[1] ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು. ಅಧಿಪತಿಗಳು ನ್ಯಾಯದಿಂದ ದೊರೆತನ ಮಾಡುವರು.
[2] ಆಗ ಪ್ರತಿ ಮನುಷ್ಯನು ಗಾಳಿಯಲ್ಲಿ ಅಡಗಿಕೊಳ್ಳುವಂತೆಯೂ, ಅತಿವೃಷ್ಟಿಯಲ್ಲಿ ಮರೆಮಾಡಿಕೊಳ್ಳುವಂತೆಯೂ, ಅರಣ್ಯದಲ್ಲಿನ ನೀರಿನ ಕಾಲುವೆಗಳ ಹಾಗೂ, ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.
[3] ಆಗ ನೋಡುವವರ ಕಣ್ಣು ಮೊಬ್ಬಾಗದು, ಕೇಳುವವರ ಕಿವಿ ಮಂದವಾಗದು.
[4] ಆತುರಗಾರರ ಹೃದಯವು ತಿಳಿವಳಿಕೆಯನ್ನು ಗ್ರಹಿಸುವುದು. ತೊದಲು ಮಾತನಾಡುವವರ ನಾಲಿಗೆಯು ಸ್ವಚ್ಛವಾಗಿಯೂ, ಶೀಘ್ರವಾಗಿಯೂ ಮಾತನಾಡುವುದು.
[5] ಇನ್ನು ಮೇಲೆ ನೀಚನು ಘನವಂತನೆನಿಸಿಕೊಳ್ಳನು. ಕಳ್ಳನು ಮಹನೀಯನೆನಿಸಿಕೊಳ್ಳನು.
[6] ಏಕೆಂದರೆ ನೀಚನು ನೀಚವಾಗಿ ಮಾತನಾಡುವನು. ಅವನ ಹೃದಯವು ಕೇಡನ್ನು ಕಲ್ಪಿಸಿ, ನಡೆಯದೆ ಇರುವುದನ್ನು ನಡಿಸಿ ಯೆಹೋವನಿಗೆ ವಿರುದ್ಧವಾಗಿ ಅಸತ್ಯವನ್ನಾಡಿ, ಹಸಿದವನ ಆಶೆಯನ್ನು ಬರಿದುಮಾಡಿ, ಬಾಯಾರಿದವನ ಪಾನವನ್ನು ತಪ್ಪಿಸುವುದು.
[7] ಮೋಸಗಾರನ ಆಯುಧಗಳು ಕೆಟ್ಟವುಗಳೇ, ದೀನದರಿದ್ರನು ನ್ಯಾಯವಾದದ್ದನ್ನು ಮಾತನಾಡಿದರೂ, ಅವರನ್ನು ಸುಳ್ಳುಮಾತುಗಳಿಂದ ಕೆಡಿಸುವುದಕ್ಕೆ ಕುಯುಕ್ತಿಗಳನ್ನು ಕಲ್ಪಿಸುವನು.
[8] ಘನವಂತನಾದರೋ ಘನಕಾರ್ಯಗಳನ್ನು ಕಲ್ಪಿಸುವನು. ಘನವಾದವುಗಳಲ್ಲಿಯೇ ನಿರತನಾಗಿರುವನು.
[9] ನಿಶ್ಚಿಂತರಾದ ಸ್ತ್ರೀಯರೇ, ಏಳಿರಿ, ನನ್ನ ಧ್ವನಿಯನ್ನು ಕೇಳಿರಿ. ಭಯವಿಲ್ಲದ ಹೆಣ್ಣು ಮಕ್ಕಳೇ, ನನ್ನ ಮಾತಿಗೆ ಕಿವಿಗೊಡಿರಿ!
[10] ನಿರ್ಭೀತರೇ, ಒಂದು ವರ್ಷದ ನಂತರ ಕೆಲವು ದಿನಗಳಲ್ಲಿ ಕಳವಳಗೊಳ್ಳುವಿರಿ. ಆಗ ದ್ರಾಕ್ಷಿಯ ಕೊಯ್ಲು ಇಲ್ಲದೆ ಹೋಗುವುದು, ಯಾವ ಬೆಳೆಯೂ ನಿಮಗೆ ದೊರೆಯುವುದಿಲ್ಲ.
[11] ನಿಶ್ಚಿಂತರಾದ ಸ್ತ್ರೀಯರೇ, ನಡುಗಿರಿ! ನಿರ್ಭೀತರೇ, ಕಳವಳಗೊಳ್ಳಿರಿ! ನಿಮ್ಮ ಬಟ್ಟೆಯನ್ನು ಕಿತ್ತು ಹಾಕಿ ಬೆತ್ತಲೆಯಾಗಿ ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ.
[12] ಇಷ್ಟವಾದ ಹೊಲಗಳ ಮತ್ತು ಫಲವತ್ತಾದ ದ್ರಾಕ್ಷಾಲತೆಗಾಗಿ ಎದುರುನೋಡಿರಿ.
[13] ನನ್ನ ಜನರ ಹೊಲಗದ್ದೆಗಳಲ್ಲಿ ಮುಳ್ಳುಪೊದೆಗಳು ಹುಟ್ಟಿಕೊಂಡಿವೆ. ಉತ್ಸಾಹದಿಂದ ಕೂಡಿದ್ದ ಎಲ್ಲಾ ಮನೆಗಳ ಮತ್ತು ಪಟ್ಟಣಗಳಲ್ಲೂ ಮುಳ್ಳುಗಿಡಗಳು ಹುಟ್ಟಿಕೊಂಡಿವೆ.
[14] ಅರಮನೆಯು ಪಾಳುಬೀಳುವುದು, ಗಿಜಿಗುಟ್ಟುವ ಪಟ್ಟಣವು ನಿರ್ಜನವಾಗುವುದು, ಓಫೆಲ್ ಗುಡ್ಡವೂ, ಗೋಪುರವೂ ಶಾಶ್ವತವಾದ ಗುಹೆಗಳಾಗಿಯೂ, ಕಾಡುಕತ್ತೆಗಳಿಗೆ ಉಲ್ಲಾಸಕರವಾದ ಸ್ಥಳವಾಗಿಯೂ, ದನಕುರಿಗಳ ಹಿಂಡುಗಳಿಗೆ ಹುಲ್ಲುಗಾವಲುಗಳಾಗಿಯೂ ಇರುವುದು.
[15] ಬಳಿಕ ಉನ್ನತಲೋಕದಿಂದ ದಿವ್ಯಾತ್ಮಧಾರೆಯು ನಮ್ಮ ಮೇಲೆ ಸುರಿಸಲ್ಪಡುವುದು. ಆಗ ಅರಣ್ಯವು ತೋಟವಾಗುವುದು, ಈಗಿನ ತೋಟವು (ಮುಂದೆ ಬರುವವರಿಗೆ) ಅರಣ್ಯವಾಗಿ ಕಾಣಿಸುವುದು.
[16] ನ್ಯಾಯವು ಅಡವಿಯಲ್ಲಿ ನೆಲೆಗೊಳ್ಳುವುದು, ಧರ್ಮವು ತೋಟದಲ್ಲಿ ಇದ್ದೇ ಇರುವುದು.
[17] ನೀತಿಯ ಪರಿಣಾಮ ಶಾಂತಿ; ನೀತಿಯ ಫಲವು, ನಿತ್ಯವಾದ ಸಮಾಧಾನ ಮತ್ತು ನಿತ್ಯವಾದ ಭರವಸೆ ಆಗಿರುವವು.
[18] ನನ್ನ ಜನರು ಸಮಾಧಾನದ ನಿವಾಸದಲ್ಲಿಯೂ, ನಿರ್ಭಯವಾದ ನಿಲಯಗಳಲ್ಲಿಯೂ, ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.
[19] ಆದರೆ ಕಲ್ಮಳೆ ಸುರಿಯಲು ವನವು ಹಾಳಾಗುವುದು, ಪಟ್ಟಣವು ನೆಲಸಮವಾಗುವುದು.
[20] ನೀರಾವರಿಗಳಲ್ಲೆಲ್ಲಾ ಬೀಜ ಬಿತ್ತುತ್ತಲೂ, ದನ ಕತ್ತೆಗಳನ್ನು ಮೇಯಲು ಬಿಡುತ್ತಲೂ ಇರುವ ನೀವು ಧನ್ಯರೇ ಸರಿ!