Skip to content
Opens in a new window
Listen to this chapter • 5:16

[1] ಏಳು, ಪ್ರಕಾಶಿಸು. ಏಕೆಂದರೆ ನಿನ್ನ ಮೇಲೆ ಬೆಳಕು ಬಂತು, ಯೆಹೋವ ದೇವರ ಮಹಿಮೆಯು ನಿನ್ನ ಮೇಲೆ ಉದಯವಾಯಿತು.

[2] ಇಗೋ, ಕತ್ತಲೆ ಭೂಮಿಯನ್ನೂ, ಗಾಢಾಂಧಕಾರವು ಜನರನ್ನೂ ಮುಚ್ಚುವುದು. ಆದರೆ ನಿನ್ನ ಮೇಲೆ ಯೆಹೋವ ದೇವರು ಉದಯಿಸುವರು. ಆತನ ಮಹಿಮೆಯು ನಿನ್ನ ಮೇಲೆ ಕಾಣಬರುವುದು.

[3] ಇತರ ಜನಾಂಗಗಳು ನಿನ್ನ ಪ್ರಕಾಶಕ್ಕೂ, ಅರಸರು ನಿನ್ನ ಉದಯದ ಕಾಂತಿಗೂ ಬರುವರು.

[4] ಸುತ್ತಲೂ ನಿನ್ನ ಕಣ್ಣುಗಳನ್ನೆತ್ತಿ ನೋಡು. ಅವರೆಲ್ಲರು ಕೂಡಿಕೊಂಡು ನಿನ್ನ ಬಳಿಗೆ ಬರುತ್ತಾರೆ. ನಿನ್ನ ಪುತ್ರರು ದೂರದಿಂದ ಬರುವರು, ನಿನ್ನ ಪುತ್ರಿಯರು ಕಂಕುಳಿನಲ್ಲಿ ಕುಳಿತು ಬರುವರು.

[5] ನೀನು ನೋಡಿ ಕಳೆಗೊಳ್ಳುವಿ, ನಿನ್ನ ಹೃದಯವು ಅದರುತ್ತಾ ಉಬ್ಬುವುದು, ಏಕೆಂದರೆ ಸಮುದ್ರದ ಸಮೃದ್ಧಿಯು ನಿನ್ನ ಕಡೆಗೆ ತಿರುಗಿಕೊಳ್ಳುವುದು. ಇತರ ಜನಾಂಗಗಳ ಆಸ್ತಿಯು ನಿನ್ನ ಬಳಿಗೆ ಬರುವುದು.

[6] ಒಂಟೆಗಳ ಸಮೂಹವು ನಿನ್ನ ದೇಶದಲ್ಲಿ ತುಂಬಿಕೊಳ್ಳುವುದು. ಮಿದ್ಯಾನಿನ ಏಫಾದ ವೇಗವುಳ್ಳ ಒಂಟೆಗಳು ಅವೆಲ್ಲಾ ಶೆಬದಿಂದಲೂ ಬರುವುವು. ಬಂಗಾರವನ್ನೂ, ಧೂಪವನ್ನೂ ತರುವುವು. ಯೆಹೋವ ದೇವರ ಸ್ತೋತ್ರಗಳನ್ನು ಸಾರುವುವು.

[7] ಕೇದಾರಿನ ಮಂದೆಗಳೆಲ್ಲಾ ನಿನ್ನಲ್ಲಿ ಸೇರಿಬರುವುವು. ನೆಬಾಯೋತಿನ ಟಗರುಗಳು ನಿನ್ನನ್ನು ಸೇವಿಸುವುವು. ನನ್ನ ಬಲಿಪೀಠದ ಮೇಲೆ ಮೆಚ್ಚಿಕೆಯಿಂದ ಏರುವುವು. ನನ್ನ ಮಹಿಮೆಯ ಆಲಯವನ್ನು ಘನಪಡಿಸುವೆನು.

[8] ಮೇಘದಂತೆಯೂ, ತಮ್ಮ ಗೂಡುಗಳಿಗೆ ಹೋಗುವ ಪಾರಿವಾಳಗಳಂತೆಯೂ ಹಾರುವ ಇವರು ಯಾರು?

[9] ನಿಶ್ಚಯವಾಗಿ ದ್ವೀಪಗಳು, ತಾರ್ಷೀಷಿನ ಹಡಗುಗಳು ಮೊದಲಾಗಿ ನನಗೋಸ್ಕರ ದೂರದಿಂದ ನಿನ್ನ ಪುತ್ರರನ್ನು ತಮ್ಮ ಬೆಳ್ಳಿಬಂಗಾರದ ಸಹಿತವಾಗಿ ನಿನ್ನ ದೇವರಾದ ಯೆಹೋವ ದೇವರ ಬಳಿಗೂ, ನಿನ್ನನ್ನು ವೈಭವದಿಂದ ಶೃಂಗರಿಸಿರುವ ಇಸ್ರಾಯೇಲಿನ ಪರಿಶುದ್ಧನ ಬಳಿಗೂ ತರುವುದರಲ್ಲಿ ಮುಂದಾಗುತ್ತಿವೆ.

[10] ಇದಲ್ಲದೆ ವಿದೇಶಿಯರು ನಿನ್ನ ಗೋಡೆಗಳನ್ನು ಕಟ್ಟುವರು. ಅವರ ಅರಸರು ಸಹ ನಿನಗೆ ಸೇವೆಮಾಡುವರು. ಏಕೆಂದರೆ ನನ್ನ ಬೇಸರದಲ್ಲಿ ನಿನ್ನನ್ನು ಹೊಡೆದೆನು. ಆದರೆ ನನ್ನ ಕಟಾಕ್ಷದಲ್ಲಿ ನಿನ್ನನ್ನು ಕರುಣಿಸುವೆನು.

[11] ಆದ್ದರಿಂದ ನಿನ್ನ ಬಾಗಿಲುಗಳು ಯಾವಾಗಲೂ ತೆರೆದಿರುವುವು. ಇತರ ಜನಾಂಗಗಳ ಆಸ್ತಿ ನಿನ್ನ ಬಳಿಗೆ ತರುತ್ತಿರುವರು. ಅವರ ಅರಸರು ಸಹ ಬಂಧುಗಳಾಗಿ ನಿನ್ನ ಮೆರವಣಿಗೆಯಲ್ಲಿ ಮುನ್ನಡೆಸಿದರು ಹಗಲುರಾತ್ರಿ ಅವು ಮುಚ್ಚಿರುವುದಿಲ್ಲ.

[12] ನಿನ್ನನ್ನು ಸೇವಿಸದ ಜನಾಂಗವೂ, ರಾಜ್ಯವೂ ನಾಶವಾಗುವುದು. ಆ ಜನಾಂಗಗಳು ಸಂಪೂರ್ಣವಾಗಿ ಹಾಳಾಗುವುವು.

[13] ಲೆಬನೋನಿನ ವೈಭವವು ತುರಾಯಿ, ಅಗಸೆ, ಹೊನ್ನೆ ಮರಗಳು ಕೂಡ ನನ್ನ ಪರಿಶುದ್ಧ ಸ್ಥಳವನ್ನು ಶೃಂಗರಿಸುವುದಕ್ಕೆ ನಿನ್ನ ಬಳಿಗೆ ಬರುವುವು. ನನ್ನ ಪಾದಗಳ ಸ್ಥಳವನ್ನು ನಾನು ಗೌರವವುಳ್ಳದ್ದಾಗಿ ಮಾಡುವೆನು.

[14] ಆಗ ನಿನ್ನನ್ನು ಕುಗ್ಗಿಸಿದವರು, ಬಗ್ಗಿಕೊಂಡು ನಿನ್ನ ಬಳಿಗೆ ಬರುವರು. ನಿನ್ನನ್ನು ಅಸಹ್ಯಿಸಿದವರೆಲ್ಲರೂ ನಿನ್ನ ಪಾದಗಳಿಗೆ ಅಡ್ಡಬಿದ್ದು, ನಿನ್ನನ್ನು ಯೆಹೋವ ದೇವರ ಪಟ್ಟಣವೆಂದೂ, ಇಸ್ರಾಯೇಲಿನ ಪರಿಶುದ್ಧನ ಚೀಯೋನೆಂದೂ ಕರೆಯುವರು.

[15] ನಿನ್ನೊಳಗೆ ನಿವಾಸಿಗಳು ಬಿಟ್ಟುಬಿಟ್ಟ, ದ್ವೇಷಕ್ಕೀಡಾದ, ಯಾರೂ ಹಾದುಹೋಗದ ನಿನಗೆ ನಾನು ನಿತ್ಯ ಘನತೆಯನ್ನು ದಯಪಾಲಿಸಿ ನಿನ್ನನ್ನು ಎಲ್ಲಾ ಸಂತತಿಗಳಲ್ಲಿಯೂ ಉಲ್ಲಾಸವಾಗಿರುವಂತೆ ಮಾಡುವೆನು.

[16] ಇತರ ಜನಾಂಗಗಳವರಿಂದ ಹಾಲನ್ನು ಕುಡಿಯುವೆ. ಅರಸರು ನಿನಗೆ ಹಾಲು ಕುಡಿಸುವರು. ಯೆಹೋವನಾದ ನಾನೇ ನಿನ್ನ ರಕ್ಷಕನೂ, ನಿನ್ನ ವಿಮೋಚಕನೂ, ಯಾಕೋಬಿನ ಪರಾಕ್ರಮಿಯೂ ಎಂದು ತಿಳಿದುಕೊಳ್ಳುವೆ.

[17] ಕಂಚಿನ ಬದಲಾಗಿ ನಿನಗೆ ಬಂಗಾರವನ್ನು ತರುವೆನು. ಕಬ್ಬಿಣಕ್ಕೆ ಬದಲಾಗಿ ಬೆಳ್ಳಿಯನ್ನೂ, ಮರಕ್ಕೆ ಬದಲಾಗಿ ಕಂಚನ್ನೂ, ಕಲ್ಲುಗಳಿಗೆ ಬದಲಾಗಿ ಕಬ್ಬಿಣವನ್ನೂ ತರುವೆನು. ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ, ನೀತಿಯನ್ನು ನಿನಗೆ ಅಧಿಕಾರಿಯನ್ನಾಗಿ ಮಾಡುವೆನು.

[18] ಬಲಾತ್ಕಾರವೂ, ನಿನ್ನ ದೇಶದೊಳಗೆ ಹಾಳಾದದ್ದೂ, ನಾಶವೂ, ನಿನ್ನ ಮೇರೆಗಳಲ್ಲಿ ಕೇಳಿಬರುವುದಿಲ್ಲ. ನಿನ್ನ ಗೋಡೆಗಳಿಗೆ ರಕ್ಷಣೆ ಎಂದೂ, ನಿನ್ನ ಬಾಗಿಲುಗಳಿಗೆ ಸ್ತೋತ್ರವೆಂದೂ ಹೆಸರಿಡುವೆ.

[19] ಇನ್ನು ಮೇಲೆ ಸೂರ್ಯನು ನಿನಗೆ ಹಗಲಿನಲ್ಲಿ ಬೆಳಕಾಗಿರುವುದಿಲ್ಲ. ಚಂದ್ರನು ಪ್ರಕಾಶಕ್ಕಾಗಿ ನಿನಗೆ ಬೆಳಕು ಕೊಡುವುದಿಲ್ಲ. ಆದರೆ ಯೆಹೋವ ದೇವರು ನಿನಗೆ ನಿತ್ಯವಾದ ಬೆಳಕಾಗಿರುವರು. ನಿನ್ನ ದೇವರು ನಿನ್ನ ಬೆಳಗುವ ತೇಜಸ್ಸಾಗಿರುವರು.

[20] ನಿನ್ನ ಸೂರ್ಯನು ಅಸ್ತಮಿಸುವುದಿಲ್ಲ. ನಿನ್ನ ಚಂದ್ರನು ಕಾಣದೆ ಹೋಗುವುದಿಲ್ಲ. ಏಕೆಂದರೆ ಯೆಹೋವ ದೇವರು ನಿನಗೆ ನಿತ್ಯವಾದ ಬೆಳಕಾಗಿರುವರು. ನೀನು ದುಃಖಿಸುವ ದಿನಗಳು ಸಮಾಪ್ತಿಯಾಗುವುದು.

[21] ನಿನ್ನ ಜನರೆಲ್ಲರೂ ನೀತಿವಂತರಾಗಿರುವರು. ದೇಶವನ್ನು ಸದಾಕಾಲಕ್ಕೆ ಸ್ವಾಧೀನಮಾಡಿಕೊಳ್ಳುವರು. ನಾನು ಮಹಿಮೆ ಹೊಂದುವುದಕ್ಕೋಸ್ಕರ ನಾನು ನೆಟ್ಟ ಕೊಂಬೆಯೂ, ನನ್ನ ಕೈ ಸೃಷ್ಟಿಯೂ ಆಗಿರುವರು.

[22] ಕನಿಷ್ಠನು ಸಾವಿರವಾಗುವನು, ಅಲ್ಪನಿಂದ ಬಲವಾದ ಜನಾಂಗವಾಗುವುದು. ಯೆಹೋವನೆಂಬ ನಾನು ಕ್ಲುಪ್ತ ಕಾಲದಲ್ಲಿ ಇದನ್ನು ಬಹು ಬೇಗನೆ ಉಂಟುಮಾಡುವೆನು.

ಯೆಶಾಯ — Chapters