[1] “ಇಗೋ, ನನ್ನ ಸೇವಕನು. ಇವನಿಗೆ ನಾನೇ ಆಧಾರ, ನಾನು ಆಯ್ದುಕೊಂಡವನಲ್ಲಿ ನನ್ನ ಆತ್ಮವು ಆನಂದಿಸುವುದು; ನನ್ನ ಆತ್ಮವನ್ನು ಅವನ ಮೇಲೆ ಇರಿಸಿದ್ದೇನೆ, ಅವನು ಇತರ ಜನಾಂಗಗಳಿಗೆ ನ್ಯಾಯತೀರ್ಪನ್ನು ತರುವನು.
[2] ಅವನು ಕೂಗುವುದಿಲ್ಲ, ಶಬ್ದವನ್ನು ಎತ್ತುವುದಿಲ್ಲ, ಬೀದಿಗಳಲ್ಲಿ ತನ್ನ ಧ್ವನಿಯನ್ನು ಕೇಳಗೊಡಿಸುವುದಿಲ್ಲ.
[3] ಜಜ್ಜಿದ ದಂಟನ್ನು ಮುರಿದು ಹಾಕದೆ, ಕಳೆಗುಂದಿದ ದೀಪವನ್ನು ನಂದಿಸದೆ, ನಂಬಿಕೆಯಿಂದ ನ್ಯಾಯವನ್ನು ಹೊರತರುತ್ತಾನೆ.
[4] ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವ ತನಕ ಈತನು ಬಿಟ್ಟುಕೊಡುವುದಿಲ್ಲ, ಮನಗುಂದುವುದಿಲ್ಲ, ದ್ವೀಪಗಳು ಈತನ ಬೋಧನೆಗೆ ಎದುರುನೋಡುವುವು.”
[5] ಆಕಾಶವನ್ನು ನಿರ್ಮಿಸಿ ಹಾಸಿದವನು ಭೂಮಿಯನ್ನೂ, ಅದರಿಂದ ಉತ್ಪತ್ತಿಯನ್ನೂ ವಿಸ್ತರಿಸಿ, ಅದರ ಮೇಲಿರುವ ಜನರಿಗೆ ಶ್ವಾಸವನ್ನೂ, ಅದರಲ್ಲಿ ಸಂಚರಿಸುವವರಿಗೆ ಆತ್ಮವನ್ನೂ ಕೊಡುತ್ತೇನೆಂದು ದೇವರಾದ ಯೆಹೋವ ದೇವರು ಹೇಳುತ್ತಾರೆ.
[6] “ನೀನು ಕುರುಡರಿಗೆ ಕಣ್ಣುಗಳನ್ನು ತೆರೆದು, ಸೆರೆಯವರನ್ನು ಸೆರೆಯಿಂದಲೂ, ಕತ್ತಲೆಯಲ್ಲಿ ವಾಸಿಸುವವರನ್ನು ಕಾರಾಗೃಹದಿಂದಲೂ ಹೊರತರಬೇಕು,” ಎಂದು ಯೆಹೋವ ದೇವರಾಗಿರುವ ನಾನೇ ನಿನ್ನನ್ನು ನೀತಿಯಿಂದ ಕರೆದು, ನಿನ್ನ ಕೈಯನ್ನು ಹಿಡಿದು ಕಾಪಾಡಿ, ನಿನ್ನನ್ನು ಜನಗಳಿಗೆ ಒಡಂಬಡಿಕೆಯ ಆಧಾರವನ್ನಾಗಿಯೂ, ಇತರ ಜನಗಳಿಗೆ ಬೆಳಕನ್ನಾಗಿಯೂ ನೇಮಿಸಿದ್ದೇನೆ.
[8] ನಾನೇ ಯೆಹೋವ ದೇವರು, ಅದೇ ನನ್ನ ಹೆಸರು. ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಇಲ್ಲವೆ ನನ್ನ ಸ್ತುತಿಯನ್ನು ಎರಕದ ವಿಗ್ರಹಗಳಿಗೂ ಕೊಡೆನು.
[9] ಇಗೋ, ಹಿಂದಿನವುಗಳು ನೆರವೇರಿವೆ. ಹೊಸ ಸಂಗತಿಗಳನ್ನು ಪ್ರಕಟಿಸುತ್ತೇನೆ. ಅವು ಹುಟ್ಟುವುದಕ್ಕಿಂತ ಮುಂಚೆಯೇ ನಾನು ಅವುಗಳನ್ನು ನಿಮಗೆ ತಿಳಿಸುತ್ತೇನೆ.
[10] ಸಮುದ್ರ ಪ್ರಯಾಣಿಕರೇ, ಸಕಲ ಜಲಚರಗಳೇ, ದ್ವೀಪಗಳೇ, ಅದರ ನಿವಾಸಿಗಳೇ, ಯೆಹೋವ ದೇವರಿಗೆ ಹೊಸಹಾಡನ್ನು ಹಾಡಿರಿ. ಭೂಮಿಯ ಕಟ್ಟಕಡೆಯಿಂದ ಆತನಿಗೆ ಸ್ತೋತ್ರಮಾಡಿರಿ.
[11] ಮರುಭೂಮಿಯು, ಅದರ ಪಟ್ಟಣಗಳು ಘೋಷಿಸಲಿ. ಕೇದಾರ್ ಊರಿನ ನಿವಾಸಿಗಳು ಬಂಡೆಯ ಪ್ರದೇಶದ ನಿವಾಸಿಗಳು ಹಾಡಲಿ. ಸೆಲ ಪಟ್ಟಣದವರೂ ಹರ್ಷಧ್ವನಿಗೈಯಲಿ; ಅವರು ಪರ್ವತದ ತುದಿಯಲ್ಲಿ ಆರ್ಭಟಿಸಲಿ.
[12] ಅವರು ಯೆಹೋವ ದೇವರಿಗೆ ಮಹಿಮೆಯನ್ನು ಸಲ್ಲಿಸಲಿ! ಆತನ ಸ್ತೋತ್ರವನ್ನು ದ್ವೀಪಗಳಲ್ಲಿ ಪ್ರಕಟಿಸಲಿ.
[13] ಯೆಹೋವ ದೇವರು ಪರಾಕ್ರಮಶಾಲಿಯಾಗಿ ಮುಂದೆ ಹೋಗುವರು; ಯುದ್ಧವೀರನ ಹಾಗೆ ತಮ್ಮ ರೌದ್ರವನ್ನು ಎಬ್ಬಿಸುವರು. ಆರ್ಭಟಿಸಿ ಗರ್ಜಿಸಿ ತಮ್ಮ ಶತ್ರುಗಳಿಗೆ ವಿರೋಧವಾಗಿ ಜಯಶಾಲಿಯಾಗುವರು.
[14] “ಬಹುಕಾಲದಿಂದ ಸುಮ್ಮನೆ ಮೌನವಾಗಿ ನನ್ನನ್ನು ಬಿಗಿಹಿಡಿದಿದ್ದೆನು. ಈಗ ನಾನು ಹೆರುವವಳಂತೆ ಕೂಗುವೆನು. ನಾನು ನಾಶಮಾಡಿ, ಒಂದೇ ಸಾರಿ ನುಂಗಿಬಿಡುವೆನು.
[15] ನಾನು ಬೆಟ್ಟಗುಡ್ಡಗಳನ್ನು ನಾಶಮಾಡಿ, ಅಲ್ಲಿಯ ಮೇವನ್ನು ಒಣಗಿಸಿ; ನದಿಗಳನ್ನು ದ್ವೀಪಗಳನ್ನಾಗಿಯೂ, ಕೆರೆಗಳನ್ನು ಬತ್ತಿಹೋಗುವಂತೆಯೂ ಮಾಡುವೆನು.
[16] ಕುರುಡರನ್ನು ಅವರು ತಿಳಿಯದ ಮಾರ್ಗದಲ್ಲಿ ಬರಮಾಡುವೆನು. ಅವರನ್ನು ತಿಳಿಯದ ಹಾದಿಗಳಲ್ಲಿ ನಡೆಸುವೆನು. ಕತ್ತಲೆಯನ್ನು ಅವರ ಮುಂದೆ ಬೆಳಕಾಗಿಯೂ, ಸೊಟ್ಟಾದವುಗಳನ್ನು ನೆಟ್ಟಗಾಗಿಯೂ ಮಾಡುವೆನು. ಇವುಗಳನ್ನು ನಾನು ಅವರಿಗೋಸ್ಕರ ಮಾಡುವೆನು. ನಾನು ಅವರನ್ನು ಕೈಬಿಡುವುದಿಲ್ಲ.
[17] ಕೆತ್ತಿದ ವಿಗ್ರಹಗಳಲ್ಲಿ ಭರವಸವಿಟ್ಟು, ‘ನೀವೇ ನಮ್ಮ ದೇವರುಗಳು,’ ಎಂದು ಹೇಳುವವರು ಹಿಂದೆ ಬಿದ್ದು, ನಾಚಿಕೆಗೆ ಈಡಾಗುವರು.
[18] “ಕಿವುಡರೇ, ಕೇಳಿರಿ; ಕುರುಡರೇ, ನೀವು ದೃಷ್ಟಿಸಿ ನೋಡಿರಿ.
[19] ನನ್ನ ಸೇವಕನಲ್ಲದೆ ಕುರುಡನು ಯಾರು? ನಾನು ಕಳುಹಿಸಿದ ಸೇವಕನಲ್ಲದೆ ಕಿವುಡನು ಯಾರು? ಸಂಪೂರ್ಣನಂತೆ ಕುರುಡನು ಯಾರು? ಯೆಹೋವ ದೇವರ ಸೇವಕನಂತೆ ಕುರುಡನು ಯಾರು?
[20] ನೀನು ಅನೇಕ ಸಂಗತಿಗಳನ್ನು ಕಂಡಿದ್ದರೂ, ನಿನಗೆ ಗಮನವಿಲ್ಲ. ಅವನ ಕಿವಿಗಳು ತೆರೆದಿದ್ದರೂ, ಕೇಳನು.”
[21] ಯೆಹೋವ ದೇವರು ಆತನ ನೀತಿಗೋಸ್ಕರ ಬಹಳವಾಗಿ ಮೆಚ್ಚುವನು. ಆತನು ನಿಯಮವನ್ನು ಹೆಚ್ಚಿಸಿ, ಘನಪಡಿಸುವನು.
[22] ಆದರೆ ಈ ಜನರೇ ಕೊಳ್ಳೆಗೆ ಈಡಾಗಿ ಸೂರೆ ಹೋಗಿದ್ದಾರೆ. ಅವರೆಲ್ಲರೂ ಹಳ್ಳಕೊಳ್ಳಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಸೆರೆಮನೆಗಳಲ್ಲಿ ಬಂಧಿಗಳಾಗಿದ್ದಾರೆ. ಅವರು ಸೂರೆಯಾದರೂ, ತಪ್ಪಿಸುವವನು ಒಬ್ಬನೂ ಇಲ್ಲ. ಕೊಳ್ಳೆಯಾದದ್ದನ್ನು, “ತಿರುಗಿ ಹಿಂದಕ್ಕೆ ಕೊಡು,” ಎಂದು ಹೇಳುವ ಒಬ್ಬನೂ ಇಲ್ಲ.
[23] ನಿಮ್ಮಲ್ಲಿ ಯಾರು ಇವುಗಳಿಗೆ ಕಿವಿಗೊಡುವರು? ಯಾರು ಇನ್ನು ಮುಂದೆ ಆಲಿಸಿ ಕೇಳುವರು?
[24] ಯಾಕೋಬನ್ನು ಸುಲಿಗೆಗೂ, ಇಸ್ರಾಯೇಲನ್ನು ಕೊಳ್ಳೆಗೂ ಗುರಿಮಾಡಿದವನು ಯಾರು? ನಾವು ಯಾರಿಗೆ ವಿರೋಧವಾಗಿ ಪಾಪಮಾಡಿದೆವು? ಅದು ಯೆಹೋವ ದೇವರಿಗೆ ವಿರೋಧವಾಗಿಯಲ್ಲವೇ. ಏಕೆಂದರೆ ಅವರು ಆತನ ಮಾರ್ಗದಲ್ಲಿ ನಡೆಯಲಿಲ್ಲ. ಆತನ ನಿಯಮಕ್ಕೆ ಅವಿಧೇಯರಾದರು.
[25] ಆದ್ದರಿಂದ ಆತನು ತನ್ನ ಯುದ್ಧದ ರೌದ್ರವನ್ನು ಮತ್ತು ರೋಷಾಗ್ನಿಯನ್ನು ಅವನ ಮೇಲೆ ಸುರಿಸಿದನು. ಅದು ಅವನ ಸುತ್ತಲೂ ಉರಿಯು ಹತ್ತಿದರೂ, ಅವನಿಗೆ ತಿಳಿಯಲಿಲ್ಲ. ಅದು ಅವನನ್ನು ಸುಟ್ಟರೂ, ಅವನು ಮನಸ್ಸಿಗೆ ತಂದುಕೊಳ್ಳಲಿಲ್ಲ.