Skip to content
Opens in a new window
Listen to this chapter • 3:50

[1] ಆ ದಿನದಲ್ಲಿ ಯೆಹೂದ ದೇಶದೊಳಗೆ ಈ ಗೀತೆಯನ್ನು ಹಾಡುವರು, “ನಮಗೆ ಬಲವಾದ ಪಟ್ಟಣವಿದೆ. ಯೆಹೋವನು ತನ್ನ ರಕ್ಷಣೆಯನ್ನು ಕೋಟೆಯನ್ನಾಗಿಯೂ, ಹೊರಪೌಳಿಯನ್ನಾಗಿಯೂ ಮಾಡಿದ್ದಾನೆ.

[2] ಬಾಗಿಲುಗಳನ್ನು ತೆರೆಯಿರಿ! ಧರ್ಮಸತ್ಯಗಳನ್ನು ಕೈಗೊಳ್ಳುವ ಜನಾಂಗವು ಒಳಗೆ ಪ್ರವೇಶಿಸಲಿ!

[3] ಸ್ಥಿರಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ ನಿನ್ನಲ್ಲಿ ಭರವಸವಿದೆ.

[4] ಯೆಹೋವನಲ್ಲಿ ಸದಾ ಭರವಸವಿಡಿರಿ; ಏಕೆಂದರೆ ಯೆಹೋವನೇ ಶಾಶ್ವತವಾದ ಆಶ್ರಯಗಿರಿಯಾಗಿದ್ದಾನೆ.

[5] ಆತನು ಹೆಮ್ಮೆಯಿಂದ ವಾಸಿಸುವವರನ್ನು ಇಳಿಸಿದ್ದಾನೆ. ಅವರ ಉನ್ನತ ಪಟ್ಟಣವನ್ನು ತಗ್ಗಿಸಿದ್ದಾನೆ. ಅದನ್ನು ಕೆಡವಿ, ನೆಲಸಮಮಾಡಿ ಧೂಳಿಗೆ ತಂದಿದ್ದಾನೆ.

[6] ಅದು ಕಾಲು ತುಳಿತಕ್ಕೆ ಈಡಾಗಿದೆ. ದಿಕ್ಕಿಲ್ಲದ ಬಡವರೂ ಅದನ್ನು ಕಾಲಿನಿಂದ ತುಳಿದು ಬಿಡುತ್ತಾರೆ.

[7] ನೀತಿವಂತನ ಮಾರ್ಗವು ಸಮವಾಗಿದೆ; ನೀನು ಅವನ ದಾರಿಯನ್ನು ಸರಿಪಡಿಸಿ ನೇರಮಾಡುತ್ತಿ.

[8] ಹೌದು, ಯೆಹೋವನೇ, ನಿನ್ನ ನ್ಯಾಯತೀರ್ಪಿನ ಮಾರ್ಗದಲ್ಲಿ ನಡೆಯುತ್ತಾ ನಿನಗಾಗಿ ಕಾದುಕೊಂಡಿದ್ದೇವೆ; ನಿನ್ನ ನಾಮಸ್ಮರಣೆಯು ನಮ್ಮ ಆತ್ಮಕ್ಕೆ ಇಷ್ಟವಾಗಿದೆ, ಹಿತವಾಗಿದೆ.

[9] ರಾತ್ರಿಯಲ್ಲಿ ನಿನ್ನನ್ನು ಮನಃಪೂರ್ವಕವಾಗಿ ಹಾರೈಸಿದ್ದೇವೆ, ಹೌದು, ನಮ್ಮ ಆತ್ಮದಲ್ಲಿ ನಿನ್ನನ್ನು ತವಕದಿಂದ ಹುಡುಕಿದ್ದೇವೆ. ನೀನು ಲೋಕದಲ್ಲಿ ನ್ಯಾಯಕಾರ್ಯಗಳನ್ನು ನಡೆಸುವಾಗ ಭೂನಿವಾಸಿಗಳು ಧರ್ಮಜ್ಞಾನವನ್ನು ಪಡೆದುಕೊಳ್ಳುವರು.

[10] ದುಷ್ಟರನ್ನು ಕರುಣಿಸಿದರೂ, ಅವರು ಧರ್ಮಜ್ಞಾನವನ್ನು ಪಡೆಯರು; ಯೆಹೋವನ ಮಹಿಮೆಯನ್ನು ಲಕ್ಷಿಸದೆ ಯಥಾರ್ಥರ ದೇಶದಲ್ಲಿಯೂ ಅನ್ಯಾಯವನ್ನು ಆಚರಿಸುವರು.

[11] ಯೆಹೋವನೇ, ನೀನು ಕೈಯೆತ್ತಿದ್ದರೂ ಅವರು ಲಕ್ಷಿಸರು. ಆದರೆ ನಿನ್ನ ಸ್ವಜನರ ಅಭಿಮಾನವನ್ನು ನೋಡಿ ನಾಚಿಕೆಪಡಲಿ; ಹೌದು, ಆ ನಿನ್ನ ವಿರೋಧಿಗಳನ್ನು ಅಗ್ನಿಯು ದಹಿಸಿಬಿಡುವುದು.

[12] ಯೆಹೋವನೇ, ನೀನು ನಮಗೆ ಸಮಾಧಾನವನ್ನು ವಿಧಿಸುವಿ, ಏಕೆಂದರೆ ನೀನೇ ನಮ್ಮ ಕ್ರಿಯೆಗಳನ್ನೆಲ್ಲಾ ನಮಗೋಸ್ಕರ ನಡೆಸಿದ್ದಿ.

[13] ನಮ್ಮ ದೇವರಾದ ಯೆಹೋವನೇ, ನಿನ್ನ ಸ್ಥಾನದಲ್ಲಿ ಬೇರೆ ಒಡೆಯರು ನಮ್ಮ ಮೇಲೆ ದೊರೆತನ ಮಾಡುತ್ತಿದ್ದರು; ಆದರೆ ನಾವು ನಿನ್ನ ನಾಮವನ್ನೇ ಹೊಗಳುವೆವು, ಸ್ತುತಿಸುವೆವು.

[14] ನೀನು ಆ ಒಡೆಯರ ಮೇಲೆ ಕೈಮಾಡಿ, ಅವರನ್ನು ನಿರ್ಮೂಲಮಾಡಿ ಅವರ ಜ್ಞಾಪಕವನ್ನು ಅಳಿಸಿಬಿಟ್ಟಿದ್ದಿ. ಸತ್ತವರು ಪುನಃ ಬದುಕುವುದಿಲ್ಲ, ಪ್ರೇತಗಳು ಎದ್ದು ಬರುವುದಿಲ್ಲ.

[15] ಯೆಹೋವನೇ, ನೀನು ಜನಾಂಗವನ್ನು ಹೆಚ್ಚಿಸಿದ್ದೀ, ಹೌದು, ನಿನ್ನ ಜನಾಂಗವನ್ನು ವೃದ್ಧಿಗೊಳಿಸಿದ್ದೀ; ನೀನು ದೇಶದ ಮೇರೆಗಳನ್ನೆಲ್ಲಾ ವಿಸ್ತರಿಸಿ ಮಹಿಮೆಗೊಂಡಿದ್ದೀ.

[16] ಯೆಹೋವನೇ, ನಿನ್ನ ಜನರು ಇಕ್ಕಟ್ಟಿಗೆ ಸಿಕ್ಕಿ ನಿನ್ನನ್ನು ಹುಡುಕಿದರು. ನಿನ್ನ ಶಿಕ್ಷೆ ಅವರ ಮೇಲಿರುವಾಗ ಅವರು ಪ್ರಾರ್ಥನೆಯನ್ನು ಮಾಡಿದರು.

[17] ಹೆರಿಗೆ ಹತ್ತಿರವಾದ ಗರ್ಭಿಣಿಯು ಯಾತನೆಪಡುತ್ತಾ, ಬೇನೆಯಿಂದ ಕೂಗಿ ಅಳುವಂತೆ ಯೆಹೋವನೇ, ನಾವು ನಿನ್ನ ಮುಂದೆ ಸಹಾಯಕ್ಕಾಗಿ ಕೂಗಿ ದುಃಖಿಸಿದ್ದೇವೆ.

[18] ನಾವು ಗರ್ಭಧರಿಸಿ, ವೇದನೆಪಟ್ಟು ಗಾಳಿಯನ್ನು ಹಡೆದಂತಾಯಿತು, ದೇಶಕ್ಕೆ ನಮ್ಮಿಂದ ಯಾವ ಉದ್ಧಾರವೂ ಆಗಲಿಲ್ಲ, ನಮ್ಮೊಳಗೆ ಯಾವ ಭೂನಿವಾಸಿಗಳೂ ಹುಟ್ಟಲಿಲ್ಲ.

[19] ಮೃತರಾದ ನಿನ್ನ ಜನರು ಬದುಕುವರು, ನಮ್ಮ ಹೆಣಗಳು ಜೀವದಿಂದ ಏಳುವವು, ಧೂಳಿನ ನಿವಾಸಿಗಳೇ, ಎಚ್ಚರಗೊಂಡು ಹರ್ಷಧ್ವನಿಗೈಯಿರಿ! ಯೆಹೋವನೇ, ನೀನು ಸುರಿಸುವ ಇಬ್ಬನಿಯು ಮುಂಜಾನೆಯ ಇಬ್ಬನಿಯಂತಿರುವುದು. ಭೂಮಿಯು ಸತ್ತವರನ್ನು ಹೊರಗೆ ಹಾಕುವುದು.

[20] ನನ್ನ ಜನರೇ, ಬನ್ನಿರಿ, ನಿಮ್ಮ ನಿಮ್ಮ ಕೋಣೆಗಳಲ್ಲಿ ಸೇರಿಕೊಂಡು ಬಾಗಿಲುಗಳನ್ನು ಮುಚ್ಚಿಕೊಳ್ಳಿರಿ; ದೈವರೋಷವು ತೀರುವ ತನಕ ಒಂದು ಕ್ಷಣ ಅವಿತುಕೊಳ್ಳಿರಿ.

[21] ಇಗೋ, ಯೆಹೋವನು ಭೂನಿವಾಸಿಗಳಿಗೆ ಅವರ ಪಾಪ ಫಲವನ್ನು ತಿನ್ನಿಸಬೇಕೆಂದು ತನ್ನ ಸ್ಥಳದಿಂದ ಹೊರಡುತ್ತಾನೆ; ಭೂಮಿಯು ತನ್ನಲ್ಲಿ ಇಂಗಿದ್ದ ರಕ್ತವನ್ನು ಪ್ರಕಟಮಾಡುವುದು, ತನ್ನ ನಿವಾಸಿಗಳಲ್ಲಿ ಹತರಾದವರನ್ನು ಇನ್ನು ಮರೆಮಾಡುವುದಿಲ್ಲ.”

ಯೆಶಾಯನು — Chapters