[1] ಅರಣ್ಯವೂ, ಮರುಭೂಮಿಯೂ ಆನಂದಿಸುವುದು: ಒಣ ನೆಲವು ಹರ್ಷಿಸಿ, ತಾವರೆಯಂತೆ ಕಳಕಳಿಸುವುದು.
[2] ಅದು ಸಮೃದ್ಧಿಯಾಗಿ ಅರಳಿ, ಆನಂದ ಧ್ವನಿ ಎತ್ತಿ ಉಲ್ಲಾಸಿಸುವುದು. ಲೆಬನೋನಿನ ಘನತೆಯು ಮತ್ತು ಕರ್ಮೆಲ್, ಶಾರೋನಿನ ಗೌರವವು ಅದಕ್ಕೆ ಕೊಡಲಾಗುವುದು. ಅವರು ಯೆಹೋವ ದೇವರ ಮಹಿಮೆಯನ್ನು ಮತ್ತು ನಮ್ಮ ದೇವರ ಘನತೆಯನ್ನು ಕಾಣುವರು.
[3] ನೀವು ಬಲಹೀನವಾದ ಕೈಗಳನ್ನು ಬಲಪಡಿಸಿರಿ. ನಡುಗುವ ಮೊಣಕಾಲುಗಳನ್ನು ದೃಢಪಡಿಸಿರಿ.
[4] ಭಯಭ್ರಾಂತ ಹೃದಯವುಳ್ಳವರಿಗೆ ಬಲಗೊಳ್ಳಿರಿ, ಹೆದರಬೇಡಿರಿ. ಇಗೋ, ನಿಮ್ಮ ದೇವರು ಮುಯ್ಯಿ ತೀರಿಸುವುದಕ್ಕೂ, ದೇವರು ಪ್ರತಿಫಲವನ್ನು ಕೊಡುವುದಕ್ಕೂ ತಾವೇ ಬಂದು ನಿಮ್ಮನ್ನು ರಕ್ಷಿಸುವರು, ಎಂದು ಅವರಿಗೆ ಹೇಳಿರಿ.
[5] ಆಗ, ಕುರುಡರ ಕಣ್ಣು ಕಾಣುವುದು. ಕಿವುಡರ ಕಿವಿಗಳು ಕೇಳಿಸುವುವು.
[6] ಆಗ ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯೂ ಹರ್ಷದಿಂದ ಹಾಡುವುದು. ಏಕೆಂದರೆ ಮರುಭೂಮಿಯಲ್ಲಿ ನೀರೂ, ಮರುಭೂಮಿಯಲ್ಲಿ ಒರತೆಗಳೂ ಒಡೆಯುವುವು.
[7] ಒಣ ನೆಲವು ಸರೋವರವಾಗುವುದು, ಬೆಂಗಾಡು ಪ್ರದೇಶವು ನೀರಿನ ಬುಗ್ಗೆಯಾಗುವುದು. ನರಿಗಳು ವಾಸಿಸುವ ಪ್ರತಿಯೊಂದು ಮಲಗುವ ಸ್ಥಳದಲ್ಲಿ ಹುಲ್ಲು, ಜೊಂಡು, ಆಪು ಹುಲ್ಲುಗಳಿಂದ ತುಂಬಿರುವುದು.
[8] ಅಲ್ಲಿ ರಾಜಮಾರ್ಗ ಇರುವುದು. ಅದು ಪರಿಶುದ್ಧ ಮಾರ್ಗ ಎನಿಸಿಕೊಳ್ಳುವುದು. ಯಾವ ಅಶುದ್ಧನು ಅದರ ಮೇಲೆ ಹಾದು ಹೋಗನು. ಆದರೆ ಅದು ದೇವಜನರಿಗಾಗಿ ಇರುವುದು. ಅಲ್ಲಿ ಹೋಗುವ ಮೂಢನೂ ದಾರಿ ತಪ್ಪನು.
[9] ಸಿಂಹವು ಅಲ್ಲಿ ಇರದು, ಇಲ್ಲವೆ ಕ್ರೂರವಾದ ಮೃಗಗಳು ಅದರ ಮೇಲೆ ಹೋಗವು. ಅದು ಅಲ್ಲಿ ಕಾಣುವುದೇ ಇಲ್ಲ. ಆದರೆ ಬಿಡುಗಡೆಯಾದವರೇ ಅಲ್ಲಿ ನಡೆಯುವರು.
[10] ಯೆಹೋವ ದೇವರು ವಿಮೋಚಿಸಿದವರು ಹಿಂದಿರುಗಿಕೊಂಡು ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು, ಉತ್ಸಾಹ ಧ್ವನಿಯೊಡನೆ ಚೀಯೋನಿಗೆ ಸೇರುವರು. ಅವರು ಹರ್ಷಾನಂದಗಳನ್ನು ಅನುಭವಿಸುವರು. ದುಃಖವೂ, ನಿಟ್ಟುಸಿರೂ ಓಡಿಹೋಗುವುವು.