[1] ದೇಶವನ್ನು ಆಳುವವನಿಗೆ ಕಪ್ಪವಾಗಿ ಕೊಡತಕ್ಕ ಕುರಿಮರಿಯನ್ನು ಸೆಲ ಬಂಡೆಯಿಂದ ಮರುಭೂಮಿಯ ಕಡೆಗೆ, ಚೀಯೋನ್ ಪುತ್ರಿಯರ ಪರ್ವತಕ್ಕೆ ಕಳುಹಿಸಿರಿ.
[2] ಗೂಡಿನಿಂದ ಹೊರಗೆ ಬಂದ ಹಕ್ಕಿಗಳ ಮರಿಗಳಂತೆ ಅಲೆದಾಡುವ ಹಾಗೆ, ಮೋವಾಬಿನ ಪುತ್ರಿಯರು ಅರ್ನೋನ್ ನದಿಯ ಹಾಯ್ಗಡಗಳಲ್ಲಿ ಇರುವರು.
[3] ಆಲೋಚಿಸಿ, ತೀರ್ಮಾನಿಸಿರಿ. ಮಟ್ಟ ಮಧ್ಯಾಹ್ನದಲ್ಲಿ ನಿಮ್ಮ ನೆರಳನ್ನು ರಾತ್ರಿಯಂತೆ ಮಾಡಿರಿ. ವಲಸಿಗರನ್ನು ಅಡಗಿಸಿರಿ. ಅಲೆಯುವವರನ್ನು ಬಯಲಿಗೆ ತರಬೇಡ.
[4] ಮೋವಾಬ್ ದೇಶದಿಂದ ವಲಸೆಹೋದವರು ನಿಮ್ಮಲ್ಲಿ ವಾಸಿಸಲಿ. ವಿನಾಶಕರಿಗೆ ವಶವಾಗದಂತೆ ಅವರಿಗೆ ಆಶ್ರಯ ನೀಡಿರಿ. ದಬ್ಬಾಳಿಕೆ ಮುಗಿಯುತ್ತಾ ಬಂತು. ಸೂರೆಮಾಡುವುದು ನಿಲ್ಲುವುದು, ಪೀಡಿಸುವವರು ದೇಶದಿಂದ ಅಳಿದುಹೋಗುವರು.
[5] ಪ್ರೀತಿಯಲ್ಲಿ ಸಿಂಹಾಸನವು ಸ್ಥಾಪಿತವಾಗುವುದು. ನ್ಯಾಯತೀರಿಸುವವನೂ, ನ್ಯಾಯವನ್ನು ಹುಡುಕುವವನೂ, ನೀತಿಗೋಸ್ಕರ ತ್ವರೆಪಡುವವನೂ, ದಾವೀದನ ಗುಡಾರದಲ್ಲಿ ಅದರ ಮೇಲೆ ನಂಬಿಗಸ್ತಿಕೆಯಲ್ಲಿ ಕೂತುಕೊಳ್ಳುವನು.
[6] ಮೋವಾಬಿನ ಗರ್ವವನ್ನು ನಾವು ಕೇಳಿದ್ದೇವೆ. ಆಕೆಗೆ ಬಹಳ ಗರ್ವ. ಆಕೆಯ ಅಹಂಕಾರವು, ಆಕೆಯ ಗರ್ವವು ಮತ್ತು ಆಕೆಗೆ ಕೋಪವು ಸಹ ಉಂಟು. ಆದರೆ ಆಕೆಯ ಕೊಚ್ಚಿಕೊಳ್ಳುವಿಕೆ ಬರಿದಾದದ್ದು.
[7] ಆದ್ದರಿಂದ ಮೋವಾಬಿನ ನಿಮಿತ್ತ ಮೋವಾಬ್ಯರು ಗೋಳಾಡುವರು, ಒಟ್ಟಾಗಿ ಗೋಳಾಡುವರು. ಏಕೆಂದರೆ ಕೀರ್ ಹರೆಷೆಥಿನ ದ್ರಾಕ್ಷಿಯ ಕಡುಬುಗಳಿಗೋಸ್ಕರ ನೀವು ದುಃಖಿಸುವಿರಿ. ನಿಜವಾಗಿಯೂ ಅವರು ನೊಂದು ಹೋಗಿದ್ದಾರೆ.
[8] ಹೆಷ್ಬೋನ್ ಊರಿನ ಹೊಲ ಮತ್ತು ಸಿಬ್ಮ ಊರಿನ ದ್ರಾಕ್ಷಿ ಸಹ ನಿಸ್ಸಾರವಾಗಿವೆ. ಇತರ ಜನರ ಪ್ರಭುಗಳು ವಿಶಾಲವಾದ ದ್ರಾಕ್ಷಿಗಿಡಗಳನ್ನು ತುಳಿದು ಹಾಕಿದ್ದಾರೆ, ಆ ದ್ರಾಕ್ಷಿಗಿಡಗಳು ಯಜ್ಜೇರ್ ಊರಿನವರೆಗೂ ವ್ಯಾಪಿಸಿ, ಮರುಭೂಮಿಯಲ್ಲಿ ಹರಡಿತ್ತು. ಅದರ ಕೊಂಬೆಗಳು ಹಬ್ಬಿ, ಸಮುದ್ರದವರೆಗೆ ವಿಶಾಲವಾಗಿತ್ತು.
[9] ಆದಕಾರಣ ಸಿಬ್ಮದ ದ್ರಾಕ್ಷಾಲತೆಯ ನಿಮಿತ್ತ ಯಜ್ಜೇರ್ ಪಟ್ಟಣದೊಂದಿಗೆ ಅಳುವೆನು. ಓ ಹೆಷ್ಬೋನ್ ಮತ್ತು ಎಲೆಯಾಲೆ ಪಟ್ಟಣಗಳೇ, ನಿಮ್ಮನ್ನು ನನ್ನ ಕಣ್ಣೀರಿನಿಂದ ತೋಯಿಸುವೆನು! ಏಕೆಂದರೆ ಶತ್ರುಗಳು ಬಿದ್ದುಹೋದ ನಿಮ್ಮ ಬೇಸಿಗೆಯ ಫಲಗಳಿಗೂ, ಬೆಳೆಗಳಿಗೂ ಆರ್ಭಟಿಸುತ್ತಾರೆ.
[10] ಸಮೃದ್ಧಿಯಾದ ಹೊಲಗಳಿಂದ ಸಂತೋಷವು ಮತ್ತು ಆನಂದವು ತೊಲಗಿವೆ. ದ್ರಾಕ್ಷಿತೋಟಗಳಲ್ಲಿ ಕೀರ್ತನೆಗಳಾಗಲೀ, ಆರ್ಭಟವಾಗಲೀ ಇರುವದಿಲ್ಲ. ದ್ರಾಕ್ಷಿ ತೊಟ್ಟಿಗಳಲ್ಲಿ ಇನ್ನು ದ್ರಾಕ್ಷಾರಸವನ್ನು ತುಳಿದು ತೆಗೆಯುವುದಿಲ್ಲ. ಅವರ ಕೂಗಾಟವನ್ನು ನಿಲ್ಲಿಸಿಬಿಟ್ಟಿದ್ದೇನೆ.
[11] ಆದ್ದರಿಂದ ಮೋವಾಬಿನ ನಿಮಿತ್ತ ನನ್ನ ಹೃದಯವೂ, ಕೀರ್ ಹೆರೆಸೆಥ್ ನಿಮಿತ್ತ ನನ್ನ ಅಂತರಂಗವೂ ಕಿನ್ನರಿಯಂತೆ ಮಿಡಿಯುತ್ತಾ ದುಃಖಿಸುತ್ತಿದೆ.
[12] ಹೀಗಿರುವಲ್ಲಿ ಮೋವಾಬು ಉನ್ನತ ಸ್ಥಳದಲ್ಲಿ ಆಯಾಸಗೊಂಡಂತೆ ಕಾಣಿಸಿಕೊಂಡು, ಅವಳ ದೇವಾಲಯಕ್ಕೆ ಪ್ರಾರ್ಥಿಸುವುದಕ್ಕೆ ಬಂದರೂ ಅದಕ್ಕೆ ಸಫಲವಾಗದು.
[13] ಯೆಹೋವ ದೇವರು ಮೋವಾಬಿನ ವಿಷಯವಾಗಿ ಹಿಂದೆ ನುಡಿದ ಮಾತು ಇದೇ:
[14] ಆದರೆ ಈಗ ಯೆಹೋವ ದೇವರು ಮಾತನಾಡಿ, “ಗುಲಾಮಗಿರಿಯ ಕಟ್ಟುನಿಟ್ಟಿನ ಲೆಕ್ಕಾಚಾರದಂತೆ, ಮೂರು ವರುಷದೊಳಗೆ ಮೋವಾಬಿನ ವೈಭವವು ಹೀನಾಯಕ್ಕೆ ಈಡಾಗುವುದು. ಅಲ್ಲಿನವರ ದೊಡ್ಡ ಜನಸಂಖ್ಯೆಯಲ್ಲಿ ಅಳಿದುಉಳಿಯುವವರು ಬಲಹೀನರಾದ ಕೆಲವು ಜನರಾಗಿರುವರು,” ಎಂದು ಹೇಳಿದ್ದಾರೆ.