[1] “ದ್ರೋಹಿಗಳಾದ ಮಕ್ಕಳಿಗೆ ಕಷ್ಟ!” ಎಂದು ಯೆಹೋವ ದೇವರು ಹೇಳುತ್ತಾರೆ. ಅವರು ಆಲೋಚನೆಯನ್ನು ಮಾಡುತ್ತಾರೆ ಆದರೆ ನನ್ನಿಂದಲ್ಲ. ನನ್ನ ಆತ್ಮ ಪ್ರೇರಿತರಾಗದೆ ಉಪಾಯಗಳನ್ನು ಮಾಡುತ್ತಾರೆ, ಪಾಪದ ಮೇಲೆ ಪಾಪವನ್ನು ಸೇರಿಸಿಕೊಂಡಿದ್ದಾರೆ.
[2] ಫರೋಹನಲ್ಲಿ ತಾವು ಬಲಗೊಳ್ಳುವ ಆಶ್ರಯವನ್ನು ಈಜಿಪ್ಟಿನ ನೆರಳಿನಲ್ಲಿ ಭರವಸವಿಡಬೇಕೆಂದು ನನ್ನ ಮಾತನ್ನು ಕೇಳದೆ, ಈಜಿಪ್ಟಿಗೆ ಪ್ರಯಾಣವಾಗಿ ಹೊರಟಿದ್ದಾರೆ.
[3] ಆದರೆ ಫರೋಹನ ಆಶ್ರಯದಿಂದ ನಿಮಗೆ ನಾಚಿಕೆಯೂ, ಈಜಿಪ್ಟ್ ನೆರಳಿನ ಭರವಸೆಯಿಂದ ನಿಮಗೆ ನಿಂದೆಯೂ ಉಂಟಾಗುವುದು.
[4] ಏಕೆಂದರೆ ಅವನ ಪ್ರಧಾನರು ಚೋವನಿನಲ್ಲಿ ಇದ್ದರು. ಅವನ ರಾಯಭಾರಿಗಳು ಹಾನೇಸಿಗೆ ಬಂದಿದ್ದಾರೆ.
[5] ತಮಗೆ ಪ್ರಯೋಜನವಾಗದೆ ಸಹಾಯಕ್ಕೂ, ಪ್ರಯೋಜನಕ್ಕೂ ಅಲ್ಲ. ನಿಂದೆಗೂ, ನಾಚಿಕೆಗೂ ಇರುವ ಜನಕ್ಕೆ ಎಲ್ಲರೂ ನಾಚಿಕೆಪಡುತ್ತಾರೆ.
[6] ನೆಗೆವಿನ ಮೃಗಗಳ ವಿಷಯವಾದ ಪ್ರವಾದನೆ: ಇಕ್ಕಟ್ಟಾದ ಶ್ರಮೆಯುಳ್ಳ ದೇಶಕ್ಕೆ ಪ್ರಾಯ ಮತ್ತು ಮುದಿ ಸಿಂಹವೂ, ಸರ್ಪವೂ, ಹಾರುವ ಉರಿಮಂಡಲ ಸರ್ಪವೂ ಬರುವಲ್ಲಿಗೆ ಅವರು ಕತ್ತೆಮರಿಗಳ ಬೆನ್ನ ಮೇಲೆ ತಮ್ಮ ಬದುಕನ್ನೂ, ಒಂಟೆಗಳ ಮೇಲೆ ತಮ್ಮ ದ್ರವ್ಯಗಳನ್ನು ತಮಗೆ ಪ್ರಯೋಜನವಿಲ್ಲದ ಜನಕ್ಕೆ ತೆಗೆದುಕೊಂಡು ಹೋಗುತ್ತಾರೆ.
[7] ಏಕೆಂದರೆ ಈಜಿಪ್ಟಿನವರ ಸಹಾಯವು ವ್ಯರ್ಥವೇ ವ್ಯರ್ಥ. ಆದ್ದರಿಂದ ನಾನು ಅವಳಿಗೆ ಇದನ್ನು ಕುರಿತು ಅವರ ಬಲವು ನಿಂತು ಹೋಗಿದೆ ಎಂದು ನಾನು ಕೂಗಿದ್ದೇನೆ.
[8] ಈಗ ಹೋಗಿ ಇದನ್ನು ಅದರ ಮುಂದೆ ಹಲಗೆಯಲ್ಲಿ ಬರೆ. ಅದನ್ನು ಸುರುಳಿಯಲ್ಲಿ ಬರೆಯಿರಿ, ಮುಂದೆ ಬರುವ ನಿತ್ಯಕಾಲಕ್ಕಾಗಿ ಶಾಶ್ವತ ಸಾಕ್ಷಿಯಾಗಿರಲಿ.
[9] ಏನೆಂದರೆ ಇವರು ತಿರುಗಿಬೀಳುವ ಜನರೇ. ಸುಳ್ಳಾಡುವ ಮಕ್ಕಳು. ಯೆಹೋವ ದೇವರ ಉಪದೇಶಕ್ಕೆ ಕಿವಿಗೊಡದ ಮಕ್ಕಳೇ.
[10] ಅವರು ನೋಡುವವರಿಗೆ, “ನೋಡಬೇಡಿರಿ,” ಎಂದು ಪ್ರವಾದಿಗಳಿಗೆ, “ನಿಮಗೆ ದರ್ಶನವಾಗದಿರಲಿ,” ಎನ್ನುತ್ತಾರೆ. ಪ್ರವಾದಿಗಳಿಗೆ, ನಮಗೆ ನ್ಯಾಯವಾದವುಗಳನ್ನು ಪ್ರವಾದಿಸಬೇಡಿರಿ. ನಯವಾದವುಗಳನ್ನೇ ನುಡಿಯಿರಿ. ಮಾಯವಾದವುಗಳನ್ನೇ ಪ್ರವಾದಿಸಿರಿ ಎನ್ನುತ್ತಾರೆ.
[11] “ನಿಮ್ಮ ದಾರಿಗೆ ಓರೆಯಾಗಿರಿ, ಮಾರ್ಗದಿಂದ ತೊಲಗಿರಿ. ಇಸ್ರಾಯೇಲರ ಪರಿಶುದ್ಧನನ್ನು ನಮ್ಮ ಮುಂದೆ ನಿಲ್ಲದ ಹಾಗೆ ಮಾಡಿರಿ,” ಎಂದು ಹೇಳುತ್ತಾರೆ.
[12] ಆದಕಾರಣ ಇಸ್ರಾಯೇಲರ ಪರಿಶುದ್ಧನು ಹೇಳುವುದೇನೆಂದರೆ, “ನೀವು ಈ ಮಾತನ್ನು ತಿರಸ್ಕಾರ ಮಾಡಿ ಬಲಾತ್ಕಾರ, ಕುಯುಕ್ತಿಗಳನ್ನು ನಂಬಿ, ಅವುಗಳನ್ನೇ ಆಧಾರ ಮಾಡಿಕೊಂಡದ್ದರಿಂದ
[13] ಎತ್ತರವಾದ ಗೋಡೆಯ ಒಂದು ಭಾಗವು ಉಬ್ಬಿಕೊಂಡು ತಟ್ಟನೆ ಕ್ಷಣಮಾತ್ರದಲ್ಲಿ ಕಳಚಿ ಬೀಳುವ ಹಾಗೆ ನಿಮ್ಮ ಅಪರಾಧವು ನಿಮಗೆ ಅಪಾಯಕರವಾಗಿರುವುದು.
[14] ಒಲೆಯಿಂದ ಕೆಂಡವನ್ನು ತೆಗೆಯುವುದಕ್ಕಾಗಲಿ, ಬಾವಿಯಿಂದ ನೀರನ್ನು ತೆಗೆಯುವುದಕ್ಕಾಗಲಿ, ಬೋಕಿಯ ತುಂಡುಗಳಲ್ಲಿ ಒಂದೂ ಉಳಿಯದಂತೆ ಒಬ್ಬನು ಕುಂಬಾರನ ಗಡಿಗೆಯನ್ನು ಚೂರುಚೂರಾಗಿ ಒಡೆದು ಬಿಡುವ ರೀತಿಯಲ್ಲಿ ಆತನು ಆ ಗೋಡೆಯನ್ನು ಒಡೆದುಬಿಡುವನು.”
[15] ಏಕೆಂದರೆ ಇಸ್ರಾಯೇಲಿನ ಪರಿಶುದ್ಧನಾದ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, “ನೀವು ತಿರುಗಿಕೊಂಡು ಸುಮ್ಮನಿದ್ದರೆ ನಿಮಗೆ ರಕ್ಷಣೆಯಾಗುವುದು. ಶಾಂತರಾಗಿ ಭರವಸದಿಂದಿರುವುದೇ ನಿಮಗೆ ಬಲ ಎಂದು ಹೇಳಿದ್ದರೂ, ನೀವು ಒಪ್ಪಿಕೊಂಡಿಲ್ಲ.
[16] ಆದರೆ ನೀವು, ‘ಬೇಡವೇ ಬೇಡ. ಏಕೆಂದರೆ ನಾವು ಕುದುರೆಗಳ ಮೇಲೆ ಓಡುವೆವು,’ ಎಂದುಕೊಂಡಿದ್ದರಿಂದ ನೀವು ಓಡಿಹೋಗುವಿರಿ, ನಾವು ವೇಗವಾಗಿ ಸವಾರಿ ಮಾಡುವೆವು, ಎಂದುಕೊಂಡಿದ್ದರಿಂದ ಆ ವೇಗಿಗಳೇ ನಿಮ್ಮನ್ನು ಅಟ್ಟಿಬಿಡುವರು.
[17] ಒಬ್ಬನ ಬೆದರಿಕೆಗೆ ಸಾವಿರ ಜನರು ಓಡುವರು, ಐವರು ಹೆದರಿಸುವುದರಿಂದ ನೀವೆಲ್ಲರೂ ಓಡಿಹೋಗುವಿರಿ, ಕಟ್ಟಕಡೆಗೆ ಬೆಟ್ಟದ ಶಿಖರದಲ್ಲಿನ ಸ್ತಂಭದ ಹಾಗೂ ಗುಡ್ಡದ ಮೇಲಣ ಕಂಬದಂತೆಯೂ ಒಂಟಿಯಾಗಿ ಉಳಿಯುವಿರಿ.”
[18] ಹೀಗಿರಲು ಯೆಹೋವ ದೇವರು ನಿಮಗೆ ಕೃಪೆಯನ್ನು ತೋರಿಸಬೇಕೆಂದು ಕಾದಿರುವನು. ನಿಮ್ಮನ್ನು ಕರುಣಿಸಬೇಕೆಂದು ಉನ್ನತವಾಗಿ ಕಾಣಿಸಿಕೊಳ್ಳುವನು. ಏಕೆಂದರೆ ಯೆಹೋವ ದೇವರು ನ್ಯಾಯಾಧಿಪತಿಯಾದ ದೇವರಾಗಿದ್ದಾನೆ. ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು.
[19] ಏಕೆಂದರೆ, ಯೆರೂಸಲೇಮಿನಲ್ಲಿ ವಾಸಿಸುವ ಚೀಯೋನಿನ ಜನರೇ, ನೀವು ಇನ್ನು ಅಳಬೇಕಾಗಿಲ್ಲ. ನೀವು ಕೂಗಿ ದುಃಖಿಸಿದ ಶಬ್ದವನ್ನು ದೇವರು ಕೇಳಿ ನಿಮಗೆ ಕೃಪೆ ತೋರಿಸೇ ತೋರಿಸುವರು. ದೇವರು ನಿಮ್ಮ ಸ್ವರವನ್ನು ಕೇಳಿದ ಕೂಡಲೇ ಸದುತ್ತರವನ್ನು ದಯಪಾಲಿಸುವರು.
[20] ಕರ್ತದೇವರು ನಿಮಗೆ ಕಷ್ಟವನ್ನು, ಶ್ರಮೆಯನ್ನು, ಅನ್ನಪಾನಗಳನ್ನಾಗಿ ಕೊಟ್ಟರೂ, ಇನ್ನೂ ನಿಮ್ಮ ಬೋಧಕರು ನಮಗೆ ಮರೆಯಾಗಿ ಇರುವುದಿಲ್ಲ. ಆದರೆ ನಿನ್ನ ಕಣ್ಣುಗಳು ನಿಮ್ಮ ಬೋಧಕರನ್ನು ನೋಡುತ್ತಿರುವುವು.
[21] ನೀವು ಬಲಕ್ಕಾಗಲಿ, ಎಡಕ್ಕಾಗಲಿ ತಿರುಗಿಕೊಳ್ಳುವಾಗ, “ಇದೇ ಮಾರ್ಗ ಇದರಲ್ಲೇ ನಡೆಯಿರಿ,” ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವುದು.
[22] ಕೆತ್ತಿದ ನಿಮ್ಮ ವಿಗ್ರಹಗಳ ಬೆಳ್ಳಿಯ ಕವಚಗಳನ್ನೂ, ಎರಕದ ನಿಮ್ಮ ವಿಗ್ರಹಗಳ ಬಂಗಾರದ ಹೊದಿಕೆಯನ್ನೂ ನೀವು ಹೊಲಸ್ಸಾಗಿ ಭಾವಿಸಿ, ಆ ವಿಗ್ರಹಕ್ಕೆ, “ತೊಲಗಿಹೋಗು,” ಎಂದು ಹೇಳಿ, ಅದನ್ನು ಹೊಲೆಯ ಬಟ್ಟೆಯಂತೆ ಬಿಸಾಡಿ ಬಿಡುವಿರಿ.
[23] ಆಗ ನೀವು ಹೊಲದಲ್ಲಿ ಬೀಜ ಬಿತ್ತುವುದಕ್ಕೆ ಬಿತ್ತನೆಯ ಮಳೆಯನ್ನು ದಯಪಾಲಿಸುವೆನು. ಭೂಮಿಯ ಬೆಳೆಯಿಂದ ಸಾರವಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವೆನು. ಆ ದಿನದಲ್ಲಿ ನಿನ್ನ ದನಗಳು ವಿಸ್ತಾರವಾದ ಹುಲ್ಲುಗಾವಲುಗಳಲ್ಲಿ ಮೇಯುವುವು.
[24] ಹೊಲಗೆಯ್ಯುವ ನಿಮ್ಮ ಎತ್ತು ಕತ್ತೆಗಳು ಮೊರದಿಂದಲೂ, ಕವೆಗೋಲಿನಿಂದಲೂ ತೂರಿದ ರುಚಿಕರವಾದ ಮೇವನ್ನು ತಿನ್ನುವುವು.
[25] ಮಹಾ ಸಂಹಾರದ ದಿವಸದಲ್ಲಿ ಗೋಪುರಗಳು ಬೀಳುವಾಗ ಪ್ರತಿಯೊಂದು ಉನ್ನತ ಪರ್ವತದಲ್ಲಿಯೂ, ಪ್ರತಿಯೊಂದು ಎತ್ತರವಾದ ಗುಡ್ಡದಲ್ಲಿಯೂ ತೊರೆಗಳು ನೀರಿನ ಕಾಲುವೆಗಳೂ ಹರಿಯುತ್ತಿರುವುವು.
[26] ಇಷ್ಟೇ ಅಲ್ಲದೆ ಯೆಹೋವ ದೇವರು ತನ್ನ ಜನರ ವ್ರಣವನ್ನು ಕಟ್ಟಿ, ಅವರ ಪೆಟ್ಟಿನ ಗಾಯವನ್ನು ವಾಸಿಮಾಡುವ ದಿನದಲ್ಲಿ ಚಂದ್ರನ ಬೆಳಕು ಸೂರ್ಯನ ಬೆಳಕಿನ ಹಾಗೆಯೂ ಮತ್ತು ಸೂರ್ಯನ ಬೆಳಕು ಏಳರಷ್ಟು ಹೆಚ್ಚಾಗಿ, ಏಳು ದಿನಗಳ ಬೆಳಕಿನಂತಾಗುವುದು.
[27] ಇಗೋ, ಯೆಹೋವ ದೇವರ ನಾಮವು ದೂರದಿಂದ ಬರುತ್ತದೆ. ಆತನ ಕೋಪವು ಉರಿಯುತ್ತದೆ. ಅದರಿಂದೇಳುವ ಹೊಗೆಯು ದಟ್ಟವಾಗಿದೆ. ಆತನ ತುಟಿಗಳು ರೋಷದಿಂದ ತುಂಬಿವೆ. ಆತನ ನಾಲಿಗೆಯು ದಹಿಸುವ ಅಗ್ನಿಯಂತಿದೆ.
[28] ಆತನ ಶ್ವಾಸವು ತುಂಬುತ್ತಾ, ಕಂಠದವರೆಗೂ ಏರುವ ತೊರೆಯಂತಿದೆ. ಜನಾಂಗಗಳನ್ನು ಏನೂ ಉಳಿಸದ ಜರಡಿಯಿಂದ ಜಾಲಿಸುವುದಕ್ಕೆ ಬರುತ್ತಾನೆ. ದಾರಿತಪ್ಪಿಸುವ ಕಡಿವಾಣವು ಜನಗಳ ದವಡೆಗಳಲ್ಲಿರುವುದು.
[29] ಪರಿಶುದ್ಧ ಹಬ್ಬವನ್ನು ಆಚರಿಸುವ ರಾತ್ರಿಯಲ್ಲಿ ಆದಂತೆ ನಿಮಗೆ ಹಾಡು ಇರುವುದು. ಯೆಹೋವ ದೇವರ ಪರ್ವತವಾಗಿರುವ ಇಸ್ರಾಯೇಲಿನ ಬಂಡೆಯ ಬಳಿಗೆ ಕೊಳಲಿನ ಸಂಗಡ ಹೋಗುವ ಪ್ರಕಾರ ಹೃದಯದ ಸಂತೋಷವಿರುವುದು.
[30] ಆಗ ಯೆಹೋವ ದೇವರು ತನ್ನ ಗಂಭೀರವಾದ ಧ್ವನಿಯನ್ನು ಕೇಳ ಮಾಡಿ, ತೀವ್ರ ಕೋಪ, ದಹಿಸುವ ಅಗ್ನಿ ಜ್ವಾಲೆ, ಪ್ರಳಯ, ಬಿರುಗಾಳಿ, ಕಲ್ಮಳೆ, ಇವುಗಳಿಂದ ತನ್ನ ಶಿಕ್ಷಾಹಸ್ತವನ್ನು ತೋರ್ಪಡಿಸುವನು.
[31] ಯೆಹೋವ ದೇವರು ದಂಡದಿಂದ ದಂಡಿಸುವಾಗ, ಅಸ್ಸೀರಿಯವು ಆತನ ಧ್ವನಿಯಿಂದಲೇ ಮುರಿದು ಹೋಗುವುದು.
[32] ಯೆಹೋವ ದೇವರು ಅದರ ಮೇಲೆ ತರುವಂಥ ನೇಮಿಸಿದ ದಂಡವು ಹಾದು ಹೋಗುವಲ್ಲೆಲ್ಲಾ ಅದು ದಮ್ಮಡಿ, ಕಿನ್ನರಿಗಳ ಸಂಗಡ ಇರುವುದು. ಆತನು ಅವರೊಂದಿಗೆ ಯುದ್ಧಗಳಲ್ಲಿ ಹೋರಾಡುತ್ತಾ ಕೈಬೀಸಿ ಯುದ್ಧಮಾಡುವನು.
[33] ಪೂರ್ವದಿಂದ ತೋಫೆತ್ ಸಿದ್ಧವಾಗಿದೆ. ಹೌದು, ಅದು ಆಳವಾಗಿಯೂ, ಅಗಲವಾಗಿಯೂ ಅರಸನಿಗೆ ಸಿದ್ಧವಾಗಿದೆ. ಅದರ ಚಿತೆಯೊಳಗೆ ಬೆಂಕಿಯೂ, ಬಹಳ ಕಟ್ಟಿಗೆಯೂ ತುಂಬಿರುವುದು. ಯೆಹೋವ ದೇವರ ಶ್ವಾಸವು ಗಂಧಕದ ಪ್ರವಾಹದಂತೆ ಅದನ್ನು ಉರಿಸುವುದು.