Skip to content
Opens in a new window
Listen to this chapter • 2:50

[1] ಬೇಲ್ ದೇವತೆಯು ತಗ್ಗಿದೆ, ನೆಬೋ ದೇವತೆಯು ಕುಗ್ಗಿದೆ. ಅವರ ವಿಗ್ರಹಗಳು ಮೃಗಗಳ ಮತ್ತು ಪಶುಗಳ ಮೇಲೆ ಇದ್ದವು. ನೀವು ಹೊರುತ್ತಿದ್ದವುಗಳು ಭಾರವಾದ ಹೊರೆಯಾಗಿದ್ದವು. ಆಯಾಸವುಳ್ಳ ಮೃಗಗಳಿಗೆ ಅವು ಭಾರವಾದವು.

[2] ಒಟ್ಟಿಗೆ ಕುಗ್ಗಿ ಬಗ್ಗಿವೆ. ತಮ್ಮ ಮೇಲೆ ಬಿದ್ದ ಭಾರವನ್ನು ಹೊತ್ತು ನಿರ್ವಹಿಸಲಾರದೆ, ತಾವೇ ಸೆರೆಗೆ ಹೋದವು.

[3] ಯಾಕೋಬನ ಮನೆತನದವರೇ, ಇಸ್ರಾಯೇಲ್ ಮನೆತನದಲ್ಲಿ ಉಳಿದಿರುವವರೇ, ನಿಮ್ಮನ್ನು ಗರ್ಭದಲ್ಲಿ ಹೊತ್ತು, ಹುಟ್ಟಿದಂದಿನಿಂದ ಪಾಲಿಸುತ್ತಿದ್ದಾತನ ಮಾತನ್ನು ಕೇಳಿರಿ.

[4] ನಿಮ್ಮ ಮುಪ್ಪಿನ ತನಕ ನಾನೇ ಆಧಾರ; ನೆರೆ ಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು; ನಾನೇ ಉಂಟುಮಾಡಿದೆನು; ನಾನೇ ಹೊರುವೆನು; ಹೌದು, ನಿಮ್ಮನ್ನು ಹೊತ್ತು, ಸಹಿಸಿ, ನಿರ್ವಹಿಸುವೆನು.

[5] ನನ್ನನ್ನು ಯಾರಿಗೆ ಸರಿಕಟ್ಟಿ ಹೋಲಿಸುತ್ತೀರಿ? ನನ್ನ ಸಮಾನರೆಂದು ನನ್ನನ್ನು ಯಾರೊಡನೆ ಸಮಮಾಡುವಿರಿ?

[6] ಚೀಲದಿಂದ ಚಿನ್ನವನ್ನು ಸುರಿದು, ತಕ್ಕಡಿಯಲ್ಲಿ ಬೆಳ್ಳಿಯನ್ನು ತೂಗಿ, ಅಕ್ಕಸಾಲಿಗನಿಗೆ ಕೂಲಿ ಕೊಟ್ಟಾಗ, ಅವನು ಅದನ್ನು ದೇವರನ್ನಾಗಿ ಮಾಡಲು, ಅವರು ಅದಕ್ಕೆ ಎರಗಿ ಪೂಜೆ ಮಾಡುವರು.

[7] ಅವರು ಅದನ್ನು ತಮ್ಮ ಹೆಗಲಿನ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ, ಪೀಠದ ಮೇಲೆ ಇಳಿಸಿ ನಿಲ್ಲಿಸುವರು. ಅದು ಅದರ ಸ್ಥಳದಿಂದ ಜರುಗದು. ಹೌದು, ಒಬ್ಬನು ಕೂಗಿಕೊಂಡರೂ ಅದು ಅವನಿಗೆ ಉತ್ತರ ಕೊಡಲಾರದು ಇಲ್ಲವೆ ಅವನನ್ನು ಕಷ್ಟದಿಂದ ರಕ್ಷಿಸಲಾರದು.

[8] ದ್ರೋಹಿಗಳೇ, ಇದನ್ನು ಜ್ಞಾಪಕದಲ್ಲಿಟ್ಟುಕೊಂಡು, ಅದನ್ನು ತಿರುಗಿ ನಿಮ್ಮ ಮನಸ್ಸಿಗೆ ತಂದುಕೊಳ್ಳಿರಿ.

[9] ಪುರಾತನ ಸಂಗತಿಗಳನ್ನು ಜ್ಞಾಪಿಸಿಕೊಳ್ಳಿರಿ. ಏಕೆಂದರೆ ನಾನೇ ದೇವರು, ಮತ್ತೊಬ್ಬನಿಲ್ಲ. ನಾನೇ ದೇವರು, ನನಗೆ ಸರಿಸಮಾನನು ಇಲ್ಲ.

[10] ಆರಂಭದಲ್ಲಿಯೇ ಅಂತ್ಯವನ್ನೂ, ಪೂರ್ವಕಾಲದಿಂದ ಇನ್ನೂ ನಡೆಯದ ಸಂಗತಿಗಳನ್ನೂ ಪ್ರಕಟಿಸಿದ್ದೇನೆ. ನನ್ನ ಆಲೋಚನೆಯು ನಿಲ್ಲುವುದೆಂದೂ, ನನಗೆ ಮೆಚ್ಚಿದ್ದನ್ನು ಮಾಡುವೆನೆಂದೂ ಅರುಹಿದ್ದೇನೆ.

[11] ಪೂರ್ವದಿಂದ ಒಂದು ಕ್ರೂರವಾದ ಪಕ್ಷಿಯೂ, ದೂರದೇಶದಿಂದ ನನ್ನ ಆಜ್ಞೆಯನ್ನು ನಡೆಸುವ ಮನುಷ್ಯನೂ ಬರಲಿ, ಎಂದು ಕರೆದಿದ್ದೇನೆ. ನಾನು ನುಡಿದಿದ್ದೇನೆ, ಅದನ್ನು ನಾನು ಈಡೇರಿಸುವೆನು. ಆಲೋಚಿಸಿದ್ದೇನೆ, ನಾನು ಅದನ್ನು ಮಾಡುವೆನು.

[12] ಕಠಿಣ ಹೃದಯವುಳ್ಳವರೇ, ನೀತಿಗೆ ದೂರವಾದವರೇ, ನನಗೆ ಕಿವಿಗೊಡಿರಿ.

[13] ನನ್ನ ನೀತಿಯನ್ನು ಹತ್ತಿರಕ್ಕೆ ಬರಮಾಡುವೆನು. ಅದು ಇನ್ನು ದೂರವಾಗಿರದು. ನನ್ನ ರಕ್ಷಣೆಯು ಇನ್ನು ತಡವಾಗದು, ನನ್ನ ಮಹಿಮೆಯಾಗಿರುವ ಇಸ್ರಾಯೇಲಿಗೋಸ್ಕರ ಚೀಯೋನಿನಲ್ಲಿ ರಕ್ಷಣೆಯನ್ನು ಉಂಟುಮಾಡುವೆನು.

ಯೆಶಾಯ — Chapters