Skip to content
Opens in a new window
Listen to this chapter • 1:37

[1] ಆ ದಿವಸದಲ್ಲಿ ಏಳುಮಂದಿ ಹೆಂಗಸರು ಒಬ್ಬ ಮನುಷ್ಯನನ್ನು ಹಿಡಿದು, “ನಾವು ಸ್ವಂತವಾಗಿ ದುಡಿದು ಉಣ್ಣುವೆವು, ನಾವೇ ಸಂಪಾದಿಸಿ ವಸ್ತ್ರಗಳನ್ನು ಉಟ್ಟುಕೊಳ್ಳುವೆವು, ನಮ್ಮ ನಿಂದೆಯನ್ನು ನೀಗಿಸುವುದಕ್ಕೆ ನಿನ್ನ ಹೆಸರು ನಮಗಿದ್ದರೆ ಸಾಕು,” ಎಂದು ಕೇಳಿಕೊಳ್ಳುವರು.

[2] ಆ ದಿನದಲ್ಲಿ ಯೆಹೋವ ದೇವರ ಕೊಂಬೆಯು ಸುಂದರವಾಗಿಯೂ, ಮಹಿಮೆಯುಳ್ಳದ್ದಾಗಿಯೂ ಇರುವುದು. ಭೂಮಿಯ ಫಲವು ಇಸ್ರಾಯೇಲರಲ್ಲಿ ಉಳಿದವರಿಗೆ ಅಭಿಮಾನವೂ, ರಮ್ಯವಾಗಿಯೂ ಇರುವುದು.

[3] ಹೀಗಿರುವಲ್ಲಿ ಚೀಯೋನಿನಲ್ಲಿ ಉಳಿದವರು, ಯೆರೂಸಲೇಮಿನಲ್ಲಿ ಉಳಿದವರು ಹಾಗೂ ಯೆರೂಸಲೇಮಿನಲ್ಲಿ ವಾಸಿಸುವವರೆಂದೂ ದಾಖಲೆಗೊಂಡ ಪ್ರತಿಯೊಬ್ಬರೂ ಪವಿತ್ರರು ಎಂದು ಕರೆಯಲಾಗುವರು.

[4] ಯೆಹೋವ ದೇವರು ನ್ಯಾಯತೀರ್ಪಿನ ಆತ್ಮದಿಂದಲೂ, ದಹಿಸುವ ಆತ್ಮದಿಂದಲೂ ಚೀಯೋನಿನ ಪುತ್ರಿಯರ ಕಲ್ಮಷವನ್ನು ತೊಳೆದು, ಯೆರೂಸಲೇಮಿನ ಮೇಲಿನ ರಕ್ತದ ಕಲೆಗಳನ್ನು ತೆಗೆದುಹಾಕುವರು.

[5] ಆಗ ಯೆಹೋವ ದೇವರು ಚೀಯೋನ್ ಪರ್ವತದ ಪ್ರತಿಯೊಂದು ನಿವಾಸದ ಮೇಲೂ, ಅದರ ಸಭೆಗಳ ಮೇಲೂ, ಹಗಲಿನಲ್ಲಿ ಹೊಗೆಯನ್ನೂ, ಮೇಘವನ್ನೂ, ಇರುಳಿನಲ್ಲಿ ಪ್ರಜ್ವಲಿಸುವ ಅಗ್ನಿಪ್ರಕಾಶವನ್ನು ಉಂಟುಮಾಡುವರು. ಏಕೆಂದರೆ ದೇವರ ಮಹಿಮೆ ಎಲ್ಲದರ ಮೇಲೆ ಚಪ್ಪರದಂತೆಯೂ ಆವರಿಸುವುದು.

[6] ಹಗಲಲ್ಲಿ ಬಿಸಿಲಿಗೆ ನೆರಳಾಗುವ ಹಾಗೂ, ಬಿರುಗಾಳಿಗೂ, ಮಳೆಗೂ ಆಶ್ರಯವನ್ನು ಕೊಡುವ ಮಂಟಪವಾಗಿ ಇರುವುದು.

ಯೆಶಾಯ — Chapters