Skip to content
Opens in a new window
Listen to this chapter • 6:12

[1] “ಕೇಳದವರಿಗೂ ನಾನು ನನ್ನನ್ನು ಪ್ರಕಟಿಸಿಕೊಂಡಿದ್ದೇನೆ. ನನ್ನನ್ನು ಹುಡುಕದವರಿಗೆ ನಾನು ಸಿಕ್ಕಿದೆನು. ನನ್ನ ಹೆಸರನ್ನು ಕರೆಯದ ಜನಾಂಗಕ್ಕೆ, ‘ಇಗೋ, ಇದ್ದೇನೆ; ಇಗೋ, ಇದ್ದೇನೆ,’ ಎಂದು ಹೇಳಿದೆನು.

[2] ಒಳ್ಳೆಯದಲ್ಲದ ಮಾರ್ಗದಲ್ಲಿ ತಮ್ಮ ಆಲೋಚನೆಗಳ ಪ್ರಕಾರ ನಡೆದುಕೊಂಡು ತಿರುಗಿಬೀಳುವ ಜನರಿಗೆ ದಿನವೆಲ್ಲಾ ನಾನು ಕೈಚಾಚಿ ಕರೆದೆನು.

[3] ಇವರು ಯಾವಾಗಲೂ ನನ್ನ ಮುಖದ ಮುಂದೆ ನನಗೆ ಕೋಪೋದ್ರೇಕವನ್ನು ಎಬ್ಬಿಸುವ ಜನರು. ತೋಟಗಳಲ್ಲಿ ಬಲಿ ಅರ್ಪಿಸಿ, ಇಟ್ಟಿಗೆಯ ಬಲಿಪೀಠದ ಮೇಲೆ ಧೂಪ ಸುಡುವರು.

[4] ಸಮಾಧಿಗಳಲ್ಲಿ ಉಳಿದು, ಗವಿಗಳಲ್ಲಿ ತಂಗುವರು. ಹಂದಿಯ ಮಾಂಸವನ್ನು ತಿನ್ನುವರು ತಮ್ಮ ಪಾತ್ರೆಗಳಲ್ಲಿ ಅಶುದ್ಧ ಪದಾರ್ಥಗಳ ಸಾರನ್ನು ಇಟ್ಟುಕೊಂಡು,

[5] ‘ನಿನ್ನಷ್ಟಕ್ಕೆ ನೀನೇ ನಿಂತುಕೋ, ನನ್ನ ಬಳಿಗೆ ಬರಬೇಡ. ಏಕೆಂದರೆ ನಿನಗಿಂತ ಪರಿಶುದ್ಧನಾಗಿದ್ದೇನೆ,’ ಎಂದು ಹೇಳುವರು. ಇವರು ನನ್ನ ಮೂಗಿನಲ್ಲಿ ಹೊಗೆಯಾಗಿಯೂ, ದಿನವೆಲ್ಲಾ ಉರಿಯುವ ಬೆಂಕಿಯಾಗಿಯೂ ಇದ್ದಾರೆ.

[6] “ನನ್ನ ಮುಂದೆ ಅದು ಬರೆಯಲಾಗಿದೆ. ನಾನು ಸುಮ್ಮನಿರದೆ ಪ್ರತಿಫಲ ಕೊಡುತ್ತೇನೆ. ಅವರ ಮಡಿಲಲ್ಲಿ ಪ್ರತಿಫಲ ಕೊಡುತ್ತೇನೆ.

[7] ನಿಮ್ಮ ಪಾಪಗಳಿಗೂ, ನಿಮ್ಮ ತಂದೆಗಳ ಪಾಪಗಳಿಗೂ ಕೂಡ ಪ್ರತಿಫಲ ಕೊಡುತ್ತೇನೆ” ಎಂದು ಯೆಹೋವ ದೇವರು ಹೇಳುತ್ತಾರೆ. “ಅವರು ಬೆಟ್ಟಗಳ ಮೇಲೆ ಧೂಪ ಸುಟ್ಟು, ಗುಡ್ಡಗಳ ಮೇಲೆ ನನ್ನನ್ನು ಪರಿಹಾಸ್ಯ ಮಾಡಿದರಲ್ಲಾ. ಹೀಗಿರುವುದರಿಂದ ಅವರ ಹಿಂದಿನ ಕೆಲಸಗಳನ್ನು ಅವರ ಮಡಿಲಲ್ಲಿ ಅಳೆದು ಸುರಿಸುವೆನು.”

[8] ಯೆಹೋವ ದೇವರು ಹೀಗೆನ್ನುತ್ತಾರೆ: “ರಸ ದೊರೆಯಬಹುದಾದ ದ್ರಾಕ್ಷಿ ಗೊಂಚಲನ್ನು ಒಬ್ಬನು ನೋಡಿ, ‘ಹಾಳು ಮಾಡಬೇಡ, ಅದರಲ್ಲಿ ಪ್ರಯೋಜನವಿದೆ,’ ಎನ್ನುವಂತೆ ನಾನು ನನ್ನ ಸೇವಕರನ್ನು ಲಕ್ಷ್ಯಕ್ಕೆ ತಂದು ಇವರನ್ನೆಲ್ಲಾ ಹಾಳುಮಾಡಬಾರದು ಎಂದುಕೊಳ್ಳುವೆನು.

[9] ಯಾಕೋಬಿನೊಳಗಿಂದ ಒಂದು ಸಂತಾನವನ್ನೂ, ಯೆಹೂದದೊಳಗಿಂದ ನನ್ನ ಪರ್ವತಗಳಿಗೆ ಬಾಧ್ಯಸ್ಥನಾಗಿರುವವನನ್ನು ಹೊರಗೆ ಬರಮಾಡುವೆನು. ನಾನು ಆಯ್ದುಕೊಂಡವರು ಅದನ್ನು ಸ್ವಾಧೀನಮಾಡಿಕೊಳ್ಳುವರು. ನನ್ನ ಸೇವಕರು ಅದರಲ್ಲಿ ವಾಸವಾಗುವರು.

[10] ನನ್ನನ್ನು ಹುಡುಕುವ ನನ್ನ ಜನರಿಗೋಸ್ಕರ ಶಾರೋನು ಮಂದೆಗಳ ಹಟ್ಟಿಯಾಗಿಯೂ, ಆಕೋರಿನ ತಗ್ಗು, ದನಗಳು ಮಲಗುವ ಸ್ಥಳವಾಗಿಯೂ ಇರುವುದು, ಎಂದು ಯೆಹೋವ ದೇವರು ಹೇಳುತ್ತಾರೆ.

[11] “ಆದರೆ ಯೆಹೋವನಾದ ನನ್ನನ್ನು ತೊರೆದು, ನನ್ನ ಪವಿತ್ರ ಪರ್ವತವನ್ನು ಮರೆತು, ಶುಭದಾಯಕ ದೇವತೆಗೆ ಔತಣವನ್ನು ಅಣಿಮಾಡಿ, ಗಾದ್ ಎಂಬ ಅದೃಷ್ಟ ದೇವತೆಗೆ ಮದ್ಯವನ್ನು ತುಂಬಾ ಬೆರೆಸಿದ ನಿಮಗೆ

[12] ಖಡ್ಗವನ್ನೇ ಗತಿಯಾಗ ಮಾಡುವೆನು. ಆದ್ದರಿಂದ ನಿಮ್ಮನ್ನು ಖಡ್ಗಕ್ಕೆ ನೇಮಿಸುವೆನು. ನೀವೆಲ್ಲರು ಕೊಲೆಗೆ ಬೊಗ್ಗಿಕೊಳ್ಳುವಿರಿ. ಏಕೆಂದರೆ, ನಾನು ಕರೆಯಲು, ನೀವು ಉತ್ತರ ಕೊಡಲಿಲ್ಲ. ನಾನು ಹೇಳಿದಾಗ ನೀವು ಕೇಳಲಿಲ್ಲ. ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದಿರಿ. ನಾನು ಮೆಚ್ಚದ್ದನ್ನು ಆರಿಸಿಕೊಂಡಿರಿ.”

[13] ಹೀಗಿರುವುದರಿಂದ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: “ನನ್ನ ಸೇವಕರು ತಿನ್ನುವರು. ಆದರೆ ನೀವು ಹಸಿದಿರುವಿರಿ. ನನ್ನ ಸೇವಕರು ಕುಡಿಯುವರು, ಆದರೆ ನೀವು ಬಾಯಾರಿ ಇರುವಿರಿ. ಇಗೋ, ನನ್ನ ಸೇವಕರು ಸಂತೋಷಪಡುವರು, ಆದರೆ ನೀವು ನಾಚಿಕೆ ಪಡುವಿರಿ.

[14] ಇಗೋ, ನನ್ನ ಸೇವಕರು ಹೃದಯದ ಆನಂದದಿಂದ ಹಾಡುವರು, ಆದರೆ ನೀವು ಹೃದಯದ ವ್ಯಸನದಿಂದ ಅಳುವಿರಿ ಮತ್ತು ಮುರಿದ ಆತ್ಮದಿಂದ ಗೋಳಾಡುವಿರಿ.

[15] ನಿಮ್ಮ ಹೆಸರನ್ನು ನಾನು ಆಯ್ದುಕೊಂಡವರಿಗೆ ಶಾಪವಾಗಿ ಉಳಿಸುವಿರಿ. ಹೇಗೆಂದರೆ, ಸಾರ್ವಭೌಮ ಯೆಹೋವ ದೇವರು ಅಪನಂಬಿಗಸ್ತರಾದ ನಿಮ್ಮನ್ನು ಕೊಂದುಹಾಕಿ, ತಮ್ಮ ಸೇವಕರಿಗಾದರೋ ಬೇರೆ ಹೆಸರನ್ನು ನೀಡುವರು.

[16] ಆಗ ದೇಶದಲ್ಲಿ ತನ್ನನ್ನು ಆಶೀರ್ವದಿಸುವವನು, ಸತ್ಯ ದೇವರಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳುವನು; ದೇಶದಲ್ಲಿ ಆಣೆ ಇಟ್ಟುಕೊಳ್ಳುವವನು, ಸತ್ಯ ದೇವರಲ್ಲಿ ಆಣೆ ಇಟ್ಟುಕೊಳ್ಳುವನು. ಏಕೆಂದರೆ ಮುಂಚಿನ ಕಷ್ಟಗಳು ಮರೆತು ಹೋಗಿವೆ, ಮತ್ತು ಅವು ನನ್ನ ಕಣ್ಣಿಗೆ ಮರೆಯಾಗಿವೆ.

[17] “ನಾನು ಹೊಸ ಆಕಾಶವನ್ನೂ, ಹೊಸ ಭೂಮಿಯನ್ನೂ ಸೃಷ್ಟಿಸುತ್ತೇನೆ. ಮುಂಚಿನವುಗಳು ಜ್ಞಾಪಕದಲ್ಲಿರುವುದಿಲ್ಲ ಇಲ್ಲವೆ ಅವು ಸ್ಮರಣೆಗೆ ಬರುವುದಿಲ್ಲ.

[18] ಆದರೆ ನಾನು ಸೃಷ್ಟಿಸುವುದರ ವಿಷಯದಲ್ಲಿ ಸಂತೋಷಿಸಿ, ಎಂದೆಂದಿಗೂ ಉಲ್ಲಾಸಪಡಿರಿ. ಏಕೆಂದರೆ ಇಗೋ, ನಾನು ಯೆರೂಸಲೇಮಿನಲ್ಲಿ ಉಲ್ಲಾಸವನ್ನೂ, ನನ್ನ ಜನರಲ್ಲಿ ಸಂತೋಷವನ್ನೂ ಸೃಷ್ಟಿಸುತ್ತೇನೆ.

[19] ಯೆರೂಸಲೇಮಿನಲ್ಲಿ ಉಲ್ಲಾಸಿಸಿ, ನನ್ನ ಜನರಲ್ಲಿ ಸಂತೋಷ ಪಡುವೆನು. ಅದರಲ್ಲಿ ಅಳುವ ಧ್ವನಿಯೂ, ಪ್ರಲಾಪದ ಧ್ವನಿಯೂ ಇನ್ನು ಕೇಳಿಬರುವುದಿಲ್ಲ.

[20] “ಅಲ್ಲಿ ಕೆಲವು ದಿನಗಳು ಮಾತ್ರ ಬದುಕತಕ್ಕ ಕೂಸೂ, ವೃದ್ಧನೂ ಇರುವುದಿಲ್ಲ. ಮಗುವು ನೂರು ವರುಷದವನಾಗಿ ಸಾಯುವುದು. ಆದರೆ ನೂರು ವರುಷವನ್ನು ತಲುಪಲು ವಿಫಲನಾದವನನ್ನು ಶಾಪಗ್ರಸ್ತ ಎಂದು ಪರಿಗಣಿಸಲಾಗುತ್ತದೆ.

[21] ಇದಲ್ಲದೆ ಅವರು ಮನೆಗಳನ್ನು ಕಟ್ಟಿ, ವಾಸಮಾಡುವರು; ದ್ರಾಕ್ಷಿತೋಟಗಳನ್ನು ನೆಟ್ಟು, ಅವುಗಳ ಫಲವನ್ನು ಉಣ್ಣುವರು.

[22] ಅವರು ಕಟ್ಟಿದ ಮನೆಗಳಲ್ಲಿ ಬೇರೆಯವರು ವಾಸಮಾಡುವುದಿಲ್ಲ. ಅವರು ನೆಟ್ಟ ತೋಟದ ಫಲವನ್ನು ಇನ್ನೊಬ್ಬರು ತಿನ್ನುವುದಿಲ್ಲ. ಏಕೆಂದರೆ, ಮರಗಳ ಹಾಗೆ ನನ್ನ ಜನರು ಬಹುಕಾಲ ಬಾಳುವರು. ನಾನು ಆಯ್ದುಕೊಂಡವರು ತಮ್ಮ ಕೈಕೆಲಸಗಳನ್ನು ಅನುಭವಿಸುವರು.

[23] ಅವರು ವ್ಯರ್ಥವಾಗಿ ದುಡಿಯರು. ಕಷ್ಟವನ್ನು ಎದುರುಗೊಳ್ಳುವುದಿಲ್ಲ. ಏಕೆಂದರೆ ಅವರು ಯೆಹೋವ ದೇವರ ಆಶೀರ್ವಾದ ಹೊಂದಿದವರ ಸಂತಾನವಾಗಿದ್ದಾರೆ. ಅವರ ಸಂಗಡ ಅವರ ಸಂತತಿಯು ಸಹ ಆಶೀರ್ವಾದ ಹೊಂದುವುದು.

[24] ಅವರು ಕರೆಯುವುದಕ್ಕಿಂತ ಮುಂಚೆ ನಾನು ಉತ್ತರಕೊಡುವೆನು. ಅವರು ಇನ್ನೂ ಮಾತನಾಡುತ್ತಿರುವಾಗಲೇ ನಾನು ಕೇಳುವೆನು.

[25] ತೋಳವೂ ಕುರಿಮರಿಯೂ ಒಂದಾಗಿ ಮೇಯುವುವು; ಸಿಂಹವು ಎತ್ತಿನ ಹಾಗೆ ಹುಲ್ಲು ತಿನ್ನುವುದು; ಹಾವಿಗೆ ಮಣ್ಣೇ ಆಹಾರವಾಗುವುದು; ಅವು ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾವ ಕೇಡೂ ಮಾಡುವುದಿಲ್ಲ, ನಾಶವೂ ಮಾಡುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.

ಯೆಶಾಯ — Chapters