[1] ಇಷಯನ ಬುಡದಿಂದ ಒಂದು ಚಿಗುರು ಒಡೆಯುವುದು ಮತ್ತು ಅದರ ಬೇರಿನಿಂದ ಕೊಂಬೆಯು ಫಲಕೊಡುವುದು.
[2] ಅವನ ಮೇಲೆ ಯೆಹೋವ ದೇವರ ಆತ್ಮ, ಜ್ಞಾನ ಮತ್ತು ವಿವೇಕದಾಯಕ ಆತ್ಮ, ಸಮಾಲೋಚನೆ ಮತ್ತು ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳುವಳಿಕೆ ಮತ್ತು ಯೆಹೋವ ದೇವರ ಭಯದ ಆತ್ಮ,
[3] ಅವರು ಯೆಹೋವ ದೇವರ ಭಯದಲ್ಲಿ ಆನಂದಿಸುವರು. ಅವರು ಕಣ್ಣಿಗೆ ಕಂಡಂತೆ ತೀರ್ಪು ಮಾಡುವುದಿಲ್ಲ, ತಮ್ಮ ಕಿವಿಗಳ ಕೇಳ್ವಿಕೆಯ ಪ್ರಕಾರವೂ ತೀರ್ಪು ಮಾಡುವುದಿಲ್ಲ.
[4] ಆದರೆ ಭೂಮಿಯ ಬಡವರಿಗೆ ನೀತಿಯಿಂದ ನ್ಯಾಯತೀರಿಸುವರು. ಭೂಲೋಕದ ದೀನರಿಗೆ ನ್ಯಾಯವಾಗಿ ತೀರ್ಪುಮಾಡುವರು, ಭೂಮಿಯನ್ನು ತಮ್ಮ ಬಾಯಿಯ ಕೋಲಿನಿಂದ ಹೊಡೆಯುವರು. ತಮ್ಮ ತುಟಿಗಳ ಉಸಿರಿನಿಂದ ದುಷ್ಟರನ್ನು ಹತಮಾಡುವರು.
[5] ನೀತಿಯೇ ಅವರಿಗೆ ನಡುಕಟ್ಟು, ನಂಬಿಗಸ್ತಿಕೆಯೇ ಅವರ ಸೊಂಟದ ಪಟ್ಟಿ.
[6] ತೋಳವು ಕುರಿಯ ಸಂಗಡ ವಾಸಿಸುವುದು; ಚಿರತೆಯು ಮೇಕೆ ಮರಿಯೊಂದಿಗೆ ಮಲಗುವುದು; ಕರುವೂ, ಪ್ರಾಯದ ಸಿಂಹವೂ, ಪುಷ್ಟಪಶುವೂ ಒಟ್ಟಿಗಿರುವುವು; ಇವುಗಳನ್ನು ಒಂದು ಪುಟ್ಟ ಮಗುವು ನಡೆಸುವುದು.
[7] ಹಸುವು ಕರಡಿಯ ಸಂಗಡ ಮೇಯುವುವು; ಅವುಗಳ ಮರಿಗಳು ಜೊತೆಯಾಗಿ ಮಲಗುವುವು; ಸಿಂಹವು ಎತ್ತಿನಂತೆ ಹುಲ್ಲನ್ನು ಮೇಯುವುದು.
[8] ಹಸುಳೆಯು ನಾಗರ ಹಾವಿನ ಹುತ್ತದ ಮೇಲೆ ಆಡುವುದು ಮತ್ತು ಪುಟ್ಟ ಮಗುವು ಹಾವಿನ ಬಿಲದ ಒಳಗೆ ಕೈ ಹಾಕುವುದು.
[9] ನನ್ನ ಪರಿಶುದ್ಧ ಪರ್ವತದಲ್ಲಿ ಯಾರೂ ಕೇಡುಮಾಡುವುದಿಲ್ಲ, ಯಾರೂ ಹಾಳುಮಾಡುವುದಿಲ್ಲ. ಏಕೆಂದರೆ ಸಮುದ್ರವು ನೀರಿನಿಂದ ತುಂಬಿಕೊಂಡಿರುವಂತೆ, ಯೆಹೋವ ದೇವರ ತಿಳುವಳಿಕೆಯು ಭೂಮಿಯಲ್ಲಿ ತುಂಬಿಕೊಂಡಿರುವುದು.
[10] ಆ ದಿನದಲ್ಲಿ ಇಷಯನ ವಂಶದಿಂದ ಜನರಿಗೆ ಒಂದು ಬೇರು ಗುರುತಿನ ಧ್ವಜವಾಗಿ ನಿಲ್ಲುವುದು. ಅವರ ವಿಶ್ರಾಂತಿ ಸ್ಥಳವು ಮಹಿಮೆಯುಳ್ಳದ್ದಾಗಿರುವುದು.
[11] ಆ ದಿನದಲ್ಲಿ ಯೆಹೋವ ದೇವರು ಉಳಿದ ತಮ್ಮ ಜನರನ್ನು ಬಿಡಿಸಿಕೊಳ್ಳುವುದಕ್ಕೆ ಎರಡನೇ ಸಾರಿ ಕೈಹಾಕಿ ಅಸ್ಸೀರಿಯ, ಈಜಿಪ್ಟ್, ಪತ್ರೋಸ್, ಕೂಷ್, ಏಲಾಮ್, ಶಿನಾರ್, ಹಮಾತ್ ಮತ್ತು ಮೆಡಿಟರೇನಿಯನ್ ಸಮುದ್ರದ ದ್ವೀಪಗಳಿಂದಲೂ ಉಳಿದವರನ್ನು ಬರಮಾಡಿಕೊಳ್ಳುವರು.
[12] ಜನಾಂಗಗಳಿಗೆ ಗುರುತಾಗಿ ಧ್ವಜವನ್ನೆತ್ತಿ ಇಸ್ರಾಯೇಲಿನಿಂದ ತಳ್ಳಿಬಿಟ್ಟವರನ್ನು ಕೂಡಿಸುವನು. ಯೆಹೂದದಿಂದ ಚದರಿದವರನ್ನು ಭೂಮಿಯ ನಾಲ್ಕು ಕಡೆಗಳಿಂದ ಒಟ್ಟುಗೂಡಿಸುವನು.
[13] ಎಫ್ರಾಯೀಮಿನ ಹೊಟ್ಟೆಕಿಚ್ಚು ತೊಲಗಿ, ಯೆಹೂದದ ವಿರೋಧಿಗಳು ಇಲ್ಲದಂತಾಗುವರು. ಹೀಗೆ ಎಫ್ರಾಯೀಮು ಯೆಹೂದದ ಮೇಲೆ ಹೊಟ್ಟೆಕಿಚ್ಚು ಪಡುವುದಿಲ್ಲ; ಯೆಹೂದವು ಎಫ್ರಾಯೀಮಿಗೆ ವಿರೋಧವಾಗಿರುವುದಿಲ್ಲ.
[14] ಆದರೆ ಅವರು ಪಶ್ಚಿಮ ದಿಕ್ಕಿಗೆ ಫಿಲಿಷ್ಟಿಯರ ಇಳಿಜಾರು ಪ್ರದೇಶದ ಮೇಲೆ ಎರಗುವರು. ಅವರು ಜೊತೆಯಾಗಿ ಪೂರ್ವದವರನ್ನು ಸೂರೆ ಮಾಡುವರು, ಅವರು ಎದೋಮಿನ ಮತ್ತು ಮೋವಾಬಿನ ಮೇಲೆ ತಮ್ಮ ಕೈಯನ್ನು ದಾಳಿಮಾಡುವರು ಮತ್ತು ಅಮ್ಮೋನಿಯರು ಅವರಿಗೆ ಅಧೀನರಾಗುವರು.
[15] ಯೆಹೋವ ದೇವರು ಈಜಿಪ್ಟಿನ ಸಮುದ್ರದ ಕೊಲ್ಲಿಯನ್ನು ಸಂಪೂರ್ಣವಾಗಿ ತೆಗೆದುಹಾಕುವರು, ಅವರು ತಮ್ಮ ಉಷ್ಣಗಾಳಿಯಿಂದ ಯೂಫ್ರೇಟೀಸ್ ನದಿಯ ಮೇಲೆ ಕೈಯನ್ನು ಝಾಡಿಸಿ, ಅದನ್ನು ಏಳು ಹೊಳೆಗಳಾಗಿ ಒಡೆದು, ಮನುಷ್ಯರ ಕೆರಗಳು ನೆನೆಯದಂತೆ ದಾಟಿಸುವರು.
[16] ಇದಲ್ಲದೆ ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಟು ಬಂದ ಕಾಲದಲ್ಲಿ ಅವರಿಗೆ ಹೇಗೆ ಮಾರ್ಗವು ಇತ್ತೋ ಹಾಗೆಯೇ ಅಸ್ಸೀರಿಯದಿಂದ ತಪ್ಪಿಸಿಕೊಂಡು ಬರುವ ತಮ್ಮ ಉಳಿದ ಜನರಿಗೆ ವಿಶಾಲವಾದ ಮಾರ್ಗವು ಇರುವುದು.