[1] ಅನೀತಿಯ ನೇಮಕಗಳನ್ನು ನೇಮಿಸಿ, ಕ್ರೂರವಾದ ಕಾನೂನುಗಳನ್ನು ಬರೆಯುವವರಿಗೆ ಕಷ್ಟ!
[2] ಇವರು ವಿಧವೆಯರನ್ನು ಸೂರೆಮಾಡಿ, ದಿಕ್ಕಿಲ್ಲದವರಿಂದ ಸುಲಿದುಕೊಂಡು ದೀನರಿಗೆ ನ್ಯಾಯವನ್ನು ತಪ್ಪಿಸಿ, ನನ್ನ ಜನರಲ್ಲಿ ಬಡವರ ನ್ಯಾಯವನ್ನು ತೆಗೆಯಬೇಕೆಂದಿದ್ದಾರೆ.
[3] ವಿಚಾರಣೆಯ ದಿನದಲ್ಲಿಯೂ, ದೂರದಿಂದ ಬರುವ ನಾಶನದಲ್ಲಿಯೂ ನೀವು ಏನು ಮಾಡುವಿರಿ? ಸಹಾಯಕ್ಕಾಗಿ ನೀವು ಯಾರ ಬಳಿಗೆ ಓಡುವಿರಿ? ನಿಮ್ಮ ಐಶ್ವರ್ಯವನ್ನು ಎಲ್ಲಿ ಬಿಡುವಿರಿ?
[4] ನಾನಿಲ್ಲದೆ ಕೈದಿಗಳ ಕೆಳಗೆ ಮುದುರಿಕೊಂಡು, ಹತರಾಗಿರುವವರ ಕೆಳಗೆ ಬಿದ್ದಿರುವುದೇ ಇವರ ಗತಿ. ಏಕೆಂದರೆ, ಇಷ್ಟೆಲ್ಲಾ ಆದರೂ ಅವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇದೆ.
[5] “ಅಯ್ಯೋ, ನನ್ನ ಕೋಪದ ಕೋಲಾದ ಅಸ್ಸೀರಿಯವೇ, ನನ್ನ ಕೈಯಲ್ಲಿರುವ ಬೆತ್ತವು ನನ್ನ ಕೋಪವೇ.
[6] ನಾನು ಅವನನ್ನು ಭಕ್ತಿಹೀನ ಜನರಿಗೆ ವಿರುದ್ಧವಾಗಿ ಕಳುಹಿಸಿ, ನನ್ನ ಕೋಪಕ್ಕೆ ಗುರಿಯಾದ ನನ್ನ ಪ್ರಜೆಯನ್ನು ಸೂರೆಮಾಡಿ, ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದುಹಾಕಬೇಕೆಂದು ಅಪ್ಪಣೆ ಕೊಡುವೆನು.
[7] ಅದರ ಅಭಿಪ್ರಾಯವೋ ಹಾಗಲ್ಲ. ಅದರ ಹೃದಯವು ಈ ಪ್ರಕಾರ ಆಲೋಚಿಸುವುದಿಲ್ಲ. ಜನಾಂಗಗಳನ್ನು ಕಡಿದುಬಿಡುವುದು ಕೊಂಚವಾಗಿ ಅಲ್ಲ. ಆದರೆ ನಾಶಮಾಡುವುದು ಅದರ ಹೃದಯದ ಉದ್ದೇಶವು.
[8] ಏಕೆಂದರೆ ಅವನು, ‘ನನ್ನ ಅಧಿಪತಿಗಳೆಲ್ಲಾ ರಾಜರಲ್ಲವೇ?
[9] ಕಲ್ನೋ, ಕರ್ಕೆಮೀಷಿನ ಹಾಗಲ್ಲವೋ? ಹಮಾತ್ ಅರ್ಪಾದಿನ ಹಾಗಲ್ಲವೇ? ಸಮಾರ್ಯವು ದಮಸ್ಕದ ಹಾಗಲ್ಲವೋ?
[10] ಯೆರೂಸಲೇಮಿನಲ್ಲಿಯೂ ಸಮಾರ್ಯದಲ್ಲಿಯೂ ಹೆಚ್ಚಾಗಿದ್ದ ಅವರ ವಿಗ್ರಹಗಳು ಹಾಗೂ ಕೆತ್ತಿದ ವಿಗ್ರಹಗಳ ರಾಜ್ಯಗಳು ನನ್ನ ಕೈಗೆ ಸಿಕ್ಕಿದಂತೆ,
[11] ನಾನು ಸಮಾರ್ಯ ಮತ್ತು ಅದರ ವಿಗ್ರಹಗಳಿಗೆ ಮಾಡಿದಂತೆಯೇ ಯೆರೂಸಲೇಮಿಗೆ ಮತ್ತು ಅದರ ವಿಗ್ರಹಗಳಿಗೆ ಮಾಡುತ್ತೇನೆಯೇ?’ ”
[12] ಆದರೆ ಕರ್ತದೇವರು ಚೀಯೋನ್ ಪರ್ವತದ ಮೇಲೆಯೂ ಯೆರೂಸಲೇಮಿನ ಮೇಲೆಯೂ ತಮ್ಮ ಕಾರ್ಯಗಳನ್ನು ನೆರವೇರಿಸಿದ ಮೇಲೆ, “ಅಸ್ಸೀರಿಯದ ಅರಸನ ಹೃದಯದ ದೊಡ್ಡಸ್ತಿಕೆಯ ಫಲವನ್ನು, ಅವನ ಉನ್ನತವಾದ ದೃಷ್ಟಿಯ ಘನತೆಯನ್ನು ನಾನು ದಂಡಿಸುವೆನು.”
[13] ಏಕೆಂದರೆ ಅಸ್ಸೀರಿಯ ತನ್ನೊಳಗೆ ಹೀಗೆ ಅಂದುಕೊಂಡನು, “ ‘ನನ್ನ ಕೈಯ ಬಲದಿಂದಲೂ ನನ್ನ ಜ್ಞಾನದಿಂದಲೂ ಅದನ್ನು ಮಾಡಿದೆ. ಏಕೆಂದರೆ, ನಾನು ವಿವೇಕಿ. ಜನಾಂಗಗಳ ಮೇರೆಗಳನ್ನು ಕಿತ್ತು, ಅವರ ನಿಧಿಗಳನ್ನು ಕೊಳ್ಳೆಹೊಡೆದು, ಅದರ ಅರಸರನ್ನು ಮಹಾವೀರನಂತೆ ಕೆಡವಿಬಿಟ್ಟಿದ್ದೇನೆ.
[14] ಜನರ ಐಶ್ವರ್ಯವು ಗೂಡಿನಂತೆ ನನ್ನ ಕೈಗೆ ಸಿಕ್ಕಿದೆ; ಹಕ್ಕಿ ಬಿಟ್ಟುಹೋದ ಮೊಟ್ಟೆಗಳನ್ನು ಕೂಡಿಸುವಂತೆ, ಸಮಸ್ತ ರಾಷ್ಟ್ರಗಳನ್ನು ಒಟ್ಟುಗೂಡಿಸಿದ್ದೇನೆ. ರೆಕ್ಕೆಯಾಡಿಸಿ ಬಾಯಿತೆರೆದು ಕೀಚುಗುಟ್ಟಲು ಯಾರೂ ಇರಲಿಲ್ಲ.’ ”
[15] ಕೊಡಲಿಯು ಕಡಿಯುವವನಿಗೆ ವಿರುದ್ಧವಾಗಿ ಕೊಚ್ಚಿಕೊಂಡೀತೆ? ಇಲ್ಲವೆ ಗರಗಸವು ತನ್ನನ್ನು ಎಳೆಯುವವನ ಮೇಲೆ ಹೆಚ್ಚಿಸಿಕೊಂಡೀತೆ? ಕೋಲು ತನ್ನನ್ನು ಎತ್ತಿದವನ ಮೇಲೆಯೇ ಬೀಸುವಂತೆ ಕೋಲು ಹಿಡಿದವನನ್ನೇ ಹೊಡೆದಂತಾಯಿತು! ನಿರ್ಜೀವ ಬೆತ್ತ ಸಜೀವ ಮನುಷ್ಯನನ್ನೇ ಬಡಿದಂತಾಯಿತು!
[16] ಆದಕಾರಣ ಸೇನಾಧೀಶ್ವರ ಯೆಹೋವ ದೇವರು ಅವನ ಕೊಬ್ಬಿದ ಯೋಧರಿಗೆ ಕ್ಷಯವನ್ನು ಉಂಟುಮಾಡುವರು, ದಹಿಸುವ ಅಗ್ನಿಯಂತಿರುವ ಉರಿಯೊಂದು ಅವನ ವೈಭವದ ಕೆಳಗೆ ಹತ್ತಿಕೊಳ್ಳುವುದು.
[17] ಇಸ್ರಾಯೇಲಿನ ಬೆಳಕು ಬೆಂಕಿಯಾಗುವುದು, ಅದರ ಪರಿಶುದ್ಧರು ಜ್ವಾಲೆಯಂತಿರುವರು, ಅದು ಒಂದೇ ದಿನದಲ್ಲಿ ಅವನ ಮುಳ್ಳು, ದತ್ತೂರಿಗಳನ್ನು ದಹಿಸಿ ನುಂಗಿಬಿಡುವುದು.
[18] ದೇಹಾತ್ಮದಂಥ ಅದರ ಉದ್ಯಾನವನವನ್ನೂ, ಫಲಭರಿತ ತೋಟದ ವೈಭವವನ್ನು ನಿರ್ಮೂಲ ಮಾಡುವುದು. ದೇಶವೋ ರೋಗಿಯಂತೆ ನಾಶವಾಗುವುದು.
[19] ಅವನ ಉಳಿದ ವನವೃಕ್ಷಗಳು ಮಗುವು ಬರೆಯುವಷ್ಟು ಕಡಿಮೆಯಾಗಿರುವುದು.
[20] ಆ ದಿನದಲ್ಲಿ ಇಸ್ರಾಯೇಲರಲ್ಲಿ ಉಳಿದವರೂ, ಯಾಕೋಬಿನ ಮನೆತನದಿಂದ ತಪ್ಪಿಸಿಕೊಂಡವರೂ ಇನ್ನು ಮೇಲೆ ತಮ್ಮನ್ನು ಹೊಡೆದವನ ಆಧಾರವನ್ನು ಬಿಟ್ಟು, ಇಸ್ರಾಯೇಲಿನ ಪರಿಶುದ್ಧರಾದ ಯೆಹೋವ ದೇವರ ಸತ್ಯವಾಗಿ ಆಧಾರಮಾಡಿಕೊಳ್ಳುವರು.
[21] ಉಳಿದವರು ಅಂದರೆ ಯಾಕೋಬ್ಯರಲ್ಲಿ ಉಳಿದವರೂ ಸಹ ಪರಾಕ್ರಮಿಯಾದ ದೇವರ ಕಡೆಗೆ ಹಿಂದಿರುಗುವರು.
[22] ತಮ್ಮ ಜನರಾದ ಇಸ್ರಾಯೇಲರು ಸಮುದ್ರದ ಉಸುಬಿನಂತಿದ್ದರೂ, ಅವರಲ್ಲಿ ಉಳಿದವರು ಮಾತ್ರ ಹಿಂದಿರುಗುವರು. ಅವರ ಅಳಿವು ಶಾಸನಬದ್ಧವಾದುದು; ಹಾಗೂ ಸಂಪೂರ್ಣವಾಗಿ ನ್ಯಾಯಸಮ್ಮತವಾದುದು.
[23] ಏಕೆಂದರೆ ಸೇನಾಧೀಶ್ವರ ಯೆಹೋವ ದೇವರೆಂಬ ಕರ್ತ ಆಗಿರುವವರು, ಎಲ್ಲಾ ದೇಶದ ಮಧ್ಯದಲ್ಲಿ ತಿಳಿಸಿದ ವಿನಾಶವನ್ನು ಉಂಟುಮಾಡುವರು.
[24] ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: ಚೀಯೋನಿನಲ್ಲಿ ವಾಸಿಸುವ ನನ್ನ ಜನರೇ, ಈಜಿಪ್ಟಿನವರಂತೆ ನಿಮ್ಮನ್ನು ಕೋಲಿನಿಂದ ಹೊಡೆದು, ನಿಮಗೆ ವಿರುದ್ಧವಾಗಿ ದೊಣ್ಣೆಯನ್ನು ಎತ್ತುವ ಅಸ್ಸೀರಿಯದವರಿಗೆ ಭಯಪಡಬೇಡಿರಿ.
[25] ನನ್ನ ಕೋಪವು ಅವರ ದಂಡನೆಗಾಗುವುದು; ಆದ್ದರಿಂದ ಇನ್ನು ಸ್ವಲ್ಪಕಾಲದಲ್ಲಿ ಕೋಪವು ತೀರಿಹೋಗುವುದು.
[26] ಸೇನಾಧೀಶ್ವರ ಯೆಹೋವ ದೇವರು ಓರೇಬ್ ಬಂಡೆಯ ಬಳಿಯಲ್ಲಿ ಮಿದ್ಯಾನ್ಯರನ್ನು ಹತಮಾಡಿದಂತೆ, ಅವರು ಕೋಲನ್ನು ಸಮುದ್ರದ ಮೇಲೆ ಚಾಚಿ, ಈಜಿಪ್ಟಿನವರ ಮೇಲೆ ಎತ್ತಿದಂತೆ ಎತ್ತುವರು.
[27] ಆ ದಿನದಲ್ಲಿ ಅವರು ಹೊರಿಸಿದ ಹೊರೆಯು ನಿಮ್ಮ ಬೆನ್ನಿನಿಂದಲೂ, ಹೂಡಿದ ನೊಗವು ನಿಮ್ಮ ಕುತ್ತಿಗೆಯಿಂದಲೂ ತೊಲಗುವುದು ಮತ್ತು ನೀವು ಕೊಬ್ಬಿದ ಕಾರಣ ನೊಗವು ಮುರಿದು ಹೋಗುವುದು.
[28] ಅವರು ಅಯ್ಯಾಥಿಗೆ ಬಂದರು. ಮಿಗ್ರೋನನ್ನು ಹಾದು ಹೋಗಿ, ಮಿಕ್ಮಾಷಿನಲ್ಲಿ ತಮ್ಮ ಸಾಮಗ್ರಿಯನ್ನು ಇಟ್ಟಿದ್ದಾರೆ.
[29] ಅವರು ಕಣಿವೆಯನ್ನು ದಾಟಿದ್ದಾರೆ; ಗಿಬೆಯದಲ್ಲಿ ಇಳುಕೊಂಡಿದ್ದಾರೆ. ರಾಮಾ ಜನತೆ ಹೆದರುತ್ತಿದೆ; ಸೌಲನ ಗಿಬೆಯದ ಜನತೆ ಓಡಿಹೋಗಿದೆ.
[30] ಗಲ್ಲೀಮ್ ಮಗಳೇ, ನಿನ್ನ ಸ್ವರವೆತ್ತಿ ಕೂಗು; ಬಡ ಅನಾತೋತೇ, ಲಯೆಷಿನವರೆಗೂ ಕೇಳಿಸುವಂತೆ ಕೂಗು.
[31] ಮದ್ಮೇನ ದಿಕ್ಕುಪಾಲಾಯಿತು. ಗೆಬೀಮಿನ ನಿವಾಸಿಗಳು ಓಡಿಹೋಗಲು ಕೂಡಿಕೊಂಡರು.
[32] ಆ ದಿನದಲ್ಲಿ ಅವರು ನೋಬಿನಲ್ಲಿ ಇಳಿದುಕೊಳ್ಳುವರು. ಚೀಯೋನ್ ನಗರಿಯ ಪರ್ವತದ ಕಡೆಗೆ, ಯೆರೂಸಲೇಮಿನ ಬೆಟ್ಟದ ಕಡೆಗೆ ಕೈ ಬೀಸುತ್ತಾರೆ.
[33] ಇಗೋ, ಕರ್ತದೇವರು ಆಗಿರುವ ಸೇನಾಧೀಶ್ವರ ಯೆಹೋವ ದೇವರು ಭಯಂಕರವಾಗಿ ಕೊಂಬೆಯನ್ನು ಕತ್ತರಿಸುವರು. ಉನ್ನತ ವೃಕ್ಷಗಳು ಕಡಿದು ಕೆಳಗೆ ಬೀಳುವುವು, ಎತ್ತರದ ಮರಗಳನ್ನು ನೆಲಕ್ಕೆ ಉರುಳಿಸುವರು.
[34] ಅವರು ಅಡವಿಯ ಪೊದೆಗಳನ್ನು ಕೊಡಲಿಯಿಂದ ಕಡಿದುಬಿಡುವರು. ಲೆಬನೋನು ಪರಾಕ್ರಮಿಯಾಗಿರುವವರ ಮುಂದೆ ಬಿದ್ದುಹೋಗುವುದು.