Skip to content
Opens in a new window
Listen to this chapter • 3:50

[1] ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು. ಅಧಿಪತಿಗಳು ನ್ಯಾಯದಿಂದ ದೊರೆತನ ಮಾಡುವರು.

[2] ಆಗ ಮನುಷ್ಯನು ಗಾಳಿಗೋಸ್ಕರ ಅಡಗಿಕೊಳ್ಳುವಂತೆಯೂ, ಬಿರುಗಾಳಿಗೋಸ್ಕರ ಮರೆಮಾಡಿಕೊಳ್ಳುವಂತೆಯೂ, ಅರಣ್ಯದಲ್ಲಿಯ ನೀರಿನ ಕಾಲುವೆಗಳ ಹಾಗೂ, ಬಾಯಾರಿದ ನಾಡಿಗೆ ದೊಡ್ಡ ಬಂಡೆಯ ನೆರಳಿನ ಹಾಗೆಯೂ ಇರುವನು.

[3] ಆಗ ನೋಡುವವರ ಕಣ್ಣುಗಳು ಮೊಬ್ಬಾಗವು, ಕೇಳುವವರ ಕಿವಿಗಳು ಮಂದವಾಗವು.

[4] ಆತುರಗಾರರ ಹೃದಯವು ತಿಳುವಳಿಕೆಯನ್ನು ಗ್ರಹಿಸುವುದು. ತೊದಲು ಮಾತನಾಡುವವರ ನಾಲಿಗೆ ಸ್ವಚ್ಛವಾಗಿ ಮಾತನಾಡುವುದಕ್ಕೆ ಸಿದ್ಧವಾಗಿರುವುದು.

[5] ಇನ್ನು ಮೇಲೆ ಮೂರ್ಖನು ಘನವಂತನೆನಿಸಿಕೊಳ್ಳನು. ಮೋಸಗಾರನು ಮಹನೀಯನೆನಿಸಿಕೊಳ್ಳನು.

[6] ಏಕೆಂದರೆ ಮೂರ್ಖನು ಮೂರ್ಖವಾಗಿ ಮಾತನಾಡುವನು. ಅವನ ಹೃದಯವು ಕಪಟತ್ವವನ್ನು ಅಭ್ಯಾಸಿಸುವಂತೆಯೂ, ಯೆಹೋವ ದೇವರಿಗೆ ವಿರೋಧವಾಗಿ ಸಂಪೂರ್ಣವಾಗಿ ತಪ್ಪಿ ಹೋಗುವವರಂತೆಯೂ, ಹಸಿವೆಗೊಂಡವನ ಆಶೆಯನ್ನು ಬರಿದು ಮಾಡುವಂತೆಯೂ ಕೇಡನ್ನು ಮಾಡುವನು. ಬಾಯಾರಿದವನ ಪಾನವನ್ನು ಇಲ್ಲದಂತೆ ಮಾಡುವ ಹಾಗೆ ಕಾರಣನಾಗುವನು.

[7] ಮೋಸಗಾರನ ಆಯುಧಗಳು ಕೆಟ್ಟವುಗಳೇ, ದರಿದ್ರನು ನ್ಯಾಯವಾದದ್ದನ್ನು ಮಾತನಾಡಿದರೂ, ಅವನು ಬಡವರನ್ನು ಸುಳ್ಳು ಮಾತುಗಳಿಂದ ಕೆಡಿಸುವುದಕ್ಕೆ ಕುಯುಕ್ತಿಗಳನ್ನು ಕಲ್ಪಿಸುವನು.

[8] ಘನವಂತನಾದರೋ, ಘನಕಾರ್ಯಗಳನ್ನು ಕಲ್ಪಿಸುವನು. ಅವನು ಘನವಾದವುಗಳಲ್ಲಿಯೇ ನಿರತನಾಗಿರುವನು.

[9] ನಿಶ್ಚಿಂತೆಯರಾದ ಮಹಿಳೆಯರೇ, ಏಳಿರಿ. ನನ್ನ ಸ್ವರವನ್ನು ಕೇಳಿರಿ. ಭಯವಿಲ್ಲದ ಹೆಣ್ಣು ಮಕ್ಕಳೇ, ನನ್ನ ಮಾತಿಗೆ ಕಿವಿಗೊಡಿರಿ.

[10] ಈಗ ಸುಖವಾಗಿ ಕುಳಿತಿದ್ದೀರಿ, ನಿಶ್ಚಿಂತೆಯಿಂದಿದ್ದೀರಿ. ಇನ್ನು ಒಂದು ವರ್ಷದ ಮೇಲೆ ಕೆಲವು ದಿನಗಳಲ್ಲಿ ಕಳವಳಗೊಳ್ಳುವಿರಿ. ಏಕೆಂದರೆ, ಆಗ ದ್ರಾಕ್ಷಿ ಕೊಯಿಲು ನಿಂತುಹೋಗುವುದು. ಯಾವ ಬೆಳೆಯೂ ನಿಮಗೆ ದೊರೆಯುವುದಿಲ್ಲ.

[11] ನಿಶ್ಚಿಂತೆಯುಳ್ಳ ಸ್ತ್ರೀಯರೇ, ನೀವು ನಡುಗಿರಿ. ನಿರ್ಭೀತ ಪುತ್ರಿಯರೇ, ಕಳವಳಗೊಳ್ಳಿರಿ. ನಿಮ್ಮ ಬಟ್ಟೆಯನ್ನು ಕಿತ್ತುಹಾಕಿ, ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ.

[12] ಇಷ್ಟವಾದ ಹೊಲಗಳ ಮತ್ತು ಫಲವತ್ತಾದ ದ್ರಾಕ್ಷಾಲತೆಗಳ ನಿಮಿತ್ತವೂ ನಿಮ್ಮ ಎದೆ ಬಡಿದುಕೊಳ್ಳಿರಿ.

[13] ನನ್ನ ಜನರ ಹೊಲಗದ್ದೆಗಳಲ್ಲಿ ಮುಳ್ಳುಪೊದೆಗಳು ಹುಟ್ಟಿಕೊಂಡಿವೆ. ಉಲ್ಲಾಸದಿಂದ ಕೂಡಿದ್ದ ಮನೆಗಳೂ ಲವಲವಿಕೆಯಿಂದ ತುಂಬಿದ್ದ ನಗರಗಳೂ ಶೂನ್ಯವಾಗಿವೆ.

[14] ಅರಮನೆ ಹಾಳುಬಿದ್ದಿದೆ. ಗಲಭೆಯಪಟ್ಟಣವು ನಿರ್ಜನವಾಗುವುದು, ಪರ್ವತ ಮತ್ತು ಬುರುಜು ಶಾಶ್ವತವಾಗಿ ಗುಹೆಗಳಾಗುವುವು. ಕಾಡುಕತ್ತೆಗಳಿಗೆ ಬಯಲಾಗಿಯೂ, ದನಕರುಗಳಿಗೆ ಹುಲ್ಲುಗಾವಲುಗಳಾಗಿಯೂ ಇರುವುವು.

[15] ಆದರೆ ದೇವರು ಉನ್ನತಲೋಕದಲ್ಲಿ ತಮ್ಮ ಪವಿತ್ರಾತ್ಮ ಧಾರೆಯನ್ನು ನಮ್ಮ ಮೇಲೆ ಸುರಿಯುವರು; ಆಗ ಪಾಳುಭೂಮಿ ಫಲಭರಿತ ಭೂಮಿಯಾಗುವುದು, ಫಲಭರಿತ ಭೂಮಿ ಸಮೃದ್ಧವಾದ ಅರಣ್ಯವಾಗಿ ಮಾರ್ಪಡುವುದು.

[16] ನ್ಯಾಯವು ಮರುಭೂಮಿಯಲ್ಲಿ ನೆಲೆಗೊಳ್ಳುವುದು, ಪೈರಿನ ಹೊಲದಲ್ಲಿ ನೀತಿಯು ನೆಲೆಯಾಗಿರುವುದು.

[17] ನೀತಿಯ ಕೆಲಸವು ಸಮಾಧಾನವೂ, ನೀತಿಯ ಫಲವು ನಿತ್ಯವಾದ ಶಾಂತಿಯೂ, ಭರವಸೆಯೂ ಆಗಿರುವುದು.

[18] ಆಗ ನನ್ನ ಜನರು ಸಮಾಧಾನದ ನಿವಾಸಗಳಲ್ಲಿಯೂ, ಭದ್ರವಾದ ಸ್ಥಳಗಳಲ್ಲಿಯೂ, ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.

[19] ಆದರೆ ಕಲ್ಮಳೆ ಸುರಿಯುವಾಗ ವನವು ಹಾಳಾಗುವುದು. ಪಟ್ಟಣವು ಸಂಪೂರ್ಣವಾಗಿ ನೆಲಸಮವಾಗುವುದು.

[20] ನೀರಿರುವ ಎಲ್ಲಾ ಕಡೆಗಳಲ್ಲಿ ಬಿತ್ತನೆ ಮಾಡಿ, ದನಕತ್ತೆಗಳನ್ನು ಮೇಯಲು ಬಿಡುವ ನೀವು ಧನ್ಯರೇ ಸರಿ.

ಯೆಶಾಯ — Chapters