Skip to content
Opens in a new window
Listen to this chapter • 4:38

[1] ಇಗೋ, ಯೆಹೋವ ದೇವರು ಭೂಮಿಯನ್ನು ಬರಿದುಮಾಡಿ, ನಿರ್ಜನ ಪ್ರದೇಶವನ್ನಾಗಿ ಮಾಡಿ, ತಲೆಕೆಳಗಾಗಿ ತಿರುಗಿಸಿ, ಅದರ ನಿವಾಸಿಗಳನ್ನು ಚದರಿಸಿಬಿಡುವವರಾಗಿದ್ದಾರೆ.

[2] ಜನಗಳಿಗೆ ಹೇಗೋ ಹಾಗೆಯೇ ಯಾಜಕರಿಗೆ; ದಾಸನಿಗೆ ಹೇಗೋ ಹಾಗೆಯೇ ಯಜಮಾನನಿಗೆ; ದಾಸಿಗೆ ಹೇಗೋ ಹಾಗೆಯೇ ಅವಳ ಯಜಮಾನಿಗೆ; ಕೊಳ್ಳುವವನಿಗೆ ಹೇಗೋ ಹಾಗೆಯೇ ಮಾರುವವನಿಗೆ; ಸಾಲಕೊಡುವವನಿಗೆ ಹೇಗೋ ಹಾಗೆಯೇ ಸಾಲ ಪಡೆಯುವವನಿಗೆ; ಬಡ್ಡಿ ತೆಗೆಯುವವನಿಗೆ ಹೇಗೋ ಹಾಗೆಯೇ ಬಡ್ಡಿ ತರುವವನಿಗೆ ಆಗುವುದು.

[3] ಭೂಮಿಯು ಬಟ್ಟಬರಿದಾಗುವುದು, ಸಂಪೂರ್ಣ ಸುಲಿಗೆಯಾಗುವುದು. ಯೆಹೋವ ದೇವರು ತಾವೇ ಈ ಮಾತನ್ನು ಹೇಳಿದ್ದಾರೆ.

[4] ಭೂಮಿಯು ಪ್ರಲಾಪಿಸುತ್ತಾ ಬಾಡಿಹೋಗುವುದು. ಲೋಕವು ಸೊರಗಿ ಬಾಡಿಹೋಗುವುದು. ಆಕಾಶವು ಭೂಮಿಯೊಂದಿಗೆ ಕುಗ್ಗಿಹೋಗುವುದು.

[5] ಭೂನಿವಾಸಿಗಳು ದೈವಾಜ್ಞೆಗಳನ್ನು ಮೀರಿ, ದೈವನಿಯಮಗಳನ್ನು ಬದಲಾಯಿಸಿ, ನಿತ್ಯವಾದ ಒಡಂಬಡಿಕೆಯನ್ನು ಭಂಗಪಡಿಸಿದ್ದರಿಂದ ಭೂಮಿಯು ಸಹ ಅದರ ನಿವಾಸಿಗಳ ಹೆಜ್ಜೆಯಿಂದ ಅಪವಿತ್ರವಾಗುವುದು.

[6] ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ. ಅದರಲ್ಲಿ ವಾಸವಾಗಿರುವವರು ದಂಡನೆಗೆ ಒಳಗಾಗಿದ್ದಾರೆ. ಆದ್ದರಿಂದ ಭೂನಿವಾಸಿಗಳು ಸುಟ್ಟು ಹೋಗಿ, ಕೆಲವರು ಮಾತ್ರ ಉಳಿದಿದ್ದಾರೆ.

[7] ದ್ರಾಕ್ಷಾರಸವು ಬತ್ತಿಹೋಗುವುದು, ದ್ರಾಕ್ಷಿಯು ಬಾಡುವುದು. ಹರ್ಷ ಹೃದಯರೆಲ್ಲಾ ನಿಟ್ಟುಸಿರುಬಿಡುತ್ತಾರೆ.

[8] ದಮ್ಮಡಿಗಳ ಉತ್ಸಾಹವು ಮುಗಿದಿದೆ. ಉಲ್ಲಾಸದ ಅವರ ಶಬ್ದವು ಕೊನೆಗೊಂಡಿತು. ಕಿನ್ನರಿಯ ಆನಂದ ಸ್ವರವು ತೀರಿತು.

[9] ಇನ್ನು ಗಾನದೊಡನೆ ದ್ರಾಕ್ಷಾರಸವನ್ನು ಕುಡಿಯರು, ಕುಡಿಯುವವರಿಗೆ ಮದ್ಯಪಾನವು ಕಹಿಯಾಗುವುದು.

[10] ಹಾಳುಪಟ್ಟಣವು ಬಿದ್ದುಹೋಗಿದೆ. ಯಾರು ಒಳಗೆ ಬಾರದಂತೆ ಪ್ರತಿಯೊಂದು ಮನೆಯು ಮುಚ್ಚಿದೆ.

[11] ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ. ಉಲ್ಲಾಸವೆಲ್ಲ ಅಸ್ತಮಿಸಿದೆ. ಭೂಮಿಯ ಮೇಲಿನ ಸಂತೋಷವು ತೊಲಗಿಹೋಗಿದೆ.

[12] ಪಟ್ಟಣದಲ್ಲಿ ಹಾಳೇ ಉಳಿದಿವೆ. ನಾಶನವು ಹೆಬ್ಬಾಗಿಲಿಗೆ ಬಡಿದಿದೆ.

[13] ಓಲಿವ್ ಮರವನ್ನು ಬಡಿದ ಮೇಲೆಯೂ, ದ್ರಾಕ್ಷಿ ಸುಗ್ಗಿಯು ತೀರಿದ ನಂತರವು ನಿಲ್ಲುವ ಉಳಿದ ಕಾಯಿಗಳ ಹಾಗೆ ದೇಶದಲ್ಲಿರುವುದು.

[14] ಅವರು ತಮ್ಮ ಸ್ವರವನ್ನೆತ್ತಿ ಯೆಹೋವ ದೇವರ ಮಹಿಮೆಯನ್ನು ಕುರಿತು ಹಾಡುವರು. ಪಶ್ಚಿಮ ದಿಕ್ಕಿನ ಕಡೆಯಿಂದ ಆರ್ಭಟಿಸುವರು.

[15] ಆದ್ದರಿಂದ ಪೂರ್ವದಿಕ್ಕಿನವರೇ, ಯೆಹೋವ ದೇವರನ್ನು ಮಹಿಮೆಪಡಿಸಿರಿ; ಸಮುದ್ರದ ದ್ವೀಪಗಳಲ್ಲಿ ಇಸ್ರಾಯೇಲರ ದೇವರಾದ ಯೆಹೋವ ದೇವರ ಹೆಸರನ್ನು ನೀವು ಘನಪಡಿಸಿರಿ, ಎಂದು ಕೂಗುವರು.

[16] ಭೂಮಂಡಲದ ಕಟ್ಟಕಡೆಯಿಂದ “ನೀತಿವಂತರಿಗೆ ಮಹಿಮೆಯಾಗಲಿ” ಎಂಬ ಗೀತೆಗಳು ನಮಗೆ ಕೇಳಿಬರುತ್ತಿವೆ. ಆದರೆ, “ನಾನಾದರೋ ಕ್ಷಯಿಸೇ ಕ್ಷಯಿಸುತ್ತೇನೆ. ನನಗೆ ಕಷ್ಟ! ಬಾಧಕರು ಬಾಧಿಸುವುದರಲ್ಲಿಯೇ ನಿರತರಾಗಿದ್ದಾರೆ. ಹೌದು, ಬಾಧಕರು ಬಹಳವಾಗಿ ಬಾಧಿಸುವುದರಲ್ಲಿ ನಿರತರಾಗಿದ್ದಾರೆ.”

[17] ಭೂಮಿಯ ನಿವಾಸಿಗಳೇ, ಭಯವೂ, ಕುಳಿಯೂ, ಬಲೆಯೂ ನಿಮಗೆ ಕಾದಿವೆ.

[18] ಆಗ ಭಯದ ಶಬ್ದಕ್ಕೆ ಓಡಿಹೋಗುವವನು ಗುಂಡಿಯೊಳಗೆ ಬೀಳುವನು. ಗುಂಡಿಯೊಳಗಿಂದ ಏರಿಬರುವವನು ಬಲೆಗೆ ಸಿಕ್ಕಿಬೀಳುವನು. ಆಕಾಶದ ದ್ವಾರಗಳು ತೆರೆದಿವೆ. ಭೂಮಿಯ ಅಸ್ತಿವಾರಗಳು ಕಂಪಿಸುತ್ತಿವೆ.

[19] ಭೂಮಿಯು ಬಿರುಕುಬಿಟ್ಟಿದೆ, ಬಿರಿದು ಬಿರಿದಿದೆ, ಭೂಮಿಯು ಕದಲಿಹೋಗಿದೆ.

[20] ಭೂಮಿಯು ಕುಡುಕನ ಹಾಗೆ ಓಲಾಡುತ್ತದೆ, ಗಾಳಿಗೆ ಸಿಕ್ಕಿದ ಗುಡಿಸಲಿನ ಹಾಗೆ ತೂಗಾಡುತ್ತದೆ, ಅದರ ಅಪರಾಧವು ಅದರ ಮೇಲೆ ಭಾರವಾಗಿರುತ್ತದೆ, ಅದು ಬಿದ್ದು ಹೋಗುತ್ತದೆ, ತಿರುಗಿ ಏಳುವುದೇ ಇಲ್ಲ.

[21] ಆ ದಿವಸದಲ್ಲಿ ಯೆಹೋವ ದೇವರು ಆಕಾಶದಲ್ಲಿರುವ ಆಕಾಶದವರ ಸೈನ್ಯವನ್ನೂ, ಭೂಮಿಯ ಮೇಲಿರುವ ಭೂರಾಜರನ್ನೂ ದಂಡಿಸುವರು.

[22] ನೆಲಮಾಳಿಗೆಯೊಳಗೆ ಒಟ್ಟುಗೂಡಿದ ಸೆರೆಯವರ ಹಾಗೆ ಅವರು ಒಟ್ಟುಗೂಡಿ ಸೆರೆಮನೆಯಲ್ಲಿ ಬಹಳ ದಿನಗಳಿದ್ದ ತರುವಾಯ ದಂಡನೆಗೆ ಗುರಿಯಾಗುವರು.

[23] ಆಮೇಲೆ ಸೇನಾಧೀಶ್ವರ ಯೆಹೋವ ದೇವರು ಚೀಯೋನ್ ಪರ್ವತದಲ್ಲಿಯೂ, ಯೆರೂಸಲೇಮಿನಲ್ಲಿಯೂ ಹಿರಿಯರ ಮುಂದೆ ಮಹಿಮೆಯಿಂದ ಆಳುವಾಗ, ಚಂದ್ರನಿಗೆ ಅವಮಾನವಾಗುವುದು, ಸೂರ್ಯನು ನಾಚಿಕೆ ಪಡುವನು.

ಯೆಶಾಯ — Chapters