Skip to content
Opens in a new window
Listen to this chapter • 4:27

[1] ಆಮೋಚನ ಮಗ ಯೆಶಾಯನಿಗೆ ಬಾಬಿಲೋನಿನ ವಿಷಯವಾಗಿ ಬಂದ ಪ್ರವಾದನೆ:

[2] ಶತ್ರುಗಳು ಬಂದು ಶ್ರೇಷ್ಠರ ದ್ವಾರಗಳೊಳಗೆ ಹೋಗುವಂತೆ ಎತ್ತರವಾದ ಪರ್ವತದ ಮೇಲೆ ನೀವು ಧ್ವಜವನ್ನೆತ್ತಿ ಅವರಿಗೆ ನಿಮ್ಮ ಶಬ್ದವನ್ನು ಕೇಳಿಸುವಂತೆ ಜೋರಾಗಿ ಕೂಗಿ ಕರೆಯಿರಿ.

[3] ನಾನು ನನ್ನ ಪರಿಶುದ್ಧರಿಗೆ ಆಜ್ಞಾಪಿಸಿ, ನನ್ನ ಜಯದಲ್ಲಿ ಉಲ್ಲಾಸಿಸುವವರನ್ನೂ, ನನ್ನ ಶೂರರನ್ನೂ ಸಹ ನನ್ನ ಕೋಪವನ್ನು ತೆಗೆದುಕೊಂಡು ಹೋಗಲು ಕರೆದಿದ್ದೇನೆ.

[4] ಬಹು ಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ. ಒಟ್ಟಿಗೆ ಕೂಡಿಕೊಂಡ ರಾಜ್ಯಗಳ ಜನಾಂಗಗಳ ಆರ್ಭಟ, ಸೇನಾಧೀಶ್ವರ ಯೆಹೋವ ದೇವರು ಯುದ್ಧಕ್ಕೆ ಸೈನ್ಯವನ್ನು ಸಿದ್ಧಮಾಡುತ್ತಾರೆ.

[5] ಯೆಹೋವ ದೇವರು ಮತ್ತು ಅವರ ರೋಷಕ್ಕೆ ಆಯುಧಗಳಾದವರು ದೂರದೇಶದಿಂದ ಎಂದರೆ, ಆಕಾಶಮಂಡಲದ ಕಟ್ಟಕಡೆಯಿಂದ ದೇಶವನ್ನೆಲ್ಲಾ ಹಾಳುಮಾಡುವುದಕ್ಕಾಗಿ ಬರುತ್ತಾರೆ.

[6] ನೀವು ಗೋಳಾಡಿರಿ. ಏಕೆಂದರೆ, ಯೆಹೋವ ದೇವರ ದಿನವು ಸಮೀಪವಾಯಿತು. ಅದು ಸರ್ವಶಕ್ತರಿಂದ ನಾಶರೂಪವಾಗಿ ಬರುವುದು.

[7] ಆದಕಾರಣ ಎಲ್ಲಾ ಕೈಗಳು ಜೋಲು ಬೀಳುವುವು ಮತ್ತು ಪ್ರತಿಯೊಬ್ಬನ ಹೃದಯವು ಕರಗುವುದು.

[8] ಅವರು ಭಯಪಡುವರು. ನೋವು ಮತ್ತು ಬೇನೆಗಳು ಅವರನ್ನು ಆವರಿಸಿಕೊಳ್ಳುವುವು. ಪ್ರಸವವೇದನೆಯಲ್ಲಿರುವ ಸ್ತ್ರೀಯರಂತೆ ಸಂಕಟಪಡುವರು. ಅವರು ಒಬ್ಬರಿಗೊಬ್ಬರು ಭ್ರಮೆ ಪಡುವರು. ಅವರ ಮುಖಗಳು ಜ್ವಾಲೆಯಂತಿರುವುವು.

[9] ಇಗೋ, ಯೆಹೋವ ದೇವರ ದಿನವು ಬರುತ್ತದೆ. ಅದು ಭೂಮಿಯನ್ನು ಹಾಳು ಮಾಡುವುದಕ್ಕೂ, ಅಲ್ಲಿಂದ ಪಾಪಿಗಳನ್ನು ನಿರ್ಮೂಲ ಮಾಡುವುದಕ್ಕೂ, ಕಡುಕೋಪದಿಂದಲೂ, ತೀಕ್ಷ್ಣರೋಷದಿಂದಲೂ ಕ್ರೂರವಾಗಿರುವುದು.

[10] ಏಕೆಂದರೆ, ಆಕಾಶದ ನಕ್ಷತ್ರಗಳು ಮತ್ತು ಅದರ ರಾಶಿಗಳು ತಮ್ಮ ಬೆಳಕನ್ನು ಕೊಡುವುದಿಲ್ಲ. ಸೂರ್ಯನು ಮೂಡುತ್ತಲೇ ಕತ್ತಲಾಗುವನು. ಚಂದ್ರನು ತನ್ನ ಬೆಳಕನ್ನು ಕೊಡುವುದಿಲ್ಲ.

[11] ಅವರ ಕೆಟ್ಟ ಕಾರ್ಯಗಳಿಗೋಸ್ಕರವೂ, ದುಷ್ಟರ ಅಪರಾಧಗಳಿಗೋಸ್ಕರವೂ ನಾನು ಲೋಕವನ್ನು ಶಿಕ್ಷಿಸುವೆನು, ಗರ್ವಿಷ್ಠರ ಅಹಂಕಾರವನ್ನು ನಿಲ್ಲಿಸಿಬಿಡುವೆನು. ಭಯಂಕರವಾದವರ ಹೆಮ್ಮೆಯನ್ನು ತಗ್ಗಿಸುವೆನು.

[12] ಮನುಷ್ಯರನ್ನು ಚೊಕ್ಕ ಬಂಗಾರಕ್ಕಿಂತಲೂ, ಓಫೀರ್ ಬಂಗಾರಕ್ಕಿಂತಲೂ ಜನರು ವಿರಳವಾಗಿರುವಂತೆ ಮಾಡುವೆನು.

[13] ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರ ಕೋಪವೂ, ಅವರ ತೀಕ್ಷ್ಣರೋಷವೂ ಪ್ರಕಟವಾಗುವ ಆ ದಿನದಂದು, ಆಕಾಶಮಂಡಲ ನಡುಗುವುದು. ಭೂಮಂಡಲ ಅದರ ಸ್ಥಳದಿಂದ ಕದಲುವುದು.

[14] ಅದು ಅಟ್ಟಿದ ಜಿಂಕೆಯಂತೆಯೂ, ಕುರುಬರಿಲ್ಲದ ಕುರಿಗಳಂತೆಯೂ ಇರುವುದು. ಅವರಲ್ಲಿ ಪ್ರತಿಯೊಬ್ಬನೂ ತನ್ನ ಜನರ ಕಡೆಗೆ ತಿರುಗಿಕೊಳ್ಳುವನು; ಪ್ರತಿಯೊಬ್ಬನು ತನ್ನ ಸ್ವದೇಶಕ್ಕೆ ಓಡಿಹೋಗುವನು.

[15] ಸಿಕ್ಕಿದ ಪ್ರತಿಯೊಬ್ಬನೂ ಇರಿತಕ್ಕೆ ಗುರಿಯಾಗುವನು. ಅಟ್ಟಿಹಿಡಿಯಲಾದ ಪ್ರತಿಯೊಬ್ಬನೂ ಖಡ್ಗಕ್ಕೆ ತುತ್ತಾಗುವನು.

[16] ಅವರ ಮಕ್ಕಳೂ ಸಹ ಅವರ ಕಣ್ಣೆದುರಿಗೆ ಹತರಾಗುವರು. ಅವರ ಮನೆಗಳು ಸೂರೆಮಾಡಲಾಗುವುದು. ಅವರ ಹೆಂಡತಿಯರು ಅತ್ಯಾಚಾರಕ್ಕೆ ಈಡಾಗುವರು.

[17] ಇಗೋ, ಬೆಳ್ಳಿಯನ್ನು ಲಕ್ಷಿಸದೆ, ಬಂಗಾರದಲ್ಲಿ ಆನಂದಿಸದೆ ಇರುವ ಮೇದ್ಯರನ್ನು ಅವರಿಗೆ ವಿರೋಧವಾಗಿ ನಾನು ಎಬ್ಬಿಸುವೆನು.

[18] ಅವರ ಬಿಲ್ಲುಗಳು ಸಹ ಯುವಕರನ್ನು ಸಂಹರಿಸುವುವು. ಇವರು ಹಸುಳೆಗಳನ್ನು ಕರುಣಿಸರು. ಇವರು ಮಕ್ಕಳನ್ನು ಕನಿಕರಿಸುವುದಿಲ್ಲ.

[19] ರಾಜ್ಯಗಳ ಘನತೆಯೂ, ಕಸ್ದೀಯರ ಶ್ರೇಷ್ಠವಾದ ಸೌಂದರ್ಯವೂ ಆದ ಬಾಬಿಲೋನನ್ನು ದೇವರು ಸೊದೋಮ್ ಗೊಮೋರಗಳನ್ನು ಕೆಡವಿಬಿಟ್ಟಂತೆ ಕೆಡವಿಬಿಡುವನು.

[20] ಅದು ಎಂದಿಗೂ ನಿವಾಸ ಸ್ಥಳವಾಗದು. ತಲತಲಾಂತರಕ್ಕೂ ಅಲ್ಲಿ ಯಾರೂ ವಾಸಿಸರು; ಯಾವ ಅರಬಿಯನೂ ಗುಡಾರಹಾಕನು. ಕುರುಬರು ಅಲ್ಲಿ ಮಂದೆಗಳನ್ನು ತಂಗಿಸರು.

[21] ಆದರೆ ಕಾಡುಮೃಗಗಳು ಅಲ್ಲಿ ಮಲಗುವುವು. ಅವರ ಮನೆಗಳು ನರಿಗಳಿಂದ ತುಂಬಿರುವುವು, ಅಲ್ಲಿ ಗೂಬೆಗಳು ವಾಸಿಸುವುವು ಮತ್ತು ಕಾಡುಮೇಕೆಗಳು ಅಲ್ಲಿ ಕುಣಿದಾಡುವುವು.

[22] ಅವರ ಕೋಣೆಗಳಲ್ಲಿ ತೋಳಗಳು ಕೂಗುವುವು, ಅವರ ಮೆಚ್ಚಿಕೆಯಾದ ಅರಮನೆಗಳಲ್ಲಿ ನರಿಗಳು ವಾಸಿಸುವುವು. ಬಾಬಿಲೋನಿಗೆ ಕಾಲವು ಸಮೀಪಿಸಿತು. ಇನ್ನು ಅದರ ದಿನಗಳು ಮುಂದುವರಿಯುವುದಿಲ್ಲ.

ಯೆಶಾಯ — Chapters