Skip to content
Opens in a new window
Listen to this chapter • 2:10

[1] ಆಹಾ, ನೀನು ಆಕಾಶವನ್ನು ಸೀಳಿ ಇಳಿದು ಬರಬಾರದೇ! ನಿನ್ನ ದರ್ಶನವು ಉಂಟಾಗಿ ಪರ್ವತಗಳು ಅಗಲಿದರೆ ಎಷ್ಟೋ ಒಳ್ಳೆಯದು!

[2] ಒಣಗಿಡಕ್ಕೆ ಹತ್ತುವ ಕಿಚ್ಚಿನ ಪ್ರಕಾರ, ನೀರನ್ನು ಕುದಿಸುವ ಬೆಂಕಿಯೋಪಾದಿಯಲ್ಲಿಯೂ ನೀನು ಪ್ರತ್ಯಕ್ಷನಾಗಿ, ನಿನ್ನ ನಾಮಮಹತ್ತನ್ನು ನಿನ್ನ ಶತ್ರುಗಳಿಗೆ ತಿಳಿಯಪಡಿಸಿ, ಜನಾಂಗಗಳನ್ನು ನಿನ್ನ ದರ್ಶನದಿಂದ ನಡುಗಿಸಬಾರದೇ!

[3] ಹೌದು, ನೀನು ಮೊದಲಿನಂತೆ ನಮ್ಮ ನಿರೀಕ್ಷೆಗೆ ಮೀರಿದ ಭಯಂಕರ ಕೃತ್ಯಗಳನ್ನು ನಡೆಸಿ ಇಳಿದು ಬಂದು, ಪರ್ವತಗಳು ನಿನ್ನ ದರ್ಶನದಿಂದ ನಡುಗಿದರೆ ಎಷ್ಟೋ ಲೇಸು!

[4] ನಿನ್ನನ್ನು ಬಿಟ್ಟರೆ ನಿರೀಕ್ಷಿಸುವವನಿಗೆ ಕಾರ್ಯಕರ್ತನಾದ ಯಾವ ದೇವರನ್ನೂ ಆದಿಯಿಂದ ಯಾರೂ ಕೇಳಲಿಲ್ಲ, ಯಾರ ಕಿವಿಗೂ ಬೀಳಲಿಲ್ಲ, ಯಾರ ಕಣ್ಣೂ ಕಾಣಲಿಲ್ಲ.

[5] ಧರ್ಮವನ್ನು ಅನುಸರಿಸಲು ಸಂತೋಷಪಟ್ಟು ನಿನ್ನ ಮಾರ್ಗದಲ್ಲಿ ನಡೆಯುತ್ತಾ ನಿನ್ನನ್ನು ಸ್ಮರಿಸುವವರಿಗೆ ಪ್ರಸನ್ನನಾಗಿದ್ದಿ; ನಮ್ಮ ಮೇಲಾದರೋ ರೋಷಗೊಂಡಿದ್ದಿ; ಆದರೂ ಪಾಪದಲ್ಲಿ ಮುಳುಗಿರುವ ನಮಗೆ ರಕ್ಷಣೆಯಾದೀತೇ?

[6] ನಾವೆಲ್ಲರು ಅಶುದ್ಧನ ಹಾಗಿದ್ದೇವೆ, ನಮ್ಮ ಧರ್ಮಕಾರ್ಯಗಳೆಲ್ಲಾ ಹೊಲೆಯ ಬಟ್ಟೆಯಂತಿವೆ; ನಾವೆಲ್ಲರೂ ಎಲೆಗಳೋಪಾದಿಯಲ್ಲಿ ಒಣಗಿಹೋಗಿದ್ದೇವೆ; ನಮ್ಮ ಅಪರಾಧಗಳು ಬಿರುಗಾಳಿಯ ಪ್ರಕಾರ ನಮ್ಮನ್ನು ಬಡಿದುಕೊಂಡು ಹೋಗಿವೆ.

[7] ಈಗ ನಿನ್ನ ಹೆಸರೆತ್ತಿ ಪ್ರಾರ್ಥಿಸಿ, ನಿನ್ನನ್ನು ಆಶ್ರಯಿಸಲು ತ್ರಾಣ ತಂದುಕೊಳ್ಳುವವನು ಎಲ್ಲಿಯೂ ಇಲ್ಲ; ನೀನು ನಮಗೆ ವಿಮುಖನಾಗಿ ನಮ್ಮನ್ನು ನಮ್ಮ ಅಪರಾಧಗಳಿಗೆ ವಶಮಾಡಿದ್ದಿಯಲ್ಲಾ.

[8] ಈಗಲಾದರೋ ಯೆಹೋವನೇ, ನೀನು ನಮ್ಮ ತಂದೆಯಾಗಿದ್ದಿ; ನೀನು ಕುಂಬಾರನು, ನಾವು ಜೇಡಿಮಣ್ಣು, ನಾವೆಲ್ಲರೂ ನಿನ್ನ ಕೈಕೆಲಸವೇ.

[9] ಯೆಹೋವನೇ, ಅತಿರೋಷಗೊಳ್ಳದಿರು, ನಮ್ಮ ಅಧರ್ಮವನ್ನು ಕಡೆಯವರೆಗೂ ಜ್ಞಾಪಕದಲ್ಲಿಡಬೇಡ; ಎಲೈ, ಕರ್ತನೇ, ಕಟಾಕ್ಷಿಸು, ನಾವೆಲ್ಲರೂ ನಿನ್ನ ಜನರಾಗಿದ್ದೇವೆ.

[10] ನಿನ್ನ ಪರಿಶುದ್ಧ ಪಟ್ಟಣಗಳು ಕಾಡಾಗಿವೆ, ಚೀಯೋನು ಬೀಡಾಗಿದೆ, ಯೆರೂಸಲೇಮು ಹಾಳಾಗಿ ಹೋಗಿದೆ.

[11] ನಮ್ಮ ಪೂರ್ವಿಕರು ನಿನ್ನನ್ನು ಕೀರ್ತಿಸುತ್ತಿದ್ದ ಸುಂದರ ಪವಿತ್ರಾಲಯವನ್ನು ಬೆಂಕಿಯು ಸುಟ್ಟುಬಿಟ್ಟಿದೆ, ನಮ್ಮ ಅಮೂಲ್ಯ ವಸ್ತುಗಳೆಲ್ಲಾ ನಾಶವಾಗಿವೆ.

[12] ಯೆಹೋವನೇ, ಇವುಗಳನ್ನು ನೋಡಿಯೂ ನಿನ್ನನ್ನು ಬಿಗಿಹಿಡಿಯುವಿಯೋ? ಸುಮ್ಮನಿರುವಿಯೋ? ನಮ್ಮನ್ನು ಹೆಚ್ಚಾಗಿ ಕುಗ್ಗಿಸುವಿಯೋ?”

ಯೆಶಾಯನು — Chapters