[1] ಆ ಮೇಲೆ ಯೆಹೋವನು ನನಗೆ, “ದೊಡ್ಡ ಹಲಗೆಯನ್ನು ತೆಗೆದುಕೊಂಡು ಸಾಧಾರಣ ಲೇಖನಿಯಿಂದಲೇ ವಿಷಯ ಸೂಚಕವಾದ ಈ ಪದವನ್ನು ಬರೆ, ‘ಮಹೇರ್ ಶಾಲಾಲ್ ಹಾಷ್ ಬಜ್’ ಅಂದರೆ ಸೂರೆಗೆ ಅತುರ, ಕೊಳ್ಳೆಗೆ ಅವಸರ.
[2] ನೀನು ಹೀಗೆ ಬರೆದದ್ದಕ್ಕೆ ಯಾಜಕನಾದ ಊರೀಯ, ಯೆಬೆರೆಕ್ಯನ ಮಗನಾದ ಜೆಕರ್ಯ ಈ ನಂಬಿಗಸ್ತರಾದ ಸಾಕ್ಷಿಗಳನ್ನು ಕರೆಯುವೆನು” ಎಂದು ಹೇಳಿದನು.
[3] ಅನಂತರ, “ನಾನು ನನ್ನ ಹೆಂಡತಿಯೊಡನೆ ಸಂಗಮಿಸಲು ಆಕೆಯು ಬಸುರಾಗಿ ಗಂಡು ಮಗುವನ್ನು ಹೆತ್ತಳು. ಆಗ ಯೆಹೋವನು ನನಗೆ, ಅದಕ್ಕೆ ‘ಮಹೇರ್ ಶಾಲಾಲ್ ಹಾಷ್ ಬಜ್ ಎಂದು ಹೆಸರಿಡು’ ಎಂದು ಹೇಳಿದನು.
[4] ಆ ಮಗುವು, ‘ಅಪ್ಪಾ, ಅಮ್ಮಾ’ ಎಂದು ಕೂಗಬಲ್ಲವನಾಗುವುದಕ್ಕಿಂತ ಮೊದಲೇ ಅಶ್ಶೂರದ ಅರಸನು ದಮಸ್ಕದ ಆಸ್ತಿಯನ್ನೂ, ಸಮಾರ್ಯದ ಸೂರೆಯನ್ನೂ ತೆಗೆದುಕೊಂಡು ಹೋಗುವನು” ಎಂದು ಹೇಳಿದನು.
[5] ಯೆಹೋವನು ಮತ್ತೊಂದಾವರ್ತಿ ನನಗೆ ಹೀಗೆ ನುಡಿದನು,
[6] “ಈ ಜನರು ನಿಧಾನವಾಗಿ ಹರಿಯುವ ಸಿಲೋವದ ನೀರನ್ನು ತ್ಯಜಿಸಿ, ರೆಚೀನನನ್ನೂ, ರೆಮಲ್ಯನ ಮಗನನ್ನೂ ನಂಬಿ ಮೆರೆದಿದ್ದರಿಂದ,
[7] ಇಗೋ ಕರ್ತನು ಪೂರ್ಣ ಪ್ರತಾಪದಿಂದ ಕೂಡಿದ ಅಶ್ಶೂರದ ಅರಸನೆಂಬ ಮಹಾನದಿಯ ರಭಸವಾದ ದೊಡ್ಡ ಪ್ರವಾಹವನ್ನು ಇವರ ಮೇಲೆ ಬರಮಾಡುವನು. ಅದು ತನ್ನ ಕಾಲುವೆಗಳನ್ನೆಲ್ಲಾ ಒಳಗೊಂಡು ದಡಗಳನ್ನೆಲ್ಲಾ ಮೀರಿ,
[8] ಯೆಹೂದದಲ್ಲಿಯೂ ನುಗ್ಗಿ, ತುಂಬಿತುಳುಕಿ ಹಬ್ಬಿಕೊಂಡು ಕತ್ತಿನವರೆಗೂ ಏರುವುದು. ಇಮ್ಮಾನುವೇಲನೇ, ಆ ಅರಸನ ರೆಕ್ಕೆಗಳು ಹರಡಿ ನಿನ್ನ ದೇಶವನ್ನೆಲ್ಲಾ ಆವರಿಸಿಕೊಳ್ಳುವುದು.”
[9] ಜನಾಂಗಗಳೇ, ನೀವು ಒಟ್ಟಾಗಿ ಸೇರಿಕೊಳ್ಳಿರಿ, ಇಲ್ಲದಿದ್ದರೆ ನೀವು ಒಡೆದು ತುಂಡಾಗುವಿರಿ; ದೂರದೇಶಿಯರೇ, ಕಿವಿಗೊಡಿರಿ; ನಡುಕಟ್ಟಿರಿ, ಭಂಗಪಡುವಿರಿ; ಹೌದು ನಡುಕಟ್ಟಿರಿ, ಭಂಗಪಡುವಿರಿ.
[10] ಆಲೋಚನೆ ಮಾಡಿಕೊಳ್ಳಿರಿ, ಅದು ಮುರಿದುಹೋಗುವುದು. ಅಪ್ಪಣೆ ಮಾಡಿರಿ, ಅದು ನಿಲ್ಲುವುದಿಲ್ಲ. ಏಕೆಂದರೆ ದೇವರು ನಮ್ಮ ಕೂಡ ಇದ್ದಾನಷ್ಟೆ.
[11] ಯೆಹೋವನು ನನ್ನ ಮೇಲೆ ಬಲವಾಗಿ ಕೈಯನ್ನಿಟ್ಟು, ಈ ಜನರ ಮಾರ್ಗದಲ್ಲಿ ನಡೆಯಬಾರದೆಂದು ನನಗೆ ಉಪದೇಶಿಸುತ್ತಾ ಹೀಗೆಂದನು,
[12] “ಇವರು ಯಾವುದನ್ನು ಒಪ್ಪಂದವೆನ್ನುತ್ತಾರೋ ನೀವು ಅದನ್ನು ಒಪ್ಪಂದವೆನ್ನಬೇಡಿರಿ; ಇವರು ಯಾವುದಕ್ಕೆ ಹೆದರುತ್ತಾರೋ ನೀವು ಅದಕ್ಕೆ ಹೆದರಬೇಡಿರಿ, ನಡುಗಬೇಡಿರಿ.
[13] ಸೇನಾಧೀಶ್ವರನಾದ ಯೆಹೋವನನ್ನೇ ಪ್ರತಿಷ್ಠೆಪಡಿಸಿರಿ; ಆತನಿಗೆ ಹೆದರಿಕೊಳ್ಳಿರಿ, ನಡುಗಿರಿ.
[14] ಆತನು ಆಶ್ರಯವಾಗುವನು; ಆದರೆ ಇಸ್ರಾಯೇಲಿನ ಎರಡು ಮನೆತನಕ್ಕೆ ಎಡವುವ ಕಲ್ಲೂ, ಮುಗ್ಗರಿಸುವ ಬಂಡೆಯೂ ಯೆರೂಸಲೇಮಿನ ನಿವಾಸಿಗಳಿಗೆ ಬಲೆಯೂ, ಪಂಜರವಾಗುವುದು.
[15] ಅವರಲ್ಲಿ ಅನೇಕರು ಎಡವಿ ಬಿದ್ದು ಭಂಗಪಡುವರು, ಬಲೆಗೆ ಸಿಕ್ಕಿ ವಶವಾಗುವರು.”
[16] ಬೋಧನೆಯನ್ನು ಕಟ್ಟಿಡು, ನನ್ನ ಶಿಷ್ಯರೊಳಗೆ ಉಪದೇಶವನ್ನು ಮುಚ್ಚಿ ಮುದ್ರಿಸು.
[17] ಯಾಕೋಬಿನ ಮನೆತನದವರಿಗೆ ಮುಖವನ್ನು ಮರೆಮಾಡಿಕೊಂಡಿರುವ ಯೆಹೋವನಿಗಾಗಿ ನಾನು ಕಾದುಕೊಂಡು ಎದುರು ನೋಡುತ್ತಿರುವೆನು.
[18] ಆಹಾ, ನಾನೂ, ನನಗೆ ಯೆಹೋವನು ದಯಪಾಲಿಸಿರುವ ಮಕ್ಕಳೂ ಚೀಯೋನ್ ಪರ್ವತದಲ್ಲಿ ವಾಸವಾಗಿರುವ ಸೇನಾಧೀಶ್ವರನಾದ ಯೆಹೋವನಿಂದ ಉಂಟಾದ ಗುರುತುಗಳಾಗಿಯೂ, ಅದ್ಭುತಗಳಾಗಿಯೂ ಇಸ್ರಾಯೇಲರ ಮಧ್ಯದಲ್ಲಿದ್ದೇವೆ.
[19] “ಗುಣಗುಟ್ಟುವ, ಪಿಸುಮಾತನಾಡುವ, ಪ್ರೇತವಿಚಾರಕರನ್ನೂ, ಬೇತಾಳಿಕರನ್ನೂ ಆಶ್ರಯಿಸಿರಿ” ಎಂದು ಒಂದು ವೇಳೆ ನಿಮಗೆ ಹೇಳಾರು, “ಜನರು ತಮ್ಮ ದೇವರನ್ನೇ ಆಶ್ರಯಿಸಬಾರದೋ? ಜೀವಿತರಿಗಾಗಿ ಸತ್ತವರಲ್ಲಿ ವಿಚಾರಿಸುವುದು ಯುಕ್ತವೋ?
[20] ದೇವರ ಉಪದೇಶವನ್ನೂ, ದೇವರ ಸಾಕ್ಷಿಯನ್ನೂ ವಿಚಾರಿಸುವ” ಎಂದು ಅವರು ಹೇಳದಿದ್ದರೆ ಅವರಿಗೆ ಎಂದಿಗೂ ಬೆಳಗಾಗುವುದಿಲ್ಲ.
[21] ಅವರು ಘೋರ ಕಷ್ಟಕ್ಕೊಳಗಾಗಿ ಹಸಿವೆಯಿಂದ ದೇಶದಲ್ಲಿ ಅಲೆಯುವರು. ಅವರು ಹಸಿದಾಗ ಸಿಟ್ಟುಗೊಂಡು ತಮ್ಮ ಅರಸನನ್ನೂ, ತಮ್ಮ ದೇವರನ್ನೂ ಶಪಿಸಿ ಮೇಲಕ್ಕೆ ನೋಡುವರು.
[22] ಮೇಲಕ್ಕೆ ಕಣ್ಣೆತ್ತಿದ್ದರೂ, ಭೂಮಿಯನ್ನು ದೃಷ್ಟಿಸಿದರೂ ಇಗೋ, ಇಕ್ಕಟ್ಟೆಂಬ ಕತ್ತಲೂ, ಸಂಕಟವೆಂಬ ಅಂಧಕಾರವೂ ಕವಿದುಕೊಂಡಿರುವುದು. ಕಾರ್ಗತ್ತಲೆಗೆ ತಳ್ಳಲ್ಪಡುವರು.