Skip to content
Opens in a new window
Listen to this chapter • 3:09

[1] ಯೆಹೋವ ದೇವರು ಹೇಳುವುದೇನೆಂದರೆ: “ನ್ಯಾಯವನ್ನು ಕೈಗೊಳ್ಳಿರಿ, ನೀತಿಯಲ್ಲಿ ನಡೆಯಿರಿ. ಏಕೆಂದರೆ ನನ್ನ ರಕ್ಷಣೆಯು ಬರುವುದಕ್ಕೂ, ನನ್ನ ನೀತಿಯು ಪ್ರಕಟವಾಗುವುದಕ್ಕೂ ಸಮೀಪವಾಗಿದೆ.

[2] ಇದನ್ನು ಮಾಡುವ ಮನುಷ್ಯನೂ, ಇದನ್ನು ಹಿಡಿದುಕೊಳ್ಳುವವರ ಪುತ್ರನೂ ಎಂದರೆ ಸಬ್ಬತ್ ದಿನವನ್ನು ಅಪವಿತ್ರ ಮಾಡದೆ ಕೈಗೊಳ್ಳುವವನೂ ಮತ್ತು ಯಾವ ಕೇಡನ್ನು ಮಾಡದ ಹಾಗೆ ತನ್ನ ಕೈಯನ್ನು ಕಾಯುವನೋ ಅವನು ಧನ್ಯನು.”

[3] ಯೆಹೋವ ದೇವರನ್ನು ಸೇರಿಕೊಂಡ ವಿದೇಶೀಯನು, “ಯೆಹೋವ ದೇವರು ತಮ್ಮ ಜನರಿಂದ ನನ್ನನ್ನು ಖಂಡಿತವಾಗಿ ಬಹಿಷ್ಕರಿಸುವರು,” ಎಂದು ಹೇಳದಿರಲಿ. ಮತ್ತು ನಪುಂಸಕನು, “ನಾನು ಕೇವಲ ಒಣಗಿದ ಮರ,” ಎಂದು ಹೇಳದಿರಲಿ.

[4] ಯೆಹೋವ ದೇವರು ಹೇಳುವುದೇನೆಂದರೆ, “ನನ್ನ ಸಬ್ಬತ್ ದಿನವನ್ನು ಕೈಗೊಂಡು, ನನಗೆ ಮೆಚ್ಚಿಗೆಯಾದದ್ದನ್ನು ಆಯ್ದುಕೊಂಡು, ನನ್ನ ಒಡಂಬಡಿಕೆಯನ್ನು ಹಿಡಿದುಕೊಂಡಿರುವ ನಪುಂಸಕರಿಗೆ,

[5] ನನ್ನ ಆಲಯದಲ್ಲಿಯೂ ಗೋಡೆಗಳ ಬಳಿಗೂ ಪುತ್ರ ಪುತ್ರಿಯರಿಗಿಂತ ಉತ್ತಮವಾದ ಸ್ಥಳವನ್ನೂ, ಹೆಸರನ್ನೂ ನಾನು ಕೊಡುತ್ತೇನೆ. ನಾನು ಅವರಿಗೆ ಎಂದಿಗೂ ಅಳಿಯದ ಶಾಶ್ವತವಾದ ಹೆಸರನ್ನು ಕೊಡುವೆನು.

[6] ಯೆಹೋವ ದೇವರಾದ ನನ್ನನ್ನು ಸೇವಿಸುವುದಕ್ಕೂ, ನನ್ನ ಹೆಸರನ್ನು ಪ್ರೀತಿಸಿ, ನನಗೆ ಸೇವಕರಾಗಿರಲು ತಾವಾಗಿ ಯೆಹೋವ ದೇವರೊಂದಿಗೆ ಸೇರಿಕೊಂಡಿರುವ ವಿದೇಶಿಯರು ಸಬ್ಬತ್ ದಿನವನ್ನು ಅಪವಿತ್ರ ಮಾಡದೆ, ಅದನ್ನು ಕೈಗೊಂಡು, ನನ್ನ ಒಡಂಬಡಿಕೆಯನ್ನು ಭದ್ರವಾಗಿ ಪಾಲಿಸುವವರನ್ನು

[7] ನನ್ನ ಪರಿಶುದ್ಧ ಪರ್ವತಕ್ಕೆ ತರುವೆನು; ನನ್ನ ಪ್ರಾರ್ಥನೆಯ ಆಲಯದಲ್ಲಿ ಅವರಿಗೆ ಆನಂದವನ್ನು ಉಂಟುಮಾಡುವೆನು. ನನ್ನ ಬಲಿಪೀಠದ ಮೇಲೆ ಅವರು ಅರ್ಪಿಸುವ ದಹನಬಲಿಗಳು, ಯಜ್ಞಗಳು ನನಗೆ ಒಪ್ಪಿಗೆಯಾಗುವುವು, ಏಕೆಂದರೆ ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವು ಎಂದು ಎನಿಸಿಕೊಳ್ಳುವುದು.”

[8] ಇಸ್ರಾಯೇಲಿನ ಸೆರೆಹೋದ ಜನರನ್ನು ಕೂಡಿಸುವಂಥ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: “ನಾನು ಕೂಡಿಸಿದ ಇಸ್ರಾಯೇಲರೊಂದಿಗೆ ಇನ್ನು ಹಲವರನ್ನು ಕೂಡಿಸುವೆನು.”

[9] ಅರಣ್ಯದ ಸಕಲ ಮೃಗಗಳೇ, ಕಾಡಿನ ಎಲ್ಲಾ ಮೃಗಗಳೇ, ನುಂಗಿಬಿಡುವುದಕ್ಕೆ ಬನ್ನಿರಿ.

[10] ಇಸ್ರಾಯೇಲಿನ ಕಾವಲುಗಾರರು ಕುರುಡರು. ಅವರೆಲ್ಲರೂ ಅರಿವಿಲ್ಲದವರು. ಅವರೆಲ್ಲರೂ ಮೂಕ ನಾಯಿಗಳು, ಅವು ಬೊಗಳಲಾರವು, ಕನಸು ಕಾಣುತ್ತವೆ, ಬಿದ್ದುಕೊಂಡಿರುತ್ತವೆ. ನಿದ್ರೆಯನ್ನು ಪ್ರೀತಿಸುತ್ತವೆ.

[11] ಹೌದು, ಎಂದಿಗೂ ಸಾಕೆನ್ನದ ಹೊಟ್ಟೆಬಾಕ ನಾಯಿಗಳು ಮತ್ತು ಅವರು ಗ್ರಹಿಕೆ ಇಲ್ಲದ ಕುರುಬರು, ಅವರೆಲ್ಲರೂ ತಮ್ಮ ತಮ್ಮ ಸ್ವಂತ ಮಾರ್ಗಕ್ಕೂ, ಪ್ರತಿಯೊಬ್ಬನೂ ತನ್ನ ಲಾಭ ಸಿಕ್ಕುವ ಕಡೆಗೂ ತಿರುಗಿಕೊಳ್ಳುವನು.

[12] “ಬನ್ನಿರಿ, ನಾನು ದ್ರಾಕ್ಷಾರಸವನ್ನು ತರುವೆನು. ನಮ್ಮನ್ನು ನಾವೇ ಬೇಕಾದಷ್ಟು ಮದ್ಯದಿಂದ ತುಂಬಿಕೊಳ್ಳುವ! ನಾಳೆಯು ಈ ದಿವಸದಂತೆಯೇ ಇರುವುದು. ಅಥವಾ ಇದಕ್ಕಿಂತಲೂ ಚೆನ್ನಾಗಿರುವುದು,” ಎಂದು ಪ್ರತಿಯೊಬ್ಬನೂ ಹೇಳುತ್ತಾನೆ.

ಯೆಶಾಯ — Chapters