[1] ದಮಸ್ಕದ ವಿಷಯವಾದ ಪ್ರವಾದನೆ: ಇಗೋ, ದಮಸ್ಕವು ಇನ್ನು ಪಟ್ಟಣವಾಗಿರದೆ ಅದು ಹಾಳು ದಿಬ್ಬವಾಗಿರುವುದು.
[2] ಅರೋಯೇರ್ ಪ್ರಾಂತದ ಪಟ್ಟಣಗಳು ನಿರ್ಜನವಾಗಿ, ಅವು ಯಾರ ಹೆದರಿಕೆಯೂ ಇಲ್ಲದೆ ಮಲಗುವ ಮಂದೆಗಳಿಗೆ ಸ್ಥಳವಾಗುವುವು.
[3] ಎಫ್ರಾಯೀಮಿನಿಂದ ಕೋಟೆಯೂ, ದಮಸ್ಕದ ರಾಜ್ಯಾಧಿಕಾರವೂ, ಅರಾಮ್ಯರಲ್ಲಿ ಉಳಿದವುಗಳೂ ಸಹ ಇಲ್ಲವಾಗಿ ಹೋಗುವುವು. ಅವರು ಇಸ್ರಾಯೇಲಿನ ಮಕ್ಕಳ ವೈಭವದಂತೆ ಇರುವರು ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
[4] ಆ ದಿವಸದಲ್ಲಿ ಯಾಕೋಬ್ಯರ ವೈಭವ ತಗ್ಗುವುದು. ಅವರ ಕೊಬ್ಬು ಕರಗುವುದು.
[5] ಕೊಯ್ಯುವವನು ಪೈರನ್ನು ಕೂಡಿಸಿ ತೆನೆಗಳನ್ನು ತನ್ನ ಕೈಯಿಂದ ಕೊಯ್ಯುವಂತೆಯೂ, ರೆಫಾಯಿಮಿನ ತಗ್ಗಿನಲ್ಲಿ ತೆನೆಗಳನ್ನು ಕೂಡಿಸುವ ಹಾಗೆಯೂ ಇರುವುದು.
[6] ಆದರೂ ಎಣ್ಣೆಮರವನ್ನು ಅಲ್ಲಾಡಿಸಿದ ಬಳಿಕ ಮೇಲಿನ ಕೊಂಬೆಯ ತುಟ್ಟತುದಿಯಲ್ಲಿ ಎರಡು ಮೂರು ಕಾಯಿಗಳಿರುವುವು. ಅದರ ಫಲವತ್ತಾದ ಆ ಮರದ ರೆಂಬೆಗಳಲ್ಲಿ ನಾಲ್ಕೈದು ಕಾಯಿಗಳು ಉಳಿದಿರುವುವು. ಅದೇ ರೀತಿಯಾಗಿ, ಇಸ್ರಾಯೇಲರಲ್ಲಿ ಕೆಲವರು ಮಾತ್ರ ಉಳಿದಿರುವರು, ಎಂದು ಇಸ್ರಾಯೇಲಿನ ಯೆಹೋವ ದೇವರು ಹೇಳುತ್ತಾರೆ.
[7] ಆ ದಿನದಲ್ಲಿ ಜನರು ತಮ್ಮನ್ನು ಉಂಟುಮಾಡಿದವರ ಮೇಲೆ ದೃಷ್ಟಿಯಿಡುವರು ಮತ್ತು ಇಸ್ರಾಯೇಲಿನ ಪರಿಶುದ್ಧರ ಕಡೆಗೆ ತಿರುಗಿಕೊಳ್ಳುವರು.
[8] ಅವರು ತಮ್ಮ ಕೈಕೆಲಸವಾದ ಬಲಿಪೀಠಗಳನ್ನು ದೃಷ್ಟಿಸುವರು. ಬೆರಳುಗಳು ಮಾಡಿದ ಧೂಪಪೀಠಗಳನ್ನು, ಅಶೇರ ಸ್ತಂಭಗಳನ್ನು ಗೌರವಿಸುವುದಿಲ್ಲ.
[9] ಆ ದಿನದಲ್ಲಿ ಅವರು ಇಸ್ರಾಯೇಲರ ನಿಮಿತ್ತವಾಗಿ ಬಲವಾದ ಪಟ್ಟಣಗಳು ದಟ್ಟಡವಿಯ ಹಾಗಿದ್ದು ಹಾಳುಬೀಳುವುದು. ಅಂತು ದೇಶವೆಲ್ಲಾ ಹಾಳಾಗಿರುವದು.
[10] ನೀನು ನಿನ್ನ ರಕ್ಷಣೆಯ ದೇವರನ್ನು ಮರೆತು, ನಿನ್ನ ಬಂಡೆಯೂ, ಕೋಟೆಯೂ ಆಗಿರುವವರನ್ನು ಮರೆತು ಬಿಟ್ಟಿದ್ದೀ. ನೀನು ರಮ್ಯವಾದ ಗಿಡಗಳನ್ನು ಮತ್ತು ದೇಶಾಂತರದ ದ್ರಾಕ್ಷಿಯ ಸಸಿಗಳನ್ನು ಹಾಕಿದ್ದರೂ,
[11] ಬೆಳೆಸಲು ಸಸಿಯನ್ನು ಹಾಕಿದ ದಿನದಲ್ಲಿ ಬೇಲಿಹಾಕಿ ಮತ್ತು ಹೊತ್ತಾರೆ ನೀನು ಬಿತ್ತಿದ್ದನ್ನು ಮೊಳೆಯುವಂತೆ ಮಾಡಿದರೂ, ರೋಗದ ಹಾಗೂ ಗುಣಪಡಿಸಲಾರದ ಬೇನೆಯ ದಿನದಲ್ಲಿ ನಿನ್ನ ಸುಗ್ಗಿ ಏನೂ ಇರುವುದಿಲ್ಲ.
[12] ಆಹಾ, ಸಮುದ್ರವು ಭೋರ್ಗರೆಯುವಂತೆ ಭೋರ್ಗರೆಯುವ ಬಹು ಜನಾಂಗಗಳ ಗದ್ದಲ! ಮಹಾ ಜಲಪ್ರವಾಹಗಳು ಘೋಷಿಸುವಂತೆ ಘೋಷಿಸುವ ಜನಗಳ ಘೋಷ!
[13] ಪ್ರಚಂಡ ಜಲಪ್ರವಾಹಗಳು ಘೋಷಿಸುವಂತೆ ಜನಾಂಗಗಳು ಘೋಷಿಸುತ್ತವೆ. ಆದರೆ ದೇವರು ಅವರನ್ನು ಗದರಿಸುತ್ತಲೇ, ಅವರು ದೂರಹೋಗಿ ಬೆಟ್ಟಗಳಲ್ಲಿ ಗಾಳಿಗೆ ಸಿಕ್ಕಿದ ಹೊಟ್ಟಿನಂತೆಯೂ, ಸುಂಟರಗಾಳಿಯಿಂದ ಸುತ್ತಿ ಆಡುವ ಧೂಳಿನಂತೆಯೂ ಓಡಿಹೋಗುವರು.
[14] ಸಾಯಂಕಾಲದಲ್ಲಿ ಭಯಭ್ರಾಂತಿ, ಉದಯಕ್ಕೆ ಮುಂಚೆ ಅವು ಇಲ್ಲದಂತಾಗುವುದು. ನಮ್ಮನ್ನು ಸೂರೆ ಮಾಡುವವರಿಗೆ ಇದೇ ಗತಿ. ನಮ್ಮನ್ನು ಕೊಳ್ಳೆಹೊಡೆಯುವವರ ಪಾಡು ಇದೇ.