Skip to content
Opens in a new window
Listen to this chapter • 6:02

[1] ಅರಸನಾದ ಹಿಜ್ಕೀಯನ ಆಳಿಕೆಯ ಹದಿನಾಲ್ಕನೆಯ ವರ್ಷದಲ್ಲಿ ಅಸ್ಸೀರಿಯದ ಅರಸನಾದ ಸನ್ಹೇರೀಬನು ಬಂದು, ಯೆಹೂದದ ಎಲ್ಲಾ ಕೋಟೆಯ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು.

[2] ಆಗ ಅಸ್ಸೀರಿಯದ ಅರಸನು ಲಾಕೀಷಿನಿಂದ ದೊಡ್ಡ ಸೈನ್ಯದೊಂದಿಗೆ ರಬ್ಷಾಕೆ ಎಂಬವನನ್ನು ಯೆರೂಸಲೇಮಿನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಅವನು ಅಗಸರ ಹೊಲದ ಮಾರ್ಗದಲ್ಲಿ ಮೇಲಿನ ಕೆರೆಯ ಕಾಲುವೆಯ ಸಮೀಪದಲ್ಲಿ ನಿಂತುಕೊಂಡನು.

[3] ಆಗ ಅರಮನೆಯ ಕಾರ್ಯನಿರ್ವಾಹಕನಾದ ಹಿಲ್ಕೀಯನ ಮಗ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ದಾಖಲೆಗಾರನಾದ ಆಸಾಫನ ಮಗ ಯೋವ ಎಂಬುವರು ಅವನ ಬಳಿಗೆ ಬಂದರು.

[4] ರಬ್ಷಾಕೆಯು ಅವರಿಗೆ, “ನೀವು ಹಿಜ್ಕೀಯನಿಗೆ ಹೀಗೆ ಹೇಳಬೇಕು: “ ‘ಮಹಾರಾಜನಾದ ಅಸ್ಸೀರಿಯದ ಅರಸನು ಹೇಳುವುದೇನೆಂದರೆ, ಈ ನಿನ್ನ ಭರವಸೆಗೆ ಆಧಾರ ಏನು?

[5] ಯುದ್ಧಕ್ಕೆ ಬೇಕಾದ ಆಲೋಚನೆಯೂ, ಪರಾಕ್ರಮವೂ ಉಂಟೆಂದು ಹೇಳುವ ನಿನ್ನ ಮಾತು ಬರೀ ವ್ಯರ್ಥವಾದ ಮಾತುಗಳೇ, ನೀನು ಯಾರನ್ನು ನಂಬಿಕೊಂಡು ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದೀಯೆ?

[6] ಇಗೋ! ನೀನು ಜಜ್ಜಿದ ದಂಟಿಗೆ ಸಮಾನವಾಗಿರುವ ಈಜಿಪ್ಟಿನ ಮೇಲೆ ಭರವಸೆ ಇಟ್ಟಿರುವಿಯಷ್ಟೆ, ಅದರ ಮೇಲೆ ಮನುಷ್ಯನು ಊರಿಕೊಂಡರೆ ಅದು ಅವನ ಕೈಯನ್ನೇ ಚುಚ್ಚಿ ಗಾಯ ಮಾಡುವುದು. ಈಜಿಪ್ಟಿನ ಅರಸನಾದ ಫರೋಹನಲ್ಲಿ ಭರವಸೆ ಇಟ್ಟವರೆಲ್ಲರಿಗೂ ಇದೇ ಗತಿಯಾಗುವದು.

[7] ಬಹುಶಃ ನೀವು, “ನಮ್ಮ ದೇವರಾದ ಯೆಹೋವ ದೇವರನ್ನೇ ನಂಬಿಕೊಂಡಿದ್ದೇವೆ,” ಎಂದು ಹೇಳಬಹುದು. “ಯೆರೂಸಲೇಮಿನ ಬಲಿಪೀಠದ ಮುಂದೆಯೇ ಆರಾಧನೆ ಮಾಡಬೇಕು” ಎಂದು ಯೆಹೂದ್ಯರಿಗೆ ಮತ್ತು ಯೆರೂಸಲೇಮಿನವರಿಗೆ ಹಿಜ್ಕೀಯನು ಆಜ್ಞಾಪಿಸಿ, ಆ ಯೆಹೋವ ದೇವರ ಪೂಜಾಸ್ಥಳಗಳನ್ನೂ, ಬೇರೆ ಎಲ್ಲಾ ಬಲಿಪೀಠಗಳನ್ನೂ ಹಾಳುಮಾಡಿದನಲ್ಲವೇ?

[8] “ ‘ಹಾಗಾದರೆ, ಈಗ ನೀನು ಅಸ್ಸೀರಿಯದ ಅರಸನಾದ ನನ್ನ ಯಜಮಾನನೊಂದಿಗೆ ಒಪ್ಪಂದ ಮಾಡಿಕೋ, ಆಗ ನಿನಗೆ ಎರಡು ಸಾವಿರ ಕುದುರೆಸವಾರರನ್ನು ಬಳಸಲು ಸಾಮರ್ಥ್ಯವಿದ್ದರೆ ನಾನು ಎರಡು ಸಾವಿರ ಕುದುರೆಗಳನ್ನು ಕೊಡುತ್ತೇನೆ.

[9] ಇದಾಗದಿದ್ದರೆ ನನ್ನ ಯಜಮಾನನ ಸೇವಕರಲ್ಲಿ ಚಿಕ್ಕವನಾದ ಒಬ್ಬ ಸೈನ್ಯಾಧಿಪತಿಯನ್ನು ಹೇಗೆ ಎದುರಿಸುತ್ತೀ? ನೀನು ರಥಗಳಿಗೋಸ್ಕರವೂ, ರಾಹುತರಿಗೋಸ್ಕರವೂ ಈಜಿಪ್ಟಿನ ಮೇಲೆ ಭರವಸೆ ಇಟ್ಟಿದ್ದೀಯೋ?

[10] ಈ ಸ್ಥಳವನ್ನು ನಾಶಮಾಡುವುದಕ್ಕೆ ಯೆಹೋವ ದೇವರ ಅಪ್ಪಣೆ ಇಲ್ಲದೆ ಬಂದಿದ್ದೇನೋ? ಈ ದೇಶದ ಮೇಲೆ ಹೋಗಿ ಅದನ್ನು ನಾಶಮಾಡೆಂದು ಯೆಹೋವ ದೇವರೇ ನನಗೆ ಹೇಳಿದರು,’ ” ಎಂದನು.

[11] ಆಗ ಎಲ್ಯಾಕೀಮ್, ಶೆಬ್ನ, ಯೋವ ಎಂಬುವರು ರಬ್ಷಾಕೆಗೆ, “ನೀನು ಮಾತನಾಡುವುದು ಗೋಡೆಯ ಮೇಲಿರುವವರಿಗೆ ಕೇಳಿಸುತ್ತದೆ ಆದ್ದರಿಂದ ದಯವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಅರಾಮ್ಯ ಭಾಷೆಯಲ್ಲಿ ಮಾತನಾಡು: ಅದು ನಮಗೆ ತಿಳಿಯುತ್ತದೆ ಆದರೆ ಹಿಬ್ರಿಯ ಭಾಷೆಯಲ್ಲಿ ಮಾತನಾಡಬೇಡ,” ಎಂದು ಹೇಳಿದರು.

[12] ಆದರೆ ರಬ್ಷಾಕೆಯು ಅವರಿಗೆ, “ನನ್ನ ಯಜಮಾನನು ನಿಮ್ಮ ಸಂಗಡವಾಗಲಿ, ನಿಮ್ಮ ಯಜಮಾನನ ಸಂಗಡವಾಗಲಿ ಮಾತ್ರ ಈ ಮಾತುಗಳನ್ನು ಹೇಳುವುದಕ್ಕೆ ಕಳುಹಿಸಲಿಲ್ಲ. ಈ ಗೋಡೆಯ ಮೇಲೆ ಕುಳಿತ ಜನರ ಸಂಗಡವೂ ಮಾತನಾಡುವುದಕ್ಕಾಗಿ ಕಳುಹಿಸಿದ್ದಾರೆ. ಈ ಜನರು ನಿಮ್ಮ ಸಂಗಡ ಇದ್ದರೆ ನಿಮ್ಮ ಹಾಗೆ ಇವರೂ ಸಹ ತಮ್ಮ ಸ್ವಂತ ಮಲಮೂತ್ರವನ್ನು ತಿಂದು ಕುಡಿಯಬೇಕಾಗುತ್ತದೆ,” ಎಂದು ಹೇಳಿದನು.

[13] ಆಗ ರಬ್ಷಾಕೆ ನಿಂತುಕೊಂಡು ಯೆಹೂದ್ಯರ ಭಾಷೆಯಾದ ಹಿಬ್ರಿಯದಲ್ಲಿ ಗಟ್ಟಿಯಾದ ಶಬ್ದದಿಂದ ಕೂಗಿ ಹೇಳಿದ್ದೇನೆಂದರೆ, “ನೀವು ಅಸ್ಸೀರಿಯದ ಮಹಾರಾಜನ ಮಾತನ್ನು ಕೇಳಿರಿ.

[14] ಅರಸನು ಹೇಳುವುದೇನೆಂದರೆ: ಹಿಜ್ಕೀಯನ ಮಾತನ್ನು ಕೇಳಿ ಮೋಸಹೋಗಬೇಡಿರಿ ಏಕೆಂದರೆ ಅವನು ನಿಮ್ಮನ್ನು ಬಿಡಿಸಲು ಶಕ್ತನಲ್ಲ.

[15] ಇದಲ್ಲದೆ, ‘ಯೆಹೋವ ದೇವರು ನಮ್ಮನ್ನು ನಿಶ್ಚಯವಾಗಿ ರಕ್ಷಿಸುವರೆಂದೂ, ಈ ಪಟ್ಟಣವು ಅಸ್ಸೀರಿಯದ ಅರಸನ ಕೈಯಲ್ಲಿ ಒಪ್ಪಿಸುವುದಿಲ್ಲವೆಂದೂ ಹಿಜ್ಕೀಯನು ನಿಮಗೆ ಯೆಹೋವ ದೇವರಲ್ಲಿ ಭರವಸೆ ಇಡುವಂತೆ ಮಾಡುವರು.’

[16] “ಹಿಜ್ಕೀಯನ ಮಾತುಗಳಿಗೆ ಕಿವಿಗೊಡಬೇಡಿರಿ. ಏಕೆಂದರೆ ಅಸ್ಸೀರಿಯದ ಅರಸನು ಹೇಳುವುದೇನೆಂದರೆ, ನನ್ನ ಸಂಗಡ ಒಡಂಬಡಿಕೆ ಮಾಡಿಕೊಂಡು, ನನ್ನ ಬಳಿಗೆ ಹೊರಟುಬನ್ನಿರಿ, ಆಗ ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ತನ್ನ ದ್ರಾಕ್ಷಾಫಲವನ್ನೂ, ಅಂಜೂರದ ಫಲವನ್ನೂ ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವನು.

[17] ಸ್ವಲ್ಪ ಕಾಲವಾದ ನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷಿತೋಟ, ಇವು ಸಮೃದ್ಧಿಯಾಗಿರುವ ನಿಮ್ಮ ದೇಶಕ್ಕೆ ಸಮಾನವಾಗಿರುವ ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುವೆನು.

[18] “ ‘ಯೆಹೋವ ದೇವರು ನಮ್ಮನ್ನು ರಕ್ಷಿಸುವರು,’ ಎಂದು ಹೇಳಿ ಹಿಜ್ಕೀಯನು ನಿಮ್ಮನ್ನು ಪ್ರೇರೇಪಿಸದಂತೆ ಎಚ್ಚರಿಕೆಯಾಗಿರಿ. ಯಾವ ಜನಾಂಗದ ದೇವರುಗಳಾದರೂ ತನ್ನ ದೇಶಗಳನ್ನು ಅಸ್ಸೀರಿಯದ ಅರಸನ ಕೈಯಿಂದ ಬಿಡಿಸಿದ್ದು ಉಂಟೋ?

[19] ಹಮಾತ್, ಅರ್ಪಾದ್, ಸೆಫರ್ವಯಿಮಿನ ದೇವರುಗಳು ಎಲ್ಲಿ? ಅವರು ಸಮಾರ್ಯವನ್ನು ನನ್ನ ಕೈಯಿಂದ ಬಿಡಿಸಿಕೊಂಡರೋ?

[20] ಈ ದೇಶಗಳ ಸಮಸ್ತ ದೇವರುಗಳಲ್ಲಿ ಯಾರೂ ತಮ್ಮ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದ ಮೇಲೆ, ಯೆಹೋವ ದೇವರು ಯೆರೂಸಲೇಮನ್ನು ನನ್ನ ಕೈಗೆ ಸಿಗದಂತೆ ತಪ್ಪಿಸಿ ಕಾಪಾಡುವನೋ?” ಎಂದು ಹೇಳಿದನು.

[21] ಆದರೆ ಜನರು ಅವನಿಗೆ ಪ್ರತ್ಯುತ್ತರ ಕೊಡದೆ ಸುಮ್ಮನಿದ್ದರು. ಏಕೆಂದರೆ ಅವನಿಗೆ ಉತ್ತರ ಕೊಡಬೇಡಿರೆಂದು ಅರಸನ ಆಜ್ಞೆಯಾಗಿತ್ತು.

[22] ಆಗ ಅರಮನೆಯ ಮೇಲ್ವಿಚಾರಕನಾದ ಹಿಲ್ಕೀಯನ ಮಗ ಎಲ್ಯಾಕೀಮನೂ ಕಾರ್ಯದರ್ಶಿಯಾದ ಶೆಬ್ನನೂ, ದಾಖಲೆಗಾರನಾದ ಆಸಾಫನ ಮಗ ಯೋವ ಎಂಬವನೂ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಹಿಜ್ಕೀಯನ ಬಳಿಗೆ ಬಂದು ಸೈನ್ಯಾಧಿಕಾರಿಯಾದ ರಬ್ಷಾಕೆ ಹೇಳಿದ ಮಾತುಗಳನ್ನು ಅವನಿಗೆ ತಿಳಿಸಿದರು.

ಯೆಶಾಯ — Chapters