Skip to content
Opens in a new window
Listen to this chapter • 4:55

[1] ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರವನ್ನು ತೊಟ್ಟುಕೊಂಡವನಾಗಿ, ತನ್ನ ಮಹಾ ಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? “ನೀತಿಯನ್ನು ಘೋಷಿಸುವವನೂ, ರಕ್ಷಿಸಲು ಬಲಿಷ್ಠನೂ ನಾನೇ.”

[2] ನಿನ್ನ ವಸ್ತ್ರಗಳು ಏಕೆ ಕೆಂಪಾದವು? ನಿನ್ನ ಬಟ್ಟೆಗಳು ಏಕೆ ದ್ರಾಕ್ಷಿಯನ್ನು ತುಳಿಯುವವನ ಹಾಗಿವೆ?

[3] “ದ್ರಾಕ್ಷಿಯನ್ನು ತೊಟ್ಟಿಯಲ್ಲಿ ನಾನೊಬ್ಬನೇ ತುಳಿದಿದ್ದೇನೆ. ಜನಾಂಗಗಳಲ್ಲಿ ಒಬ್ಬನಾದರೂ ನನ್ನ ಸಂಗಡ ಇರಲಿಲ್ಲ. ನನ್ನ ಕೋಪದಲ್ಲಿ ಅವರನ್ನು ತುಳಿದಿದ್ದೇನೆ, ನನ್ನ ಉರಿಯಲ್ಲಿ ಅವರನ್ನು ಜಜ್ಜಿದ್ದೇನೆ. ಆದ್ದರಿಂದ ಅವರ ರಕ್ತವು ನನ್ನ ಬಟ್ಟೆಗಳ ಮೇಲೆ ಸಿಡಿದು, ನನ್ನ ವಸ್ತ್ರಕ್ಕೆ ಮೆತ್ತಿಕೊಂಡಿದೆ;

[4] ಏಕೆಂದರೆ ಮುಯ್ಯಿಗೆ ಮುಯ್ಯಿ ತೀರಿಸುವ ದಿವಸವು ನನ್ನ ಹೃದಯದಲ್ಲಿದೆ. ನಾನು ವಿಮೋಚಿಸಿದವರ ವರುಷವು ಬಂತು.

[5] ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ, ಉದ್ಧಾರ ಮಾಡುವವನು ಇಲ್ಲದ್ದರಿಂದ ಆಶ್ಚರ್ಯಪಟ್ಟೆನು. ಆಗ ನನ್ನ ಸ್ವಂತ ಬಾಹುವು ನನಗೆ ರಕ್ಷಣೆಯನ್ನು ಉಂಟುಮಾಡಿತು. ನನ್ನ ಕೋಪವೇ ನನಗೆ ಆಧಾರವಾಯಿತು.

[6] ನನ್ನ ಕೋಪದಲ್ಲಿ ಜನಾಂಗಗಳನ್ನು ತುಳಿದುಬಿಟ್ಟೆನು. ನನ್ನ ಉರಿಯಲ್ಲಿ ಅವರನ್ನು ಕುಡಿಯುವಂತೆ ಮಾಡಿದೆನು. ಅವರ ರಕ್ತವನ್ನು ಭೂಮಿಗೆ ಸುರಿಸಿದೆನು.”

[7] ಯೆಹೋವ ದೇವರು ನಮಗೆ ಮಾಡಿದ್ದೆಲ್ಲದರ ಪ್ರಕಾರ, ಯೆಹೋವ ದೇವರ ಪ್ರೀತಿ ಕೃಪೆಗಳನ್ನೂ, ಯೆಹೋವ ದೇವರ ಕಾರ್ಯಗಳನ್ನು ಸ್ತೋತ್ರಗಳನ್ನೂ ಜ್ಞಾಪಕಪಡಿಸುವೆನು. ಆತನು ತನ್ನ ಅಂತಃಕರುಣೆಯ ಪ್ರಕಾರವೂ, ತನ್ನ ಕೃಪೆಯ ಮಹಾ ಒಳ್ಳೆಯತನದ ಪ್ರಕಾರವೂ, ಇಸ್ರಾಯೇಲಿನ ಮನೆಯವರಿಗೆ ದೊಡ್ಡ ಉಪಕಾರ ಮಾಡಿದನಲ್ಲಾ.

[8] ಆತನು ನಿಶ್ಚಯವಾಗಿ, “ಅವರು ನನ್ನ ಜನರೇ, ಸುಳ್ಳಾಡದ ಮಕ್ಕಳೇ!” ಎಂದು ಹೇಳಿದನು. ಆದ್ದರಿಂದ ಅವರಿಗೆ ರಕ್ಷಕನಾಗಿದ್ದನು.

[9] ಅವರಿಗೆ ಬಂದ ಎಲ್ಲಾ ಇಕ್ಕಟ್ಟಿನಲ್ಲಿ ಆತನಿಗೆ ಇಕ್ಕಟ್ಟಾಯಿತು. ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು. ತನ್ನ ಪ್ರೀತಿಯಲ್ಲಿಯೂ, ತನ್ನ ಕನಿಕರದಲ್ಲಿಯೂ ಆತನೇ ಅವರನ್ನು ವಿಮೋಚಿಸಿದನು. ಪೂರ್ವಕಾಲದ ದಿವಸಗಳಲ್ಲೆಲ್ಲಾ ಅವರನ್ನು ಎತ್ತಿಕೊಂಡು ಹೊತ್ತುಕೊಂಡನು.

[10] ಆದರೆ ಅವರು ತಿರುಗಿಬಿದ್ದು, ಆತನ ಪರಿಶುದ್ಧಾತ್ಮನನ್ನು ದುಃಖಪಡಿಸಿದರು. ಆದ್ದರಿಂದ ಆತನು ಬೇರೆಯಾಗಿ ಅವರಿಗೆ ಶತ್ರುವಾದನು. ಆತನೇ ಅವರಿಗೆ ವಿರೋಧವಾಗಿ ಯುದ್ಧಮಾಡಿದನು.

[11] ಆಗ ಆತನು ಪೂರ್ವಕಾಲದ ದಿವಸಗಳನ್ನೂ, ಮೋಶೆಯನ್ನೂ, ಅವನ ಜನರನ್ನೂ ಜ್ಞಾಪಕಮಾಡಿಕೊಂಡು “ಅವರನ್ನು ತನ್ನ ಮಂದೆಯ ಕುರುಬನ ಸಂಗಡ ಸಮುದ್ರದೊಳಗಿಂದ ಸುರಕ್ಷಿತವಾಗಿ ಮೇಲಕ್ಕೆ ಬರಮಾಡಿದವನು ಎಲ್ಲಿ? ಅವರ ಮಧ್ಯದಲ್ಲಿ ತನ್ನ ಪರಿಶುದ್ಧಾತ್ಮನನ್ನು ಇಟ್ಟವನು ಎಲ್ಲಿ?

[12] ಮೋಶೆಯ ಬಲಗೈಯ ಮುಖಾಂತರ ತನ್ನ ಬಲವಾದ ಮಹಿಮೆಯುಳ್ಳ ತೋಳಿನಿಂದ ಅವರನ್ನು ನಡೆಸಿದವನೂ, ತನಗೆ ನಿತ್ಯವಾದ ಹೆಸರನ್ನು ಉಂಟುಮಾಡುವ ಹಾಗೆ ಅವರ ಮುಂದೆ ಜನರಾಶಿಯನ್ನೂ ಇಬ್ಬಾಗಿಸಿದವನು ಎಲ್ಲಿ?

[13] ಅಡವಿಯಲ್ಲಿ ಕುದುರೆಯಂತೆ ಅಗಾಧಗಳಲ್ಲಿ ಅವರನ್ನು ಎಡವದ ಹಾಗೆ ನಡೆಸಿದವನು ಎಲ್ಲಿ?”

[14] ಪಶುವು ತಗ್ಗಿಗೆ ಇಳಿಯುವ ಪ್ರಕಾರ, ಯೆಹೋವ ದೇವರ ಆತ್ಮರು ಅವರಿಗೆ ವಿಶ್ರಾಂತಿಯನ್ನು ಕೊಟ್ಟರು. ಈ ಪ್ರಕಾರ ನೀವು ನಿಮಗೆ ಮಹಿಮೆಯುಳ್ಳ ಹೆಸರನ್ನು ಉಂಟುಮಾಡುವುದಕ್ಕಾಗಿ, ನಿಮ್ಮ ಜನರನ್ನು ನಡಿಸಿದಿರಿ.

[15] ಆಕಾಶದಿಂದ ಕೆಳಗೆ ನೋಡಿರಿ, ನಿಮ್ಮ ಪವಿತ್ರವೂ ಮಹಿಮೆಯೂ ಆದ ನಿಮ್ಮ ಸಿಂಹಾಸನದಿಂದ ದೃಷ್ಟಿಸಿ ನೋಡಿರಿ. ನಿಮ್ಮ ಆಸಕ್ತಿಯೂ, ನಿಮ್ಮ ಪರಾಕ್ರಮವೂ, ನಿಮ್ಮ ಹೃದಯದ ಘೋಷವೂ, ನಮ್ಮ ವಿಷಯವಾದ ನಿಮ್ಮ ಕರುಣೆ ಕನಿಕರಗಳೂ ಎಲ್ಲಿ? ಬಿಗಿಹಿಡಿದುಕೊಂಡಿದ್ದೀರೋ?

[16] ಅಬ್ರಹಾಮನು ನಮ್ಮನ್ನು ತಿಳಿಯದಿದ್ದರೂ, ಇಸ್ರಾಯೇಲನು ನಮ್ಮನ್ನು ಗುರುತಿಸದಿದ್ದರೂ ಯೆಹೋವ ದೇವರಾದ ನೀವೇ ನಮ್ಮ ತಂದೆಯೂ, ನಮ್ಮ ವಿಮೋಚಕರೂ ಆಗಿದ್ದೀರಿ. ನಿಮ್ಮ ಹೆಸರು ಸದಾಕಾಲವೂ ಇದೆ

[17] ಯೆಹೋವ ದೇವರೇ, ಏಕೆ ನಮ್ಮನ್ನು ನಿಮ್ಮ ಮಾರ್ಗಗಳಿಂದ ತಪ್ಪಿಹೋಗುವಂತೆ ಅನುಮತಿಸಿದ್ದೀರಿ? ಏಕೆ ನಮ್ಮ ಹೃದಯವನ್ನು ನಿಮಗೆ ಭಯಪಡದ ಹಾಗೆ ಕಠಿಣ ಮಾಡಿದ್ದೀರಿ? ನಿಮ್ಮ ಸೇವಕರಿಗೋಸ್ಕರವೂ, ನಿಮ್ಮ ಬಾಧ್ಯರಾಗಿರುವ ಗೋತ್ರಗಳ ನಿಮಿತ್ತ ನೀವು ಹಿಂದಿರುಗಿರಿ.

[18] ಸ್ವಲ್ಪಕಾಲ ಮಾತ್ರ ನಿಮ್ಮ ಪರಿಶುದ್ಧ ಜನರು ಅದನ್ನು ಸ್ವಾಧೀನಮಾಡಿಕೊಂಡರು. ನಮ್ಮ ಶತ್ರುಗಳು ನಿಮ್ಮ ಪವಿತ್ರಾಲಯವನ್ನು ತುಳಿದುಬಿಟ್ಟಿದ್ದಾರೆ.

[19] ನಾವು ಆದಿಯಿಂದಲೂ ನಿಮ್ಮವರಾಗಿದ್ದೇವೆ. ಅವರ ಮೇಲೆ ನೀವು ದೊರೆತನ ಮಾಡಲಿಲ್ಲ. ಅವರು ನಿಮ್ಮ ಹೆಸರನ್ನು ಧರಿಸಲೂ ಇಲ್ಲ.

ಯೆಶಾಯ — Chapters