Skip to content
Opens in a new window
Listen to this chapter • 3:36

[1] ಆಮೋಚನ ಮಗನಾದ ಯೆಶಾಯನಿಗೆ ಬಾಬೆಲಿನ ವಿಷಯವಾಗಿ ಕಂಡು ಬಂದ ದೈವೋಕ್ತಿ.

[2] ಶತ್ರುಗಳು ಬಂದು ಪ್ರಭುಗಳ ಪುರದ್ವಾರಗಳಲ್ಲಿ ನುಗ್ಗುವಂತೆ, ಬೋಳು ಬೆಟ್ಟದ ಮೇಲೆ ಧ್ವಜವೆತ್ತಿ ಕೂಗಿರಿ, ಅವರನ್ನು ಕೈಬೀಸಿ ಕರೆಯಿರಿ.

[3] ನಾನು ಆರಿಸಿಕೊಂಡ ಪರಿಶುದ್ಧರಿಗೆ ಅಪ್ಪಣೆ ಕೊಟ್ಟಿದ್ದೇನೆ. ಹೌದು, ನನ್ನ ಜಯದಲ್ಲಿ ಹೆಮ್ಮೆಪಡುವವರು, ನನ್ನ ಶೂರರು ನನ್ನ ಕೋಪವನ್ನು ತೀರಿಸಲಿ ಎಂದು ಅವರಿಗೆ ಕರೆದಿದ್ದೇನೆ.

[4] ಆಹಾ, ಬಹುಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ! ಇಗೋ, ಜನಾಂಗಗಳ ಆರ್ಭಟವು ಒಟ್ಟಿಗೆ ಕೂಡಿಕೊಂಡ ಅನೇಕ ರಾಜ್ಯಗಳ ಆರ್ಭಟದಂತೆ ಇದೆ! ಯೆಹೋವನು ಸೈನ್ಯವನ್ನು ಯುದ್ಧಕ್ಕೆ ಸಿದ್ಧಮಾಡುತ್ತಾನೆ.

[5] ಯೆಹೋವನು ತಾನು ನ್ಯಾಯ ತೀರಿಸುವ ಆಯುಧಗಳೊಡನೆ ದೂರ ದೇಶದಿಂದ ಅಂದರೆ, ಆಕಾಶ ಮಂಡಲದ ಕಟ್ಟಕಡೆಯಿಂದ ಭೂಮಿಯನ್ನೆಲ್ಲಾ ಹಾಳುಮಾಡುವುದಕ್ಕಾಗಿ ಬರುತ್ತಾನೆ.

[6] ಗೋಳಾಡಿರಿ! ಏಕೆಂದರೆ ಯೆಹೋವನ ದಿನವು ಸಮೀಪಿಸಿತು. ಅದು ಸರ್ವಶಕ್ತನಿಂದ ನಾಶವಾಗುವಂತೆ ಬರುವುದು.

[7] ಆದುದರಿಂದ ಎಲ್ಲರ ಕೈಗಳು ಜೋಲು ಬೀಳುವುದು. ಎಲ್ಲರ ಹೃದಯವು ಕರಗಿ ನೀರಾಗುವುದು.

[8] ಅವರು ಭಯಪಡುವರು. ಪ್ರಸವ ವೇದನೆಯಲ್ಲಿರುವ ಸ್ತ್ರೀಯಂತೆ ಯಾತನೆ, ಸಂಕಟಗಳನ್ನು ಅನುಭವಿಸುವರು. ಒಬ್ಬರನ್ನೊಬ್ಬರು ನೋಡಿ ವಿಸ್ಮಯಪಡುವರು. ಅವರ ಮುಖಗಳು ತಲ್ಲಣಗೊಂಡು ಬೆಂಕಿಯಿಂದ ಉರಿಯುವವು.

[9] ಇಗೋ, ಯೆಹೋವನ ದಿನವು ಬರುತ್ತಿದೆ. ಅದು ಭೂಮಿಯನ್ನು ಹಾಳು ಮಾಡಿ, ಪಾಪಿಗಳನ್ನು ನಿರ್ಮೂಲಮಾಡುವುದಕ್ಕೆ ಆತನ ಕೋಪೋದ್ರೇಕದಿಂದಲೂ, ತೀಕ್ಷ್ಣವಾದ ರೋಷದಿಂದಲೂ ಕ್ರೂರವಾಗಿರುವುದು.

[10] ಆಕಾಶದ ತಾರೆಗಳೂ, ನಕ್ಷತ್ರ ರಾಶಿಗಳೂ ಬೆಳಕನ್ನು ಕೊಡುವುದಿಲ್ಲ. ಸೂರ್ಯನು ಮೂಡುತ್ತಲೇ ಕತ್ತಲಾಗುವನು. ಚಂದ್ರನು ಪ್ರಕಾಶಿಸುವುದಿಲ್ಲ.

[11] ನಾನು ಲೋಕದವರಿಗೆ ಅವರ ಪಾಪದ ಫಲವನ್ನೂ, ದುಷ್ಟರಿಗೆ ಅವರ ದುಷ್ಕೃತ್ಯಗಳ ಫಲಗಳಿಗಾಗಿ ಶಿಕ್ಷಿಸಿ, ಸೊಕ್ಕಿದವರ ಅಹಂಕಾರವನ್ನು ಅಡಗಿಸಿ, ಭಯಂಕರವಾದ ಅವರ ಹೆಮ್ಮೆಯನ್ನು ತಗ್ಗಿಸುವೆನು.

[12] ಮನುಷ್ಯರನ್ನು ಚೊಕ್ಕ ಬಂಗಾರಕ್ಕಿಂತಲೂ ಮತ್ತು ಓಫೀರಿನ ಬಂಗಾರಕ್ಕಿಂತಲೂ ವಿರಳವಾಗುವಂತೆ ಮಾಡುವೆನು.

[13] ಆದುದರಿಂದ ಸೇನಾಧೀಶ್ವರನಾದ ಯೆಹೋವನ ಕೋಪೋದ್ರೇಕದಿಂದ ತೀಕ್ಷ್ಣರೋಷದಿಂದ ಆಕಾಶಮಂಡಲವನ್ನು ನಡುಗಿಸಿ, ಭೂಲೋಕವನ್ನು ಅದರ ಸ್ಥಳದಿಂದ ಕದಲಿಸಿ ನಡುಗಿಸುವೆನು.

[14] ಬೇಟೆಗಾರನಿಂದ ತಪ್ಪಿಸಿಕೊಂಡು ಓಡುವ ಜಿಂಕೆಯಂತೆಯೂ, ಒಟ್ಟುಗೂಡಿಸಲು ಯಾರೂ ಇಲ್ಲದಂಥ ಕುರಿಗಳಂತೆಯೂ ಪ್ರತಿಯೊಬ್ಬನೂ ಸ್ವಜನರ ಕಡೆಗೆ ತಿರುಗಿಕೊಂಡು ಸ್ವದೇಶಕ್ಕೆ ಓಡಿಹೋಗುವನು.

[15] ಸಿಕ್ಕಿದವರೆಲ್ಲರು ಇರಿಯಲ್ಪಡುವರು. ಹಿಂಬಾಲಿಸಿ ಹಿಡಿಯಲ್ಪಟ್ಟ ಸಕಲ ಜನರು ಕತ್ತಿಗೆ ತುತ್ತಾಗುವರು.

[16] ಅವರ ಮಕ್ಕಳನ್ನು ಬಂಡೆಗೆ ಅಪ್ಪಳಿಸಿ ಬಿಡುವರು. ಅವರ ಮನೆಗಳನ್ನು ಸೂರೆಮಾಡುವರು. ಅವರ ಹೆಂಡತಿಯರನ್ನು ಅತ್ಯಾಚಾರಕ್ಕೆ ಗುರಿಮಾಡುವರು.

[17] ಇಗೋ, ಅವರ ವಿರುದ್ಧವಾಗಿ ಮೇದ್ಯರನ್ನು ಎಬ್ಬಿಸುವೆನು. ಇವರು ಬೆಳ್ಳಿಯನ್ನು ಲಕ್ಷಿಸರು. ಬಂಗಾರವನ್ನು ಪ್ರೀತಿಸರು.

[18] ಅವರ ಬಿಲ್ಲುಗಳು ಯುವಕರನ್ನು ಚೂರುಚೂರು ಮಾಡುವವು. ಇವರು ಹಸುಳೆಗಳನ್ನು ಕನಿಕರಿಸುವುದಿಲ್ಲ. ಇವರು ಮಕ್ಕಳನ್ನು ಉಳಿಸುವುದಿಲ್ಲ.

[19] ರಾಜ್ಯಗಳ ಘನತೆಯೂ, ಕಸ್ದೀಯರ ಮಹಿಮೆಯ ಭೂಷಣವೂ ಆದ ಬಾಬಿಲೋನಿಗೆ, ದೇವರು ನಾಶಮಾಡಿದ ಸೊದೋಮ್ ಗೋಮೋರಗಳ ಗತಿಯೇ ಸಂಭವಿಸುವುದು.

[20] ಅದು ಎಂದಿಗೂ ನಿವಾಸ ಸ್ಥಳವಾಗದು. ತಲತಲಾಂತರಕ್ಕೂ ಅಲ್ಲಿ ಯಾರೂ ವಾಸಿಸರು; ಯಾವ ಅರಬಿಯನೂ ಗುಡಾರ ಹಾಕನು ಅಥವಾ ಕುರುಬರು ಮಂದೆಯನ್ನು ತಂಗಿಸರು.

[21] ಕಾಡು ಮೃಗಗಳು ಅಲ್ಲಿ ಮಲಗುವವು. ಅವರ ಮನೆಗಳು ಗೂಬೆಗಳಿಂದ ತುಂಬಿರುವವು. ಅಲ್ಲಿ ಉಷ್ಟ್ರಪಕ್ಷಿಗಳು ವಾಸಿಸುವವು ಮತ್ತು ಕಾಡಿನ ಟಗರುಗಳು ಅಲ್ಲಿ ಕುಣಿದಾಡುವವು.

[22] ಅವರ ಕೋಟೆಗಳಲ್ಲಿ ತೋಳಗಳೂ, ಅರಮನೆಗಳಲ್ಲಿ ನರಿಗಳೂ ಕೂಗುವವು. ಸಮಯವು ಹತ್ತಿರವಾಗಿದೆ. ಇನ್ನು ಆ ದಿನಗಳು ಬರುವುದಕ್ಕೆ ತಡವಾಗುವುದಿಲ್ಲ.

ಯೆಶಾಯನು — Chapters