[1] ಅಯ್ಯೋ, ಅನ್ಯಾಯವಾದ ತೀರ್ಪುಗಳನ್ನು ತೀರಿಸಿ, ಕೇಡಿನ ಪತ್ರಗಳನ್ನು ಬರೆಯಿಸುವವರ ಗತಿಯನ್ನು ಏನೆಂದು ಹೇಳಲಿ.
[2] ಬಡವರನ್ನು ನ್ಯಾಯಸ್ಥಾನದಿಂದ ತಳ್ಳಿ, ದಿಕ್ಕಿಲ್ಲದವರಿಗೆ ನ್ಯಾಯವನ್ನು ತಪ್ಪಿಸಿ, ಅನಾಥರನ್ನು ಕೊಳ್ಳೆಹೊಡೆದು, ವಿಧವೆಯರನ್ನು ಸೂರೆಮಾಡಬೇಕೆಂದಿದ್ದಾರೆ.
[3] ದಂಡನೆಯ ದಿನದಲ್ಲಿಯೂ, ದೂರದಿಂದ ಬರುವ ನಾಶನದಲ್ಲಿಯೂ ನೀವು ಏನು ಮಾಡುವಿರಿ? ಸಹಾಯಕ್ಕಾಗಿ ಯಾರ ಬಳಿಗೆ ಓಡುವಿರಿ? ನಿಮ್ಮ ಐಶ್ವರ್ಯವನ್ನು ಯಾರ ವಶಮಾಡುವಿರಿ?
[4] ಕೈದಿಗಳ ಕಾಲ ಕೆಳಗೆ ಮುದುರಿಕೊಂಡು, ಹತರಾದವರ ಕೆಳಗೆ ಬಿದ್ದಿರುವುದೇ ಇವರ ಗತಿ. ಏಕೆಂದರೆ ಇಷ್ಟೆಲ್ಲಾ ನಡೆದರೂ ಯೆಹೋವನ ಕೋಪವು ತೀರದೆ ಕೈ ಇನ್ನು ಚಾಚಿಯೇ ಇರುವುದು.
[5] ಅಯ್ಯೋ, ಅಶ್ಶೂರವೇ ನೀನು ನನ್ನ ಕೋಪವೆಂಬ ಕೋಲು, ನಿನ್ನ ಕೈಯಲ್ಲಿರುವ ದೊಣ್ಣೆಯು ನನ್ನ ರೌದ್ರವೇ.
[6] ನಾನು ಅವನನ್ನು ಭ್ರಷ್ಟಜನರ ವಿರುದ್ಧವಾಗಿ ಕಳುಹಿಸಿ, ನನ್ನ ಕೋಪಕ್ಕೆ ಗುರಿಯಾದ ನನ್ನ ಪ್ರಜೆಯನ್ನು ಸೂರೆಮಾಡಿ, ಕೊಳ್ಳೆ ಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದು ಹಾಕಬೇಕೆಂದು ಅಪ್ಪಣೆ ಕೊಡುವೆನು.
[7] ಅವನ ಅಭಿಪ್ರಾಯವೋ, ಹಾಗಲ್ಲ. ಅನೇಕ ಜನಾಂಗಗಳನ್ನು ತಾನೇ ಸಂಹರಿಸಿ ನಿರ್ಮೂಲ ಮಾಡುವೆನೆಂಬುದೇ ಹೊರತು ಈ ಯೋಚನೆಯು ಅವನ ಮನಸ್ಸಿನಲ್ಲಿ ಇಲ್ಲವೇ ಇಲ್ಲ.
[8] ಅವನು ಹೇಳುವುದೇನೆಂದರೆ, “ನನ್ನ ಅಧಿಪತಿಗಳೆಲ್ಲಾ ಅರಸರಲ್ಲವೇ?
[9] ಕರ್ಕೆಮೀಷಿನ ಗತಿಯು ಕಲ್ನೋವಿಗೆ ಆಯಿತಲ್ಲವೇ? ಅರ್ಪದಿಗೆ ಆದ ಪಾಡು ಹಮಾತಿಗೂ ಬಂತಲ್ಲವೇ? ದಮಸ್ಕದ ಗತಿಯು ಸಮಾರ್ಯಕ್ಕೂ ಸಂಭವಿಸಿತಲ್ಲವೇ?
[10] ಯೆರೂಸಲೇಮಿನ ಮತ್ತು ಸಮಾರ್ಯದ ವಿಗ್ರಹಗಳಿಗಿಂತ ವಿಶೇಷ ವಿಗ್ರಹಗಳುಳ್ಳ ದೇವತೆಗಳ ವಶವಾಗಿರುವ ರಾಜ್ಯಗಳ ಮೇಲೆ ನಾನು ಕೈಮಾಡಿದಂತೆಯೇ,
[11] ಸಮಾರ್ಯವನ್ನೂ, ಅದರ ವಿಗ್ರಹಗಳನ್ನೂ ನಾನು ಕೆಡವಿಬಿಟ್ಟ ಹಾಗೆ, ಯೆರೂಸಲೇಮನ್ನೂ ಅದರ ವಿಗ್ರಹಗಳನ್ನೂ ಕೆಡವಲಾರೆನೋ?” ಎಂಬುದೇ.
[12] ಆದಕಾರಣ ಕರ್ತನಾದ ನಾನು ಚೀಯೋನ್ ಪರ್ವತದಲ್ಲಿಯೂ, ಯೆರೂಸಲೇಮಿನಲ್ಲಿಯೂ ನನ್ನ ಉದ್ದೇಶವನ್ನೆಲ್ಲಾ ನೆರವೇರಿಸಿದ ಮೇಲೆ, “ಅಶ್ಶೂರದ ರಾಜನ ಹೃದಯದ ದೊಡ್ಡಸ್ತಿಕೆಯ ಫಲಕ್ಕೂ, ಅವನ ಗರ್ವದೃಷ್ಟಿಯ ಮೆರೆದಾಟಕ್ಕೂ ತಕ್ಕ ದಂಡನೆಯನ್ನು ಮಾಡುವೆನು.”
[13] ಏಕೆಂದರೆ ಅವನು ತನ್ನೊಳಗೆ, “ನನ್ನ ಜ್ಞಾನ, ಭುಜಬಲಗಳಿಂದಲೇ ಇದನ್ನು ಮಾಡಿದ್ದೇನೆ. ನಾನೇ ವಿವೇಕವುಳ್ಳ ಜನಾಂಗಗಳ ಮೇರೆಗಳನ್ನು ಕಿತ್ತು, ಅವರ ನಿಧಿನಿಕ್ಷೇಪಗಳನ್ನು ಸೂರೆಮಾಡಿ, ಸಿಂಹಾಸನಾರೂಢರನ್ನು ಮಹಾವೀರನಂತೆ ಕೆಡವಿಬಿಟ್ಟಿದ್ದೇನೆ.
[14] ಜನಗಳ ಆಸ್ತಿಪಾಸ್ತಿಯು ಗೂಡಿನಂತೆ ನನ್ನ ಕೈಗೆ ಸಿಕ್ಕಿದೆ. ಪಕ್ಷಿಯು ಇಟ್ಟುಹೋದ ಮೊಟ್ಟೆಗಳನ್ನು ಸಂಗ್ರಹಿಸಿಕೊಳ್ಳುವವನಂತೆ ಭೂಮಿಯನ್ನೆಲ್ಲಾ ಸಂಗ್ರಹಿಸಿಕೊಂಡಿದ್ದೇನೆ. ರೆಕ್ಕೆಯಾಡಿಸಿ, ಬಾಯಿ ತೆರೆದು ಕಿಚುಗುಟ್ಟುವವರು ಯಾರೂ ಇಲ್ಲ” ಎಂದು ಅಂದುಕೊಂಡನು.
[15] ಕೊಡಲಿಯು ಕಡಿಯುವವನಿಗೆ ವಿರುದ್ಧವಾಗಿ ಕೊಚ್ಚಿಕೊಂಡೀತೇ? ಗರಗಸವು ಕತ್ತರಿಸುವವನಿಗೆ ಪ್ರತಿಯಾಗಿ ತನ್ನನ್ನು ಹೆಚ್ಚಿಸಿಕೊಂಡೀತೇ? ಕೋಲು ತನ್ನನ್ನು ಎತ್ತಿದವನ ಮೇಲೆಯೇ ಬೀಸುವಂತಾಯಿತು, ಮರಕ್ಕಿಂತ ಶ್ರೇಷ್ಠನಾಗಿರುವ ಮನುಷ್ಯನನ್ನು ದೊಣ್ಣೆಯು ಎತ್ತಿಕೊಂಡ ಹಾಗಾಯಿತು.
[16] ಆದಕಾರಣ ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಕೊಬ್ಬಿದ ಪ್ರಜೆಗಳಿಗೆ ಕ್ಷಯವನ್ನು ಉಂಟುಮಾಡುವನು. ದಹಿಸುವ ಅಗ್ನಿಯಂತಿರುವ ಉರಿಯೊಂದು ಅವನ ವೈಭವದ ಅಸ್ತಿವಾರಕ್ಕೆ ಹತ್ತಿಕೊಳ್ಳುವುದು.
[17] ಇಸ್ರಾಯೇಲರ ಪರಂಜ್ಯೋತಿಯು ದಹಿಸುವ ಅಗ್ನಿಯಾಗುವುದು. ಅವರ ಪರಿಶುದ್ಧನು ಜ್ವಾಲೆಯಂತಿರುವನು. ಅದು ಒಂದೇ ದಿನದಲ್ಲಿ ಅಶ್ಶೂರದ ಮುಳ್ಳುಗಿಳ್ಳನ್ನು ಸುಟ್ಟು ನುಂಗಿಬಿಡುವುದು.
[18] ಅದು ದೇಹಾತ್ಮಗಳನ್ನು ಉಳಿಸದೇ ಅಲ್ಲಿನ ವನದ ಮತ್ತು ತೋಟದ ವೈಭವವನ್ನು ನಿರ್ಮೂಲ ಮಾಡುವುದು. ದೇಶವೋ ರೋಗಿಯಂತೆ ನಾಶವಾಗುವುದು.
[19] ಅದರ ವನವೃಕ್ಷಗಳ ಸಂಖ್ಯೆಯು ಒಂದು ಚಿಕ್ಕಮಗುವೂ ಸಹ ಎಣಿಸಿ ಬರೆಯುವಷ್ಟು ಕಡಿಮೆಯಾಗುವುದು.
[20] ಆ ದಿನದಲ್ಲಿ ಇಸ್ರಾಯೇಲರೊಳಗೆ ಉಳಿದವರು, ಯಾಕೋಬಿನ ಮನೆತನದವರಲ್ಲಿ ತಪ್ಪಿಸಿಕೊಂಡವರು ತಮ್ಮನ್ನು ಹೊಡೆದವನ ಆಧಾರವನ್ನು ಬಿಟ್ಟು ಯೆಹೋವನೆಂಬ ಇಸ್ರಾಯೇಲರ ಸದಮಲಸ್ವಾಮಿಯನ್ನು ನಂಬಿಗಸ್ತರಾಗಿ ಆಧಾರಮಾಡಿಕೊಳ್ಳುವರು.
[21] ಉಳಿದವರು ಅಂದರೆ ಯಾಕೋಬ್ಯರಲ್ಲಿ ಉಳಿದವರೂ ಸಹ ಪರಾಕ್ರಮಿಯಾದ ದೇವರ ಕಡೆಗೆ ತಿರುಗಿಕೊಳ್ಳುವರು.
[22] ಇಸ್ರಾಯೇಲೇ, ನಿನ್ನ ಜನರು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿದ್ದರೂ ಅವರಲ್ಲಿ ಉಳಿದವರು ಮಾತ್ರ ತಿರುಗಿಕೊಳ್ಳುವರು. ನಾಶವಾಗುವುದಕ್ಕೆ ವಿಧಿಸಲ್ಪಟ್ಟದ್ದು, ನ್ಯಾಯನೀತಿಯಿಂದ ತುಂಬಿ ತುಳುಕುವುದು.
[23] ಏಕೆಂದರೆ ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಭೂಮಂಡಲದಲ್ಲೆಲ್ಲಾ ನಿಶ್ಚಯಿಸಲ್ಪಟ್ಟ ನಾಶನವನ್ನು ಉಂಟುಮಾಡುವನು.
[24] ಆದುದರಿಂದ ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಹೀಗೆ ಹೇಳುತ್ತಾನೆ, “ಚೀಯೋನಿನಲ್ಲಿ ವಾಸಿಸುವ ನನ್ನ ಜನರೇ, ಐಗುಪ್ತರು ಮಾಡಿದಂತೆ, ನಿಮ್ಮನ್ನು ಕೋಲಿನಿಂದ ಹೊಡೆದು, ನಿಮ್ಮ ವಿರುದ್ಧವಾಗಿ ದೊಣ್ಣೆಯನ್ನು ಎತ್ತುವ ಅಶ್ಶೂರರಿಗೆ ಭಯಪಡಬೇಡಿರಿ.
[25] ಇನ್ನು ಸ್ವಲ್ಪ ಕಾಲದೊಳಗೆ ನಿಮ್ಮ ಮೇಲಿನ ಉಗ್ರವು ತೀರಿ, ನನ್ನ ಕೋಪವು ಅವರ ನಾಶನಕ್ಕಾಗುವುದು.”
[26] ಸೇನಾಧೀಶ್ವರನಾದ ಯೆಹೋವನು ಓರೇಬ ಬಂಡೆಯ ಹತ್ತಿರ ಮಿದ್ಯಾನ್ಯರನ್ನು ಹತಮಾಡಿದಂತೆ, ಆತನು ಕೋಲನ್ನು ಸಮುದ್ರದ ಮೇಲೆ ಚಾಚಿ, ಐಗುಪ್ತರ ಮೇಲೆ ಎತ್ತಿದಂತೆ ಎತ್ತುವನು.
[27] ಆ ದಿನದಲ್ಲಿ, ಅವರು ಹೊರಿಸಿದ ಹೊರೆಯು, ನಿಮ್ಮ ಬೆನ್ನಿನಿಂದಲೂ, ಹೂಡಿದ ನೊಗವು ಕುತ್ತಿಗೆಯಿಂದಲೂ ತೊಲಗುವುದು, ಮತ್ತು ನೀವು ಕೊಬ್ಬಿದ ಕಾರಣ ನೊಗವು ಮುರಿದು ಹೋಗುವುದು.
[28] ಶತ್ರುಗಳು ಅಯ್ಯಾಥಿನ ಮೇಲೆ ದಂಡೆತ್ತಿ ಬಂದಿದ್ದಾರೆ, ಮಿಗ್ರೋನನ್ನು ಹಾದುಹೋಗಿದ್ದಾರೆ; ಮಿಕ್ಮಾಷಿನಲ್ಲಿ ತಮ್ಮ ಸಾಮಗ್ರಿಯನ್ನು ಇಟ್ಟುಬಿಟ್ಟಿದ್ದಾರೆ.
[29] ಕಣಿವೆಯನ್ನು ದಾಟಿದ್ದಾರೆ, ಗೆಬದಲ್ಲಿ ದಂಡಿಳಿಸುವ ಅನ್ನುತ್ತಾರೆ. ರಾಮಾ ನಡುಗುತ್ತದೆ, ಸೌಲನ ಗಿಬೆಯು ಓಡಿಹೋಯಿತು.
[30] ಗಲ್ಲೀಮ್ ಗ್ರಾಮವೇ, ಕೂಗಿ ಅರಚಿಕೋ! ಲಯೆಷವೇ, ಕಿವಿಗೊಡು! ಅನಾತೋತೇ, ಪ್ರತಿಧ್ವನಿ ಕೊಡು!
[31] ಮದ್ಮೇನ ದಿಕ್ಕಾಪಾಲಾಯಿತು. ಗೇಬೀಮಿನ ನಿವಾಸಿಗಳು ವಲಸೆ ಹೋದರು.
[32] ಇದೇ ದಿನ ಶತ್ರುಗಳು ನೋಬಿನಲ್ಲಿ ಬೀಡುಬಿಡುವರು. ಚೀಯೋನ್ ನಗರಿಯ ಪರ್ವತದ ಕಡೆಗೆ ಯೆರೂಸಲೇಮಿನ ಬೆಟ್ಟದ ಕಡೆಗೆ ಕೈ ಬೀಸುತ್ತಾರೆ.
[33] ಆಹಾ, ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಕೊಂಬೆಗಳನ್ನು ಕತ್ತರಿಸುವನು. ಅವು ಧಡಮ್ಮನೆ ಬೀಳುವವು. ಉನ್ನತವಾದ ವೃಕ್ಷಗಳು ಕಡಿದು ಕೆಳಗೆ ಬೀಳುವವು. ಎತ್ತರವಾದ ಮರಗಳು ನೆಲದ ಪಾಲಾಗುವವು.
[34] ಆತನು ಅಡವಿಯ ಪೊದೆಗಳನ್ನು ಕಬ್ಬಿಣದ ಕೊಡಲಿಯಿಂದ ಕಡಿದುಬಿಡುವನು. ಲೆಬನೋನಿನ ವನವು ಬಲಿಷ್ಠನಾದವನ ಮುಂದೆ ಬಿದ್ದುಹೋಗುವುದು.