಯೂಫ್ರೇಟೀಸ್ ನದಿಯ ಆಚೆಗಿರುವ ಅಸ್ಸೀರಿಯದ ರಾಜನೆಂಬುವನಿಂದ ಬಾಡಿಗೆ ಕ್ಷೌರದ ಕತ್ತಿಯಿಂದ ಯೆಹೂದದ ತಲೆ ಮತ್ತು ಕಾಲಿನ ಕೂದಲನ್ನು ಬೋಳಿಸುವರು ಹಾಗೂ ಗಡ್ಡವನ್ನು ತೆಗೆದುಬಿಡುವರು.

[21] ಆ ದಿನದಲ್ಲಿ ಮನುಷ್ಯನು ಒಂದು ಹಸುವಿನ ಕಡಸನ್ನು ಮತ್ತು ಎರಡು ಕುರಿಗಳನ್ನು ಸಾಕುವನು.

[22] ಅವು ಸಮೃದ್ಧಿಯಾಗಿ ಹಾಲನ್ನು ಕೊಡುವುದರಿಂದ ಅವನು ಮೊಸರನ್ನು ತಿನ್ನುವನು. ಏಕೆಂದರೆ ಆ ದೇಶದಲ್ಲಿ ಉಳಿದಿರುವವರೆಲ್ಲರೂ ಮೊಸರನ್ನು ಮತ್ತು ಜೇನುತುಪ್ಪವನ್ನು ತಿನ್ನುವರು.

[23] ಆ ದಿನದಲ್ಲಿ ಸಾವಿರ ಬೆಳ್ಳಿ ನಾಣ್ಯಗಳ ಬೆಲೆಯ ಸಮಸ್ತ ದ್ರಾಕ್ಷಿಬಳ್ಳಿಗಳು ಬೆಳೆಯುವ ಪ್ರತಿಯೊಂದು ಪ್ರದೇಶವು ಮುಳ್ಳು ಮತ್ತು ದತ್ತೂರಿಗಳಿಂದ ಆಗುವುದು.

[24] ದೇಶವೆಲ್ಲಾ ಮುಳ್ಳು ದತ್ತೂರಿಗಳಿಂದ ತುಂಬಿರುವುದರಿಂದ ಮನುಷ್ಯರು ಬಿಲ್ಲು ಮತ್ತು ಬಾಣಗಳೊಂದಿಗೆ ಅಲ್ಲಿಗೆ ಬರುವರು.

[25] ಗುದ್ದಲಿಯಿಂದ ಅಗೆಯುವ ಗುಡ್ಡಗಳ ಮೇಲೆ ಮುಳ್ಳು ದತ್ತೂರಿಗಳಿಗೆ ಹೆದರಿ ಅಲ್ಲಿಗೆ ಬರಲಾರದೆ ಇರುವಿ. ಆದರೆ ಅದು ಎತ್ತುಗಳನ್ನು ಬಿಡುವುದಕ್ಕೂ, ಕುರಿಗಳು ತುಳಿದಾಡುವುದಕ್ಕೂ ಗುರಿಯಾಗುವುದು.

ಯೆಶಾಯ — Chapters