[1] ಮೋವಾಬಿನ ವಿಷಯವಾದ ಪ್ರವಾದನೆ: ಆ ರಾತ್ರಿಯಲ್ಲಿ ಮೋವಾಬಿನ ಆರ್ ಪಟ್ಟಣವು ಹಾಳಾಗಿ ನಿಶ್ಶಬ್ದವಾಯಿತು. ಹೌದು, ಆ ರಾತ್ರಿಯಲ್ಲಿ ಮೋವಾಬಿನ ಕೀರ್ ಪಟ್ಟಣವು ಹಾಳಾಗಿ ನಿಶ್ಶಬ್ದವಾಯಿತು.
[2] ದೀಬೋನ್ ಊರಿನವರು ಅಳುವುದಕ್ಕಾಗಿ ಎತ್ತರವಾದ ಪೂಜಾಸ್ಥಳಕ್ಕೆ ಹೋಗಿದ್ದಾರೆ; ನೆಬೋ ಹಾಗೂ ಮೇದೆಬ ಪಟ್ಟಣದವರಿಗಾಗಿ ಮೋವಾಬ್ಯರು ಗೋಳಾಡುತ್ತಾರೆ. ಪ್ರತಿಯೊಬ್ಬರ ತಲೆಯು ಬೋಳು, ಪ್ರತಿಯೊಬ್ಬರ ಗಡ್ಡವೂ ವಿಕಾರವಾಗಿ ಕತ್ತರಿಸಿದೆ.
[3] ಅವರು ತಮ್ಮ ಬೀದಿಗಳಲ್ಲಿ ಗೋಣಿತಟ್ಟನ್ನು ತಾವೇ ಸುತ್ತಿಕೊಳ್ಳುವರು. ಪ್ರತಿಯೊಬ್ಬನು ತನ್ನ ಮನೆಯ ಮೇಲೆಯೂ, ಬೀದಿಗಳಲ್ಲಿಯೂ ಅರಚುತ್ತಾ ಬಹುಶೋಕದಿಂದ ಗೋಳಾಡುವನು.
[4] ಹೆಷ್ಬೋನ್ ಮತ್ತು ಎಲೆಯಾಲೆ ಕೂಗುತ್ತವೆ, ಅವರ ಸ್ವರವು ಯಹಚ ಊರಿನವರೆಗೂ ಕೇಳಿಸುತ್ತದೆ. ಆದಕಾರಣ ಮೋವಾಬಿನ ಯುದ್ಧಭಟರು ಕಿರಿಚಿಕೊಳ್ಳುವರು. ಅವರ ಹೃದಯಗಳು ತತ್ತರಿಸುತ್ತವೆ.
[5] ನನ್ನ ಹೃದಯವು ಮೋವಾಬಿನ ನಿಮಿತ್ತ ಕೂಗುತ್ತದೆ. ಅಲ್ಲಿಂದ ಪಲಾಯನವಾದವರು ಚೋಗರ್ ಕಡೆಗೂ ಎಗ್ಲತ್ ಶೆಲಿಶೀಯ ಕಡೆಗೂ ಓಡಿಹೋಗುವರು. ಲೂಹೀತ್ ದಿಣ್ಣೆಯನ್ನು ಅಳುತ್ತಾ ಹತ್ತುವರು. ಏಕೆಂದರೆ ಹೊರೊನಯಿಮ್ ಊರಿನ ದಾರಿಯಲ್ಲಿ ನಡೆಯುತ್ತಾ ನಾಶವಾದೆವಲ್ಲಾ ಎಂದು ದನಿಗೈಯುವರು.
[6] ನಿಮ್ರೀಮ್ ಹೊಳೆಯು ಬತ್ತಿಹೋಯಿತು, ಹಸಿಹುಲ್ಲು ಬಾಡಿತು, ಮೇವು ತೀರಿತು ಅಲ್ಲಿ ಹಸಿರಾದದ್ದು ಇಲ್ಲ.
[7] ಆದಕಾರಣ ತಾವು ಸಂಪಾದಿಸಿದ ಆಸ್ತಿಯನ್ನೂ, ಕೂಡಿಸಿಟ್ಟ ಸೊತ್ತನ್ನೂ ನೀರವಂಜಿಯ ಹೊಳೆಯ ಆಚೆಗೆ ಹೊತ್ತುಕೊಂಡು ಹೋಗುತ್ತಾರೆ.
[8] ಅವರ ಕೂಗಾಟವು ಮೋವಾಬಿನ ಎಲೆಗಳ ತನಕ ಹಬ್ಬಿದೆ. ಅದರ ಕಿರಿಚಾಟ ಎಗ್ಲಯಿಮ್ ಹಾಗೂ ಬೆಯೆರ್ ಏಲೀಮ್ ಊರುಗಳ ತನಕ ವ್ಯಾಪಿಸಿದೆ.
[9] ದೀಮೋನ್ ನದಿಯ ನೀರೆಲ್ಲಾ ರಕ್ತವಾಯಿತು. ದೀಮೋನಿನ ಮೇಲೆ ಹೆಚ್ಚಾದ ಹಾನಿಯನ್ನು ತರುವೆನು. ಮೋವಾಬ್ಯರಲ್ಲಿ ತಪ್ಪಿಸಿಕೊಂಡವರ ಮೇಲೆಯೂ, ದೇಶದಲ್ಲಿ ಉಳಿದವರ ಮೇಲೆಯೂ ಸಿಂಹವನ್ನು ಬರಮಾಡುವೆನು.