[1] ಟೈರಿನ ವಿಷಯವಾದ ಪ್ರವಾದನೆ: ತಾರ್ಷೀಷಿನ ಹಡಗುಗಳೇ, ಗೋಳಾಡಿರಿ, ಏಕೆಂದರೆ ಟೈರ್ ಹಾಳಾಗಿರುವುದರಿಂದ ನಿಮಗೆ ಮನೆಯಿಲ್ಲ ಮತ್ತು ಬಂದರವೂ ಇಲ್ಲ. ಇದು ಕಿತ್ತೀಮ್ ದೇಶದವರಿಂದ ಅವರಿಗೆ ತಿಳಿಯಿತು.
[2] ದ್ವೀಪಗಳ ನಿವಾಸಿಗಳೇ, ಸಮುದ್ರವನ್ನು ದಾಟುವ ಸೀದೋನಿನ ವರ್ತಕರಿಂದ ಸಮೃದ್ಧಿಯನ್ನು ಹೊಂದಿದವರೇ ಮೌನವಾಗಿರಿ.
[3] ಪ್ರವಾಹದಿಂದ ಶೀಹೋರಿನ ಧಾನ್ಯವೂ, ನೈಲ್ ನದಿಯ ಸುಗ್ಗಿಯೂ ಅದಕ್ಕೆ ಆದಾಯವಾಗಿತ್ತು. ಅನೇಕ ಜನಾಂಗಗಳಿಗೆ ವ್ಯಾಪಾರ ಸ್ಥಳವಾಗಿತ್ತು.
[4] ಸೀದೋನೇ ಮತ್ತು ಸಮುದ್ರದ ಕೋಟೆಯೇ ನಾಚಿಕೆಪಡಿರಿ. ಏಕೆಂದರೆ ಇದೇ ಸಮುದ್ರದ ಘೋಷಣೆಯಾಗಿದೆ: “ನಾವು ಪ್ರಸವವೇದನೆ ಪಡುವುದಿಲ್ಲ, ಹೆರುವುದಿಲ್ಲ, ಇಲ್ಲವೆ ಪುತ್ರಪುತ್ರಿಯರನ್ನು ಸಾಕಿ ಸಲಹುವುದಿಲ್ಲ,”
[5] ಈಜಿಪ್ಟಿನಿಂದ ಸುದ್ದಿ ಆದ ಹಾಗೆ ಟೈರಿನ ಸುದ್ದಿಗೆ ಬಹಳ ವೇದನೆ ಪಡುವರು.
[6] ತಾರ್ಷೀಷಿಗೆ ದಾಟಿ ಹೋಗಿರಿ, ದ್ವೀಪ ನಿವಾಸಿಗಳೇ ಗೋಳಾಡಿರಿ.
[7] ನಿಮ್ಮ ಉಲ್ಲಾಸದ ಪಟ್ಟಣವೂ, ಪೂರ್ವಕಾಲದ ಹಳೆಯ ಸಂಪ್ರದಾಯದಿಂದ ಬಂದಿದ್ದೂ ಇದೆಯೋ? ಅವಳ ಸ್ವಂತ ಕಾಲುಗಳು ಅದನ್ನು ದೂರ ದೇಶದಲ್ಲಿ ನಿವಾಸಿಸುವುದಕ್ಕೆ ತೆಗೆದುಕೊಂಡು ಹೋಗುವವು.
[8] ಅದು ಕಿರೀಟದಾಯಕವಾದ ಪಟ್ಟಣವು. ಅದರ ವರ್ತಕರಾದ ಪ್ರಭುಗಳು, ಅದರ ವ್ಯಾಪಾರಿಗಳು ಭೂಮಿಯಲ್ಲಿ ಘನವುಳ್ಳವರಾಗಿದ್ದಾರೆ. ಇಂಥ ಟೈರಿಗೆ ವಿರುದ್ಧವಾಗಿ ಈ ಆಲೋಚನೆ ಮಾಡಿದವರು ಯಾರು?
[9] ಗರ್ವದ ಸಕಲ ವೈಭವವನ್ನು ಹೊಲಸು ಮಾಡಬೇಕೆಂತಲೂ, ಭೂಮಿಯಲ್ಲಿ ಘನವುಳ್ಳವರೆಲ್ಲರನ್ನು ಅವಮಾನಪಡಿಸಬೇಕೆಂತಲೂ ಸೇನಾಧೀಶ್ವರ ಯೆಹೋವ ದೇವರೇ ಹೀಗೆ ಸಂಕಲ್ಪಿಸಿದ್ದಾರೆ.
[10] ತಾರ್ಷೀಷಿನ ಮಗಳೇ, ನೈಲ್ ನದಿಯಂತೆ ನಿನ್ನ ದೇಶದಲ್ಲಿ ಹಾದುಹೋಗು. ಅಲ್ಲಿ ಇನ್ನು ನಿನ್ನನ್ನು ತಡೆಯುವವರು ಯಾರೂ ಇಲ್ಲ.
[11] ಯೆಹೋವ ದೇವರು ಸಮುದ್ರದ ಮೇಲೆ ತನ್ನ ಕೈಚಾಚಿ ರಾಜ್ಯಗಳನ್ನು ನಡುಗಿಸಿದ್ದಾನೆ. ಅವರು ವ್ಯಾಪಾರದ ಪಟ್ಟಣವನ್ನು ಕಾನಾನಿನ ದುರ್ಗಗಳನ್ನು ನಾಶಮಾಡಬೇಕೆಂದು ಆಜ್ಞಾಪಿಸಿದ್ದಾರೆ.
[12] “ಹಿಂಸೆಗೆ ಈಡಾದ ಕನ್ಯೆಯಂತಿರುವ ಸೀದೋನ್ ನಗರಿಯೇ, ಇನ್ನು ಮೇಲೆ ನಿನಗೆ ಸಂತೃಪ್ತಿ ಇಲ್ಲ. “ಎದ್ದು, ಕಿತ್ತೀಮಿಗೆ ಸಮುದ್ರದ ಮೇಲೆ ಹಾದುಹೋಗು. ಅಲ್ಲಿಯೂ ನಿನಗೆ ವಿಶ್ರಾಂತಿ ಇರದು.”
[13] ಕಸ್ದೀಯರ ದೇಶವು! ಅಸ್ಸೀರಿಯದವರು ಅದನ್ನು ಕಾಡುಮೃಗಗಳಿಗೆ ಈಡು ಮಾಡುವ ತನಕ ಈ ಜನರು ಇರಲಿಲ್ಲ. ಗೋಪುರಗಳನ್ನು ಕಟ್ಟಿಸಿಕೊಂಡು ಅವರು ಅದರ ಅರಮನೆಗಳನ್ನು ಕಟ್ಟಿಸಿಕೊಂಡು ಅದನ್ನು ನಾಶಮಾಡಿದ್ದಾರೆ.
[14] ತಾರ್ಷೀಷಿನ ಹಡಗುಗಳೇ, ಗೋಳಾಡಿರಿ! ಏಕೆಂದರೆ ನಿಮ್ಮ ಆಶ್ರಯಸ್ಥಾನವು ಹಾಳಾಯಿತು, ಎಂದು ಆತನು ಹೇಳಿದ್ದಾನೆ.
[15] ಆ ದಿವಸದಲ್ಲಿ ಟೈರ್ ಪಟ್ಟಣವು ಒಬ್ಬ ಅರಸನ ದಿವಸಗಳ ಪ್ರಕಾರ ಎಪ್ಪತ್ತು ವರುಷಗಳ ತನಕ ಜ್ಞಾಪಕಕ್ಕೆ ಬಾರದೆ ಇರುವುದು. ಎಪ್ಪತ್ತು ವರ್ಷಗಳ ಕೊನೆಯಲ್ಲಿ ಟೈರ್ ಪಟ್ಟಣವು ವೇಶ್ಯೆಯ ವಿಷಯವಾದ ಈ ಗೀತೆಯ ಹಾಗಾಗುವುದು:
[16] “ಮರೆತುಹೋದ ವೇಶ್ಯೆಯೇ, ಕಿನ್ನರಿಯನ್ನು ತೆಗೆದುಕೋ. ಪಟ್ಟಣಗಳಲ್ಲಿ ಅಲೆಯುತ್ತಾ ನೀನು ನೆನಪಾಗುವ ಹಾಗೆ ಚೆನ್ನಾಗಿ ನುಡಿಸಿ, ಬಹಳ ಗೀತೆಗಳನ್ನು ಹಾಡು.”
[17] ಎಪ್ಪತ್ತು ವರುಷಗಳಾದ ಮೇಲೆ ಯೆಹೋವ ದೇವರು ಟೈರನ್ನು ಪರಾಮರಿಸುವರು. ಅದು ತನ್ನ ಆದಾಯಕ್ಕಾಗಿ ಹಿಂದಿರುಗಿ ಭೂಲೋಕದವರಲ್ಲಿರುವ ಎಲ್ಲಾ ರಾಜ್ಯಗಳ ಸಂಗಡ ಭೂಮಿಯ ಮೇಲೆ ವ್ಯಾಪಾರ ಮಾಡುವುದು.
[18] ಆದರೆ ಅವಳ ವ್ಯಾಪಾರವೂ ಮತ್ತು ಅವಳ ಆದಾಯವೂ ಬೊಕ್ಕಸದಲ್ಲಿ ಹಾಕದೆ ಇಲ್ಲವೆ ಇಟ್ಟುಕೊಳ್ಳದೆ ಯೆಹೋವ ದೇವರಿಗೆ ಪರಿಶುದ್ಧವಾಗುವುದು. ಅವಳ ಆದಾಯವು ಯೆಹೋವ ದೇವರ ಸನ್ನಿಧಾನದಲ್ಲಿ ವಾಸಿಸುವವರೆಗೆ ಬೇಕಾದಷ್ಟು ಅನ್ನವನ್ನೂ, ಶ್ರೇಷ್ಠವಾದ ಉಡುಪನ್ನೂ ಒದಗಿಸಲು ಅನುಕೂಲವಾಗುವುದು.