[1] ಈಗಲಾದರೋ ಯಾಕೋಬನ ವಂಶವೇ, ಇಸ್ರಾಯೇಲ್ ಸಂತಾನವೇ, ನಿನ್ನನ್ನು ಸೃಷ್ಟಿಸಿ, ರೂಪಿಸಿದ ಯೆಹೋವ ದೇವರು ಹೇಳುವುದೇನೆಂದರೆ: “ಹೆದರಬೇಡ, ಏಕೆಂದರೆ ನಾನು ನಿನ್ನನ್ನು ವಿಮೋಚಿಸಿದೆನಲ್ಲಾ, ನಿನ್ನ ಹೆಸರು ಹಿಡಿದು ಕರೆದೆನಲ್ಲಾ, ನೀನು ನನ್ನವನೇ.
[2] ನೀನು ಜಲರಾಶಿಯನ್ನು ದಾಟಿಹೋಗುವಾಗ, ನಾನು ನಿನ್ನೊಂದಿಗಿರುವೆನು; ನದಿಗಳನ್ನು ನೀನು ದಾಟುವಾಗ, ಅವು ನಿನ್ನನ್ನು ಮುಳುಗಿಸುವುದಿಲ್ಲ; ಬೆಂಕಿಯಲ್ಲಿ ನಡೆಯುವಾಗ, ನೀನು ಸುಟ್ಟುಹೋಗುವುದಿಲ್ಲ; ಜ್ವಾಲೆಯು ನಿನ್ನನ್ನು ದಹಿಸದು.
[3] ಏಕೆಂದರೆ ನಾನೇ ನಿನ್ನ ಯೆಹೋವ ದೇವರೂ ನಿನ್ನ ದೇವರಾದ ಇಸ್ರಾಯೇಲಿನ ಪರಿಶುದ್ಧನೂ, ನಿನ್ನ ರಕ್ಷಕನೂ ಆಗಿದ್ದೇನೆ. ಈಜಿಪ್ಟನ್ನು ನಿನ್ನ ವಿಮೋಚನೆಗೂ, ಇಥಿಯೋಪಿಯ ಮತ್ತು ಸೆಬಾ ಸೀಮೆಗಳನ್ನು ನಿನಗೋಸ್ಕರ ಕೊಟ್ಟಿದ್ದೇನೆ.
[4] ನೀನು ನನ್ನ ದೃಷ್ಟಿಯಲ್ಲಿ ಅಮೂಲ್ಯನೂ, ಮಾನ್ಯನೂ, ಪ್ರಿಯನೂ ಆಗಿರುವುದರಿಂದ ನಾನು ನಿನಗೋಸ್ಕರ ಮನುಷ್ಯರನ್ನೂ, ನಿನ್ನ ಪ್ರಾಣಕ್ಕೆ ಜನಾಂಗಗಳನ್ನೂ ಕೊಡುವೆನು.
[5] ಭಯಪಡಬೇಡ, ಏಕೆಂದರೆ ನಾನೇ ನಿನ್ನೊಂದಿಗೆ ಇದ್ದೇನೆ. ನಿನ್ನ ಸಂತತಿಯವರನ್ನು ಪೂರ್ವದಿಂದ ತರುವೆನು. ಪಶ್ಚಿಮದಿಂದ ನಿನ್ನನ್ನು ಕೂಡಿಸುವೆನು.
[6] ‘ನಾನು ಒಪ್ಪಿಸಿಬಿಡು,’ ಎಂದು ಉತ್ತರದಿಕ್ಕಿಗೂ ‘ತಡೆಯಬೇಡ,’ ಎಂದು ದಕ್ಷಿಣದಿಕ್ಕಿಗೂ ಹೇಳಿ, ದೂರದಲ್ಲಿರುವ ನನ್ನ ಪುತ್ರರನ್ನೂ, ದಿಗಂತಗಳಲ್ಲಿರುವ ನನ್ನ ಪುತ್ರಿಯರನ್ನೂ,
[7] ನನ್ನ ಹೆಸರಿನಿಂದ ಕರೆಯಲಾದ ಪ್ರತಿಯೊಬ್ಬನನ್ನೂ ಬರಮಾಡುವೆನು. ಏಕೆಂದರೆ ಅವರನ್ನು ನನ್ನ ಮಹಿಮೆಗಾಗಿ ಸೃಷ್ಟಿಸಿದ್ದೇನೆ. ನಾನು ಅವರನ್ನು ನಿರ್ಮಿಸಿದ್ದೇನೆ. ಹೌದು, ನಾನು ಅವರನ್ನು ಉಂಟುಮಾಡಿದ್ದೇನೆ.”
[8] ಕಣ್ಣಿದ್ದರೂ ಕುರುಡರಾದ, ಕಿವಿಯಿದ್ದರೂ ಕಿವುಡರಾದ ಜನರನ್ನು ಕರೆ.
[9] ಎಲ್ಲಾ ಜನಾಂಗಗಳು ಒಟ್ಟಿಗೆ ಕೂಡಿಕೊಳ್ಳಲಿ. ಎಲ್ಲಾ ಜನರೂ ಸೇರಿಕೊಳ್ಳಲಿ. ಅವರ ದೇವರುಗಳಲ್ಲಿ ಭವಿಷ್ಯವನ್ನು ನುಡಿಯಬಲ್ಲವರು ಯಾರು? ಗತಿಸಿದ ಸಂಗತಿಗಳನ್ನು ಮುಂತಿಳಿಸುವವರು ಯಾರು? ನಾವು ನೀತಿವಂತರೆಂದು ಸ್ಥಾಪಿಸುವುದಕ್ಕೆ ಸಾಕ್ಷಿಗಳನ್ನು ಕರೆತರಲಿ. ಆ ಸಾಕ್ಷಿಗಳು ಇದನ್ನು ಕೇಳಿ, ನಿಜವೆಂದು ಹೇಳಲಿ.
[10] ಯೆಹೋವ ದೇವರು ಹೇಳುವುದೇನೆಂದರೆ, “ನೀವು ನನಗೆ ಸಾಕ್ಷಿಗಳಾಗಿದ್ದೀರಿ,” “ನಾನು ಇರುವಾತನೇ ಆಗಿದ್ದೇನೆಂದು, ನೀವು ತಿಳಿದು, ನಂಬಿ, ಗ್ರಹಿಸಿರಿ; ನಾನು ನಿನ್ನನ್ನು ಸೇವಕನನ್ನಾಗಿ ಆರಿಸಿಕೊಂಡಿದ್ದೇನೆ. ನನಗಿಂತ ಮುಂಚೆಯೂ, ನನ್ನ ಅನಂತರದಲ್ಲಿಯೂ ಯಾವ ದೇವರೂ ಇರುವುದಿಲ್ಲ.
[11] ನಾನೇ, ನಾನೇ, ಯೆಹೋವ ದೇವರು ಆಗಿದ್ದೇನೆ. ನನ್ನ ಹೊರತು ಯಾವ ರಕ್ಷಕನೂ ಇಲ್ಲ.
[12] ನಿಮ್ಮಲ್ಲಿ ಅನ್ಯದೇವರು ಇಲ್ಲದಿರುವಾಗಲೇ, ನಾನೇ ರಕ್ಷಣೆಯನ್ನು ಪ್ರಕಟಿಸಿ, ತೋರಿಸಿದ್ದೇನೆ. ಆದ್ದರಿಂದ ನೀವು ನನ್ನ ಸಾಕ್ಷಿಗಳು,” “ನಾನೇ ದೇವರು ಎಂದು ಯೆಹೋವ ದೇವರು ನುಡಿಯುತ್ತಾರೆ.
[13] ಹೌದು, ಅಂದಿನಿಂದಲೇ ನಾನಿದ್ದೇನೆ. ನನ್ನ ಕೈಯಿಂದ ಬಿಡಿಸುವವರು ಯಾರೂ ಇಲ್ಲ. ನನ್ನ ಕೆಲಸಕ್ಕೆ ಅಡ್ಡಿ ಬರುವವನಾರು?”
[14] ನಿಮ್ಮ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಆಗಿರುವ ಯೆಹೋವ ದೇವರು ಹೇಳುವುದೇನೆಂದರೆ: ನಾನು ನಿಮಗೋಸ್ಕರ ಬಾಬಿಲೋನಿಗೆ ಕಳುಹಿಸಿ, ಅವರ ಘನವಂತರನ್ನೆಲ್ಲಾ ಮತ್ತು ಹಡಗುಗಳಲ್ಲಿ ಆರ್ಭಟಿಸುವ ಕಸ್ದೀಯರನ್ನು ತಗ್ಗಿಸಿದೆನು.
[15] ಯೆಹೋವನಾದ ನಾನು ನಿಮ್ಮ ಪರಿಶುದ್ಧನೂ, ಇಸ್ರಾಯೇಲನ್ನು ಸೃಷ್ಟಿಸಿದವನೂ, ನಿಮ್ಮ ಅರಸನೂ ಆಗಿದ್ದೇನೆ.
[16] ಯೆಹೋವ ದೇವರು ಇಂತೆನ್ನುತ್ತಾರೆ: ಸಮುದ್ರದ ಮುಖಾಂತರವಾಗಿ ಮಾರ್ಗಮಾಡಿದವನೂ; ಬಲವಾದ ನೀರಿನಲ್ಲಿ ದಾರಿ ಮಾಡಿದವನೂ;
[17] ರಥಗಳನ್ನು, ಕುದುರೆಗಳನ್ನು, ದಂಡನ್ನು, ಪರಾಕ್ರಮಶಾಲಿಗಳನ್ನು ಹೊರಡಿಸಿ, ಅವು ಒಟ್ಟಿಗೆ ಬಿದ್ದು ಏಳಲಾರದಂತೆಯೂ, ದೀಪದ ಬತ್ತಿ ನಂದಿ ಆರಿಹೋಗುವಂತೆಯೂ ಮಾಡಿದಾತನು ಇಂತೆನ್ನುತ್ತಾನೆ:
[18] “ಹಿಂದಿನ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ. ಹಳೆಯ ಸಂಗತಿಗಳನ್ನು ಯೋಚಿಸಬೇಡಿರಿ.
[19] ಇಗೋ, ನಾನು ಒಂದು ಹೊಸ ಕಾರ್ಯವನ್ನು ಮಾಡುವೆನು. ಅದು ಈಗಲೇ ತಲೆದೋರುತ್ತಲಿದೆ. ಇದು ನಿಮಗೆ ಕಾಣುವುದಿಲ್ಲವೋ? ನಾನು ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸುವೆನು. ಮರುಭೂಮಿಯಲ್ಲಿ ನದಿಗಳನ್ನೂ ಉಂಟುಮಾಡುವೆನು.
[20] ಕಾಡುಮೃಗಗಳು, ನರಿಗಳು, ಗೂಬೆಗಳು ನನ್ನನ್ನು ಸನ್ಮಾನಿಸುತ್ತವೆ. ಅಡವಿಯಲ್ಲಿ ನೀರನ್ನು, ಮರುಭೂಮಿಯಲ್ಲಿ ನದಿಗಳನ್ನು ನಾನು ಆಯ್ದುಕೊಂಡ ನನ್ನ ಪ್ರಜೆಗಳಿಗೆ ಕುಡಿಯುವುದಕ್ಕೆ ಕೊಟ್ಟೆನು.
[21] ನನ್ನ ಸ್ತೋತ್ರವನ್ನು ಪ್ರಚುರಪಡಿಸಲಿ ಎಂದು ನಾನು ಈ ಜನರನ್ನು ನನಗೋಸ್ಕರ ರೂಪಿಸಿದ್ದೇನೆ.
[22] “ಆದರೂ ಯಾಕೋಬೇ, ನೀನು ನನ್ನನ್ನು ಪ್ರಾರ್ಥಿಸಲಿಲ್ಲ. ಇಸ್ರಾಯೇಲೇ, ನನ್ನ ವಿಷಯದಲ್ಲಿ ನೀನು ಬೇಸರಗೊಂಡಿದ್ದೀ!
[23] ನಿನ್ನ ದಹನಬಲಿಯ ಎಳೆಯ ಕುರಿಗಳನ್ನು ನನಗೆ ತರಲಿಲ್ಲ. ನಿನ್ನ ಯಜ್ಞಗಳಿಂದ ನನ್ನನ್ನು ಸನ್ಮಾನಿಸಲಿಲ್ಲ. ನೀನು ಕಾಣಿಕೆಯನ್ನು ಅರ್ಪಿಸದೆ ಇದ್ದದ್ದಕ್ಕೆ ನಿನ್ನನ್ನು ನಾನು ತೊಂದರೆಪಡಿಸಲಿಲ್ಲ, ಧೂಪಕ್ಕಾಗಿ ನಿನ್ನನ್ನು ಬೇಸರಗೊಳಿಸಲಿಲ್ಲ.
[24] ನೀನು ನನಗೋಸ್ಕರ ಹಣದಿಂದ ಪರಿಮಳ ತೈಲವನ್ನು ಕೊಂಡುಕೊಳ್ಳಲಿಲ್ಲ. ನಿನ್ನ ಯಜ್ಞಪಶುಗಳ ಕೊಬ್ಬಿನಿಂದ ನನ್ನನ್ನು ತೃಪ್ತಿಪಡಿಸಲಿಲ್ಲ. ಆದರೆ ನಿನ್ನ ಪಾಪಗಳಿಂದ ನನ್ನನ್ನು ನೀನು ತೊಂದರೆಗೆ ಗುರಿಮಾಡಿರುವೆ. ನಿನ್ನ ಅಕ್ರಮಗಳಿಂದ ನನ್ನನ್ನು ಬೇಸರಗೊಳಿಸಿದ್ದೀ.
[25] “ನಾನಾಗಿ ನಾನೇ, ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿಬಿಡುತ್ತೇನೆ. ನಿನ್ನ ಪಾಪಗಳನ್ನು ನನ್ನ ನೆನಪಿನಲ್ಲಿಡೆನು.
[26] ನನಗೆ ಜ್ಞಾಪಕಪಡಿಸು, ನಾವಿಬ್ಬರೂ ವಾದಿಸುವಾ, ನೀನು ನೀತಿವಂತನೆಂದು ತೋರಿಸು.
[27] ನಿನ್ನ ಮೂಲಪಿತೃ ಪಾಪಮಾಡಿದ್ದಾನೆ. ನಿನ್ನ ಬೋಧಕರು ನನಗೆ ವಿರೋಧವಾಗಿ ದ್ರೋಹ ಮಾಡಿದ್ದಾರೆ.
[28] ಆದಕಾರಣ ಪವಿತ್ರಾಲಯದ ಪ್ರಧಾನರನ್ನು ನಾಚಿಕೆಪಡಿಸಿ, ಯಾಕೋಬನ್ನು ಶಾಪಕ್ಕೂ, ಇಸ್ರಾಯೇಲನ್ನು ದೂಷಣೆಗಳಿಗೂ ಒಪ್ಪಿಸಿಬಿಟ್ಟಿದ್ದೇನೆ.