Skip to content
Opens in a new window
Listen to this chapter • 7:17

[1] ದ್ವೀಪಗಳೇ, ನನ್ನ ಮಾತನ್ನು ಕೇಳಿರಿ. ದೂರದ ರಾಷ್ಟ್ರಗಳೇ, ಕಿವಿಗೊಡಿರಿ! ನನ್ನ ಜನನದ ಮುಂಚೆಯೇ ಯೆಹೋವ ದೇವರು ನನ್ನನ್ನು ಕರೆದರು. ತಾಯಿಯ ಉದರದಲ್ಲಿದ್ದಾಗಲೇ ನನಗೆ ಹೆಸರಿಟ್ಟರು.

[2] ಆತನು ನನ್ನ ಬಾಯನ್ನು ಹರಿತವಾದ ಖಡ್ಗವನ್ನಾಗಿ ಮಾಡಿ, ತನ್ನ ಕೈ ನೆರಳಿನಲ್ಲಿ ನನ್ನನ್ನು ಮರೆಯಾಗಿಟ್ಟಿದ್ದಾನೆ. ನನ್ನನ್ನು ಆತನು ನುಣುಪಾದ ಬಾಣವನ್ನಾಗಿ ರೂಪಿಸಿ, ತನ್ನ ಬತ್ತಳಿಕೆಯಲ್ಲಿ ಮುಚ್ಚಿಟ್ಟಿದ್ದಾನೆ.

[3] ಆತನು ನನಗೆ, “ನೀನು ನನ್ನ ಸೇವಕನು. ನಾನು ಮಹಿಮೆ ಹೊಂದಬೇಕಾದ ಇಸ್ರಾಯೇಲೂ ಆಗಿದ್ದೀ!” ಎಂದು ಹೇಳಿದನು.

[4] ಅದಕ್ಕೆ ನಾನು, “ನಾನು ಪಡುವ ಪ್ರಯಾಸವು ವ್ಯರ್ಥ. ನನ್ನ ಶಕ್ತಿಯೆಲ್ಲ ಶೂನ್ಯವಾಯಿತು, ನನ್ನ ಸಾಮರ್ಥ್ಯವೆಲ್ಲ ವ್ಯರ್ಥವಾಯಿತು,” ಎಂದು ಹೇಳಿದೆನು. ಆದರೂ ನಿಶ್ಚಯವಾಗಿ ನನ್ನ ನ್ಯಾಯವು ಯೆಹೋವ ದೇವರ ಬಳಿಯಲ್ಲಿಯೂ, ನನ್ನ ಪ್ರತಿಫಲವು ನನ್ನ ದೇವರಲ್ಲಿಯೂ ಉಂಟು.

[5] ಈಗ ಯೆಹೋವ ದೇವರು ಹೀಗೆ ಹೇಳುತ್ತಾರೆ, ಯಾಕೋಬ್ಯರನ್ನು ತನ್ನ ಬಳಿಗೆ ಕರೆತರುವಂತೆಯೂ, ಇಸ್ರಾಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳುವಂತೆಯೂ ದೇವರು ಗರ್ಭದಲ್ಲಿಯೇ ನನ್ನನ್ನು ತನ್ನ ಸೇವಕನನ್ನಾಗಿ ರೂಪಿಸಿದನು. ಆದರೂ ನಾನು ಯೆಹೋವ ದೇವರ ದೃಷ್ಟಿಯಲ್ಲಿ ಮಾನ್ಯನಾಗಿರುವೆನು. ನನ್ನ ದೇವರೇ ನನಗೆ ಬಲವು.

[6] ಆತನೇ ಈಗ ಹೀಗೆನ್ನುತ್ತಾನೆ, “ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬಿನ ಕುಲಗಳನ್ನು ಉನ್ನತಪಡಿಸುವುದೂ, ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರುಗಿ ಬರಮಾಡುವುದೂ ಅಲ್ಪ ಕಾರ್ಯವಲ್ಲವೇ, ನನ್ನ ರಕ್ಷಣೆಯು ಭೂಲೋಕದ ಕಟ್ಟಕಡೆಯವರೆಗೆ ವ್ಯಾಪಿಸುವಂತೆ ನಿನ್ನನ್ನು ಸರ್ವಜನಾಂಗಗಳಿಗೂ ಬೆಳಕನ್ನಾಗಿ ಮಾಡುವೆನು.”

[7] ಮನಃಪೂರ್ವಕವಾಗಿ ತಿರಸ್ಕೃತನಾದವನೂ ಜನಾಂಗಕ್ಕೆ ಅಸಹ್ಯನೂ, ಅಧಿಕಾರಿಗಳ ಸೇವಕನಿಗೆ ಇಸ್ರಾಯೇಲಿನ ವಿಮೋಚಕನೂ ಮತ್ತು ಅವನ ಪರಿಶುದ್ಧನಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಯೆಹೋವ ದೇವರ ನಂಬಿಗಸ್ತಿಕೆಯನ್ನೂ, ನೀನು ಆಯ್ದುಕೊಂಡ ಇಸ್ರಾಯೇಲಿನ ಪರಿಶುದ್ಧನನ್ನೂ ಕಂಡು ಅರಸರು ಎದ್ದು ನಿಲ್ಲುತ್ತಾರೆ, ಅಧಿಪತಿಗಳು ಸಹ ಆರಾಧಿಸುವರು.”

[8] ಯೆಹೋವ ದೇವರು ಹೇಳುವುದೇನೆಂದರೆ: “ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರವನ್ನು ದಯಪಾಲಿಸಿದ್ದೇನೆ. ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದ್ದೇನೆ. ನಾನು ನಿನ್ನನ್ನು ಕಾಪಾಡಿ, ಭೂಮಿಯನ್ನು ಸ್ಥಾಪಿಸುವುದಕ್ಕೂ, ಹಾಳಾಗಿರುವ ಸ್ಥಳಗಳನ್ನು ಸೊತ್ತಾಗಿ ಹೊಂದುವುದಕ್ಕೂ, ಜನರ ಒಡಂಬಡಿಕೆಯನ್ನಾಗಿಯೂ ನೇಮಿಸಿದ್ದೇನೆ.

[9] ನೀನು ಬಂಧಿತರಿಗೆ, ‘ಹೊರಗೆ ಬನ್ನಿರಿ,’ ಕತ್ತಲೆಯಲ್ಲಿರುವವರಿಗೆ, ‘ಬೆಳಕಿಗೆ ಬನ್ನಿರಿ,’ ಎಂದು ಹೇಳಬಹುದು. “ಅವರು ದಾರಿಗಳಲ್ಲಿ ಮೇಯಿಸುವರು. ಅವರ ಎಲ್ಲಾ ಎತ್ತರವಾದ ಪ್ರದೇಶಗಳೂ ಕೂಡ ಅವರಿಗೆ ಹುಲ್ಲುಗಾವಲಾಗಿರುವುವು.

[10] ಅವರಿಗೆ ಹಸಿವೆಯಾಗಲಿ, ಬಾಯಾರಿಕೆಯಾಗಲಿ ಇರದು. ಝಳವೂ, ಬಿಸಿಲೂ ಬಡಿಯದು. ಏಕೆಂದರೆ ಅವರನ್ನು ಕರುಣಿಸುವ ದೇವರು ಅವರನ್ನು ನಡೆಸುತ್ತಾ, ನೀರುಕ್ಕುವ ಒರತೆಗಳ ಬಳಿಗೆ ತರುವರು.

[11] ನನ್ನ ಬೆಟ್ಟಗಳನ್ನೆಲ್ಲಾ ಸಮ ದಾರಿಯನ್ನಾಗಿ ಮಾಡಿ, ನನ್ನ ರಾಜಮಾರ್ಗಗಳನ್ನು ಎತ್ತರಿಸುವೆನು.

[12] ಇವರು ದೂರದಿಂದ ಬರುತ್ತಾರೆ. ಇವರು ಉತ್ತರದಿಂದ ಮತ್ತು ಪಶ್ಚಿಮದಿಂದ ಇವರು ಸೀನಿಮ್ ದೇಶದಿಂದ ಬರುತ್ತಿದ್ದಾರೆ.”

[13] ಆಕಾಶವೇ, ಹರ್ಷಧ್ವನಿ ಮಾಡು; ಭೂಮಿಯೇ, ಉಲ್ಲಾಸಪಡು! ಪರ್ವತಗಳೇ, ಹರ್ಷಧ್ವನಿಗೈಯಿರಿ! ಏಕೆಂದರೆ ಯೆಹೋವ ದೇವರು ತನ್ನ ಜನರನ್ನು ಆಧರಿಸಿ, ಶ್ರಮೆಪಟ್ಟ ತನ್ನವರನ್ನು ಕರುಣಿಸುವನು.

[14] ಆದರೆ ಚೀಯೋನ್ ಎಂಬಾಕೆಯು, “ಯೆಹೋವ ದೇವರು ನನ್ನನ್ನು ತಳ್ಳಿಬಿಟ್ಟಿದ್ದಾನೆ. ನನ್ನ ಯೆಹೋವ ದೇವರು ನನ್ನನ್ನು ಮರೆತುಬಿಟ್ಟಿದ್ದಾನಲ್ಲಾ!” ಎಂದುಕೊಂಡಳು.

[15] “ತನ್ನ ಗರ್ಭದ ಮಗನ ಮೇಲೆ ಕರುಣಿಸದೆ ಒಬ್ಬ ಸ್ತ್ರೀ ತನ್ನ ಎದೆಹಾಲನ್ನು ಕುಡಿಯುವ ಕೂಸನ್ನು ಮರೆತಾಳೇ? ಹೌದು, ಅವಳು ಮರೆಯಬಹುದು, ಆದರೂ ನಾನು ನಿನ್ನನ್ನು ಮರೆಯುವುದಿಲ್ಲ.

[16] ಇಗೋ, ನಾನು ನನ್ನ ಅಂಗೈಗಳಲ್ಲಿ ನಿನ್ನನ್ನು ಚಿತ್ರಿಸಿಕೊಂಡಿದ್ದೇನೆ. ನಿನ್ನ ಗೋಡೆಗಳು ಸದಾ ನನ್ನ ಕಣ್ಣೆದುರಿನಲ್ಲಿವೆ.

[17] ನಿನ್ನ ಮಕ್ಕಳು ತ್ವರೆಪಟ್ಟು ಬರುತ್ತಿದ್ದಾರೆ. ನಿನ್ನನ್ನು ಕೆಡವಿ ಹಾಳುಮಾಡಿದವರು ನಿನ್ನೊಳಗಿಂದ ಹೊರಟು ಹೋಗುವರು.

[18] ನಿನ್ನ ಕಣ್ಣುಗಳನ್ನು ಎತ್ತಿ ಸುತ್ತಲೂ ನೋಡು. ಇವರೆಲ್ಲರೂ ಕೂಡಿಕೊಂಡು ನಿನ್ನ ಬಳಿಗೆ ಬರುತ್ತಿದ್ದಾರೆ. ಯೆಹೋವ ದೇವರು ಹೇಳುವುದೇನೆಂದರೆ,” ನನ್ನ ಜೀವದಾಣೆ, ನಿಶ್ಚಯವಾಗಿ ನೀನು ಅವರನ್ನೆಲ್ಲಾ ಆಭರಣಗಳಂತೆ ಧರಿಸಿಕೊಳ್ಳುವೆ ಮತ್ತು ನೀನು ಅವರನ್ನು ಮದಲಗಿತ್ತಿಯಂತೆ ಕಟ್ಟಿಕೊಳ್ಳುವೆ.

[19] “ಏಕೆಂದರೆ ನಿನ್ನ ಹಾಳಾದ ಸ್ಥಳಗಳೂ ನಿನ್ನ ಏಕಾಂತ ಸ್ಥಳಗಳೂ ಕೆಡವಿಬಿದ್ದ ನಿನ್ನ ದೇಶವೂ ಈಗ ನಿವಾಸಿಗಳಿಗೆ ಇಕ್ಕಟ್ಟಾಗುವುವು. ನಿನ್ನನ್ನು ನುಂಗಿದವರು ದೂರವಾಗುವರು.

[20] ನಿಮ್ಮ ದುಃಖದ ಸಮಯದಲ್ಲಿ ಜನಿಸಿದ ಮಕ್ಕಳು ‘ಸ್ಥಳವು ನನಗೆ ಇಕ್ಕಟ್ಟಾಯಿತು. ನಾನು ವಾಸಿಸುವುದಕ್ಕೆ ಸ್ಥಳಕೊಡು,’ ಎಂದು ಇನ್ನೂ ನಿಮ್ಮ ವಿಚಾರಣೆಯಲ್ಲಿ ಹೇಳುತ್ತಾರೆ.

[21] ‘ನನಗೋಸ್ಕರ ಇವರನ್ನು ಯಾರು ನನ್ನಲ್ಲಿ ಪಡೆದರು? ನಾನು ದುಃಖಿತ ಮತ್ತು ಬಂಜೆಯಾಗಿದ್ದೆ; ನನ್ನನ್ನು ಗಡಿಪಾರು ಮಾಡಿ ತಿರಸ್ಕರಿಸಲಾಯಿತು. ಇವುಗಳನ್ನು ತಂದವರು ಯಾರು? ನಾನು ಒಬ್ಬಂಟಿಯಾಗಿ ಉಳಿದಿದ್ದೇನೆ, ಇವರನ್ನು ಸಾಕಿದವರು ಯಾರು? ಅವರೆಲ್ಲಿದ್ದರು?’ ” ಎಂದುಕೊಳ್ಳುವೆ.

[22] ಸಾರ್ವಭೌಮ ಯೆಹೋವ ದೇವರು, ಇಂತೆನ್ನುತ್ತಾರೆ, “ಇಗೋ, ನಾನು ರಾಷ್ಟ್ರಗಳ ಕಡೆಗೆ ಕೈಯೆತ್ತಿ ಜನರಿಗೆ ನನ್ನ ಧ್ವಜವನ್ನು ಎತ್ತುವೆನು. ಅವರು ನಿನ್ನ ಪುತ್ರರನ್ನು ಕೈಹಿಡಿದು ತರುವರು. ನಿನ್ನ ಪುತ್ರಿಯರನ್ನು ಹೆಗಲ ಮೇಲೆ ತರುವರು.

[23] ಅರಸರು ನಿನಗೆ ಸಾಕು ತಂದೆಗಳು. ಅವರ ರಾಣಿಯರು ನಿನಗೆ ದಾದಿಗಳಾಗುವರು. ಅವರು ಭೂಮಿಯ ಕಡೆಗೆ ತಮ್ಮ ಮುಖವನ್ನು ಬಾಗಿಸಿ, ಅಡ್ಡಬಿದ್ದು, ನಿನ್ನ ಪಾದದ ಧೂಳನ್ನು ನೆಕ್ಕುವರು. ಆಗ ನಾನೇ ಯೆಹೋವ ಎಂದು ನೀನು ತಿಳಿದುಕೊಳ್ಳುವೆ. ಏಕೆಂದರೆ ನನ್ನನ್ನು ನಿರೀಕ್ಷಿಸಿಕೊಂಡಿರುವವರು ನಾಚಿಕೆಗೆ ಈಡಾಗರು.”

[24] ಶೂರನ ಕೈಯೊಳಗಿಂದ ಕೊಳ್ಳೆಯನ್ನು ತೆಗೆದುಕೊಳ್ಳಬಹುದೋ? ಭಯಂಕರನಿಂದ ಸೆರೆಯವರನ್ನು ಬಿಡಿಸಬಹುದೋ?

[25] ಆದರೆ ಯೆಹೋವ ದೇವರು ಹೀಗೆನ್ನುತ್ತಾರೆ: “ಶೂರನ ಸೆರೆಯವರು ಅಪಹರಿಸಲಾಗುವರು. ಭೀಕರನ ಕೊಳ್ಳೆ ಕಸಿದುಕೊಳ್ಳಲಾಗುವುದು. ಏಕೆಂದರೆ ನಿನ್ನೊಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ, ನಿನ್ನ ಮಕ್ಕಳನ್ನು ನಾನು ರಕ್ಷಿಸುವೆನು.

[26] ನಿನ್ನ ಹಿಂಸಕರು ಸ್ವಮಾಂಸವನ್ನೇ ಭುಜಿಸುವಂತೆ ಅನುಮತಿಸುವೆನು. ದ್ರಾಕ್ಷಾರಸವನ್ನು ಕುಡಿಯುವಂತೆ ಅವರು ಸ್ವರಕ್ತವನ್ನೇ ಕುಡಿದು ಅಮಲೇರುವರು. ಆಗ ಯೆಹೋವನಾದ ನಾನೇ ನಿನ್ನ ರಕ್ಷಕನೂ, ನಿನ್ನ ವಿಮೋಚಕನೂ, ಯಾಕೋಬ್ಯರ ಶೂರನೂ ಎಂದು ನರಮಾನವರೆಲ್ಲರಿಗೂ ಗೊತ್ತಾಗುವುದು.”

ಯೆಶಾಯ — Chapters