[1] ಈಜಿಪ್ಟಿನವರ ವಿಷಯವಾದ ಪ್ರವಾದನೆ: ಇಗೋ, ಯೆಹೋವ ದೇವರು ವೇಗವುಳ್ಳ ಮೇಘವನ್ನು ಹತ್ತಿಕೊಂಡು ಈಜಿಪ್ಟಿಗೆ ಬರುತ್ತಾರೆ. ಅವರು ಸಮ್ಮುಖರಾದಾಗ ಈಜಿಪ್ಟಿನ ವಿಗ್ರಹಗಳು ನಡುಗುವುವು. ಈಜಿಪ್ಟಿನವರ ಹೃದಯಗಳು ಅದರ ಮಧ್ಯೆ ಭಯದಿಂದ ಕರಗುವುವು.
[2] ಇದಲ್ಲದೆ ನಾನು ಈಜಿಪ್ಟಿನವನಿಗೆ ವಿರೋಧವಾಗಿ ಈಜಿಪ್ಟಿನವನನ್ನು ಎಬ್ಬಿಸುವೆನು. ಸಹೋದರನಿಗೆ ವಿರುದ್ಧವಾಗಿ ಸಹೋದರನೂ, ನೆರೆಯವನಿಗೆ ವಿರುದ್ಧವಾಗಿ ನೆರೆಯವನೂ, ಪಟ್ಟಣಕ್ಕೆ ವಿರೋಧವಾಗಿ ಪಟ್ಟಣವೂ, ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಹೊರಾಡುವವು.
[3] ಈಜಿಪ್ಟಿನವರ ಮನಸ್ಸು ಭಯಗೊಳ್ಳುವುದು ಅವರ ಆಲೋಚನೆಯನ್ನು ಭಂಗಪಡಿಸುವೆನು. ಅಲ್ಲಿಯವರು ವಿಗ್ರಹಗಳನ್ನೂ, ಮಾಟಗಾರರನ್ನೂ, ಯಕ್ಷಣಿಗಾರರನ್ನೂ, ಮಂತ್ರವಾದಿಗಳನ್ನೂ ಆಶ್ರಯಿಸುವರು.
[4] ಈಜಿಪ್ಟಿನವರನ್ನು ಕ್ರೂರನಾದ ಒಡೆಯನ ಕೈಗೆ ಒಪ್ಪಿಸುವೆನು. ಭಯಂಕರನಾದ ರಾಜನು ಅವರನ್ನಾಳುವನು, ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
[5] ನೈಲ್ ನದಿಯ ನೀರು ಬತ್ತಿಹೋಗುವುದು. ನದಿ ತೀರವೂ ಇಂಗಿ ಒಣಗಿಹೋಗುವುದು.
[6] ಕಾಲುವೆಗಳು ನಾರುವುವು. ಈಜಿಪ್ಟನ ಉಪನದಿಗಳು ದೂರಕ್ಕೆ ಇಳಿದು ನೀರಿಲ್ಲದೆ ಹೋಗುವುವು. ಜಂಬು ಹುಲ್ಲು ಬಾಡುವುದು.
[7] ನೈಲ್ ನದಿಯ ಹತ್ತಿರದ ತೀರವು ಬರುಡಾಗುವುದು. ನದಿಯ ಬಳಿಯಲ್ಲಿ ಬಿತ್ತಿದ ಬೀಜಗಳೆಲ್ಲವೂ ಒಣಗಿ, ಗಾಳಿಗೆ ತೂರಿಹೋಗುವುವು.
[8] ಮೀನುಗಾರರು ಕೂಡ ದುಃಖಿಸುವರು ಮತ್ತು ನೈಲ್ ನದಿಯಲ್ಲಿ ಗಾಳ ಹಾಕುವವರು ಪ್ರಲಾಪಿಸುವರು. ನೀರಿನ ಮೇಲೆ ಬಲೆ ಬೀಸುವವರು ಕುಗ್ಗಿ ಹೋಗುವರು.
[9] ನಯವಾದ ನಾರಿನ ಕೆಲಸದವರು ಬಟ್ಟೆ ನೇಯುವವರು ನಿರಾಶರಾಗಿರುವರು.
[10] ಬಟ್ಟೆಯಲ್ಲಿ ಕೆಲಸ ಮಾಡುವವರು ಖಿನ್ನರಾಗುತ್ತಾರೆ, ಮತ್ತು ಎಲ್ಲಾ ವೇತನದಾರರು ಹೃದಯದಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ.
[11] ಚೋವನ್ ಪಟ್ಟಣದ ಅಧಿಪತಿಗಳು ಕೇವಲ ಬುದ್ಧಿಹೀನರು; ಫರೋಹನ ಮಂತ್ರಿಗಳಲ್ಲಿ ಜ್ಞಾನವುಳ್ಳ ಸಲಹೆಗಾರರ ಆಲೋಚನೆಯೂ ಜ್ಞಾನರಹಿತವಾಗಿದೆ. ನೀವು ಫರೋಹನನಿಗೆ, “ನಾನು ಜ್ಞಾನಿಗಳ ಸಂತಾನದವನು, ಪುರಾತನ ರಾಜನ ಶಿಷ್ಯನೆಂದು ಹೇಳುವುದು ಹೇಗೆ”?
[12] ನಿನ್ನ ಜ್ಞಾನಿಗಳು ಎಲ್ಲಿ? ನಿನಗೆ ಅವರು ಹೇಳಲಿ. ಸೇನಾಧೀಶ್ವರ ಯೆಹೋವ ದೇವರು ಈಜಿಪ್ಟಿನವರ ವಿರೋಧವಾಗಿ ಉದ್ದೇಶಿಸಿದ್ದನ್ನು ಅವರು ತಿಳಿದುಕೊಳ್ಳಲಿ.
[13] ಚೋವನಿನ ಶ್ರೇಷ್ಠರು ಮೂರ್ಖರಾಗಿದ್ದಾರೆ. ನೋಫಿನ ಶ್ರೇಷ್ಠರು ಮೋಸ ಹೋಗಿದ್ದಾರೆ. ಈಜಿಪ್ಟಿನ ಗೋತ್ರಗಳ ಪ್ರಮುಖರು ಅದನ್ನು ಭ್ರಮೆಗೊಳಿಸಿದ್ದಾರೆ. ಅದನ್ನು ತಪ್ಪು ದಾರಿಗೆಳೆದಿದ್ದಾರೆ.
[14] ಯೆಹೋವ ದೇವರು ಅವರ ಮಧ್ಯದಲ್ಲಿ ತತ್ತರಿಸುವ ಆತ್ಮವನ್ನು ಸುರಿಸಿದ್ದಾರೆ. ಅಮಲೇರಿದವನು ಕಕ್ಕುತ್ತಾ ಓಲಾಡುವ ಪ್ರಕಾರ ಈಜಿಪ್ಟ್ ತನ್ನ ಒಂದೊಂದು ಕೆಲಸದಲ್ಲಿಯೂ ಓಲಾಡುವಂತೆ ಮಾಡಿದ್ದಾರೆ.
[15] ಈಜಿಪ್ಟಿನಲ್ಲಿ ತಲೆಯಾಗಲಿ, ಬಾಲವಾಗಲಿ, ಕೊಂಬೆಯಾಗಲಿ, ಒಂದು ಕಡ್ಡಿಯಾಗಲಿ ಸಾಧಿಸಲು ಸಾಧ್ಯವಾಗದ ಯಾವ ಕೆಲಸವೂ ಇರುವುದಿಲ್ಲ.
[16] ಆ ದಿನದಲ್ಲಿ ಈಜಿಪ್ಟಿನವರು ಹೆಂಗಸರ ಹಾಗೆ ಇರುವರು. ಸೇನಾಧೀಶ್ವರ ಯೆಹೋವ ದೇವರು ಅದರ ಮೇಲೆ ಎತ್ತಿದ ಕೈಯನ್ನು ಬೀಸುತ್ತಿರುವುದರಿಂದ ಅವರು ಹೆದರಿ ಭಯಪಡುವರು.
[17] ಈಜಿಪ್ಟ್ ಬೆಚ್ಚಿ ಬೀಳುವುದಕ್ಕೆ ಯೆಹೂದ ದೇಶವು ಕಾರಣವಾಗುವುದು, ಈ ದೇಶದ ಹೆಸರನ್ನು ಕೇಳುವ ಪ್ರತಿಯೊಬ್ಬನು ಸೇನಾಧೀಶ್ವರ ಯೆಹೋವ ದೇವರು ಈಜಿಪ್ಟಿಗೆ ಪ್ರತಿಕೂಲವಾಗಿ ಮಾಡಿಕೊಂಡಿರುವ ಆಲೋಚನೆಯನ್ನು ತಿಳಿದು ಬೆರಗಾಗುವನು.
[18] ಆ ದಿವಸದಲ್ಲಿ ಈಜಿಪ್ಟಿನ ಐದು ಪಟ್ಟಣಗಳು ಸೇನಾಧೀಶ್ವರ ಯೆಹೋವ ದೇವರಿಗೆ ಆಣೆಯಿಟ್ಟುಕೊಳ್ಳುವವು. ಕಾನಾನಿನ ಭಾಷೆಯನ್ನಾಡುವವರಿಂದ ತುಂಬಿದ ಐದು ಪಟ್ಟಣಗಳು ಈಜಿಪ್ಟ್ ದೇಶದಲ್ಲಿರುವುವು. ಅವುಗಳಲ್ಲಿ ಒಂದರ ಹೆಸರು “ನಾಶಪುರ.”
[19] ಆ ದಿನದಲ್ಲಿ ಈಜಿಪ್ಟ್ ದೇಶದ ಮಧ್ಯದಲ್ಲಿ ಯೆಹೋವ ದೇವರಿಗೆ ಬಲಿಪೀಠವು ದೇಶದ ಎಲ್ಲೆಯಲ್ಲಿ ಯೆಹೋವ ದೇವರಿಗೆ ಒಂದು ಸ್ತಂಭವು ಇರುವುದು.
[20] ಅದು ಸೇನಾಧೀಶ್ವರ ಯೆಹೋವ ದೇವರಿಗೆ ಈಜಿಪ್ಟ್ ದೇಶದಲ್ಲಿ ಗುರುತಾಗಿ ಸಾಕ್ಷಿಯಾಗಿರುವುದು. ಏಕೆಂದರೆ ಹಿಂಸಕರ ದೆಸೆಯಿಂದ ಯೆಹೋವ ದೇವರನ್ನು ಕೂಗಿಕೊಳ್ಳಲು, ದೇವರು ಅವರಿಗೆ ಒಬ್ಬ ಶೂರನಾದ ರಕ್ಷಕನನ್ನು ಕಳುಹಿಸಿ, ಅವರನ್ನು ಬಿಡುಗಡೆ ಮಾಡುವರು.
[21] ಯೆಹೋವ ದೇವರು ತಮ್ಮನ್ನು ಈಜಿಪ್ಟಿನವರಿಗೆ ತಿಳಿಯಪಡಿಸಲು, ಅವರು ಆ ದಿನದಲ್ಲಿ ಯೆಹೋವ ದೇವರನ್ನು ತಿಳಿದುಕೊಳ್ಳುವರು ಮತ್ತು ಬಲಿಕಾಣಿಕೆಗಳಿಂದ ಸೇವೆಮಾಡುವರು. ಹೌದು, ಅವರು ಯೆಹೋವ ದೇವರಿಗೆ ಪ್ರಮಾಣ ಮಾಡಿಕೊಂಡು ನೆರವೇರಿಸುವರು.
[22] ಇದಲ್ಲದೆ ಯೆಹೋವ ದೇವರು ಈಜಿಪ್ಟಿನವರನ್ನು ಹೊಡೆಯುವರು; ಗಾಯಮಾಡಿ ಸ್ವಸ್ಥ ಮಾಡುವರು. ಅವರು ಯೆಹೋವ ದೇವರ ಕಡೆಗೆ ತಿರುಗಿಕೊಳ್ಳುವರು, ದೇವರು ಅವರನ್ನು ಆಲೈಸಿ ಸ್ವಸ್ಥ ಮಾಡುವರು.
[23] ಆ ದಿವಸದಲ್ಲಿ ಈಜಿಪ್ಟಿನಿಂದ ಅಸ್ಸೀರಿಯಕ್ಕೆ ಹೋಗುವ ಒಂದು ರಾಜ ಮಾರ್ಗವಿರುವುದು. ಅಸ್ಸೀರಿಯದವರು ಈಜಿಪ್ಟಿಗೂ, ಈಜಿಪ್ಟಿನವರು ಅಸ್ಸೀರಿಯಕ್ಕೂ ಹೋಗಿ ಬರುವರು. ಈಜಿಪ್ಟಿನವರು, ಅಸ್ಸೀರಿಯರೊಂದಿಗೆ ಯೆಹೋವ ದೇವರನ್ನು ಆರಾಧಿಸುವರು.
[24] ಆ ದಿನದಲ್ಲಿ ಇಸ್ರಾಯೇಲು ಈಜಿಪ್ಟಿನವರ ಮತ್ತು ಅಸ್ಸೀರಿಯದವರ ಸಂಗಡ ಮೂರನೆಯದಾಗಿ ದೇಶದ ಮಧ್ಯದಲ್ಲಿ ಆಶೀರ್ವಾದವಾಗಿರುವುದು.
[25] ನನ್ನ ಪ್ರಜೆಯಾದ ಈಜಿಪ್ಟಿಗೂ, ನನ್ನ ಕೈಕೆಲಸವಾದ ಅಸ್ಸೀರಿಯಕ್ಕೂ ಮತ್ತು ನನ್ನ ಸೊತ್ತಾದ ಇಸ್ರಾಯೇಲಿಗೂ, “ನಿಮಗೆ ಆಶೀರ್ವಾದ,” ಎಂದು ಸೇನಾಧೀಶ್ವರ ಯೆಹೋವ ದೇವರು ಅವುಗಳನ್ನು ಆಶೀರ್ವಾದ ಮಾಡುವರು.