[1] ಆ ದಿನದಲ್ಲಿ ಯೆಹೋವ ದೇವರು, ತಮ್ಮ ಬಲವಾದ ಭೀಕರ ಖಡ್ಗದಿಂದ ವೇಗವಾಗಿ ಓಡುವ ಲೆವಿಯಾತಾನ ಸರ್ಪವನ್ನೂ, ಡೊಂಕಾಗಿ ಹರಿಯುವ ಲೆವಿಯಾತಾನ ಸರ್ಪವನ್ನೂ ದಂಡಿಸಿ, ಸಮುದ್ರದಲ್ಲಿರುವ ಘಟಸರ್ಪವನ್ನೂ ಕೊಂದುಹಾಕುವರು.
[2] ಆ ದಿನದಲ್ಲಿ, ಫಲಭರಿತ ದ್ರಾಕ್ಷಿತೋಟದ ವಿಷಯವಾಗಿ ಹಾಡಿರಿ.
[3] ಯೆಹೋವ ದೇವರಾದ ನಾನೇ ಅದನ್ನು ಕಾಯುತ್ತೇನೆ. ಸತತವಾಗಿ ಅದಕ್ಕೆ ನೀರು ಹೊಯ್ಯುತ್ತಿದ್ದೇನೆ. ಯಾರೂ ಅದಕ್ಕೆ ಕೇಡು ಮಾಡದ ಹಾಗೆ ರಾತ್ರಿ ಹಗಲು ಅದನ್ನು ಕಾಯುತ್ತೇನೆ.
[4] ರೌದ್ರವು ನನ್ನಲ್ಲಿ ಇಲ್ಲ. ಯಾವನಾದರೂ ಮುಳ್ಳು ದತ್ತೂರಿಗಳನ್ನು ನನಗೆ ವಿರೋಧವಾಗಿ ಯುದ್ಧಕ್ಕೆ ಇಟ್ಟರೆ, ನಾನು ಅವುಗಳನ್ನು ಹಾದು ಹೋಗಿ, ಅವುಗಳನ್ನು ಒಟ್ಟಿಗೆ ಸುಡುವೆನು.
[5] ಇಲ್ಲದಿದ್ದರೆ ಅವರು ನನ್ನ ಸಂಗಡ ಸಮಾಧಾನಮಾಡಿಕೊಳ್ಳುವ ಹಾಗೆ ನನ್ನನ್ನು ಆಶ್ರಯಿಸಲಿ, ನನ್ನೊಡನೆ ಸಮಾಧಾನ ಮಾಡಿಕೊಳ್ಳಲಿ.
[6] ಮುಂದಿನ ಕಾಲದಲ್ಲಿ ಯಾಕೋಬು ಬೇರೂರುವುದು. ಇಸ್ರಾಯೇಲು ಹೂ ಅರಳಿ ಚಿಗುರುವುದು. ಭೂಲೋಕವನ್ನೆಲ್ಲಾ ಫಲದಿಂದ ತುಂಬಿಸುವನು.
[7] ಆಕೆಯನ್ನು ಹೊಡೆದವರನ್ನು ಆತನು ಹೊಡೆದಂತೆ ಯೆಹೋವ ದೇವರು ಆಕೆಯನ್ನು ಹೊಡೆದರೋ? ಆಕೆಯನ್ನು ಕೊಂದವರು ಹತರಾದಂತೆ ಆಕೆಯು ಸಂಹಾರವಾದಳೋ?
[8] ಯುದ್ಧದಿಂದಲೂ ಸೆರೆಯಿಂದಲೂ ಆಕೆಯೊಂದಿಗೆ ತೃಪ್ತರಾಗಿರಿ. ಆತನು ತನ್ನ ಕೋಪದ ಪೆಟ್ಟಿನಿಂದ ಪೂರ್ವದ ಬಿರುಗಾಳಿ ಬೀಸುವಾಗ ಆಗುವಂತೆ, ಆಕೆಯನ್ನು ಹೊರಗೋಡಿಸುವನು.
[9] ಹೀಗಿರುವದರಿಂದ ಯಾಕೋಬನು ಬಲಿಪೀಠಗಳ ಕಲ್ಲುಗಳನ್ನೆಲ್ಲಾ ಸುಣ್ಣದಂತೆ ಪುಡಿಪುಡಿಮಾಡಿ, ಅಶೇರ ಸ್ತಂಭಗಳನ್ನೂ ಧೂಪವೇದಿಗಳನ್ನೂ ಇನ್ನು ಪ್ರತಿಷ್ಠಾಪಿಸದೆ ಹೋದರೆ ಅದೇ ಯಾಕೋಬನ ಅಪರಾಧಕ್ಕೆ ಪ್ರಾಯಶ್ಚಿತ್ತವಾಗುವುದು ಮತ್ತು ಅವನ ಪಾಪಪರಿಹಾರವನ್ನು ಸೂಚಿಸುವ ಪೂರ್ಣಫಲವು ಇದೇ ಆಗಿದೆ.
[10] ಕೋಟೆಯ ಪಟ್ಟಣವು ಹಾಳಾಗಿ ಕಾಡಿನಂತೆ ಜನರಿಲ್ಲದೆ ಶೂನ್ಯ ನಿವಾಸ ಸ್ಥಾನವಾಗುವುದು. ಅಲ್ಲಿ ದನಕರುಗಳು ಮೇದು ಮಲಗುವ ಗೋಮಾಳವಾಗಿದೆ. ಅವು ಅಲ್ಲಿನ ಚಿಗುರುಗಳನ್ನು ತಿಂದುಬಿಡುವುವು.
[11] ಅಲ್ಲಿನ ರೆಂಬೆಗಳು ಒಣಗಿ ಮುರಿದುಹೋಗಿವೆ. ಸ್ತ್ರೀಯರು ಬಂದು ಅವುಗಳಿಂದ ಬೆಂಕಿ ಹಚ್ಚಿ ಉರಿಸುವರು. ಏಕೆಂದರೆ ಇದು ವಿವೇಕವಿಲ್ಲದ ಜನ. ಆದ್ದರಿಂದ ಅವರನ್ನು ಮಾಡಿದವನು ಅವರಿಗೆ ಕನಿಕರ ತೋರಿಸುವುದಿಲ್ಲ. ಅವರ ಸೃಷ್ಟಿಕರ್ತನು ಅವರನ್ನು ಕರುಣಿಸುವುದಿಲ್ಲ.
[12] ಇಸ್ರಾಯೇಲರೇ, ಯೆಹೋವ ದೇವರು ಯೂಫ್ರೇಟೀಸ್ ನದಿ ಮೊದಲುಗೊಂಡು ಈಜಿಪ್ಟ್ ದೇಶದ ನದಿಯವರೆಗೆ ಹೊಡೆಯುವರು, ಆಗ ನಿಮ್ಮನ್ನು ಒಬ್ಬೊಬ್ಬರನ್ನಾಗಿ ಕೂಡಿಸುವರು.
[13] ಆ ದಿನದಲ್ಲಿ ದೊಡ್ಡ ತುತೂರಿಯು ಊದಲಾಗುವುದು. ಆಗ ಅಸ್ಸೀರಿಯ ದೇಶದಲ್ಲಿ ಚದರಿಹೋದವರೂ, ಈಜಿಪ್ಟ್ ದೇಶದಲ್ಲಿ ಗಡೀಪಾರಾದವರೂ, ಯೆರೂಸಲೇಮಿನ ಪರಿಶುದ್ಧ ಪರ್ವತದ ಬಳಿಗೆ ಬಂದು ಯೆಹೋವ ದೇವರನ್ನು ಆರಾಧಿಸುವರು.