Skip to content
Opens in a new window
Listen to this chapter • 5:10

[1] “ಇಸ್ರಾಯೇಲ್ ಎಂಬ ಹೆಸರಿನವರೂ, ಯೆಹೂದವೆಂಬ ಒರತೆಯಿಂದ ಬಂದವರೂ ಆದ ಯಾಕೋಬನ ಮನೆತನದವರೇ, ಇದನ್ನು ಕೇಳಿರಿ: ಯೆಹೋವ ದೇವರ ಹೆಸರಿನ ಮೇಲೆ ಆಣೆ ಇಟ್ಟು, ಇಸ್ರಾಯೇಲಿನ ದೇವರನ್ನು ಸ್ಮರಿಸುತ್ತೀರಿ. ಆದರೆ ಸತ್ಯದಿಂದಲೂ ಅಥವಾ ನೀತಿಯಿಂದಲೂ ಅಲ್ಲ.

[2] ಏಕೆಂದರೆ ಅವರು ತಾವು ಪರಿಶುದ್ಧ ಪಟ್ಟಣದವರು ಎಂದು ಇಸ್ರಾಯೇಲಿನ ದೇವರ ಮೇಲೆ ಆತುಕೊಳ್ಳುತ್ತಾರೆ. ಸೇನಾಧೀಶ್ವರ ಯೆಹೋವ ದೇವರು ಎಂಬುದು ಆತನ ಹೆಸರು.

[3] ಪೂರ್ವಕಾಲದಲ್ಲೇ ಹಳೆಯ ಸಂಗತಿಗಳನ್ನು ನಾನು ಪ್ರಕಟಿಸಿದ್ದೇನೆ. ಅವು ನನ್ನ ಬಾಯಿಂದ ಹೊರಟವು ಮತ್ತು ನಾನು ಅವುಗಳನ್ನು ತಿಳಿಸಿದ್ದೇನೆ. ನಾನು ತಟ್ಟನೆ ನಡೆಸಲು, ಅವು ನೆರವೇರಿದವು.

[4] ಏಕೆಂದರೆ ನೀನು ಹಟಗಾರ. ನಿನ್ನ ಕತ್ತಿನ ನರಗಳು ಕಬ್ಬಿಣ, ನಿನ್ನ ಹಣೆ ಕಂಚಿನದು ಎಂದು ನಾನು ತಿಳಿದುಕೊಂಡಿದ್ದೇನೆ.

[5] ‘ಈ ಕಾರ್ಯಗಳನ್ನು ನನ್ನ ವಿಗ್ರಹಗಳು ನಡಿಸಿದೆ. ನನ್ನ ಕೆತ್ತಿದ ವಿಗ್ರಹ ಮತ್ತು ಎರಕದ ವಿಗ್ರಹ ಇವುಗಳನ್ನು ವಿಧಿಸಿದೆ,’ ಎಂದು ನೀನು ಹೇಳಿಕೊಳ್ಳದಂತೆ ನಾನು ಪುರಾತನ ಕಾಲದಲ್ಲಿಯೇ ಇವು ಸಂಭವಿಸುವುದಕ್ಕಿಂತ ಮೊದಲೇ ತಿಳಿಸಿದೆನು.

[6] ನೀನು ಕೇಳಿದ್ದೀ, ಇವೆಲ್ಲವುಗಳನ್ನು ದೃಷ್ಟಿಸು. ನೀವು ಅದನ್ನು ಒಪ್ಪಿಕೊಳ್ಳದೆ ಇದ್ದೀರೋ? “ಇಂದಿನಿಂದ ಹೊಸ ಸಂಗತಿಗಳನ್ನೂ, ನೀನು ತಿಳಿಯದಿದ್ದ ಗುಪ್ತವಾದ ವಿಷಯಗಳನ್ನೂ ನಿನಗೆ ಹೇಳುತ್ತೇನೆ.

[7] ಈಗಲೇ ಉಂಟಾಗುತ್ತಿವೆ, ಪುರಾತನ ಕಾಲದಲ್ಲಿ ಆಗಿಲ್ಲ; ‘ಇದೆಲ್ಲ ನನಗೆ ಮೊದಲೇ ತಿಳಿದಿತ್ತು,’ ಎಂದು ನೀನು ಕೊಚ್ಚಿಕೊಳ್ಳದಂತೆ, ನಾನು ಇವುಗಳನ್ನು ನಿನಗೆ ಮುಂತಿಳಿಸಲಿಲ್ಲ.

[8] ನೀನು ಕೇಳಿಲ್ಲ, ತಿಳಿದೂ ಇಲ್ಲ. ಪುರಾತನ ಕಾಲದಿಂದ ನಿನ್ನ ಕಿವಿಯು ತೆರೆದೇ ಇಲ್ಲ. ಏಕೆಂದರೆ ನೀನು ದೊಡ್ಡ ವಂಚಕನೆಂದೂ, ಗರ್ಭದಿಂದಲೇ ನೀನು ದ್ರೋಹಿ ಎಂದೂ ನಾನು ತಿಳಿದುಕೊಂಡಿದ್ದೇನೆ.

[9] ನಾನು ನನ್ನ ಹೆಸರಿನ ನಿಮಿತ್ತ ನನ್ನ ಕೋಪವನ್ನು ತಡೆ ಮಾಡಿದೆನು. ನಾನು ನನ್ನ ಹೆಸರಿಗೆ ಕಳಂಕ ಬಾರದಂತೆ, ನಿನ್ನನ್ನು ನಿರ್ಮೂಲಮಾಡದೆ ತಾಳಿಕೊಳ್ಳುವೆನು.

[10] ನಾನು ನಿನ್ನನ್ನು ಪರಿಶೋಧಿಸಿದ್ದೇನೆ. ಆದರೆ ಬೆಳ್ಳಿಯಂತೆ ಅಲ್ಲ, ಸಂಕಟದ ಕುಲುಮೆಯಿಂದ ನಿನ್ನನ್ನು ಆಯ್ದುಕೊಂಡಿದ್ದೇನೆ.

[11] ನನಗಾಗಿಯೇ, ನನಗೋಸ್ಕರವೇ ಇದನ್ನು ಮಾಡುವೆನು. ಏಕೆಂದರೆ ನನ್ನ ಹೆಸರು ಹೇಗೆ ಅಪವಿತ್ರವಾಗುವುದು? ನನ್ನ ಮಹಿಮೆಯನ್ನು ನಾನು ಮತ್ತೊಬ್ಬನಿಗೆ ಸಲ್ಲಗೊಡಿಸೆನು.

[12] “ಯಾಕೋಬೇ, ನಾನು ಕರೆದ ಇಸ್ರಾಯೇಲೇ, ನನ್ನ ಕಡೆಗೆ ಕಿವಿಗೊಡು. ಆತನು ನಾನೇ, ನಾನೇ ಮೊದಲನೆಯವನು, ನಾನೇ ಕಡೆಯವನು.

[13] ನನ್ನ ಕೈ ಭೂಮಿಗೆ ಅಸ್ತಿವಾರವನ್ನು ಹಾಕಿತು, ನನ್ನ ಬಲಗೈ ಆಕಾಶವನ್ನು ಹರಡಿತು, ನಾನು ಅವುಗಳನ್ನು ಕರೆಯಲು, ಅವು ಒಟ್ಟಾಗಿ ನಿಂತುಕೊಂಡವು.

[14] “ನೀವೆಲ್ಲರೂ ಕೂಡಿಕೊಂಡು ಕೇಳಿರಿ. ಅವುಗಳ ಮಧ್ಯದಲ್ಲಿ ಈ ಸಂಗತಿಗಳನ್ನು ಪ್ರಕಟಿಸಿದವರು ಯಾರು? ಯೆಹೋವ ದೇವರು ಆಯ್ಕೆ ಮಾಡಿದ ಮಿತ್ರನು ಬಾಬಿಲೋನಿನ ವಿರುದ್ಧ ತನ್ನ ಉದ್ದೇಶವನ್ನು ಪೂರೈಸುತ್ತಾನೆ. ತನ್ನ ತೋಳು ಕಸ್ದೀಯರ ಮೇಲೆ ಇರುವುದು.

[15] ನಾನೇ, ನಾನಾಗಿಯೇ ಮಾತನಾಡಿದ್ದೇನೆ. ನಾನೇ ಅವನನ್ನು ಕರೆದದ್ದು; ಅವನನ್ನು ನಾನೇ ಬರಮಾಡಿದ್ದೇನೆ. ಅವನ ಮಾರ್ಗವು ಯಶಸ್ವಿಯಾಗುವುದು.

[16] “ನನ್ನ ಸಮೀಪಕ್ಕೆ ಬಂದು ಇದನ್ನು ಕೇಳಿರಿ. “ಆದಿಯಿಂದಲೂ ನಾನು ಗುಟ್ಟಾಗಿ ಮಾತಾಡಲಿಲ್ಲ, ಭೂಮಿಯು ಉಂಟಾದಂದಿನಿಂದ ಅಲ್ಲಿ ನಾನು ಇದ್ದೇನೆ.” ಈಗ ಸಾರ್ವಭೌಮ ಯೆಹೋವ ದೇವರು ತಮ್ಮ ಪವಿತ್ರಾತ್ಮರ ಸಮೇತ ನನ್ನನ್ನು ಕಳುಹಿಸಿದ್ದಾರೆ.

[17] ನಿನ್ನ ವಿಮೋಚಕನೂ, ಇಸ್ರಾಯೇಲಿನ ಪರಿಶುದ್ಧನೂ ಆಗಿರುವ ಯೆಹೋವ ದೇವರ ಮಾತಿದು, “ನಿನ್ನ ಉಪಯೋಗಕ್ಕಾಗಿ ನಿನಗೆ ಬೋಧಿಸುವವನೂ, ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಸುವವನೂ ಆದ ನಾನೇ ನಿನ್ನ ಯೆಹೋವ ದೇವರು ಆಗಿದ್ದೇನೆ.

[18] ನೀನು ನನ್ನ ಆಜ್ಞೆಗಳಿಗೆ ಕಿವಿಗೊಟ್ಟಿದ್ದರೆ ಚೆನ್ನಾಗಿತ್ತು! ಆಗ ನಿನ್ನ ಸಮಾಧಾನವು ನದಿಯಂತೆಯೂ, ನಿನ್ನ ನೀತಿಯು ಸಮುದ್ರದ ಅಲೆಗಳಂತೆಯೂ ಇರುತ್ತಿದ್ದವು,

[19] ನಿನ್ನ ಸಂತಾನವು ಸಹ ಮರಳಿನಂತೆಯೂ, ನಿನ್ನ ಮಕ್ಕಳು ಅಸಂಖ್ಯಾತ ಧಾನ್ಯಗಳಂತೆಯೂ ಇರುವರು. ಅವರ ಹೆಸರುಗಳು ನನ್ನ ಸಮ್ಮುಖದಿಂದ, ಅಳಿದುಹೋಗದೆ ಇರುವುದು.”

[20] ಬಾಬಿಲೋನಿನಿಂದ ಹೊರಡಿರಿ. ಕಸ್ದೀಯರ ಕಡೆಯಿಂದ ಓಡಿಹೋಗಿರಿ. ಹರ್ಷಧ್ವನಿಯಿಂದ ಇದನ್ನು ಹೇಳಿ ಪ್ರಕಟಿಸಿರಿ. ಭೂಮಿಯ ಕಟ್ಟಕಡೆಯವರೆಗೂ ಪ್ರಚಾರಪಡಿಸಿರಿ. “ಯೆಹೋವ ದೇವರು ತಮ್ಮ ಸೇವಕನಾದ ಯಾಕೋಬನ್ನು ವಿಮೋಚಿಸಿದ್ದಾರೆ,” ಎಂದು ನೀವು ಹೇಳಿರಿ.

[21] ದೇವರು ಅವರನ್ನು ಮರುಭೂಮಿಯಲ್ಲಿ ನಡಿಸಿದಾಗ, ಅವರಿಗೆ ದಾಹವಾಗಲಿಲ್ಲ. ದೇವರು ಅವರಿಗಾಗಿ ನೀರನ್ನು ಬಂಡೆಯೊಳಗಿಂದ ಹರಿಸಿದರು. ದೇವರು ಬಂಡೆಯನ್ನು ಸೀಳಲು, ನೀರು ರಭಸದಿಂದ ಹೊರಗೆ ಬಂತು.

[22] “ದುಷ್ಟರಿಗೆ ಸಮಾಧಾನವೇ ಇಲ್ಲ,” ಎಂದು ಯೆಹೋವ ದೇವರು ನುಡಿಯುತ್ತಾರೆ.

ಯೆಶಾಯ — Chapters