Skip to content
Opens in a new window
Listen to this chapter • 3:26

[1] ಸಾರ್ವಭೌಮ ಯೆಹೋವ ದೇವರ ಆತ್ಮರು ನನ್ನ ಮೇಲೆ ಇದ್ದಾರೆ. ಏಕೆಂದರೆ ಯೆಹೋವ ದೇವರು ನನ್ನನ್ನು ಬಡವರಿಗೆ ಶುಭಸಂದೇಶವನ್ನು ಸಾರುವುದಕ್ಕೆ ಅಭಿಷೇಕಿಸಿದ್ದಾರೆ. ಮುರಿದ ಹೃದಯಗಳನ್ನು ಕಟ್ಟುವುದಕ್ಕೂ, ಬಂಧಿತರಿಗೆ ಸ್ವಾತಂತ್ರ್ಯವನ್ನು ಘೋಷಿಸಲು ಮತ್ತು ಕೈದಿಗಳಿಗೆ ಕತ್ತಲೆಯಿಂದ ಬಿಡುಗಡೆ ಮಾಡಲು

[2] ಯೆಹೋವ ದೇವರ ಮೆಚ್ಚುಗೆಯ ವರ್ಷವನ್ನು ಸಾರಿ ಹೇಳುವುದಕ್ಕೂ, ನಮ್ಮ ದೇವರು ಮುಯ್ಯಿಗೆ ಮುಯ್ಯಿ ಕೊಡುವ ದಿವಸವನ್ನು ಪ್ರಸಿದ್ಧ ಮಾಡುವುದಕ್ಕೂ, ದುಃಖವುಳ್ಳವರೆಲ್ಲರನ್ನು ಆದರಿಸುವುದಕ್ಕೂ,

[3] ಚೀಯೋನಿನಲ್ಲಿ ದುಃಖಿಸುವವರಿಗೆ ಬೂದಿಗೆ ಬದಲಾಗಿ ಸೌಂದರ್ಯದ ಕಿರೀಟವನ್ನೂ, ದುಃಖಕ್ಕೆ ಬದಲಾಗಿ ಆನಂದ ತೈಲವನ್ನೂ, ಕುಂದಿದ ಆತ್ಮಕ್ಕೆ ಬದಲಾಗಿ ಸ್ತೋತ್ರ ಎಂಬ ಮೇಲಂಗಿಯನ್ನು ಕೊಡುವುದಕ್ಕೂ ನನ್ನನ್ನು ನೇಮಿಸಿದ್ದಾರೆ. ಆಗ ಅವರಿಗೆ ನೀತಿವೃಕ್ಷಗಳೆಂದೂ, ಯೆಹೋವ ದೇವರು ತಾನು ಮಹಿಮೆ ಹೊಂದುವುದಕ್ಕೋಸ್ಕರ ನೆಟ್ಟ ಗಿಡಗಳೆಂದೂ ಹೆಸರಾಗುವುದು.

[4] ಆಗ ಅವರು ಪೂರ್ವಕಾಲದ ಹಾಳು ಸ್ಥಳಗಳನ್ನು ಕಟ್ಟಿ, ಮುಂಚೆ ಹಾಳುಬಿದ್ದವುಗಳನ್ನು ಎಬ್ಬಿಸುವರು. ಅನೇಕ ತಲಾಂತರಗಳಿಂದ ಹಾಳಾದ ಪಟ್ಟಣಗಳನ್ನೂ, ನೂತನ ಪಡಿಸುವರು.

[5] ಪರನಾಡಿನವರು ನಿಂತು ನಿಮ್ಮ ಮಂದೆಗಳನ್ನು ಮೇಯಿಸುವರು. ಇತರರು ನಿಮಗೆ ನೇಗಿಲು ಹೂಡುವವರೂ, ದ್ರಾಕ್ಷಿತೋಟ ಕಾಯುವವರೂ ಆಗಿರುವರು.

[6] ಆದರೆ ನೀವು ಯೆಹೋವ ದೇವರ ಯಾಜಕರೆಂಬ ಬಿರುದನ್ನು ಹೊಂದುವಿರಿ. ನಮ್ಮ ದೇವರ ಸೇವಕರೆಂದು ನಿಮಗೆ ಹೆಸರಾಗುವುದು, ಜನಾಂಗಗಳ ಆಸ್ತಿಯನ್ನು ಅನುಭವಿಸುವಿರಿ. ಅವರ ವೈಭವವನ್ನು ಪಡೆದು ಹೊಗಳಿಕೊಳ್ಳುವಿರಿ.

[7] ನಿಮ್ಮ ನಾಚಿಕೆಗೆ ಬದಲಾಗಿ ಮಾನವು ಎರಡರಷ್ಟಾಗುವುದು. ಅವಮಾನಕ್ಕೆ ಬದಲಾಗಿ ತಮ್ಮ ಪಾಲಿನಲ್ಲಿ ಹರ್ಷಿಸುವರು. ಆದ್ದರಿಂದ ತಮ್ಮ ದೇಶದಲ್ಲಿ ಎರಡರಷ್ಟು ಸ್ವಾಧೀನಮಾಡಿಕೊಳ್ಳುವರು. ನಿತ್ಯವಾದ ಸಂತೋಷವು ನಿಮಗೆ ಆಗುವುದು.

[8] ಏಕೆಂದರೆ ಯೆಹೋವನಾದ ನಾನು ನ್ಯಾಯವನ್ನು ಪ್ರೀತಿಮಾಡುತ್ತೇನೆ. ಸುಲಿಗೆಯನ್ನೂ ಅನ್ಯಾಯವನ್ನೂ ಹಗೆಮಾಡುತ್ತೇನೆ. ನನ್ನ ನಿಷ್ಠೆಯಲ್ಲಿ ನಾನು ನನ್ನ ಜನರಿಗೆ ಪ್ರತಿಫಲ ನೀಡುತ್ತೇನೆ ಮತ್ತು ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ.

[9] ಆಗ ಅವರ ಸಂತಾನವು ಇತರ ಜನಾಂಗಗಳಲ್ಲಿ ಪ್ರಸಿದ್ಧವಾಗುವುದು. ಅವರಿಂದಾದ ಉತ್ಪತ್ತಿ ಜನರ ಮಧ್ಯದಲ್ಲಿ ತಿಳಿಸಲಾಗುವುದು. ಅವರನ್ನು ನೋಡುವವರೆಲ್ಲರೂ, ಅವರೇ ಯೆಹೋವ ದೇವರು ಆಶೀರ್ವದಿಸಿದ ಸಂತಾನ ಎಂದು ಒಪ್ಪಿಕೊಳ್ಳುವರು.

[10] ನಾನು ಯೆಹೋವ ದೇವರಲ್ಲಿ ಬಹಳವಾಗಿ ಸಂತೋಷಿಸುವೆನು. ನನ್ನ ಪ್ರಾಣವು ನನ್ನ ದೇವರಲ್ಲಿ ಉಲ್ಲಾಸಪಡುವುದು. ವರನು ಸೌಂದರ್ಯವಾಗಿ ತನ್ನನ್ನು ಶೃಂಗರಿಸುವ ಹಾಗೆಯೂ, ವಧುವು ಆಭರಣಗಳಿಂದ ತನ್ನನ್ನು ಅಲಂಕರಿಸುವ ಹಾಗೆಯೂ, ಅವನು ರಕ್ಷಣೆಯ ವಸ್ತ್ರಗಳನ್ನು ನನಗೆ ತೊಡಿಸಿದ್ದಾನೆ. ನೀತಿಯ ನಿಲುವಂಗಿಯನ್ನು ನನಗೆ ಧರಿಸುವಂತೆ ಮಾಡಿದ್ದಾನೆ.

[11] ಏಕೆಂದರೆ ಭೂಮಿಯು ತನ್ನ ಮೊಳಕೆಯನ್ನು ಹೇಗೆ ಹೊರಡಿಸುವುದೋ, ತೋಟವು ತನ್ನಲ್ಲಿ ಬಿತ್ತಿದ್ದನ್ನು ಹೇಗೆ ಮೊಳೆಯಿಸುವುದೋ, ಹಾಗೆಯೇ ಸಾರ್ವಭೌಮ ಯೆಹೋವ ದೇವರು ನೀತಿಯನ್ನೂ, ಸ್ತೋತ್ರವನ್ನೂ ಎಲ್ಲಾ ಜನಾಂಗಗಳ ಮುಂದೆ ಮೊಳೆಯಿಸುವರು.

ಯೆಶಾಯ — Chapters