[1] ಆ ದಿವಸದಲ್ಲಿ ಯೆಹೂದ ದೇಶದಲ್ಲಿ ಈ ಹಾಡನ್ನು ಹಾಡುವರು: ನಮಗೆ ಬಲವಾದ ಪಟ್ಟಣವಿದೆ, ರಕ್ಷಣೆಯನ್ನು ಕೋಟೆಯನ್ನಾಗಿಯೂ, ಹೊರಪೌಳಿಯನ್ನಾಗಿಯೂ ದೇವರು ಮಾಡುವರು.
[2] ಬಾಗಿಲುಗಳನ್ನು ತೆರೆಯಿರಿ. ಸತ್ಯವನ್ನು ಕೈಗೊಳ್ಳುವ ನೀತಿಯುಳ್ಳ ಜನಾಂಗವು ಒಳಗೆ ಪ್ರವೇಶಿಸಲಿ.
[3] ದೃಢ ಮನಸ್ಸುಳ್ಳವರನ್ನು ಪೂರ್ಣ ಸಮಾಧಾನದಲ್ಲಿ ನೆಲೆಗೊಳಿಸಿ ಕಾಯುವೆ, ಏಕೆಂದರೆ ಅವರಿಗೆ ನಿನ್ನಲ್ಲಿ ಭರವಸವಿದೆ.
[4] ನೀವು ಯೆಹೋವ ದೇವರಲ್ಲಿ ಸದಾ ಭರವಸವಿಡಿರಿ, ಏಕೆಂದರೆ ಯೆಹೋವ ದೇವರು, ಹೌದು ಯೆಹೋವ ದೇವರೇ, ನಿತ್ಯವಾದ ಬಂಡೆಯಾಗಿದ್ದಾರೆ.
[5] ಅವರು ಎತ್ತರದಲ್ಲಿ ವಾಸಿಸುವವರನ್ನು ಇಳಿಸಿದ್ದಾರೆ. ಉನ್ನತದಲ್ಲಿರುವ ಪಟ್ಟಣವನ್ನು ತಗ್ಗಿಸಿದ್ದಾರೆ. ಅದನ್ನು ಕೆಡವಿ ನೆಲಸಮಮಾಡಿ ಧೂಳಿಗೆ ತಂದಿದ್ದಾರೆ.
[6] ಕಾಲು, ಬಡವರ ಕಾಲುಗಳೂ, ದೀನರ ಪಾದಗಳೂ ಅದನ್ನು ತುಳಿಯುವುವು.
[7] ನೀತಿವಂತನ ಮಾರ್ಗವು ಸಮಾನವಾಗಿದೆ. ನೀನು ಅತ್ಯಧಿಕವಾದ ಯಥಾರ್ಥವಂತನು, ನೀತಿವಂತನ ದಾರಿಯನ್ನು ಸರಿಪಡಿಸಿ ಸಮಮಾಡುತ್ತಿ,
[8] ಹೌದು, ಯೆಹೋವ ದೇವರೇ, ನಿಮ್ಮ ನ್ಯಾಯತೀರ್ಪಿನ ಮಾರ್ಗದಲ್ಲಿ ನಡೆಯುತ್ತಾ ನಾವು ನಿಮಗೋಸ್ಕರ ಕಾದುಕೊಂಡಿದ್ದೇವೆ, ನಿಮ್ಮ ನಾಮಸ್ಮರಣೆಯೇ ನಮ್ಮ ಹೃದಯದ ಬಯಕೆ.
[9] ರಾತ್ರಿಯಲ್ಲಿ ನಿಮ್ಮನ್ನು ಮನಃಪೂರ್ವಕವಾಗಿ ಬಯಸಿದ್ದೇನೆ. ನನ್ನಲ್ಲಿರುವ ನನ್ನ ಆತ್ಮದೊಂದಿಗೆ ನಿಮ್ಮನ್ನು ಮುಂಜಾನೆಯಲ್ಲಿ ಹುಡುಕುತ್ತಿದ್ದೇನೆ. ಏಕೆಂದರೆ ಭೂಮಿಗೆ ನಿಮ್ಮ ನ್ಯಾಯತೀರ್ಪುಗಳು ನಡೆಯುವಾಗಲೇ ಭೂಲೋಕದ ನಿವಾಸಿಗಳು ನೀತಿಯನ್ನು ಕಲಿಯುತ್ತಾರೆ.
[10] ದುಷ್ಟನಿಗೆ ಕನಿಕರ ತೋರಿಸಿದಾಗ್ಯೂ ನೀತಿಯನ್ನು ಅವನು ಕಲಿಯಲಾರನು. ಯಥಾರ್ಥವಂತನ ದೇಶದಲ್ಲಿ ಅವನು ಅನ್ಯಾಯವನ್ನು ಆಚರಿಸುವನು ಮತ್ತು ಯೆಹೋವ ದೇವರ ಮಹತ್ವವನ್ನು ಲಕ್ಷಿಸುವುದಿಲ್ಲ.
[11] ಯೆಹೋವ ದೇವರೇ, ನಿಮ್ಮ ಕೈ ಮೇಲಕ್ಕೆ ಎತ್ತಲಾಗಿದೆ. ಆದರೆ ಅವರು ಅದನ್ನು ಕಾಣುವುದಿಲ್ಲ. ನಿಮ್ಮ ಜನರಿಗಾಗಿ ನಿಮ್ಮ ಉತ್ಸಾಹವನ್ನು ಅವರು ನೋಡಲಿ ಮತ್ತು ನಾಚಿಕೆಪಡಲಿ; ನಿನ್ನ ವಿರೋಧಿಗಳಿಗಾಗಿದ್ದ ಅಗ್ನಿಯು ಅದನ್ನು ದಹಿಸಿಬಿಡಲಿ.
[12] ಯೆಹೋವ ದೇವರೇ, ನಮಗೆ ಸಮಾಧಾನವನ್ನು ವಿಧಿಸುವಿರಿ. ಏಕೆಂದರೆ ನೀವು ನಮ್ಮ ಕ್ರಿಯೆಗಳನ್ನೆಲ್ಲಾ ನಮಗೋಸ್ಕರ ನಡೆಸಿದ್ದೀರಿ.
[13] ಯೆಹೋವ ದೇವರೇ, ನಮ್ಮ ದೇವರೇ, ನಿಮ್ಮ ಬದಲು ಬೇರೆ ಒಡೆಯರು ನಮ್ಮ ಮೇಲೆ ದೊರೆತನ ಮಾಡುತ್ತಿದ್ದರು. ಆದರೆ ನಿಮ್ಮ ನಾಮವನ್ನು ಮಾತ್ರವೇ ನಾವು ಗೌರವಿಸುವೆವು.
[14] ಈಗ ಅವರು ಸತ್ತಿದ್ದಾರೆ, ಅವರು ಬದುಕುವುದಿಲ್ಲ. ತೀರಿಹೋದ ಆ ಆತ್ಮಗಳು ಎದ್ದು ಬರುವುದಿಲ್ಲ. ನೀವು ಅವರನ್ನು ದಂಡಿಸಿ ಅಳಿಸಿಬಿಟ್ಟಿದ್ದೀರಿ. ಅವರ ನೆನಪೇ ಉಳಿಯದ ಹಾಗೆ ಮಾಡಿದ್ದೀರಿ.
[15] ಜನಾಂಗವನ್ನು ಹೆಚ್ಚಿಸಿದ್ದೀರಿ. ಯೆಹೋವ ದೇವರೇ, ಜನಾಂಗವನ್ನು ಹೆಚ್ಚಿಸಿದ್ದೀರಿ. ನೀವು ಮಹಿಮೆ ಹೊಂದಿದ್ದೀರಿ. ನೀವು ದೇಶದ ಮೇರೆಗಳನ್ನೆಲ್ಲಾ ಭೂಮಿಯ ಕಟ್ಟಕಡೆಯವರೆಗೂ ವಿಸ್ತರಿಸಿದ್ದೀರಿ.
[16] ಯೆಹೋವ ದೇವರೇ, ಇಕ್ಕಟ್ಟಿನಲ್ಲಿ ಅವರು ನಿಮ್ಮನ್ನು ಹುಡುಕಿದರು. ನಿಮ್ಮ ಶಿಕ್ಷೆ ಅವರ ಮೇಲಿರುವಾಗ, ಅವರು ಪ್ರಾರ್ಥನೆಯನ್ನು ಮಾಡಿದರು.
[17] ಗರ್ಭಿಣಿ ಸ್ತ್ರೀಯು ಹೆರುವುದಕ್ಕೆ ಸಮೀಪ ಬಂದಾಗ ನೋವಿನಲ್ಲಿದ್ದು ತನ್ನ ಬೇನೆಯಲ್ಲಿ ಅರಚುವಂತೆ, ಯೆಹೋವ ದೇವರೇ, ನಾವು ನಿಮ್ಮ ಸಮ್ಮುಖದಲ್ಲಿದ್ದೆವು.
[18] ನಾವು ಗರ್ಭಧರಿಸಿ, ವೇದನೆಪಟ್ಟು ಗಾಳಿಯನ್ನು ಹೆತ್ತಂತಾಯಿತು. ಭೂಮಿಗೆ ನಮ್ಮಿಂದ ಯಾವ ಬಿಡುಗಡೆಯೂ ಆಗಲಿಲ್ಲ. ಭೂಲೋಕದ ಜನರಿಗೆ ಜನ್ಮ ಕೊಡಲಿಲ್ಲ.
[19] ಆದರೆ ಮೃತರಾದ ನಿನ್ನ ಜನರು ಬದುಕುವರು. ಅವರ ದೇಹಗಳು ಏಳುವುವು. ಧೂಳಿನ ನಿವಾಸಿಗಳೇ, ಎಚ್ಚೆತ್ತು ಹರ್ಷಧ್ವನಿಗೈಯಿರಿ! ಯೆಹೋವ ದೇವರೇ, ನಿಮ್ಮ ಇಬ್ಬನಿ ಮುಂಜಾನೆಯ ಇಬ್ಬನಿಯಂತಿರುವುದು. ಭೂಮಿಯು ಸತ್ತವರನ್ನು ಹೊರಪಡಿಸುವುದು.
[20] ನನ್ನ ಜನರೇ, ಹೋಗಿರಿ. ನಿಮ್ಮ ಕೋಣೆಗಳಲ್ಲಿ ಸೇರಿ, ಬಾಗಿಲನ್ನು ಮುಚ್ಚಿಕೊಳ್ಳಿರಿ. ಸ್ವಲ್ಪ ಹೊತ್ತು ರೋಷವು ಹಾದುಹೋಗುವ ತನಕ ಅಡಗಿಕೊಂಡಿರಿ.
[21] ಭೂನಿವಾಸಿಗಳ ದುಷ್ಕೃತ್ಯಕ್ಕೆ ಶಿಕ್ಷಿಸುವುದಕ್ಕೆ ಯೆಹೋವ ದೇವರು ತಮ್ಮ ಸ್ಥಳದಿಂದ ಹೊರಟಿದ್ದಾರೆ. ಭೂಮಿಯು ಸಹ ತನ್ನಲ್ಲಿ ಕೊಂದುಹಾಕಿದವರನ್ನು ಇನ್ನು ಮುಚ್ಚಿಕೊಳ್ಳದೆ, ತನ್ನಲ್ಲಿರುವ ರಕ್ತಾಪರಾಧವನ್ನು ಪ್ರಕಟ ಮಾಡುವುದು.