Skip to content
Opens in a new window
Listen to this chapter • 2:57

[1] ಯೆಹೋವ ದೇವರೇ, ನೀವೇ ನನ್ನ ದೇವರು. ನೀವು ಸತ್ಯ ಪ್ರಾಮಾಣಿಕತೆಗಳನ್ನು ಆಲೋಚಿಸಿ, ಅನುಸರಿಸಿ ಆದಿಸಂಕಲ್ಪಗಳನ್ನು ನೆರವೇರಿಸುತ್ತಾ, ಅದ್ಭುತಕಾರ್ಯಗಳನ್ನು ನಡೆಸಿದ ಕಾರಣ ನಿಮ್ಮನ್ನು ಉನ್ನತಪಡಿಸಿ, ನಿಮ್ಮ ನಾಮವನ್ನು ಕೊಂಡಾಡುವೆನು.

[2] ಏಕೆಂದರೆ ನೀವು ದುರ್ಗವನ್ನು ನಾಶಪಡಿಸಿ, ಪಟ್ಟಣವನ್ನು ಹಾಳುದಿಬ್ಬವನ್ನಾಗಿಯೂ ವಿದೇಶಿಯರ ಕೋಟೆಯನ್ನು ಯಾರೂ ಎಂದಿಗೂ ಕಟ್ಟಬಾರದಂತೆ ಮಾಡಿದ್ದೀರಿ.

[3] ಬಲಿಷ್ಠವಾದ ಜನಾಂಗವು ನಿಮ್ಮನ್ನು ಘನಪಡಿಸುವರು, ಭಯಂಕರವಾದ ಜನರ ಪಟ್ಟಣವು ನಿಮಗೆ ಅಂಜುವುದು.

[4] ನೀವು ದೀನರಿಗೆ ಕೋಟೆಯೂ, ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣಾ ದುರ್ಗವೂ, ಭೀಕರರ ಶ್ವಾಸವು ಬಿಸಿಲಿಗೆ ನೆರಳೂ, ಗೋಡೆಗೆ ಬಡಿದು ಬಿಡುವ ಬಿರುಗಾಳಿಯಂತಿರುವಾಗ ಬಿರುಗಾಳಿಗೋಸ್ಕರ ಆಶ್ರಯವೂ ಆಗಿದ್ದೀರಿ.

[5] ಮೇಘವು ಒಣನೆಲದ ಕಾವನ್ನು ಆರಿಸುವ ಹಾಗೆ, ನೀವು ವಿದೇಶಿಯರ ಗದ್ದಲವನ್ನು ಅಡಗಿಸುವಿರಿ; ಮೋಡದ ನೆರಳಿನಿಂದ ಬಿಸಿಲು ತಡೆಯುವ ಹಾಗೆಯೇ, ನೀವು ಕ್ರೂರಿಗಳ ಉತ್ಸಾಹಗಾನವನ್ನು ನಿಲ್ಲಿಸಿಬಿಡುವಿರಿ.

[6] ಸೇನಾಧೀಶ್ವರ ಯೆಹೋವ ದೇವರು ಈ ಪರ್ವತದಲ್ಲಿ ಎಲ್ಲಾ ಜನಗಳಿಗೆ ಸಾರವತ್ತಾದ ಕೊಬ್ಬಿದ ಔತಣವನ್ನೂ, ಮಡ್ಡಿಗಟ್ಟಿದ ದ್ರಾಕ್ಷಾರಸದ ಔತಣವನ್ನೂ, ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸವನ್ನೂ ಸಿದ್ಧಮಾಡುವರು.

[7] ಸಮಸ್ತ ಜನಾಂಗಗಳನ್ನು ಮುಚ್ಚಿರುವ ಪರದೆಯನ್ನೂ, ಸಕಲ ದೇಶದವರ ಮೇಲೆ ಹರಡಿರುವ ತೆರೆಯನ್ನೂ ಇದೇ ಪರ್ವತದಲ್ಲಿ ತೆಗೆದುಹಾಕುವರು.

[8] ಅವರು ಮರಣವನ್ನು ಜಯದಲ್ಲಿ ನುಂಗಿಬಿಡುವರು. ಸಾರ್ವಭೌಮ ಯೆಹೋವ ದೇವರು ಎಲ್ಲಾ ಮುಖಗಳಲ್ಲಿರುವ ಕಣ್ಣೀರನ್ನೂ ಒರಸಿಬಿಡುವರು. ತಮ್ಮ ಜನರ ನಿಂದೆಯನ್ನೂ ಭೂಮಂಡಲದಿಂದಲೇ ತೆಗೆದುಹಾಕುವರು. ಯೆಹೋವ ದೇವರೇ ಇದನ್ನು ನುಡಿದಿದ್ದಾರೆ.

[9] ಆ ದಿನದಲ್ಲಿ ಜನರು, “ಇಗೋ, ಇವರೇ ನಮ್ಮ ದೇವರು, ನಾವು ಇವರನ್ನೇ ನಂಬಿದ್ದೇವೆ. ಇವರೇ ನಮ್ಮನ್ನು ರಕ್ಷಿಸುವರು. ಇವರೇ ಯೆಹೋವ ದೇವರು, ನಾವು ಇವರನ್ನೇ ನಂಬಿದ್ದೇವೆ, ನಾವು ಇವರ ರಕ್ಷಣೆಯಲ್ಲಿ ಹರ್ಷಿಸಿ ಸಂತೋಷಪಡುವೆವು,” ಎಂದು ಹೇಳುವರು.

[10] ಈ ಪರ್ವತದಲ್ಲಿ ಯೆಹೋವ ದೇವರ ಕೈ ವಿಶ್ರಮಿಸಿಕೊಳ್ಳುವುದು. ಒಣಹುಲ್ಲನ್ನು ತಿಪ್ಪೆಗುಂಡಿಯಲ್ಲಿ ತುಳಿಯುವಂತೆ ಮೋವಾಬು ತುಳಿತಕ್ಕೆ ಈಡಾಗುವುದು.

[11] ಈಜುವವನು ಈಜುವುದಕ್ಕೆ ಕೈಗಳನ್ನು ಹರಡಿಕೊಂಡ ಹಾಗೆ, ಅವರು ತಮ್ಮ ಕೈಗಳನ್ನು ಚಾಚುವರು. ಆದರೆ ದೇವರು ಅವರ ಗರ್ವವನ್ನೂ ಅವರ ಕೈ ಕೆಲಸವನ್ನೂ ತಗ್ಗಿಸಿಬಿಡುವರು.

[12] ದುರ್ಗದಂತೆ ಎತ್ತರವಾಗಿರುವ ನಿನ್ನ ಕೋಟೆಗಳನ್ನು ಕೆಡವಿ, ತಗ್ಗಿಸಿ, ನೆಲಸಮಮಾಡುವರು, ಅದು ಧೂಳುಪಾಲಾಗುವುದು.

ಯೆಶಾಯ — Chapters