Skip to content
Opens in a new window
Listen to this chapter • 6:38

[1] ಕುಡುಕರಿಂದ ಕೂಡಿದ ಎಫ್ರಾಯೀಮಿನ ಕಿರೀಟದಂತಿರುವ ನಗರಕ್ಕೆ ಕಷ್ಟ! ಒಮ್ಮೆ ಕುಡಿತಕ್ಕೆ ಸೋತು ಫಲವತ್ತಾದ ಕಣಿವೆಗೆ ಶ್ರೇಷ್ಠ ಶಿರೋಭೂಷಣವಾಗಿದ್ದು, ಈಗ ಬಾಡಿಹೋಗುತ್ತಿರುವ ಆ ಹೂವಿಗೆ ಕಷ್ಟ!

[2] ಇಗೋ, ಕರ್ತರಿಗೆ ಒಬ್ಬ ಮಹಾ ಬಲಿಷ್ಠನು ಇದ್ದಾನೆ. ಅವನು ರಭಸವಾಗಿ ಸುರಿಯುವ ಕಲ್ಮಳೆಯಂತೆಯೂ, ಹೊಡೆದು ಬಿಡುವ ಬಿರುಗಾಳಿಯಂತೆಯೂ, ಪ್ರಳಯ ಮಾಡುವ ದೊಡ್ಡ ನೀರನ್ನು ತರುವ ಬಿರುಗಾಳಿಯಂತೆಯೂ ಅದನ್ನು ಕೈಯಿಂದ ಬೀಳಿಸುವನು.

[3] ಕುಡುಕರಾದ ಎಫ್ರಾಯೀಮ್ಯರ ಗರ್ವದ ಕಿರೀಟವು ಕಾಲಿನ ತುಳಿತಕ್ಕೆ ಈಡಾಗುವುದು.

[4] ಫಲವತ್ತಾದ ಕಣಿವೆಗೆ ತಲೆಯ ಮೇಲಿರುವ ಅಲಂಕಾರದ ಶೃಂಗಾರವಾಗಿದ್ದು, ಬೇಸಿಗೆ ಮುಂಚೆ ಮಾಗಿದ ಅಂಜೂರದ ಹಣ್ಣಿನ ಹಾಗೆ ಇರುವುದು. ಜನರು ಅವರನ್ನು ನೋಡಿ ಕೈಗೆ ತೆಗೆದುಕೊಂಡ ತಕ್ಷಣ ಅವರು ನುಂಗುತ್ತಾರೆ.

[5] ಆ ದಿನದಲ್ಲಿ ಸೇನಾಧೀಶ್ವರ ಯೆಹೋವ ದೇವರು ತನ್ನ ಜನರಲ್ಲಿ ಉಳಿದವರಿಗೆ ಮಹಿಮೆಯ ಕಿರೀಟವೂ ಮತ್ತು ಸುಂದರವಾದ ಮಕುಟವೂ ಆಗಿರುವರು.

[6] ನ್ಯಾಯಕ್ಕೋಸ್ಕರ ಕೂತುಕೊಂಡವನಿಗೆ ನ್ಯಾಯದ ಆತ್ಮವೂ, ಬಾಗಿಲಿನ ಕಡೆಗೆ ಯುದ್ಧವನ್ನು ತಿರುಗಿಸುವವನಿಗೆ ಪರಾಕ್ರಮವೂ ಆಗಿರುವನು.

[7] ಇವರು ಸಹ ದ್ರಾಕ್ಷಾರಸದಿಂದ ಮತ್ತರಾಗಿದ್ದಾರೆ. ಮದ್ಯದಿಂದಲೂ ಓಲಾಡುತ್ತಿದ್ದಾರೆ. ಯಾಜಕನೂ ಪ್ರವಾದಿಯೂ ಮದ್ಯದಿಂದ ಮತ್ತರಾಗಿದ್ದಾರೆ. ದ್ರಾಕ್ಷಾರಸದಿಂದ ತೂರಾಡುತ್ತಿದ್ದಾರೆ. ಮದ್ಯದಿಂದ ಓಲಾಡುತ್ತಿದ್ದಾರೆ. ದರ್ಶನವಾಗುತ್ತಿರುವಾಗಲೂ ಅವರು ತಪ್ಪುತ್ತಾರೆ. ನ್ಯಾಯತೀರ್ವಿಕೆಯಲ್ಲಿ ತತ್ತರಿಸುತ್ತಾರೆ.

[8] ಮೇಜುಗಳೆಲ್ಲಾ ಸ್ಥಳ ಉಳಿಯದ ಹಾಗೆ ಅಸಹ್ಯವಾದ ಕಕ್ಕುವಿಕೆಯಿಂದ ತುಂಬಿವೆ.

[9] ಈತನು ಯಾರಿಗೆ ಜ್ಞಾನವನ್ನು ಬೋಧಿಸುತ್ತಾನೆ? ಮತ್ತು ಯಾರಿಗೆ ಬೋಧನೆಯನ್ನು ತಿಳಿದುಕೊಳ್ಳುವ ಹಾಗೆ ಮಾಡುತ್ತಾನೆ? ಆಗತಾನೇ ಹಾಲು ಬಿಟ್ಟ ಕೂಸುಗಳಿಗೋ, ಎಳೆಯ ಮಕ್ಕಳಿಗೋ?

[10] ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಅಲ್ಲಿ ಸ್ವಲ್ಪ, ಇಲ್ಲಿ ಸ್ವಲ್ಪ.

[11] ತೊದಲು ಮಾತಿನವರು, ಅನ್ಯಭಾಷಿಗಳು ಇವರ ಮೂಲಕವಾಗಿಯೇ ಆತನು ಈ ಜನರೊಡನೆ ಮಾತನಾಡುತ್ತಾನೆ.

[12] ಆತನು ಮೊದಲು, “ಇದೇ ನಿಮಗೆ ಅವಶ್ಯಕವಾದ ವಿಶ್ರಾಂತಿ, ಬಳಲಿದವರನ್ನು ವಿಶ್ರಮಗೊಳಿಸಿರಿ. ನಿಮಗೆ ಅನುಕೂಲವಾದ ಉಪಶಮನ ಇದೇ,” ಎಂದು ಹೇಳಿದಾಗಲೂ ಅವರು ಕೇಳಲಿಲ್ಲ.

[13] ಆಗ ಯೆಹೋವ ದೇವರು ಅವರಿಗೆ ಹೀಗೆ ಹೇಳಿದರು: ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ, ಇಲ್ಲಿ ಸ್ವಲ್ಪ, ಅಲ್ಲಿ ಸ್ವಲ್ಪ ಇದರಿಂದ ಅವರು ಎಡವಿಬಿದ್ದು ಗಾಯಗೊಳ್ಳಬಹುದು. ಮತ್ತು ಬಲೆಯಲ್ಲಿ ಸಿಕ್ಕಿ ಬೀಳುವರು.

[14] ಆದಕಾರಣ ಯೆರೂಸಲೇಮಿನಲ್ಲಿರುವ ಈ ಜನರನ್ನು ಆಳುವ ಹಾಸ್ಯದ ಜನರಾದ ನೀವು ಯೆಹೋವ ದೇವರ ಮಾತನ್ನು ಕೇಳಿರಿ.

[15] “ಮರಣದ ಸಂಗಡ ಒಡಂಬಡಿಕೆಯನ್ನು ಮಾಡಿದ್ದೇವೆ. ಪಾತಾಳದ ಸಂಗಡ ಒಪ್ಪಂದ ಮಾಡಿಕೊಂಡಿದ್ದೇವೆ. ವಿಪರೀತವಾದ ಶಿಕ್ಷೆಯು ಹಾದುಹೋಗುವಾಗ, ಅದು ನಮ್ಮನ್ನು ಮುಟ್ಟದು; ನಮ್ಮ ಅಸತ್ಯವನ್ನು ಆಶ್ರಯವಾಗಿ ಮಾಡಿಕೊಂಡು, ಮೋಸದಲ್ಲಿ ಅಡಗಿಕೊಂಡಿದ್ದೇವೆ,” ಎನ್ನುತ್ತೀರಲ್ಲಾ?

[16] ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಪರೀಕ್ಷಿತವಾಗಿಯೂ, ಅಮೂಲ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ ಸ್ಥಿರವಾದ ಅಸ್ತಿವಾರವನ್ನಾಗಿ ಇಡುತ್ತೇನೆ. ಭರವಸೆ ಇಡುವವನು ಆತುರಪಡನು.

[17] ನಾನು ನ್ಯಾಯವನ್ನು ಅಳತೆಗೋಲನ್ನಾಗಿಯೂ ಮತ್ತು ನೀತಿಯನ್ನು ಮಟ್ಟಗೋಲನ್ನಾಗಿಯೂ ಮಾಡುವೆನು. ಕಲ್ಮಳೆಯು ಸುಳ್ಳಿನ ಆಶ್ರಯವನ್ನು ಬಡಿದುಕೊಂಡು ಹೋಗುವುದು. ಅಡಗುವ ಸ್ಥಾನವನ್ನು ಜಲಪ್ರವಾಹವು ಮುಳುಗಿಸಿ ಬಿಡುವುದು.

[18] ಮರಣದೊಂದಿಗೆ ನೀವು ಮಾಡಿಕೊಂಡ ಒಡಂಬಡಿಕೆ ರದ್ದಾಗುವುದು. ಪಾತಾಳದ ಸಂಗಡ ನೀವು ಮಾಡಿಕೊಂಡ ಒಪ್ಪಂದವು ನಿಲ್ಲುವುದಿಲ್ಲ. ವಿಪರೀತ ಬಾಧೆಯು ಹಾದುಹೋಗುವಾಗ ನಿಮ್ಮನ್ನು ತುಳಿದುಹಾಕುವುದು.

[19] ಅದು ಹಾದುಹೋಗುವಾಗೆಲ್ಲಾ ನಿಮ್ಮನ್ನು ಹಿಡಿಯುವುದು. ಏಕೆಂದರೆ ಅದು ಹೊತ್ತಾರೆಯಿಂದ ಹೊತ್ತಾರೆಗೆ, ಹಗಲು ರಾತ್ರಿಯೂ ಹಾದುಹೋಗುವುದು.” ಆಗ ದೇವರ ಈ ಸಂದೇಶವನ್ನು ಅರ್ಥಮಾಡಿಕೊಳ್ಳುವವರಿಗೆ ಭಯಭ್ರಾಂತಿ ಉಂಟಾಗುವುದು.

[20] ಮೈ ಚಾಚುವುದಕ್ಕೆ ಹಾಸಿಗೆ ಚಿಕ್ಕದಾಗಿರುವುದು. ಮುದುರಿಕೊಂಡು ಮಲಗುವುದಕ್ಕೆ, ಹೊದಿಕೆಯ ಅಗಲ ಸಾಲದು.

[21] ಯೆಹೋವ ದೇವರು ಪೆರಾಚೀಮ್ ಪರ್ವತದಲ್ಲಿ ಎದ್ದಂತೆ ಏಳುವರು. ಹಾಗೆ ಎದ್ದು ಗಿಬ್ಯೋನ್ ತಗ್ಗಿನಲ್ಲಿ ಆದ ಹಾಗೆ ಕೋಪಿಸಿ, ಅಪರೂಪವಾದ ತಮ್ಮ ಕೆಲಸವನ್ನು ನಡಿಸಿ, ಅಪೂರ್ವವಾದ ತಮ್ಮ ಕಾರ್ಯವನ್ನು ನೆರವೇರಿಸುವನು.

[22] ಹೀಗಿರುವುದರಿಂದ ನಿಮ್ಮ ಬಂಧನಗಳು ಬಿಗಿಯಾಗದಂತೆ ಹಾಸ್ಯಗಾರರಾಗಬೇಡಿರಿ. ಸರ್ವಶಕ್ತ ಆಗಿರುವ ಕರ್ತ ಯೆಹೋವ ದೇವರ ಕಡೆಯಿಂದ ಭೂಮಂಡಲದಲ್ಲೆಲ್ಲಾ ಸಂಹಾರ ತರಲು ನಿರ್ಣಯಿಸಿದೆ, ಎಂಬ ತೀರ್ಪನ್ನು ನಾನು ಕೇಳಿದ್ದೇನೆ.

[23] ನನ್ನ ಧ್ವನಿಗೆ ಕಿವಿಗೊಟ್ಟು ಕೇಳಿರಿ, ನನ್ನ ಮಾತಿಗೆ ಗಮನವಿಟ್ಟು ಆಲಿಸಿರಿ.

[24] ಬಿತ್ತನೆಗಾಗಿ ಉಳುವವನು ಹಗಲೆಲ್ಲಾ ಉಳುತ್ತಿರುವನೋ? ತನ್ನ ಭೂಮಿಯ ಮಣ್ಣುಹೆಂಟೆಯನ್ನು ತೆಗೆದು, ದಿನವೆಲ್ಲಾ ಹೊಡೆಯುವನೋ?

[25] ಅದರ ಮೇಲ್ಭಾಗವನ್ನು ಹಸನು ಮಾಡಿದ ಮೇಲೆ ಅಗಸೆಯನ್ನು ಚೆಲ್ಲಿ, ಜೀರಿಗೆಯನ್ನು ಚದರಿಸಿ ಮತ್ತು ಗೋಧಿಯನ್ನು ಸಾಲುಸಾಲಾಗಿಯೂ, ಜವೆಗೋಧಿಯನ್ನು ನೇಮಕವಾದ ಸ್ಥಳದಲ್ಲಿಯೂ, ಕಡಲೆಯನ್ನು ಅಂಚಿನಲ್ಲಿಯೂ ಹಾಕುವನಲ್ಲವೇ.

[26] ಏಕೆಂದರೆ ಅವನ ದೇವರು ಅವನಿಗೆ ಸೂಚಿಸುತ್ತಾರೆ. ಮತ್ತು ಸರಿಯಾದ ಮಾರ್ಗವನ್ನು ಕಲಿಸುತ್ತಾರೆ.

[27] ಅಗಸೆಯನ್ನು ತುಳಿಯುವ ಯಂತ್ರದಿಂದ ತುಳಿಯುವುದಿಲ್ಲ. ಜೀರಿಗೆಯನ್ನು ಒಕ್ಕುವುದು ಬಂಡಿಯ ಚಕ್ರ ತಿರುಗಿಸುವುದರಿಂದ ಅಲ್ಲ. ಅಗಸೆಯು ಕೋಲಿನಿಂದಲೂ, ಜೀರಿಗೆಯನ್ನು ಒಕ್ಕುವುದು ದೊಣ್ಣೆಯಿಂದ ಆಗಿರುತ್ತದೆ.

[28] ರೊಟ್ಟಿಗಾಗಿ ಗೋಧಿಯ ಕಾಳನ್ನು ಪುಡಿಮಾಡಬೇಕು; ಯಾವಾಗಲೂ ಅದನ್ನು ಒಕ್ಕುತ್ತಿರುವುದಿಲ್ಲ. ಅವನ ಬಂಡಿಯ ಚಕ್ರದಿಂದ ಅದರ ಮೇಲೆ ಒಡೆಯುವುದಿಲ್ಲ ಅವನ ಕುದುರೆ ಸವಾರದಿಂದ ಒಕ್ಕುತ್ತಿರುವುದಿಲ್ಲ.

[29] ಈ ವಿವೇಕವು ಸಹ ಅತಿಶಯ ಆಲೋಚನಾಪರರೂ, ಕಾರ್ಯಸಾಧಕ ಜ್ಞಾನ ಶ್ರೇಷ್ಠರೂ ಆಗಿರುವ ಸೇನಾಧೀಶ್ವರ ಯೆಹೋವ ದೇವರಿಂದಲೇ ಹೊರಡುತ್ತದೆ.

ಯೆಶಾಯ — Chapters