[1] ದ್ವೀಪಗಳೇ, ನನ್ನ ಮುಂದೆ ಮೌನದಿಂದಿರಿ. ರಾಷ್ಟ್ರಗಳು ತಮ್ಮ ಬಲವನ್ನು ನವೀಕರಿಸಲಿ! ಅವರು ನನ್ನ ಸಮೀಪಕ್ಕೆ ಬಂದು ಮಾತನಾಡಲಿ. ನ್ಯಾಯಸ್ಥಾನಕ್ಕೆ ಸಮೀಪಕ್ಕೆ ಒಟ್ಟಾಗಿ ಬರೋಣ.
[2] ಪೂರ್ವದಿಂದ ನೀತಿವಂತನನ್ನು ಎಬ್ಬಿಸಿ, ಅವನನ್ನು ತನ್ನ ಪಾದಸನ್ನಿಧಿಗೆ ಕರೆದು, ರಾಷ್ಟ್ರಗಳನ್ನು ಅವನ ಮುಂದೆ ಕೊಟ್ಟುಬಿಟ್ಟು, ಅವನನ್ನು ರಾಜರ ಮೇಲೆ ಆಳುವುದಕ್ಕೆ ಮಾಡಿದವನು ಯಾರು? ಅವನ ಖಡ್ಗವನ್ನು ಧೂಳನ್ನಾಗಿಯೂ, ಅವನ ಬಿಲ್ಲನ್ನು ಹಾರಿಹೋಗುವ ಹೊಟ್ಟಿನಂತೆಯೂ ಅವರನ್ನು ಕೊಟ್ಟನು.
[3] ತಾನು ಎಂದೂ ಹೆಜ್ಜೆ ಇಡದ ಮಾರ್ಗದಲ್ಲಿ ಸುರಕ್ಷಿತವಾಗಿ ಆತನು ಅವರನ್ನು ಹಿಂದಟ್ಟುತ್ತಾ ಹೋದನು.
[4] ಇದನ್ನೆಲ್ಲಾ ನಡೆಯಿಸಿ ನೆರವೇರಿಸಿದವನೂ ಆದಿಯಿಂದ ತಲತಲಾಂತರಗಳನ್ನು ಬರಮಾಡಿದವನು ಯಾರು? ಯೆಹೋವ ಎಂಬ ನಾನೇ ಮೊದಲನೆಯವನು, ಅಂತ್ಯಕಾಲದಲ್ಲಿ ಸಂಗಡಿಗನು ಆಗಿರುವಾತನೇ ನಾನು.
[5] ದ್ವೀಪಗಳೆಲ್ಲವೂ ಕಂಡು ಬೆರಗಾದವು. ಭೂಮಿಯ ಕಟ್ಟಕಡೆಯು ನಡುಗಿತು. ಅವರು ಸಮೀಪಕ್ಕೆ ಬಂದರು.
[6] ಪ್ರತಿಯೊಬ್ಬನು ತನ್ನ ನೆರೆಯವನಿಗೆ ಸಹಾಯ ಮಾಡಲಿ. ಪ್ರತಿಯೊಬ್ಬನು ತನ್ನ ಸಹೋದರನಿಗೆ, “ಧೈರ್ಯವಾಗಿರಿ!” ಎಂದು ಹೇಳಲಿ.
[7] ಹಾಗೆಯೇ ಶಿಲ್ಪಿಯು ಅಕ್ಕಸಾಲಿಗನನ್ನು ಪ್ರೋತ್ಸಾಹಗೊಳಿಸಿದನು. ಸುತ್ತಿಗೆಯಿಂದ ಸಮಮಾಡುವವನು ಅಡಿಗಲ್ಲಿನ ಮೇಲೆ ತಟ್ಟುವವನನ್ನು ಉತ್ತೇಜಿಸಿದನು. ಬೆಸುಗೆ “ಚೆನ್ನಾಗಿದೆ” ಎಂದು ಹೇಳಿ, ಅದು ಕದಲದ ಹಾಗೆ ಮೊಳೆಗಳಿಂದ ಜಡಿದರು.
[8] “ಆದರೆ ನನ್ನ ಸೇವಕನಾದ ಇಸ್ರಾಯೇಲೇ, ನಾನು ಆಯ್ದುಕೊಂಡ ಯಾಕೋಬೇ, ನನ್ನ ಸ್ನೇಹಿತನಾದ ಅಬ್ರಹಾಮನ ಸಂತತಿಯೇ,
[9] ನಿನ್ನನ್ನು ಭೂಮಿಯ ಕಟ್ಟಕಡೆಗಳಿಂದ ಆರಿಸಿಕೊಂಡು, ಅದರ ದೂರದ ಕೊನೆಯಿಂದ ಕರೆದು, ‘ನೀನು ನನ್ನ ಸೇವಕನು,’ ನಿನ್ನನ್ನು ನಾನು ಆಯ್ದುಕೊಂಡಿದ್ದೇನೆ. ನಿನ್ನನ್ನು ತಳ್ಳಿಬಿಡುವುದಿಲ್ಲ.
[10] ನೀನಂತೂ ಹೆದರಬೇಡ, ಏಕೆಂದರೆ ನಾನೇ ನಿನ್ನ ದೇವರು, ನಾನು ನಿನ್ನನ್ನು ಬಲಪಡಿಸುತ್ತೇನೆ. ನಾನು ನಿನಗೆ ಸಹಾಯ ಮಾಡುತ್ತೇನೆ. ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿಹಿಡಿಯುತ್ತೇನೆ.
[11] “ನಿನಗೆ ವಿರೋಧವಾಗಿ ಉರಿಗೊಂಡವರೆಲ್ಲರೂ ಅವಮಾನ ಹೊಂದಿ, ಆಶಾಭಂಗಪಡುವರು. ನಿನ್ನ ಸಂಗಡ ವ್ಯಾಜ್ಯವಾಡಿದವರು ನಾಶವಾಗಿ ಇಲ್ಲದೆ ಹೋಗುವರು.
[12] ನಿನ್ನೊಡನೆ ಹೋರಾಡಿದವರನ್ನು ಹುಡುಕಿದವರೂ ಅವರು ನಿನಗೆ ಕಾಣಿಸರು. ನಿನ್ನ ಸಂಗಡ ಯುದ್ಧ ಮಾಡಿದವರು ಇಲ್ಲದೆ ಹೋಗಿ ನಿರ್ನಾಮವಾಗುವರು.
[13] ನೀನಂತೂ ಹೆದರಬೇಡ; ಏಕೆಂದರೆ ಯೆಹೋವ ದೇವರಾದ ನಾನೇ ನಿನಗೆ ಸಹಾಯ ಮಾಡುತ್ತೇನೆ, ನಿನ್ನ ದೇವರಾಗಿರುವ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ!
[14] ಹುಳುವಿನಂತಿರುವ ಯಾಕೋಬೇ, ಪುಟ್ಟ ಇಸ್ರಾಯೇಲೇ, ಭಯಪಡಬೇಡ. ನಾನೇ ನಿನಗೆ ಸಹಾಯ ಮಾಡುತ್ತೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ. ನಿನ್ನ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಹೇಳುತ್ತಾರಲ್ಲಾ!
[15] ಇಗೋ, ನಿನ್ನನ್ನು ಹದವಾದ, ಹೊಸ ಮೊನೆಹಲ್ಲಿನ ಹಂತೀಕುಂಟೆಯನ್ನಾಗಿ ಮಾಡುವೆನು. ನೀನು ಬೆಟ್ಟಗಳನ್ನು ಹೊಕ್ಕು, ಪುಡಿಪುಡಿಮಾಡಿ, ಗುಡ್ಡಗಳನ್ನು ಹೊಟ್ಟಿನಂತೆ ಮಾಡುವೆ.
[16] ನೀನು ಅವುಗಳನ್ನು ತೂರಲು, ಗಾಳಿಯು ಅವುಗಳನ್ನು ಬಡಿದುಕೊಂಡು ಹೋಗುವುದು. ಬಿರುಗಾಳಿಯು ಚೆಲ್ಲಾಪಿಲ್ಲಿ ಮಾಡುವುದು. ನೀನಂತೂ ಯೆಹೋವ ದೇವರಲ್ಲಿ ಸಂತೋಷಿಸಿ, ಇಸ್ರಾಯೇಲಿನ ಪರಿಶುದ್ಧರಲ್ಲಿ ಮಹಿಮೆ ಹೊಂದುವೆ.
[17] ಬಡವರೂ ದರಿದ್ರರೂ ನೀರನ್ನು ಹುಡುಕಿ ಕಾಣದೇ, ಬಾಯಾರಿಕೆಯಿಂದ ನಾಲಿಗೆ ಒಣಗಿದಾಗ, ಯೆಹೋವನಾದ ನಾನೇ ಅವರಿಗೆ ಉತ್ತರಕೊಡುವೆನು. ಇಸ್ರಾಯೇಲ್ ದೇವರಾಗಿರುವ ನಾನು ಅವರನ್ನು ಕೈಬಿಡೆನು.
[18] ಎತ್ತರವಾದ ಸ್ಥಳಗಳಲ್ಲಿ ನದಿಗಳನ್ನು ತಗ್ಗುಗಳ ಮಧ್ಯದಲ್ಲಿ ಬುಗ್ಗೆಗಳನ್ನು ಹೊರಡಿಸಿ, ಮರುಭೂಮಿಯನ್ನು ನೀರಿನ ಕೆರೆಯನ್ನಾಗಿಯೂ, ಒಣನೆಲವನ್ನು ನೀರಿನ ಒರತೆಗಳನ್ನಾಗಿಯೂ ಮಾಡುವೆನು.
[19] ಮರುಭೂಮಿಯಲ್ಲಿ ದೇವದಾರು, ಜಾಲೀಮರ, ಸುಗಂಧ, ಓಲಿವ್ ಮರಗಳನ್ನು ನಾನು ನೆಡುವೆನು. ಮರುಭೂಮಿಯಲ್ಲಿ ತುರಾಯಿ, ತಪಸಿ, ತಿಲಕ ವೃಕ್ಷಗಳನ್ನು ಒಟ್ಟಿಗೆ ಬೆಳೆಯಿಸುವೆನು.
[20] ಆಗ ಯೆಹೋವ ದೇವರ ಹಸ್ತವು ಇದನ್ನು ಮಾಡಿದೆ ಎಂದೂ, ಇಸ್ರಾಯೇಲಿನ ಪರಿಶುದ್ಧನು ಇದನ್ನು ಸೃಷ್ಟಿಸಿದನು ಎಂದೂ ಅವರು ಕಂಡು ತಿಳಿದು, ಮನಸ್ಸಿಗೆ ಗ್ರಹಿಸಿಕೊಳ್ಳುವರು.
[21] “ನಿಮ್ಮ ವ್ಯಾಜ್ಯವನ್ನು ತನ್ನಿರಿ” ಎಂದು ಯೆಹೋವ ದೇವರು ಹೇಳುತ್ತಾರೆ. “ನಿಮ್ಮ ಬಲವಾದ ನ್ಯಾಯಗಳನ್ನು ತನ್ನಿರಿ,” ಎಂದು ಯಾಕೋಬ್ಯರ ಅರಸನು ಹೇಳುತ್ತಾನೆ.
[22] “ವಿಗ್ರಹಗಳೇ, ಮುಂದೆ ಏನಾಗಲಿದೆ ಎಂದು ನಮಗೆ ಹೇಳಿ. ಹಿಂದಿನವುಗಳನ್ನು ನಾವು ಮನಸ್ಸಿಗೆ ತಂದುಕೊಂಡು, ಅವುಗಳ ಪರಿಣಾಮವನ್ನು ಇಲ್ಲವೆ ಮುಂದಿನವುಗಳನ್ನು ತಿಳಿಸಿದರೆ ಗ್ರಹಿಸುವೆವು.
[23] ನೀವು ದೇವರುಗಳೆಂದು ತಿಳಿದುಕೊಳ್ಳುವಂತೆ ಮುಂದೆ ಬರುವವುಗಳನ್ನು ನಮಗೆ ತಿಳಿಸಿರಿ. ಹೌದು, ನಾವು ಗಾಬರಿಯಿಂದ ಭಯಪಡುವ ಹಾಗೆ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಮಾಡಿರಿ.
[24] ನೀವು ಶೂನ್ಯವೇ, ನಿಮ್ಮ ಕಾರ್ಯವು ವ್ಯರ್ಥವೇ. ನಿಮ್ಮನ್ನು ಆರಿಸಿಕೊಂಡವನು ಅಸಹ್ಯನೇ.
[25] “ಉತ್ತರ ದಿಕ್ಕಿನಿಂದ ಒಬ್ಬನನ್ನು ನಾನು ಎಬ್ಬಿಸಿದ್ದೇ. ಸೂರ್ಯೋದಯದ ಕಡೆಯಿಂದ ಅವನು ನನ್ನ ಹೆಸರನ್ನು ಸ್ಮರಿಸುವನು. ಅವನು ಜೇಡಿ ಮಣ್ಣಿನಂತೆಯೂ, ಕುಂಬಾರನು ಮಣ್ಣನ್ನು ತುಳಿಯುವಂತೆಯೂ ಅಧಿಕಾರಸ್ಥರ ಮೇಲೆ ಅವನು ಬರುವನು.
[26] ಆತನು ನೀತಿವಂತನೆಂದು ನಾನು ತಿಳಿಯುವಂತೆ ಮತ್ತು ಹೇಳುವಂತೆ, ಆದಿಯಲ್ಲಿ ಯಾರು ಅದನ್ನು ತಿಳಿಸಿದ್ದಾರೆ? ಹೌದು, ಯಾರೂ ತೋರಿಸುವವನಿಲ್ಲ, ತಿಳಿಸುವವನು ಒಬ್ಬನೂ ಇಲ್ಲ. ನಿಮ್ಮ ಮಾತುಗಳು ಯಾರ ಕಿವಿಗೂ ಬೀಳುವುದಿಲ್ಲ.
[27] ನಾನು ಮೊದಲನೆಯವನಾಗಿ ಚೀಯೋನಿಗೆ, ‘ಇಗೋ, ಅವರನ್ನು ನೋಡು’ ಎಂದು ಹೇಳಿ, ಶುಭಸಮಾಚಾರ ತರತಕ್ಕವನನ್ನು ಯೆರೂಸಲೇಮಿಗೆ ಅನುಗ್ರಹಿಸುವೆನು.
[28] ನಾನು ನೋಡಿದಾಗ, ಅಲ್ಲಿ ಯಾರೂ ಇಲ್ಲ. ನಾನು ಅವರನ್ನು ಕೇಳುವ ಪ್ರಶ್ನೆಗೆ, ಅವರಲ್ಲಿ ಒಂದು ಮಾತನ್ನು ಉತ್ತರಿಸುವ ಸಲಹೆಗಾರನು ಇಲ್ಲವೇ ಇಲ್ಲ.
[29] ಇಗೋ, ಅವರೆಲ್ಲಾ ವ್ಯರ್ಥವೇ, ಅವರ ಕಾರ್ಯಗಳು ಶೂನ್ಯವೇ. ಅವರ ಕೆತ್ತಿದ ವಿಗ್ರಹಗಳು ಗಾಳಿ ಮತ್ತು ಗಲಿಬಿಲಿಯೇ.”