Skip to content
Opens in a new window
Listen to this chapter • 5:39

[1] ಯೆಹೋವನು ಹೀಗೆನ್ನುತ್ತಾನೆ: “ಆಕಾಶವು ನನಗೆ ಸಿಂಹಾಸನ, ಭೂಮಿಯು ನನಗೆ ಪಾದಪೀಠ. ನೀವು ನನಗೆ ಇನ್ನೆಂಥಾ, ಮನೆಯನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಎಂಥದು?

[2] ಇವುಗಳನ್ನೆಲ್ಲಾ ನನ್ನ ಕೈಯೇ ನಿರ್ಮಿಸಿತು, ಹೌದು, ನನ್ನ ಕೈಯಿಂದಲೇ ಇವುಗಳೆಲ್ಲಾ ಉಂಟಾದವು. ನಾನು ಕಟಾಕ್ಷಿಸುವವನು ಎಂಥವನೆಂದರೆ ದೀನನೂ, ಮನಮುರಿದವನೂ ನನ್ನ ಮಾತಿಗೆ ಭಯಪಡುವವನೂ ಆಗಿರುವವನೇ.

[3] ಹೋರಿಯನ್ನು ವಧಿಸುವವನು ನರಬಲಿಯನ್ನು ಕೊಡುತ್ತಾನೆ; ಕುರಿಯನ್ನು ಕಡಿಯುವವನು ನಾಯಿಯ ಕತ್ತನ್ನು ಮುರಿಯುತ್ತಾನೆ; ನೈವೇದ್ಯಮಾಡುವವನು ಹಂದಿಯ ರಕ್ತವನ್ನು ಅರ್ಪಿಸುತ್ತಾನೆ; ಧೂಪಹಾಕುವವನು ವಿಗ್ರಹಾರಾಧನೆ ಮಾಡುತ್ತಾನೆ; ಇವರು ಮನಸ್ಸಿಗೆ ಬಂದ ಮಾರ್ಗಗಳನ್ನು ಆರಿಸಿಕೊಂಡು ತಮ್ಮ ಅಸಹ್ಯಕಾರ್ಯಗಳಲ್ಲಿ ಮನಃಪೂರ್ವಕವಾಗಿ ಆನಂದಿಸುತ್ತಾರೆ;

[4] ಅದಕ್ಕೆ ತಕ್ಕಂತೆ ನಾನು ಇವರಿಗೋಸ್ಕರ ಕುತಂತ್ರಗಳನ್ನು ಆರಿಸಿಕೊಂಡು ಇವರು ಅಂಜುತ್ತಿದ್ದ ವಿಪತ್ತುಗಳನ್ನು ಬರಮಾಡುವೆನು; ಏಕೆಂದರೆ ನಾನು ಕೂಗಿದಾಗ ಯಾರೂ ಉತ್ತರಕೊಡಲಿಲ್ಲ, ನಾನು ಹೇಳಿದಾಗ ಇವರು ಕೇಳಲಿಲ್ಲ; ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡೆಸಿ ನನಗೆ ಇಷ್ಟವಿಲ್ಲದ್ದನ್ನು ಆರಿಸಿಕೊಂಡರು.”

[5] ಯೆಹೋವನ ಮಾತಿಗೆ ಭಯಪಡುವವರೇ, ಆತನ ಮಾತನ್ನು ಕೇಳಿರಿ! ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ದ್ವೇಷಿಸಿ ಬಹಿಷ್ಕರಿಸಿದ ನಿಮ್ಮ ಸಂಬಂಧಿಗಳು, “ಯೆಹೋವನು ಮಹಿಮೆಪಡಲಿ, ನಿಮಗಾಗುವ ಉತ್ಸಾಹವನ್ನು ನೋಡೋಣ” ಎಂದು ಹೇಳಿದ್ದಾರಲ್ಲಾ; ಅವರಿಗಂತು ಅವಮಾನವಾಗುವುದು.

[6] ಇಗೋ, ಪಟ್ಟಣದ ಕಡೆಯಿಂದ ಗದ್ದಲದ ಶಬ್ದ! ದೇವಾಲಯದಲ್ಲಿ ಶಬ್ದ! ಯೆಹೋವನು ತನ್ನ ಶತ್ರುಗಳಿಗೆ ಮುಯ್ಯಿತೀರಿಸುವ ಶಬ್ದ!

[7] ಆಹಾ, ಬೇನೆ ತಿನ್ನುವುದರೊಳಗೆ ಹೆರಿಗೆಯಾಯಿತು, ಪ್ರಸವವೇದನೆ ಇನ್ನು ಕಾಣದಿರುವಲ್ಲಿ ಗಂಡು ಮಗುವನ್ನು ಹೆತ್ತಳು.

[8] ಇಂಥಾ ಸುದ್ದಿಯನ್ನು ಯಾರು ಕೇಳಿದ್ದಾರೆ? ಇಂಥಾ ಸಂಗತಿಯನ್ನು ಕಂಡವರಾರು? ಒಂದು ದಿನದಲ್ಲಿ ರಾಷ್ಟ್ರವು ಹುಟ್ಟೀತೇ? ಕ್ಷಣಮಾತ್ರದಲ್ಲಿ ಜನಾಂಗವನ್ನು ಹೆರಲಿಕ್ಕಾದೀತೇ? ಹೌದು, ಚೀಯೋನೆಂಬಾಕೆಯು ಬೇನೆತಿಂದು ತನಗಾಗಿ ಮಕ್ಕಳನ್ನು ಹೆತ್ತಿದ್ದಾಳೆ.

[9] “ನಾನು ಗರ್ಭದ್ವಾರವನ್ನು ತೆರೆದ ಮೇಲೆ ಪ್ರಸವವಾಗದೆ ಇರಲು ಬಿಡುವೆನೆ?” ಎಂದು ಯೆಹೋವನು ಹೇಳುತ್ತಾನೆ. “ಪ್ರಸವಮಾಡಿಸುವವನಾದ ನಾನು ಗರ್ಭವನ್ನು ಮುಚ್ಚೇನೋ?” ಎಂದು ನಿನ್ನ ದೇವರು ನುಡಿಯುತ್ತಾನೆ.

[10] ಯೆರೂಸಲೇಮ್ ನಗರವನ್ನು ಪ್ರೀತಿಸುವವರೇ, ನೀವೆಲ್ಲರೂ ಆಕೆಯೊಂದಿಗೆ ಆನಂದಿಸಿರಿ, ಆಕೆಯ ವಿಷಯದಲ್ಲಿ ಹರ್ಷಗೊಳ್ಳಿರಿ!

[11] ಆಕೆಯ ನಿಮಿತ್ತ ದುಃಖಿಸುವವರೇ, ನೀವೆಲ್ಲರೂ, ಆಕೆಯ ಸಮಾಧಾನದ ಸ್ತನ್ಯವನ್ನು ಕುಡಿದು ತೃಪ್ತಿಗೊಳ್ಳುವೆವು ಎಂದುಕೊಳ್ಳುವಿರಿ. ಹೌದು, ಆಕೆಯ ವೈಭವದ ಸಮೃದ್ಧಿಯನ್ನು ಹೀರುತ್ತಾ ಹಿಗ್ಗುವೆವು ಎಂದು ಆಕೆಯೊಂದಿಗೆ ಉತ್ಸಾಹದಿಂದ ಉಲ್ಲಾಸಿಸಿರಿ.

[12] ಯೆಹೋವನು ಹೀಗೆನ್ನುತ್ತಾನೆ, “ಇಗೋ, ನಾನು ಆಕೆಗೆ ಸುಖವನ್ನು ನದಿಯಂತೆ ದಯಪಾಲಿಸಿ, ತುಂಬಿ ತುಳುಕುವ ತೊರೆಯನ್ನೋ ಎಂಬಂತೆ ಜನಾಂಗಗಳ ವೈಭವವನ್ನು ನೀಡುವೆನು; ನೀವು ಪಾನಮಾಡುವಿರಿ; ನಿಮ್ಮನ್ನು ಕಂಕುಳಲ್ಲಿ ಎತ್ತಿಕೊಂಡು ಹೋಗುವರು, ತೊಡೆಯ ಮೇಲೆ ನಲಿದಾಡಿಸುವರು.

[13] ತಾಯಿ ಮಗನನ್ನು ಸಂತೈಸುವ ಪ್ರಕಾರ ನಾನು ನಿಮ್ಮನ್ನು ಸಂತೈಸುವೆನು; ಯೆರೂಸಲೇಮಿನಲ್ಲೇ ನಿಮಗೆ ದುಃಖಶಮನವಾಗುವುದು.

[14] ನೀವು ಇದನ್ನು ಕಣ್ಣಾರೆ ಕಾಣುವಿರಿ, ನಿಮ್ಮ ಹೃದಯವು ಉಲ್ಲಾಸಿಸುವುದು, ನಿಮ್ಮ ಎಲುಬುಗಳು ಹಸಿ ಹುಲ್ಲಿನಂತೆ ರಸವತ್ತಾಗುವವು; ಆಗ ಯೆಹೋವನು ತನ್ನ ಸೇವಕರ ಮೇಲೆ ಕೃಪಾಹಸ್ತವನ್ನು ವ್ಯಕ್ತಪಡಿಸಿ ತನ್ನ ಶತ್ರುಗಳ ಮೇಲೆ ರೋಷಗೊಳ್ಳುವನು.

[15] ಆಹಾ, ಯೆಹೋವನು ಬೆಂಕಿಯನ್ನು ಕಟ್ಟಿಕೊಂಡು ಬರುವನು; ಆತನ ರಥಗಳು ಬಿರುಗಾಳಿಯಂತಿರುವವು; ರೌದ್ರಾವೇಶದಿಂದ ತನ್ನ ಸಿಟ್ಟನ್ನು ತೀರಿಸುವನು, ಅಗ್ನಿ ಜ್ವಾಲೆಯಿಂದ ಖಂಡಿಸುವನು.

[16] ಯೆಹೋವನು ಅಗ್ನಿಯಿಂದಲೂ ಮತ್ತು ತನ್ನ ಖಡ್ಗದಿಂದಲೂ ಎಲ್ಲಾ ನರಜನ್ಮದವರಿಗೂ ನ್ಯಾಯತೀರಿಸುವನು; ಆಗ ಆತನಿಂದ ಹತರಾಗುವವರು ಬಹು ಜನರು.

[17] ತಮ್ಮ ಮಧ್ಯದಲ್ಲಿನ ಒಬ್ಬನನ್ನು ಅನುಸರಿಸಿ, ತೋಟಗಳೊಳಗೆ ಪ್ರವೇಶಿಸುವುದಕ್ಕೆ ತಮ್ಮನ್ನು ಪವಿತ್ರಮಾಡಿಕೊಂಡು, ಹಂದಿಯ ಮಾಂಸವನ್ನು, ಅಶುದ್ಧಪದಾರ್ಥವನ್ನೂ, ಇಲಿಯನ್ನೂ ತಿನ್ನುವವರು ಒಟ್ಟಿಗೆ ಅಂತ್ಯ ಕಾಣುವರು” ಎಂದು ಯೆಹೋವನು ನುಡಿಯುತ್ತಾನೆ.

[18] “ಅವರ ಕೃತ್ಯಗಳಿಗೂ, ಆಲೋಚನೆಗಳಿಗೂ ತಕ್ಕದ್ದನ್ನು ಮಾಡುವೆನು; ನಾನು ಇನ್ನು ಮುಂದೆ ಸಮಸ್ತ ಜನಾಂಗಗಳನ್ನೂ ಸಕಲ ಭಾಷೆಯವರನ್ನೂ ಒಟ್ಟಿಗೆ ಬರಮಾಡುವೆನು; ಅವರು ಬಂದು ನನ್ನ ಮಹಿಮೆಯನ್ನು ನೋಡುವರು.

[19] ಅವರ ಮಧ್ಯದಲ್ಲಿ ಒಂದು ಸೂಚಕಕಾರ್ಯವನ್ನು ಮಾಡುವೆನು; ನನ್ನ ಸುದ್ದಿಯನ್ನು ಕೇಳದೆಯೂ, ನನ್ನ ಮಹಿಮೆಯನ್ನು ನೋಡದೆಯೂ ಇರುವ ತಾರ್ಷೀಷ್, ಪೂಲ್, ಬಿಲ್ಲುಗಾರರಿಗೆ ಪ್ರಸಿದ್ಧಸ್ಥಳವಾದ ಲೂದ್, ತೂಬಲ್, ಯಾವಾನ್ ಎಂಬ ಜನಾಂಗಗಳು ಮತ್ತು ದೂರವಾದ ದ್ವೀಪನಿವಾಸಿಗಳು ಇವರೆಲ್ಲರ ಬಳಿಗೆ ಹತಶೇಷರನ್ನು ಕಳುಹಿಸುವೆನು; ಇವರು ಜನಾಂಗಗಳಲ್ಲಿ ನನ್ನ ಮಹಿಮೆಯನ್ನು ಪ್ರಕಟಿಸುವರು.”

[20] ಯೆಹೋವನು ಹೀಗೆನ್ನುತ್ತಾನೆ, “ಇಸ್ರಾಯೇಲರು ಯೆಹೋವನ ಆಲಯಕ್ಕೆ ಶುದ್ಧಪಾತ್ರೆಯಲ್ಲಿ ನೈವೇದ್ಯವನ್ನು ತೆಗೆದುಕೊಂಡು ಬರುವ ಪ್ರಕಾರ ಸಮಸ್ತ ಜನಾಂಗಗಳಲ್ಲಿ ಚದರಿಹೋಗಿರುವ ನಮ್ಮ ಸಹೋದರರನ್ನು ಕುದುರೆ, ತೇರು, ಪಲ್ಲಕಿ, ಹೇಸರಗತ್ತೆ, ಒಂಟೆ ಇವುಗಳ ಮೇಲೆ ಯೆಹೋವನ ನೈವೇದ್ಯಕ್ಕಾಗಿ ಯೆರೂಸಲೇಮೆಂಬ ನನ್ನ ಪರಿಶುದ್ಧಪರ್ವತಕ್ಕೆ ಕರೆತರುವರು.

[21] ಇದಲ್ಲದೆ ಇವರಲ್ಲಿ ಯಾಜಕರು ಮತ್ತು ಲೇವಿಯರು ಆಗತಕ್ಕವರನ್ನು ಆರಿಸಿಕೊಳ್ಳುವೆನು” ಎಂದು ಯೆಹೋವನು ಹೇಳುತ್ತಾನೆ.

[22] “ನಾನು ಸೃಷ್ಟಿಸಿದ ನೂತನ ಆಕಾಶಮಂಡಲವೂ ಮತ್ತು ನೂತನ ಭೂಮಂಡಲವೂ ನನ್ನ ಮುಂದೆ ಸ್ಥಿರವಾಗಿ ನಿಲ್ಲುವ ಪ್ರಕಾರ ನಿಮ್ಮ ಸಂತತಿಯೂ ಹಾಗು ನಿಮ್ಮ ಹೆಸರೂ ಸ್ಥಿರವಾಗಿ ನಿಲ್ಲುವವು.

[23] ಪ್ರತಿಯೊಂದು ಅಮಾವಾಸ್ಯೆಯಲ್ಲಿಯೂ, ಒಂದೊಂದು ಸಬ್ಬತ್ ದಿನದಲ್ಲಿಯೂ, ಸಕಲ ನರಜನ್ಮದವರೂ ನನ್ನ ಸನ್ನಿಧಿಯಲ್ಲಿ ಆರಾಧಿಸುವುದಕ್ಕೆ ಬರುವರು” ಇದು ಯೆಹೋವನ ನುಡಿ.

[24] “ಅವರು ಹೊರಗೆ ಹೋಗಿ ನನಗೆ ದ್ರೋಹ ಮಾಡಿದವರ ಹೆಣಗಳನ್ನು ನೋಡುವರು; ಅವುಗಳನ್ನು ಕಡಿಯುವ ಹುಳವು ಸಾಯುವುದಿಲ್ಲ, ಸುಡುವ ಬೆಂಕಿಯು ಆರುವುದಿಲ್ಲ; ಅವುಗಳು ಲೋಕದವರಿಗೆಲ್ಲಾ ಅಸಹ್ಯವಾಗಿರುವವು.”

ಯೆಶಾಯನು — Chapters