Skip to content
Opens in a new window
Listen to this chapter • 6:22

[1] “ಯೆಹೋವ ದೇವರು ತಾವೇ ಅಭಿಷೇಕಿಸಿದ ಕೋರೆಷನಿಗೆ ಹೇಳುವುದೇನೆಂದರೆ: ರಾಷ್ಟ್ರಗಳನ್ನು ನೀನು ತುಳಿದು, ರಾಜರ ನಡುಕಟ್ಟನ್ನು ಬಿಚ್ಚಿ, ಮುಚ್ಚಲಾಗದ ಹಾಗೆ ಬಾಗಿಲು ಹೆಬ್ಬಾಗಿಲುಗಳನ್ನು ತೆರೆಯಲು ನಾನು ನಿನ್ನ ಬಲಗೈಯನ್ನು ಹಿಡಿದು ನಡೆಸುವೆನು.

[2] ನಾನು ನಿನ್ನ ಮುಂದೆ ಹೋಗಿ ಬೆಟ್ಟಗುಡ್ಡಗಳನ್ನು ಸಮಮಾಡಿ, ಕಂಚಿನ ಕದಗಳನ್ನು ಒಡೆದು, ಕಬ್ಬಿಣದ ಅಗುಳಿಗಳನ್ನು ಮುರಿದುಬಿಡುವೆನು.

[3] ನಿನ್ನನ್ನು ಹೆಸರು ಹಿಡಿದು ಕರೆಯುವ ಯೆಹೋವ ದೇವರು ನಾನೇ! ಇಸ್ರಾಯೇಲಿನ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಬಂಡಾರವನ್ನೂ, ಗುಪ್ತಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪಗಳನ್ನೂ ನಿನಗೆ ಕೊಡುವೆನು.

[4] ಏಕೆಂದರೆ ನನ್ನ ಸೇವಕನಾದ ಯಾಕೋಬನಿಗಾಗಿ, ನಾನು ಆಯ್ದುಕೊಂಡ ಇಸ್ರಾಯೇಲಿಗಾಗಿ ಹೆಸರು ಹಿಡಿದು ನಿನ್ನನ್ನು ಕರೆದಿದ್ದೇನೆ. ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ಹೆಸರನ್ನು ಇಟ್ಟಿದ್ದೇನೆ.

[5] ನಾನೇ ಯೆಹೋವ ದೇವರು, ಮತ್ತೊಬ್ಬನಿಲ್ಲ. ನನ್ನ ಹೊರತು ಯಾವ ದೇವರೂ ಇಲ್ಲ. ನೀನು ನನ್ನನ್ನು ಅರಿಯದವನಾಗಿದ್ದರೂ ನಿನ್ನನ್ನು ಬಲಪಡಿಸುವೆನು.

[6] ಪೂರ್ವದಿಂದ ಪಶ್ಚಿಮದವರೆಗೆ ಇರುವವರೆಲ್ಲರೂ ನನ್ನ ಹೊರತು ಮತ್ತೊಬ್ಬನು ಇಲ್ಲ, ನಾನೇ ಯೆಹೋವ ದೇವರು ಮತ್ತೊಬ್ಬ ದೇವರು ಇಲ್ಲ ಎಂದು ನನ್ನನ್ನು ತಿಳಿದುಕೊಳ್ಳುವರು.

[7] ಬೆಳಕನ್ನು ರೂಪಿಸುವವನೂ, ಕತ್ತಲನ್ನು ನಿರ್ಮಿಸುವವನೂ, ಸಮಾಧಾನವನ್ನು ಉಂಟುಮಾಡುವವನೂ, ವಿಪತ್ತನ್ನು ಬರಮಾಡುವವನೂ ನಾನೇ. ಯೆಹೋವನಾದ ನಾನೇ ಇವುಗಳನ್ನೆಲ್ಲಾ ಮಾಡುತ್ತೇನೆ.

[8] “ಆಕಾಶಗಳೇ, ಮೇಲಿನಿಂದ ಹನಿಯನ್ನು ಬೀಳಿಸಿರಿ. ಗಗನವು ನೀತಿಯನ್ನು ಸುರಿಸಲಿ. ಭೂಮಿಯು ತೆರೆದು ರಕ್ಷಣೆಯನ್ನು ತರಲಿ. ನೀತಿಯು ಅದರೊಟ್ಟಿಗೆ ಮೊಳೆಯಲಿ. ಇದನ್ನು ಸೃಷ್ಟಿಸಿದ ಯೆಹೋವ ದೇವರು ನಾನೇ!

[9] “ತನ್ನನ್ನು ರೂಪಿಸಿದವನ ಸಂಗಡ ವಾದಮಾಡುವವನಿಗೆ ಕಷ್ಟ! ಅವನು ಸಹ ಮಣ್ಣುಮಡಕೆಗಳಲ್ಲಿ ಒಂದು ಮಡಕೆ ಅಲ್ಲವೇ? ಮಣ್ಣು ಕುಂಬಾರನಿಗೆ, ‘ನೀನು ಏನು ಮಾಡುತ್ತೀ?’ ಎಂದೂ, ‘ನಾನು ನಿನ್ನ ಕೈ ಕೆಲಸವು ಅಲ್ಲ,’ ಎಂದೂ ಆ ಮಡಕೆ ಹೇಳುವುದುಂಟೇ?

[10] ನೀನು ಹುಟ್ಟಿಸಿದ್ದು ಏಕೆ? ಎಂದು ತನ್ನ ತಂದೆಯನ್ನು ಕೇಳುವವನಿಗೂ, ‘ನೀನು ಹಡೆದದ್ದು ಏಕೆ?’ ಎಂದು ತಾಯಿಗೆ ಕೇಳುವವನಿಗೂ ಶಾಪ!

[11] “ಇಸ್ರಾಯೇಲಿನ ಪರಿಶುದ್ಧನೂ, ಅದನ್ನು ರೂಪಿಸಿದವನೂ ಆಗಿರುವ ಯೆಹೋವ ದೇವರು, ಮುಂದೆ ಸಂಭವಿಸುವ ನನ್ನ ಮಕ್ಕಳ ವಿಷಯವಾಗಿಯೂ, ನನ್ನ ಕೈಕೆಲಸದ ವಿಷಯವಾಗಿಯೂ ನೀವು ನನಗೆ ಆಜ್ಞಾಪಿಸುವುದೇನು?

[12] ನಾನು ಭೂಮಿಯನ್ನು ಉಂಟುಮಾಡಿ, ಅದರ ಮೇಲೆ ಮನುಷ್ಯನನ್ನು ಸೃಷ್ಟಿಸಿದೆನು. ನಾನೇ, ನನ್ನ ಕೈಗಳೇ ಆಕಾಶಗಳನ್ನು ವಿಸ್ತರಿಸಿದವು. ನಾನು ಅದರ ನಕ್ಷತ್ರಸೈನ್ಯಕ್ಕೆಲ್ಲಾ ಅಪ್ಪಣೆಕೊಟ್ಟೆನು.

[13] ನಾನೇ, ಅವನನ್ನು ನೀತಿಯಲ್ಲಿ ಎಬ್ಬಿಸಿದ್ದೇನೆ. ಅವನ ಮಾರ್ಗಗಳನ್ನು ಸರಾಗ ಮಾಡುತ್ತೇನೆ. ಅವನು ನನ್ನ ಪಟ್ಟಣವನ್ನು ಕಟ್ಟಿ, ಕ್ರಯವನ್ನಾಗಲೀ, ಬಹುಮಾನವನ್ನಾಗಲೀ ಕೇಳಿಕೊಳ್ಳದೆ, ನನ್ನ ಸೆರೆಯವರನ್ನು ಕಳುಹಿಸಿಬಿಡುವನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾನೆ.

[14] ಯೆಹೋವ ದೇವರು ಹೇಳುವುದೇನೆಂದರೆ: “ಈಜಿಪ್ಟಿನ ಆದಾಯವೂ, ಇಥಿಯೋಪಿಯದ ವ್ಯಾಪಾರವೂ, ಎತ್ತರದ ಮನುಷ್ಯರಾದ ಶೆಬದವರೂ ನಿಮ್ಮಲ್ಲಿಗೆ ಸೇರಿ, ನಿಮ್ಮವರಾಗಿ ನಿಮ್ಮನ್ನು ಅನುಸರಿಸುವರು. ಸಂಕೋಲೆಗಳನ್ನು ಕಟ್ಟಿಕೊಂಡು ಬಂದು, ನಿಮ್ಮ ಮುಂದೆ ಅಡ್ಡಬಿದ್ದು, ‘ನಿಶ್ಚಯವಾಗಿ ದೇವರು ನಿಮ್ಮಲ್ಲಿಯೇ ಇದ್ದಾನೆ, ಮತ್ತೊಬ್ಬನಿಲ್ಲ; ಬೇರೆ ದೇವರು ಇಲ್ಲವೇ ಇಲ್ಲ.’ ”

[15] ಇಸ್ರಾಯೇಲರ ದೇವರೇ, ರಕ್ಷಕನೇ, ನಿಶ್ಚಯವಾಗಿಯೂ ನೀನು ಮರೆಮಾಡಿಕೊಳ್ಳುವ ದೇವರಾಗಿದ್ದೀ.

[16] ಅವರೆಲ್ಲರೂ ನಾಚಿಕೆಪಟ್ಟು ನಿಂದಿತರಾಗುವರು. ವಿಗ್ರಹಗಳನ್ನು ಮಾಡುವವರು ಒಟ್ಟಾಗಿ ಗಲಿಬಿಲಿಗೆ ಒಳಗಾಗುವರು.

[17] ಆದರೆ ಇಸ್ರಾಯೇಲರು ಶಾಶ್ವತವಾದ ರಕ್ಷಣೆಯೊಂದಿಗೆ ಯೆಹೋವ ದೇವರಲ್ಲಿ ಸಂರಕ್ಷಣೆ ಹೊಂದುವರು. ನೀವು ಯುಗಯುಗಾಂತರಕ್ಕೂ ಎಂದಿಗೂ ನಾಚಿಕೆಪಡುವುದಿಲ್ಲ, ಅವಮಾನ ಹೊಂದುವುದಿಲ್ಲ.

[18] ಆಕಾಶಗಳನ್ನು ನಿರ್ಮಿಸಿದ ಯೆಹೋವ ದೇವರು ಇಂತೆನ್ನುತ್ತಾನೆ, “ದೇವರು ತಾನೇ ಭೂಮಿಯನ್ನು ನಿರ್ಮಿಸಿ, ಅದನ್ನು ಉಂಟುಮಾಡಿದನು. ಆತನೇ ಅದನ್ನು ಸ್ಥಾಪಿಸಿದನು. ಅದನ್ನು ವ್ಯರ್ಥವಾಗಿ ಸೃಷ್ಟಿಸದೆ, ಜನನಿವಾಸಕ್ಕಾಗಿಯೇ ರೂಪಿಸಿದನು. ನಾನೇ ಯೆಹೋವ ದೇವರು, ನಾನಲ್ಲದೆ ಇನ್ನಾರೂ ಇಲ್ಲ.

[19] ಭೂಮಿಯ ಕತ್ತಲಾದ ಸ್ಥಳದಲ್ಲಿ ರಹಸ್ಯವಾಗಿ ನಾನು ಮಾತನಾಡಲಿಲ್ಲ. ‘ವ್ಯರ್ಥವಾಗಿ ನನ್ನನ್ನು ಹುಡುಕಿರಿ’ ಎಂದು ಯಾಕೋಬನ ವಂಶದವರಿಗೆ ನಾನು ಹೇಳಲಿಲ್ಲ. ಯೆಹೋವನಾದ ನಾನೇ ನೀತಿಯನ್ನು ಮಾತನಾಡಿ, ಯಥಾರ್ಥವಾದವುಗಳನ್ನೇ ತಿಳಿಸುತ್ತೇನೆ.

[20] “ಜನಾಂಗಗಳಲ್ಲಿ ತಪ್ಪಿಸಿಕೊಂಡವರಾದ ನೀವು ಒಟ್ಟಾಗಿ ಕೂಡಿಕೊಂಡು ಸಮೀಪಕ್ಕೆ ಬನ್ನಿರಿ. ಮರದಿಂದ ಕೆತ್ತಿದ ತಮ್ಮ ವಿಗ್ರಹವನ್ನು ಹೊತ್ತುಕೊಂಡು, ರಕ್ಷಿಸಲಾರದ ಆ ದೇವರಿಗೆ ಬಿನ್ನವಿಸುವವರು ಏನೂ ತಿಳಿಯದವರಾಗಿದ್ದಾರೆ.

[21] ನೀವು ಏನು ಸಾರಬೇಕೋ ಅದನ್ನು ಈಗ ತನ್ನಿರಿ ಹೌದು, ಒಟ್ಟಿಗೆ ಅವರು ಆಲೋಚಿಸಲಿ ಈ ಸಂಗತಿಗಳನ್ನು ಪುರಾತನ ಕಾಲದಿಂದಲೂ ಪ್ರಕಟಿಸಿದವರು ಯಾರು? ಪ್ರಾರಂಭದಿಂದ ಇದನ್ನು ತಿಳಿಸಿದವರು ಯಾರು? ಯೆಹೋವನಾದ ನಾನೇ ಅಲ್ಲವೇ? ನನ್ನ ಹೊರತು ಬೇರೆ ದೇವರು ಇಲ್ಲ. ನನ್ನ ಹೊರತಾಗಿ ನೀತಿಯುಳ್ಳ ದೇವರೂ, ರಕ್ಷಕನೂ ಇಲ್ಲವೇ ಇಲ್ಲ.

[22] “ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ನೋಡಿರಿ, ರಕ್ಷಣೆಯನ್ನು ಪಡೆಯಿರಿ. ಏಕೆಂದರೆ ನಾನೇ ದೇವರು, ನನ್ನ ಹೊರತು ಯಾರೂ ಇಲ್ಲ.

[23] ನನ್ನಷ್ಟಕ್ಕೆ ನಾನೇ ಆಣೆಯನ್ನು ಇಟ್ಟಿದ್ದೇನೆ. ನೀತಿಯುಳ್ಳ ವಾಕ್ಯವು ನನ್ನ ಬಾಯಿಂದ ಹೊರಟಿದೆ. ಅದು ಹಿಂದಿರುಗದು. ಪ್ರತಿಯೊಬ್ಬರು ನನ್ನ ಮುಂದೆ ಮೊಣಕಾಲೂರುವರು. ಪ್ರತಿಯೊಂದು ನಾಲಿಗೆಯೂ ಪ್ರತಿಜ್ಞೆ ಮಾಡುವುದು.

[24] ಯೆಹೋವ ದೇವರಲ್ಲಿ ಮಾತ್ರ ನೀತಿಯೂ ಬಲವೂ ಉಂಟೆಂದು ಮನುಷ್ಯರೂ ಸಹ ಅವರ ಬಳಿಗೆ ಬರುವರು.” ಆತನ ಮೇಲೆ ಉರಿಗೊಂಡವರೆಲ್ಲರೂ ನಾಚಿಕೆಗೆ ಈಡಾಗುವರು, ಎಂದು ಒಬ್ಬನು ನಿಶ್ಚಯವಾಗಿ ಹೇಳುತ್ತಾನೆ.

[25] ಇಸ್ರಾಯೇಲಿನ ಸಂತಾನದವರೆಲ್ಲರೂ ಯೆಹೋವ ದೇವರಲ್ಲಿ ನೀತಿವಂತರಾಗಿ ಹೆಚ್ಚಳಪಡುವರು.

ಯೆಶಾಯ — Chapters