[1] ದ್ವೀಪನಿವಾಸಿಗಳೇ, ನನ್ನ ಕಡೆಗೆ ಕಿವಿಗೊಡಿರಿ, ದೂರದ ಜನಾಂಗಗಳೇ, ಆಲಿಸಿರಿ! ನಾನು ಗರ್ಭದಲ್ಲಿದ್ದಾಗಲೇ ಯೆಹೋವನು ನನ್ನನ್ನು ಕರೆದನು, ತಾಯಿಯ ಉದರದಲ್ಲಿದ್ದಂದಿನಿಂದಲೂ ನನ್ನ ಹೆಸರನ್ನು ಹೇಳುತ್ತಿದ್ದಾನೆ.
[2] ನನ್ನ ಬಾಯಿಯನ್ನು ಹದವಾದ ಖಡ್ಗವನ್ನಾಗಿ ಮಾಡಿ, ತನ್ನ ಕೈಯ ನೆರಳಿನಲ್ಲಿ ನನ್ನನ್ನು ಹುದುಗಿಸಿದ್ದಾನೆ. ನನ್ನನ್ನು ಚೂಪಾದ ಬಾಣವನ್ನಾಗಿ ರೂಪಿಸಿ, ತನ್ನ ಬತ್ತಳಿಕೆಯಲ್ಲಿ ಮುಚ್ಚಿಟ್ಟಿದ್ದಾನೆ.
[3] ಆತನು ನನಗೆ, “ನೀನು ನನ್ನ ಸೇವಕನೂ, ನಾನು ಪ್ರಭಾವಹೊಂದಬೇಕಾದ ಇಸ್ರಾಯೇಲೂ ಆಗಿದ್ದೀ” ಎಂದು ಹೇಳಿದನು.
[4] ಅದಕ್ಕೆ ನಾನು, “ನಾನು ಪಡುವ ಪ್ರಯಾಸವು ವ್ಯರ್ಥ, ನನ್ನ ಶಕ್ತಿಯನ್ನೆಲ್ಲಾ ಉಪಯೋಗಮಾಡಿದ್ದು ಹಾಳೇ, ಬರಿ ಗಾಳಿಯೇ. ಆದರೂ ನನ್ನ ನ್ಯಾಯವು ಯೆಹೋವನಲ್ಲಿದೆ. ನನಗೆ ಲಾಭವು ನನ್ನ ದೇವರಿಂದಲೇ ಆಗುವುದು” ಎಂದು ಅಂದುಕೊಂಡೆನು.
[5] ಆಹಾ, ನಾನು ಯೆಹೋವನ ದೃಷ್ಟಿಯಲ್ಲಿ ಮಾನ್ಯನು, ನನ್ನ ದೇವರೇ ನನಗೆ ಬಲವು. ಯಾಕೋಬ್ಯರನ್ನು ತನ್ನ ಕಡೆಗೆ ಸೇರಿಸಿಕೊಳ್ಳಬೇಕೆಂತಲೂ, ಇಸ್ರಾಯೇಲ್ ತನ್ನ ಕಡೆಗೆ ಕೂಡಿಬರಬೇಕೆಂತಲೂ ಆತನು ಗರ್ಭದಲ್ಲಿಯೇ ನನ್ನನ್ನು ತನ್ನ ಸೇವಕನನ್ನಾಗಿ ರೂಪಿಸಿದನಲ್ಲವೆ.
[6] ಆತನು ಹೀಗೆನ್ನುತ್ತಾನೆ, “ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬಿನ ಕುಲಗಳನ್ನು ಉನ್ನತಪಡಿಸುವುದೂ, ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರುಗಿ ಬರಮಾಡುವುದೂ ಅಲ್ಪ ಕಾರ್ಯವೇ ಸರಿ. ನನ್ನ ರಕ್ಷಣೆಯು ಲೋಕದ ಕಟ್ಟಕಡೆಯವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ದಯಪಾಲಿಸುವೆನು.”
[7] ಮನಃಪೂರ್ವಕವಾಗಿ ತಿರಸ್ಕರಿಸಲ್ಪಟ್ಟವನೂ, ಅನ್ಯಜನಾಂಗಕ್ಕೆ ಅಸಹ್ಯನೂ, ಜನದೊಡೆಯರ ಸೇವಕನೂ ಆದವನಿಗೆ ಇಸ್ರಾಯೇಲಿನ ವಿಮೋಚಕನೂ ಸದಮಲಸ್ವಾಮಿಯೂ ಆದ ಯೆಹೋವನು ಹೀಗೆ ಹೇಳುತ್ತಾನೆ, “ಯೆಹೋವನ ಪ್ರಾಮಾಣಿಕತೆಯನ್ನೂ ಇಸ್ರಾಯೇಲಿನ ಸದಮಲಸ್ವಾಮಿಯು ನಿನ್ನನ್ನು ಪರಿಗ್ರಹಿಸಿರುವುದನ್ನೂ ಅರಸರು ನೋಡಿ ಎದ್ದು ನಿಲ್ಲುವರು, ಅಧಿಪತಿಗಳು ಅಡ್ಡಬೀಳುವರು.”
[8] ಇದೇ ಯೆಹೋವನ ನುಡಿ, “ಈ ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರವನ್ನು ದಯಪಾಲಿಸಿದ್ದೇನೆ. ಈ ರಕ್ಷಣೆಯ ದಿನದಲ್ಲಿ ನಿನಗೆ ಸಹಾಯಮಾಡಿದ್ದೇನೆ. ನಾನು ನಿನ್ನನ್ನು ಕಾಪಾಡುತ್ತಾ ನನ್ನ ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿ ನೇಮಿಸಿದ್ದೇನೆ.
[9] ನೀನು ಬಂದಿಸಲ್ಪಟ್ಟವರಿಗೆ ‘ಹೊರಟುಹೋಗಿರಿ’ ಎಂದು, ಕತ್ತಲಲ್ಲಿರುವವರಿಗೆ, ‘ಬೆಳಕಿಗೆ ಹೊರಡಿರಿ’ ಎಂದು ಅಪ್ಪಣೆಕೊಟ್ಟು ಹಾಳಾಗಿದ್ದ ಸ್ವತ್ತುಗಳನ್ನು ಅವರಿಗೆ ಹಂಚಿ ದೇಶವನ್ನು ಉನ್ನತ ಸ್ಥಿತಿಗೆ ತರುವೆನು. ನನ್ನ ಜನವೆಂಬ ಹಿಂಡು ದಾರಿಗಳಲ್ಲಿ ಮೇಯುವುದು. ಎಲ್ಲಾ ಬೋಳುಬೆಟ್ಟಗಳೂ ಕೂಡ ಹುಲ್ಲುಗಾವಲಾಗುವವು.
[10] ಅವರಿಗೆ ಹಸಿವೆ ಬಾಯಾರಿಕೆಗಳು ಆಗುವುದಿಲ್ಲ, ಝಳವೂ ಬಿಸಿಲೂ ಬಡಿಯುವುದಿಲ್ಲ. ಅವರನ್ನು ಕರುಣಿಸುವಾತನು ದಾರಿತೋರಿಸುತ್ತಾ ನೀರು ಸಿಕ್ಕುವ ಒರತೆಗಳ ಬಳಿಯಲ್ಲಿ ನಡೆಸುವನು.
[11] ನನ್ನ ಬೆಟ್ಟಗಳನ್ನೆಲ್ಲಾ ಸಮದಾರಿಯನ್ನಾಗಿ ಮಾಡಿ ನನ್ನ ರಾಜಮಾರ್ಗಗಳನ್ನು ಎತ್ತರಿಸುವೆನು.
[12] ಇಗೋ, ಇವರು ದೂರದಿಂದ ಬರುತ್ತಾರೆ. ಇಗೋ, ಇವರು ಬಡಗಲಿಂದ ಮತ್ತು ಪಡವಲಿಂದ, ಇವರು ಸೀನೀಮ್ ದೇಶದಿಂದ ಬರುತ್ತಿದ್ದಾರೆ.
[13] ಆಕಾಶವೇ, ಹರ್ಷಧ್ವನಿಗೈ! ಭೂಮಿಯೇ, ಉಲ್ಲಾಸಗೊಳ್ಳು! ಪರ್ವತಗಳೇ, ಹರ್ಷಧ್ವನಿಗೈಯಿರಿ! ಏಕೆಂದರೆ ಯೆಹೋವನು ತನ್ನ ಪ್ರಜೆಯನ್ನು ಸಂತೈಸಿ, ದಿಕ್ಕಿಲ್ಲದ ತನ್ನ ಜನರನ್ನು ಕರುಣಿಸುವನು.”
[14] ಚೀಯೋನ್ ನಗರಿಯಾದರೋ, “ಯೆಹೋವನು ನನ್ನನ್ನು ಕೈಬಿಟ್ಟಿದ್ದಾನೆ, ಕರ್ತನು ನನ್ನನ್ನು ಮರೆತಿದ್ದಾನೆ” ಎಂದುಕೊಂಡಳು.
[15] ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತರು ಮರೆತಾಳು, ಆದರೆ ನಾನು ನಿನ್ನನ್ನು ಮರೆಯುವುದಿಲ್ಲ.
[16] ಇಗೋ, ನನ್ನ ಅಂಗೈಗಳಲ್ಲಿ ನಿನ್ನನ್ನು ಚಿತ್ರಿಸಿಕೊಂಡಿದ್ದೇನೆ. ನಿನ್ನ ಪೌಳಿಗೋಡೆಗಳು ಸದಾ ನನ್ನ ಕಣ್ಣೆದುರಿನಲ್ಲಿವೆ.
[17] ನಿನ್ನ ಮಕ್ಕಳು ತ್ವರೆಪಟ್ಟು ಬರುತ್ತಿದ್ದಾರೆ. ನಿನ್ನನ್ನು ಕೆಡವಿ ಹಾಳುಮಾಡಿದವರು ನಿನ್ನೊಳಗಿಂದ ಹೊರಟು ಹೋಗುತ್ತಾರೆ.
[18] ಕಣ್ಣೆತ್ತಿ ಸುತ್ತಲು ನೋಡು! ಇವರೆಲ್ಲರೂ ಕೂಡಿಕೊಂಡು ನಿನ್ನ ಬಳಿಗೆ ಬರುತ್ತಿದ್ದಾರೆ. ಯೆಹೋವನು ಹೀಗೆನ್ನುತ್ತಾನೆ, “ನನ್ನ ಜೀವದಾಣೆ, ನೀನು ಇವರನ್ನೆಲ್ಲಾ ಆಭರಣವನ್ನಾಗಿ ಧರಿಸಿಕೊಳ್ಳುವಿ, ವಧುವು ಒಡ್ಯಾಣವನ್ನು ಕಟ್ಟಿಕೊಳ್ಳುವ ಹಾಗೆ ನೀನು ಇವರನ್ನು ನಿನ್ನ ಎದೆಗೆ ಒರಗಿ ಕಟ್ಟಿಕೊಳ್ಳುವಿ.
[19] ನಿನ್ನ ಹಾಳು ಪ್ರದೇಶಗಳು, ನಿನ್ನ ಬೀಳು ಭೂಮಿಯು, ಕೆಟ್ಟುಹೋದ ನಿನ್ನ ಸೀಮೆಯು ಇವುಗಳಿಗೆ ಏನಾಗುವುದೆಂದು ನೋಡುವಿ. ನಿನ್ನನ್ನು ನುಂಗಿದವರು ದೂರವಾಗುವರು, ನಿನ್ನ ನಿವಾಸಿಗಳಿಗೆ ನೀನು ಸಂಕೋಚಸ್ಥಳವಾಗುವಿ.
[20] ಸಂತಾನವನ್ನು ಕಳೆದುಕೊಂಡವಳಾದ ನಿನ್ನ ಮಕ್ಕಳು, ‘ಸ್ಥಳವು ನನಗೆ ಸಂಕೋಚ, ನಾನು ವಾಸಿಸುವುದಕ್ಕೆ ಸ್ಥಳವಾಗುವಂತೆ ಸರಿದುಕೋ’ ಎಂದು ಆಡಿಕೊಳ್ಳುವ ಮಾತು ಇನ್ನು ಮೇಲೆ ನಿನ್ನ ಕಿವಿಗೆ ಬೀಳುವುದು.
[21] ಆಗ ನೀನು ನಿನ್ನ ಮನದೊಳಗೆ, ‘ನನಗೋಸ್ಕರ ಇವರನ್ನು ಯಾರು ಹೆತ್ತರು? ನಾನೋ ಮಕ್ಕಳನ್ನು ಕಳೆದುಕೊಂಡವಳು, ಪುತ್ರಹೀನಳು, ದೇಶಭ್ರಷ್ಟಳು, ತಿರುಕಳು. ಇವರನ್ನು ಸಾಕಿದವರು ಯಾರು? ಆಹಾ, ನಾನು ಒಂಟಿಯಾಗಿ ಉಳಿದಿದ್ದೆನಲ್ಲಾ, ಇವರೆಲ್ಲಿದ್ದರು?’” ಎಂದುಕೊಳ್ಳುವಿ.
[22] ಕರ್ತನಾದ ಯೆಹೋವನು ಹೀಗೆನ್ನುತ್ತಾನೆ, “ಇಗೋ, ನಾನು ಜನಾಂಗಗಳಿಗೆ ಕೈಸನ್ನೆಮಾಡಿ ದೇಶಾಂತರಗಳಿಗೆ ನನ್ನ ಧ್ವಜವನ್ನು ಎತ್ತುವೆನು. ಅವರು ನಿನ್ನ ಕುಮಾರರನ್ನು ಎದೆಗಪ್ಪಿಕೊಂಡು ಬರುವರು. ನಿನ್ನ ಕುಮಾರ್ತೆಯರನ್ನು ಹೆಗಲ ಮೇಲೆ ಕರೆದುತರುವರು.
[23] ರಾಜರು ನಿನಗೆ ಸಾಕುತಂದೆಗಳು, ಅವರ ರಾಣಿಯರು ನಿನಗೆ ಸಾಕುತಾಯಿಯರು ಆಗುವರು. ನಿನಗೆ ಸಾಷ್ಟಾಂಗವಾಗಿ ಅಡ್ಡಬಿದ್ದು ನಿನ್ನ ಪಾದಧೂಳನ್ನು ನೆಕ್ಕುವರು. ನಾನೇ ಯೆಹೋವನು. ನನ್ನನ್ನು ನಿರೀಕ್ಷಿಸಿಕೊಂಡವರು ಆಶಾಭಂಗಪಡುವುದಿಲ್ಲ” ಎಂದು ನಿನಗೆ ಗೊತ್ತಾಗುವುದು.
[24] ಶೂರನಿಂದ ಕೊಳ್ಳೆಯನ್ನು ತೆಗೆದುಕೊಳ್ಳಬಹುದೋ? ಭಯಂಕರನಿಂದ ಸೆರೆಯಾದವರನ್ನು ಬಿಡಿಸಬಹುದೋ?
[25] ಯೆಹೋವನು ಹೀಗೆನ್ನುತ್ತಾನೆ, “ಶೂರನ ಸೆರೆಯವರೂ ಅಪಹರಿಸಲ್ಪಡುವರು. ಭಯಂಕರನ ಕೊಳ್ಳೆಯೂ ತೆಗೆಯಲ್ಪಡುವುದು. ನಿನ್ನೊಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ ನಿನ್ನ ಮಕ್ಕಳನ್ನು ಉದ್ಧರಿಸುವೆನು.
[26] ನಿನ್ನ ಹಿಂಸಕರು ತಮ್ಮ ಮಾಂಸವನ್ನೇ ತಿನ್ನುವಂತೆ ಮಾಡುವೆನು, ದ್ರಾಕ್ಷಾರಸವನ್ನು ಕುಡಿಯುವ ಹಾಗೆ ಅವರು ಸ್ವಂತ ರಕ್ತವನ್ನು ಕುಡಿದು ಅಮಲೇರುವರು. ಆಗ ಯೆಹೋವನಾದ ನಾನೇ ನಿನ್ನ ರಕ್ಷಕನು, ನಿನ್ನ ವಿಮೋಚಕನು, ಯಾಕೋಬ್ಯರ ಶೂರನು” ಎಂದು ನರಜನ್ಮದವರೆಲ್ಲರಿಗೂ ಗೊತ್ತಾಗುವುದು.