Skip to content
Opens in a new window
Listen to this chapter • 5:45

[1] ಯೆಹೋವನು ಯಾರ ಕೈಹಿಡಿದು, ಯಾರ ಎದುರಿಗೆ ಜನಾಂಗಗಳನ್ನು ತುಳಿದು, ರಾಜರ ನಡುಕಟ್ಟನ್ನು ಬಿಚ್ಚಿ, ಯಾರ ಮುಂದೆ ಹೆಬ್ಬಾಗಿಲುಗಳನ್ನು ತೆರೆದು, ಮುಚ್ಚಲ್ಲಿಲ್ಲವೋ, ತಾನು ಅಭಿಷೇಕಿಸಿದ ಆ ಕೋರೆಷನಿಗೆ ಹೀಗೆನ್ನುತ್ತಾನೆ,

[2] “ನಾನು ನಿನ್ನ ಮುಂದೆ ಹೋಗಿ, ದಿಣ್ಣೆಗಳನ್ನು ಸಮಮಾಡುವೆನು. ತಾಮ್ರದ ಕದಗಳನ್ನು ಒಡೆದು, ಕಬ್ಬಿಣದ ಅಗುಳಿಗಳನ್ನು ಮುರಿದುಬಿಡುವೆನು.

[3] ನಿನ್ನ ಹೆಸರು ಹಿಡಿದು ಕರೆಯುವ ಯೆಹೋವನು ನಾನೇ. ಇಸ್ರಾಯೇಲರ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಆಸ್ತಿಯನ್ನೂ, ಗುಪ್ತಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪವನ್ನೂ ನಿನಗೆ ಕೊಡುವೆನು.

[4] ನನ್ನ ಸೇವಕನಾದ ಯಾಕೋಬನಿಗಾಗಿ, ನಾನು ಆದುಕೊಂಡ ಇಸ್ರಾಯೇಲಿಗಾಗಿ ಹೆಸರು ಹಿಡಿದು ನಿನ್ನನ್ನು ಕರೆದಿದ್ದೇನೆ. ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ಬಿರುದನ್ನು ದಯಪಾಲಿಸಿದ್ದೇನೆ.

[5] ನಾನೇ ಯೆಹೋವನು, ಇನ್ನು ಯಾರೂ ಇಲ್ಲ, ನನ್ನ ಹೊರತು ಯಾವ ದೇವರೂ ಇಲ್ಲ. ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ನಡುಕಟ್ಟುವೆನು.

[6] ಪೂರ್ವದಿಂದ ಪಶ್ಚಿಮದ ತನಕ ಇರುವವರೆಲ್ಲರೂ ಇದನ್ನು ನೋಡಿ, ನನ್ನ ಹೊರತು ಯಾರೂ ಇಲ್ಲ, ನಾನೇ ಯೆಹೋವನು.

[7] ನಾನು ಬೆಳಕನ್ನು, ಕತ್ತಲನ್ನು ನಿರ್ಮಿಸಿದವನು, ಮೇಲನ್ನೂ, ಕೇಡನ್ನೂ ಬರಮಾಡುವವನು, ಈ ಸಮಸ್ತ ಕಾರ್ಯಗಳನ್ನು ನಡೆಸುವ ಯೆಹೋವನು ನಾನೇ ಎಂದು ತಿಳಿದುಕೊಳ್ಳುವರು.

[8] ಆಕಾಶಮಂಡಲವೇ, ಮೇಲಿನಿಂದ ಧರ್ಮರಸವನ್ನು ಮಳೆಯಂತೆ ಸುರಿಸು. ಭೂಮಿಯು ಒಡೆದು ರಕ್ಷಣೆಯನ್ನು ಮೊಳೆಯಿಸಿ, ಅದರೊಡನೆ ನೀತಿಫಲವನ್ನು ಬೆಳೆಯಿಸಲಿ. ಯೆಹೋವನೆಂಬ ನಾನೇ ಇದಕ್ಕೆಲ್ಲಾ ಕರ್ತನು.

[9] ಅಯ್ಯೋ, ತನ್ನನ್ನು ರೂಪಿಸಿದಾತನ ಸಂಗಡ ವ್ಯಾಜ್ಯವಾಡುವವನ ಗತಿ ಏನು! ಮಣ್ಣಿನ ಮಡಿಕೆಗಳಲ್ಲಿ ಅವನೂ ಒಂದು ಮಡಿಕೆಯಲ್ಲವೆ! ಮಣ್ಣು ಕುಂಬಾರನಿಗೆ, ‘ನೀನು ಏನು ಮಾಡುತ್ತೀ?’ ಎಂದು ಕೇಳುವುದುಂಟೇ? ಅಥವಾ ನಿನ್ನ ಕಾರ್ಯವು, ‘ಅವನಿಗೆ ಕೈಯಿಲ್ಲ’ ಅಂದೀತೇ?

[10] ‘ನೀನು ಹುಟ್ಟಿಸುವುದೇನು’ ಎಂದು ತಂದೆಯನ್ನು ಕೇಳುವವನ ಪಾಡು ಪಾಡೇ! ‘ನೀನು ಹೆರುವುದೇನು’ ಎಂದು ಸ್ತ್ರೀಯನ್ನು ಕೇಳುವವನ ಗತಿ ಗತಿಯೇ!

[11] ಆದರೂ ಇಸ್ರಾಯೇಲರ ಸದಮಲಸ್ವಾಮಿಯೂ, ಸೃಷ್ಟಿಕರ್ತನೂ ಆದ ಯೆಹೋವನ ಮಾತನ್ನು ಕೇಳಿರಿ, ‘ಭವಿಷ್ಯತ್ತಿನ ವಿಷಯವಾಗಿ ನನ್ನನ್ನು ವಿಚಾರಿಸಿರಿ. ನಾನೇ ನಿರ್ಮಿಸಿದ ನನ್ನ ಮಕ್ಕಳ ವಿಷಯದಲ್ಲಿ ನನಗೆ ಏನನ್ನು ವಿಧಿಸಿದರೂ ವಿಧಿಸಿರಿ.

[12] ಭೂಲೋಕವನ್ನು ಉಂಟುಮಾಡಿ ಅದರಲ್ಲಿನ ಮನುಷ್ಯರನ್ನು ಸೃಷ್ಟಿಸಿದವನು ನಾನೇ. ನನ್ನ ಕೈಗಳೇ ಆಕಾಶಮಂಡಲವನ್ನು ಹರಡಿದವು, ನಕ್ಷತ್ರಸೈನ್ಯಕ್ಕೆ ಅಪ್ಪಣೆಕೊಟ್ಟವನೂ ನಾನೇ.

[13] ನಾನು ಕೋರೆಷನನ್ನು ಧರ್ಮೋದ್ದೇಶದಿಂದ ಉನ್ನತಿಗೆ ತಂದು ನೇಮಿಸಿದ್ದೇನೆ. ಅವನ ಮಾರ್ಗಗಳನ್ನೆಲ್ಲಾ ಸರಾಗಮಾಡುವೆನು. ಅವನು ನನ್ನ ಪಟ್ಟಣವನ್ನು ತಿರುಗಿ ಕಟ್ಟಿ ಕ್ರಯವನ್ನಾಗಲೀ, ಬಹುಮಾನವನ್ನಾಗಲೀ ಕೇಳಿಕೊಳ್ಳದೆ ಸೆರೆಯಾದ ನನ್ನ ಜನರನ್ನು ಬಿಡುಗಡೆ ಮಾಡುವೆನು’” ಎಂದು ಸೇನಾಧೀಶ್ವರನಾದ ಯೆಹೋವನು ಹೇಳುತ್ತಾನೆ.

[14] ಯೆಹೋವನ ಈ ಮಾತನ್ನು ಕೇಳಿರಿ, “ಐಗುಪ್ತದ ಆದಾಯವೂ, ಕೂಷಿನ ವ್ಯಾಪಾರವೂ, ಎತ್ತರದ ಮನುಷ್ಯರಾದ ಸೆಬಾಯರೂ ನಿಮ್ಮಲ್ಲಿಗೆ ಸೇರಿ ನಿಮ್ಮವರಾಗಿ ನಿಮ್ಮನ್ನು ಅನುಸರಿಸುವರು. ಸಂಕೋಲೆಗಳನ್ನು ಕಟ್ಟಿಕೊಂಡು ಬಂದು ನಿಮ್ಮ ಮುಂದೆ ಅಡ್ಡಬಿದ್ದು ಹೀಗೆ ಅರಿಕೆಮಾಡುವರು, ‘ದೇವರು ನಿಜವಾಗಿ ನಿಮ್ಮಲ್ಲಿದ್ದಾನೆ. ಇನ್ನು ಯಾವ ದೇವರೂ ಇಲ್ಲವೇ ಇಲ್ಲ.’”

[15] ಇಸ್ರಾಯೇಲರ ದೇವರೇ, ರಕ್ಷಕನೇ, ನಿಶ್ಚಯವಾಗಿಯೂ ನೀನು ಮರೆಮಾಡಿಕೊಳ್ಳುವ ದೇವರಾಗಿದ್ದೀ.

[16] ವಿಗ್ರಹಗಳನ್ನು ಕೆತ್ತುವವರೆಲ್ಲರೂ ನಾಚಿಕೆಗೀಡಾಗಿ ಮಾನಭಂಗಪಡುವರು. ಹೌದು, ಒಟ್ಟಿಗೆ ಅವಮಾನದಲ್ಲಿ ಮುಳುಗುವರು.

[17] ಇಸ್ರಾಯೇಲಿಗೂ ಯೆಹೋವನಿಂದ ಶಾಶ್ವತ ರಕ್ಷಣೆ ದೊರೆಯುವುದು. ಯುಗಯುಗಾಂತರಕ್ಕೂ ನೀವು ನಾಚಿಕೆಗೀಡಾಗುವುದಿಲ್ಲ, ಮಾನಭಂಗಪಡುವುದಿಲ್ಲ.

[18] ಆಕಾಶಮಂಡಲವನ್ನು ಸೃಷ್ಟಿಸಿದ ಯೆಹೋವನ ಮಾತನ್ನು ಕೇಳಿರಿ, ಆತನೇ ದೇವರು. ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು. ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು. ಈತನು ಹೀಗೆನ್ನುತ್ತಾನೆ, “ನಾನೇ ಯೆಹೋವನು, ಇನ್ನು ಯಾರೂ ಇಲ್ಲ.

[19] ನಾನು ರಹಸ್ಯದಲ್ಲಿ ನುಡಿದವನಲ್ಲ, ಅಧೋಲೋಕದೊಳಗಿಂದ ಮಾತನಾಡಿದವನಲ್ಲ. ಶೂನ್ಯವನ್ನೋ ಎಂಬಂತೆ, ‘ನನ್ನನ್ನು ಹುಡುಕಿರಿ’ ಎಂದು ಯಾಕೋಬ ವಂಶದವರಿಗೆ ನಾನು ಅಪ್ಪಣೆಕೊಡಲಿಲ್ಲ. ಯೆಹೋವನೆಂಬ ನಾನು ಸತ್ಯಾನುಸಾರ ನುಡಿಯುವವನು, ಸರಿಯಾದ ಮಾತುಗಳನ್ನೇ ಆಡುತ್ತೇನೆ.

[20] ತಪ್ಪಿಸಿಕೊಂಡ ಅನ್ಯಜನರೇ, ಕೂಡಿಬನ್ನಿರಿ, ಒಟ್ಟಿಗೆ ಸಮೀಪಿಸಿರಿ! ತಮ್ಮ ಮರದ ವಿಗ್ರಹಗಳನ್ನು ಹೊತ್ತುಕೊಂಡು ರಕ್ಷಿಸಲಾರದ ಆ ದೇವರಿಗೆ ಬಿನ್ನವಿಸುವವರು ಏನೂ ತಿಳಿಯದವರಾಗಿದ್ದಾರೆ.

[21] ಹೇಳಿರಿ, ನಿಮ್ಮ ನ್ಯಾಯಗಳನ್ನು ಮುಂದಕ್ಕೆ ತನ್ನಿರಿ, ನಿಮ್ಮ ದೇವರುಗಳು ತಮ್ಮತಮ್ಮೊಳಗೆ ಆಲೋಚಿಸಿಕೊಳ್ಳಲಿ. ಪೂರ್ವದಿಂದಲೂ ಈ ಸಂಗತಿಯನ್ನು ಪ್ರಕಟಿಸಿದವರು ಯಾರು? ಅದು ನಡೆಯುವುದಕ್ಕೆ ಮೊದಲೇ ಯಾರು ತಿಳಿಸಿದರು? ಯೆಹೋವನಾದ ನಾನೇ ಅಲ್ಲವೇ? ನನ್ನ ಹೊರತು ಬೇರೆ ದೇವರು ಇಲ್ಲವೇ ಇಲ್ಲ, ನನ್ನ ಹೊರತಾಗಿ ಸತ್ಯಸ್ವರೂಪನೂ, ರಕ್ಷಕನಾದ ದೇವರು ಇಲ್ಲವೇ ಇಲ್ಲ.

[22] ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ತಿರುಗಿಕೊಳ್ಳಿರಿ, ರಕ್ಷಣೆಯನ್ನು ಹೊಂದಿಕೊಳ್ಳಿರಿ. ಏಕೆಂದರೆ ನಾನೇ ದೇವರು, ನನ್ನ ಹೊರತು ಯಾರೂ ಇಲ್ಲ.

[23] ನನ್ನಷ್ಟಕ್ಕೆ ನಾನೇ ಆಣೆಯನ್ನು ಇಟ್ಟಿದ್ದೇನೆ, ಸತ್ಯದ ವಾಕ್ಯವು ನನ್ನ ಬಾಯಿಂದ ಹೊರಟಿದೆ, ಅದು ಹಿಂದಿರುಗದು. ಎಲ್ಲರೂ ನನಗೆ ಅಡ್ಡಬೀಳುವರು, ಎಲ್ಲರೂ ನನ್ನನ್ನು ದೇವರೆಂದು ಪ್ರತಿಜ್ಞೆಮಾಡುವರು.

[24] ಯೆಹೋವನಲ್ಲಿ ಮಾತ್ರ ರಕ್ಷಣೆಯೂ, ಶಕ್ತಿಯೂ ಉಂಟು. ಆತನ ಮೇಲೆ ಉರಿಗೊಂಡವರೆಲ್ಲರೂ ನಾಚಿಕೆಪಟ್ಟು ಆತನನ್ನು ಆಶ್ರಯಿಸುವರು.

[25] ಇಸ್ರಾಯೇಲಿನ ಸಮಸ್ತ ಸಂತತಿಯವರೂ ಯೆಹೋವನ ಮೂಲಕ ಸತ್ಯವಂತರಾಗಿ ಆತನಲ್ಲಿ ಆನಂದಿಸುವರು” ಎಂದು ನನ್ನ ವಿಷಯವಾಗಿ ಜನರು ಅಂದುಕೊಳ್ಳುತ್ತಾರೆ.

ಯೆಶಾಯನು — Chapters