[1] ದಿವ್ಯ ದರ್ಶನದ ತಗ್ಗಿನ ವಿಷಯವಾದ ಪ್ರವಾದನೆ: ನಿನ್ನವರೆಲ್ಲರು ಮಾಳಿಗೆಗಳ ಮೇಲೆ ಏರುವ ಹಾಗೆ, ಈಗ ನಿನಗೆ ಏನಾಯಿತು?
[2] ಕೋಲಾಹಲದಿಂದ ತುಂಬಿ ಆರ್ಭಟಿಸುವ ಪಟ್ಟಣವೇ, ಸಂಭ್ರಮದ ಪಟ್ಟಣವೇ, ನಿನ್ನಲ್ಲಿ ಹತರಾದವರು ಖಡ್ಗದಿಂದ ಹತರಾದವರಲ್ಲ; ಯುದ್ಧದಲ್ಲಿ ಸತ್ತವರೂ ಅಲ್ಲ.
[3] ನಿನ್ನ ಅಧಿಕಾರಸ್ಥರೆಲ್ಲ ಒಟ್ಟಿಗೆ ಓಡಿದರೂ ಬಿಲ್ಲುಗಾರರಿಲ್ಲದೆಯೇ ಸೆರೆಯಾಗಿದ್ದಾರೆ. ದೂರದಿಂದ ಓಡಿಬಂದರೂ ನಿನ್ನ ಜನರು ಶತ್ರುವಿನ ಕೈಗೆ ಸಿಕ್ಕಿಬಿದ್ದಿದ್ದಾರೆ.
[4] ಹೀಗಿರಲು ನಾನು ಹೀಗೆ ಹೇಳಿದೆನು, “ನನ್ನ ಕಡೆಯಿಂದ ದೃಷ್ಟಿ ತಿರುಗಿಸಿರಿ. ಬಹು ಸಂಕಟದಿಂದ ನಾನು ಅಳುವೆನು. ಏಕೆಂದರೆ ನನ್ನ ಜನವೆಂಬ ಯುವತಿಯು ಹಾಳಾದ ವಿಷಯದಲ್ಲಿ ನನ್ನನ್ನು ಸಂತೈಸುವುದಕ್ಕೆ ತವಕಗೊಳ್ಳದಿರಿ.”
[5] ಕರ್ತ ಆಗಿರುವವರೂ, ಸರ್ವಶಕ್ತರೂ ಆದ ಯೆಹೋವ ದೇವರು, ದರ್ಶನದ ತಗ್ಗಿನಲ್ಲಿ ಶ್ರಮೆಯ ತುಳಿದಾಟದ ಭಯಭ್ರಾಂತಿಯ ದಿನವನ್ನು ಇಟ್ಟಿದ್ದಾರೆ. ಅದು ಗೋಡೆಗಳು ಹೊಡೆದುರುಳಿಸುವ ದಿನವು. ಪರ್ವತಗಳಿಗೆ ಜನರು ಕೂಗಾಡುವ ದಿನವದು.
[6] ಏಲಾಮಿನವರು ಕುದುರೆಗಳ, ರಥಗಳ ಸಂಗಡ ಬತ್ತಳಿಕೆಯನ್ನು ಹೊತ್ತುಕೊಂಡು ಬಂದರು. ಕೀರಿನವರು ಗುರಾಣಿಯನ್ನು ತೆರೆದರು.
[7] ನಿಮ್ಮ ಪ್ರಿಯವಾದ ಕಣಿವೆಗಳಲ್ಲಿ ರಥಗಳು ತುಂಬಿರುವುವು. ರಾಹುತರು ಪಟ್ಟಣದ ಬಾಗಿಲಿನ ಹತ್ತಿರ ಸಿದ್ಧಮಾಡಿಕೊಳ್ಳುವರು.
[8] ಕರ್ತರು ಯೆಹೂದದ ಸಂರಕ್ಷಣೆಯ ಮುಸುಕನ್ನು ತೆಗೆದಿದ್ದಾರೆ. ಆ ದಿವಸದಲ್ಲಿ ಅಡವಿ ಅರಮನೆಯ ಯುದ್ಧ ಸಾಮಗ್ರಿಯ ಕಡೆಗೆ ದೃಷ್ಟಿ ಇಡುತ್ತೀಯೆ.
[9] ದಾವೀದನ ಪಟ್ಟಣದ ಕೋಟೆಯ ಒಡಕುಗಳನ್ನು ಬಹಳವೆಂದು ಸಹ ನೋಡುತ್ತೀರಿ. ಕೆಳಗಿನ ಕೊಳಕ್ಕೆ ನೀರನ್ನು ತುಂಬಿಸುತ್ತೀರಿ.
[10] ಯೆರೂಸಲೇಮಿನ ಮನೆಗಳನ್ನು ಲೆಕ್ಕ ಮಾಡಿ ಪೌಳಿಗೋಡೆಯನ್ನು ಭದ್ರಪಡಿಸುವುದಕ್ಕೆ ನೀವು ಮನೆಗಳನ್ನು ಒಡೆದುಹಾಕುತ್ತೀರಿ.
[11] ಎರಡು ಗೋಡೆಗಳ ನಡುವೆ ಹಳೆಯ ಕೆರೆಯ ನೀರಿಗೋಸ್ಕರ ತೊಟ್ಟಿಯನ್ನು ಮಾಡಿದ್ದೀರಿ, ಕಾಲುವೆ ಮಾಡುತ್ತೀರಿ. ಆದರೆ ಅದನ್ನು ಮಾಡಿದವನನ್ನು ನೀವು ದೃಷ್ಟಿಸುವುದಿಲ್ಲ. ಇಲ್ಲವೆ ಪುರಾತನ ಕಾಲದಲ್ಲಿ ಸಂಕಲ್ಪಿಸಿದವರನ್ನು ನೀನು ಲಕ್ಷಿಸುವುದಿಲ್ಲ.
[12] ಆ ದಿವಸದಲ್ಲಿ ಅತ್ತು, ದುಃಖಿಸಿ, ತಲೆ ಬೋಳಿಸಿಕೊಂಡು, ಗೋಣಿತಟ್ಟನ್ನು ಸುತ್ತಿಕೊಳ್ಳಬೇಕೆಂದು ಸರ್ವಶಕ್ತ ದೇವರಾದ ಯೆಹೋವ ದೇವರು ನಿಮ್ಮನ್ನು ಕರೆದರು.
[13] ಆದರೆ ಉತ್ಸಾಹವು, ಸಂತೋಷವು, ದನ ಕೊಳ್ಳುವುದು, ಕುರಿ ಕಡಿಯುವುದು, ಮಾಂಸವನ್ನು ತಿನ್ನುವುದು, ದ್ರಾಕ್ಷಾರಸ ಕುಡಿಯುವುದು, ನಾಳೆ ಸಾಯುತ್ತೇವೆಂದು ತಿಂದು ಕುಡಿಯುವುದೇ ನಿಮ್ಮ ಕಾರ್ಯ.
[14] ಆದ್ದರಿಂದ ಸರ್ವಶಕ್ತರಾದ ಯೆಹೋವ ದೇವರು ನನ್ನ ಕಿವಿಗಳಲ್ಲಿ ಪ್ರಕಟ ಮಾಡಿದ್ದು ಏನೆಂದರೆ: “ನಿಶ್ಚಯವಾಗಿ ಈ ದುಷ್ಕೃತ್ಯಗಳನ್ನು ನೀವು ಸಾಯುವ ತನಕ ಮನ್ನಿಸುವುದೇ ಇಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳಿದ್ದಾರೆ.
[15] ಸೇನಾಧೀಶ್ವರ ಯೆಹೋವ ದೇವರು ಪುನಃ ಹೀಗೆ ನುಡಿದಿದ್ದಾರೆ: “ಹೋಗು, ಅರಮನೆಯ ಉಗ್ರಾಣದವನಾದ ಶೆಬ್ನ ಎಂಬ ಖಜಾಂಚಿಯ ಬಳಿಗೆ ಹೋಗಿ ಹೀಗೆ ಹೇಳು:
[16] ನಿನಗೆ ಇಲ್ಲಿ ಏನು ಕೆಲಸ? ಇಲ್ಲಿ ನಿನಗೆ ಯಾರಿದ್ದಾರೆ? ನೀನು ಉನ್ನತದಲ್ಲಿ ನಿನಗೆ ಸಮಾಧಿಯನ್ನು ತೋಡಿಸಿದೆ, ಬಂಡೆಯಲ್ಲಿ ನಿನಗೆ ನಿವಾಸವನ್ನು ಕೆತ್ತಿಸುವವನ ಹಾಗೆ, ನಿನಗೆ ಇಲ್ಲಿ ಸಮಾಧಿಯನ್ನು ತೋಡಿಸಿದಿ ಅಲ್ಲವೇ?
[17] “ಯೆಹೋವ ದೇವರು ನಿನ್ನನ್ನು ಬಲವಾದ ಬಂಧನದೊಂದಿಗೆ ಹಿಡಿದೇ ಹಿಡಿಯುವರು.
[18] ನಿನ್ನನ್ನು ಚೆಂಡಿನಂತೆ ಸುತ್ತಿ ಸುತ್ತಿ ತಿರುಗಿಸಿ, ವಿಸ್ತಾರವಾದ ದೇಶಕ್ಕೆ ಬಿಸಾಡುವರು. ಅಲ್ಲೇ ನೀನು ಸಾಯುವೆ, ನಿನ್ನ ವೈಭವದ ರಥಗಳು ನಿನ್ನ ಧಣಿಯ ಮನೆಗೆ ಅವಮಾನವನ್ನುಂಟು ಮಾಡುವುವು.
[19] ನಿನ್ನನ್ನು ನಿನ್ನ ಉದ್ಯೋಗದಿಂದ ತಳ್ಳಿಬಿಡುವೆನು. ನಿನ್ನ ಪದವಿಯಿಂದ ನಿನ್ನನ್ನು ಕೆಳಗೆ ಎಳೆದುಬಿಡುವೆನು.
[20] “ಆ ದಿನದಲ್ಲಿ ನನ್ನ ಸೇವಕನೂ, ಹಿಲ್ಕೀಯನ ಮಗನೂ ಆದ ಎಲ್ಯಾಕೀಮನನ್ನು ಕರೆದು,
[21] ನಿನ್ನ ಅಂಗಿಯನ್ನು ಅವನಿಗೆ ತೊಡಿಸಿ, ನಿನ್ನ ನಡುಕಟ್ಟಿನಿಂದ ಅವನನ್ನು ಬಲಪಡಿಸಿ, ನಿನ್ನ ಅಧಿಕಾರವನ್ನು ಅವನಿಗೆ ಒಪ್ಪಿಸುವೆನು. ಅವನು ಯೆರೂಸಲೇಮಿನ ನಿವಾಸಿಗಳಿಗೂ, ಯೆಹೂದದ ಜನರಿಗೂ ತಂದೆಯಾಗಿರುವನು.
[22] ದಾವೀದನ ಮನೆಗೆ ಬೀಗದ ಕೈಯನ್ನು ಅವನ ಹೆಗಲ ಮೇಲೆ ನಾನು ಹಾಕುವೆನು. ಅವನು ತೆರೆದರೆ ಯಾರೂ ಮುಚ್ಚರು, ಅವನು ಮುಚ್ಚಿದರೆ ಯಾರೂ ತೆರೆಯರು.
[23] ಭದ್ರವಾದ ಸ್ಥಳದಲ್ಲಿ ಮೊಳೆಯನ್ನು ಹೊಡೆದ ಹಾಗೆ ಅವನನ್ನು ಭದ್ರಪಡಿಸುವೆನು. ಅವನು ತನ್ನ ತಂದೆಯ ಮನೆಗೆ ವೈಭವವುಳ್ಳ ಸಿಂಹಾಸನವಾಗಿರುವನು.
[24] ಬಟ್ಟಲು ಮೊದಲುಗೊಂಡು ಕೊಡದ ತನಕ, ಸಕಲ ಸಾಧಾರಣ ಪಾತ್ರೆಗಳನ್ನು ಅಂದರೆ ತಂದೆಯ ಸಂತಾನ, ಸಂತತಿಯಾದ ಅವನ ಮನೆಯ ಎಲ್ಲಾ ವೈಭವವನ್ನು ಅವರು ಅವನಿಗೆ ವಹಿಸುವರು.
[25] “ಆ ದಿನದಲ್ಲಿ,” ಸೇನಾಧೀಶ್ವರ ಯೆಹೋವ ದೇವರು ಪ್ರಕಟಿಸುವುದು ಏನೆಂದರೆ, “ಭದ್ರವಾದ ಸ್ಥಳದಲ್ಲಿ ಮೊಳೆಯನ್ನು ತೆಗೆದುಹಾಕಿ, ಕುಸಿದುಬೀಳುವುದು. ಮೊಳೆಯ ಮೇಲೆ ಇದ್ದ ಭಾರವೂ ತೆಗೆದುಹಾಕಲಾಗುವುದು,” ಇದು ಯೆಹೋವ ದೇವರ ನುಡಿ.