Skip to content
Opens in a new window
Listen to this chapter • 3:05

[1] ಚೀಯೋನಿಗೋಸ್ಕರ ನಾನು ಮೌನವಾಗಿರುವುದಿಲ್ಲ! ಯೆರೂಸಲೇಮಿಗೋಸ್ಕರ ಅದರ ವಿಮೋಚನೆಯು ಪ್ರಕಾಶದಂತೆಯೂ, ಅದರ ರಕ್ಷಣೆಯು ಉರಿಯುವ ದೀವಿಟಿಗೆಯಂತೆಯೂ ಹೊರಡುವವರೆಗೆ ನಾನು ವಿಶ್ರಾಂತಿಯಿಂದ ಇರುವುದಿಲ್ಲ.

[2] ಆಗ ಇತರ ಜನಾಂಗಗಳು ನಿನ್ನ ವಿಮೋಚನೆಯನ್ನೂ, ಅರಸರೆಲ್ಲರು ನಿನ್ನ ಮಹಿಮೆಯನ್ನೂ ನೋಡುವರು. ಯೆಹೋವ ದೇವರ ಬಾಯಿ ನೇಮಿಸುವ ಹೊಸ ಹೆಸರು ನಿನಗೆ ದೊರೆಯುವುದು.

[3] ಯೆಹೋವ ದೇವರ ಕೈಯಲ್ಲಿ ಮಹಿಮೆಯ ಕಿರೀಟವಾಗಿಯೂ, ನಿನ್ನ ದೇವರ ಅಂಗೈಯಲ್ಲಿ ರಾಜ ಮುಕುಟವಾಗಿಯೂ ಇರುವೆ.

[4] ಇನ್ನು ಮೇಲೆ ನೀನು ಗಂಡಬಿಟ್ಟವಳೆಂದು ಎನಿಸಿಕೊಳ್ಳುವುದಿಲ್ಲ ನಿನ್ನ ದೇಶಕ್ಕೆ ಹಾಳಾದದ್ದು ಎಂಬ ಹೆಸರೂ ಇರುವುದಿಲ್ಲ. ಆದರೆ ನೀನು ಹೆಪ್ಸಿಬಾ ಎಂದೂ ನಿನ್ನ ದೇಶಕ್ಕೆ ಬ್ಯೂಲಾ ಎಂದೂ ಹೆಸರಾಗುವುದು. ಏಕೆಂದರೆ ಯೆಹೋವ ದೇವರು ನಿನ್ನನ್ನು ಮೆಚ್ಚುವರು, ನಿನ್ನ ದೇಶಕ್ಕೆ ವಿವಾಹವಾಗುವುದು.

[5] ಯುವಕನು ಕನ್ಯೆ ಯುವತಿಯನ್ನು ವರಿಸುವಂತೆ, ನಿನ್ನ ಜನರು ದೇಶವನ್ನು ಸ್ವಾಧೀನಪಡಿಸಿಕೊಳ್ಳುವರು. ವರನು ವಧುವಿನ ಮೇಲೆ ಆನಂದ ಪಡುವ ಪ್ರಕಾರ, ನಿನ್ನ ದೇವರು ನಿನ್ನ ಮೇಲೆ ಆನಂದಿಸುವರು.

[6] ಯೆರೂಸಲೇಮೇ, ನಿನ್ನ ಗೋಡೆಗಳ ಮೇಲೆ ಕಾವಲುಗಾರರನ್ನು ನೇಮಿಸಿದ್ದೇನೆ. ಅವರು ಹಗಲಿರುಳು ಮೌನವಾಗಿರುವುದೇ ಇಲ್ಲ. ಯೆಹೋವ ದೇವರಿಗೆ ಜ್ಞಾಪಕಪಡಿಸುವವರೇ, ನೀವೂ ಸುಮ್ಮನಿರಬೇಡಿರಿ.

[7] ಯೆರೂಸಲೇಮನ್ನು ಸ್ಥಾಪಿಸಿ, ಲೋಕಪ್ರಸಿದ್ಧಿಗೆ ತರುವ ತನಕ ಆತನಿಗೂ ವಿಶ್ರಾಂತಿ ಕೊಡಬೇಡಿರಿ.

[8] ಯೆಹೋವ ದೇವರು ತನ್ನ ಬಲಗೈಯಿಂದಲೂ, ತನ್ನ ಬಲವುಳ್ಳ ತೋಳಿನಿಂದಲೂ ಆಣೆಯಿಟ್ಟು ಹೇಳಿದ್ದೇನೆಂದರೆ: “ನಿಶ್ಚಯವಾಗಿ ನಾನು ಇನ್ನು ಮೇಲೆ ನಿನ್ನ ಧಾನ್ಯಗಳನ್ನು ನಿನ್ನ ಶತ್ರುಗಳಿಗೆ ಆಹಾರವಾಗಿ ಕೊಡುವುದಿಲ್ಲ. ನೀನು ಕಷ್ಟಪಟ್ಟು ಮಾಡಿದ ನಿನ್ನ ದ್ರಾಕ್ಷಾರಸವನ್ನು ವಿದೇಶಿಯರು ಕುಡಿಯುವುದಿಲ್ಲ.

[9] ನಿನ್ನ ಬೆಳೆಯನ್ನು ಕೊಯ್ದು ಕುಪ್ಪೆ ಹಾಕಿದವರೇ, ಅದನ್ನು ಉಂಡು ಯೆಹೋವ ದೇವರನ್ನು ಸ್ತುತಿಸುವರು. ನಿನ್ನ ದ್ರಾಕ್ಷಿಯನ್ನು ಕಿತ್ತು ತಂದವರೇ ಅದರ ರಸವನ್ನು ನನ್ನ ಪವಿತ್ರಾಲಯದ ಪ್ರಾಕಾರಗಳಲ್ಲಿ ಕುಡಿಯುವರು.”

[10] ಹಾದುಹೋಗಿರಿ, ಬಾಗಿಲುಗಳಲ್ಲಿ ಹಾದುಹೋಗಿರಿ, ಜನರಿಗೆ ದಾರಿಯನ್ನು ಸಿದ್ಧಮಾಡಿರಿ, ಎತ್ತರಿಸಿರಿ, ರಾಜಮಾರ್ಗವನ್ನು ಎತ್ತರಿಸಿ, ಕಲ್ಲುಗಳನ್ನು ಆಯ್ದು ಕೂಡಿಸಿರಿ. ಜನಾಂಗಗಳಿಗೋಸ್ಕರ ಧ್ವಜವನ್ನು ಎತ್ತಿರಿ.

[11] ಇಗೋ, ಯೆಹೋವ ದೇವರು ಭೂಮಿಯ ಅಂತ್ಯದವರೆಗೆ ಹೀಗೆ ಘೋಷಣೆ ಮಾಡಿದ್ದಾರೆ: “ಚೀಯೋನಿನ ಪುತ್ರಿ ಇಗೋ, ‘ನಿನ್ನ ರಕ್ಷಣೆಯು ಬರುತ್ತದೆ. ಆತನ ಬಹುಮಾನವು ಆತನ ಸಂಗಡ, ಆತನ ಪ್ರತಿಫಲವು ಆತನ ಮುಂದೆಯೂ ಇದೆ ಎಂದು ಹೇಳಿರಿ.’ ”

[12] ಆಗ ಅವರು, ಪರಿಶುದ್ಧ ಜನರೂ, ಯೆಹೋವ ದೇವರು ವಿಮೋಚಿಸಿದವರೂ ಎಂದು ಎನಿಸಿಕೊಳ್ಳುವರು ನಿನಗೆ ಹುಡುಕಿದ ಹಾಗೂ ಕೈ ಬಿಡದ ಪಟ್ಟಣ, ಎಂದು ಹೆಸರು ಬರುವುದು.

ಯೆಶಾಯ — Chapters