[1] ಆಗ ಅರಸನಾದ ಹಿಜ್ಕೀಯನು ಅದನ್ನು ಕೇಳಿದಾಗ ತನ್ನ ಬಟ್ಟೆಗಳನ್ನು ಹರಿದುಕೊಂಡು ಗೋಣೀತಟ್ಟನ್ನು ಕಟ್ಟಿಕೊಂಡು ಯೆಹೋವನ ಆಲಯಕ್ಕೆ ಹೋದನು.
[2] ಇದಲ್ಲದೆ ಅವನು ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಲೇಖಕನಾದ ಶೆಬ್ನ, ಹಿರಿಯರಾದ ಯಾಜಕರು ಇವರನ್ನು ಕರೆಯಿಸಿ, “ನೀವು ಗೋಣಿತಟ್ಟನ್ನು ಕಟ್ಟಿಕೊಂಡು ಆಮೋಚನ ಮಗನೂ, ಪ್ರವಾದಿಯೂ ಆಗಿರುವ ಯೆಶಾಯನ ಬಳಿಗೆ ಹೋಗಿ ಹೀಗೆ ಹೇಳಿರಿ” ಎಂದು ಆಜ್ಞಾಪಿಸಿದನು.
[3] ಆಗ ಅವರು ಯೆಶಾಯನಿಗೆ, “ಹಿಜ್ಕೀಯನು ಹೀಗೆ ಹೇಳುತ್ತಾನೆ, ‘ಈ ದಿನದಲ್ಲಿ ನಮಗೆ ಮಹಾಕಷ್ಟವೂ, ಶಿಕ್ಷೆಯೂ, ನಿಂದೆಯೂ ಸಂಭವಿಸಿರುತ್ತದೆ. ಹೆರಿಗೆಯ ಕಾಲ ಬಂದದೆ; ಆದರೆ ಹೆರುವುದಕ್ಕೆ ಬಲ ಸಾಲದು.
[4] ನಿನ್ನ ದೇವರಾದ ಯೆಹೋವನು ಅಶ್ಶೂರದ ಅರಸನಿಂದ ಕಳುಹಿಸಲ್ಪಟ್ಟ ರಬ್ಷಾಕೆಯ ನಿಂದಾವಾಕ್ಯಗಳನ್ನು ಕೇಳಿರುವನು, ಅವನು ತನ್ನ ಯಜಮಾನನ ಹೆಸರಿನಲ್ಲಿ ಜೀವಸ್ವರೂಪನಾದ ದೇವರನ್ನು ದೂಷಿಸಿದ್ದರಿಂದ ಆತನು ಅವನಿಗೆ ಮುಯ್ಯಿತೀರಿಸಾನು. ಆದುದರಿಂದ ಉಳಿದಿರುವ ಸ್ವಲ್ಪ ಜನರಿಗೋಸ್ಕರ ಯೆಹೋವನನ್ನು ಪ್ರಾರ್ಥಿಸು’” ಎಂದು ಹೇಳಿದರು.
[5] ಯೆಶಾಯನು ಅರಸನಾದ ಹಿಜ್ಕೀಯನ ಕಡೆಯಿಂದ ತನ್ನ ಬಳಿಗೆ ಬಂದ ಸೇವಕರಿಗೆ,
[6] “ಅಶ್ಶೂರದ ಅರಸನ ಸೇವಕರು ನನ್ನನ್ನು ದೂಷಿಸಿದ ಮಾತುಗಳನ್ನು ಕೇಳಿದ್ದೀ, ಅವುಗಳಿಗೆ ನೀನು ಹೆದರಬೇಡ.
[7] ಇಗೋ, ನಾನು ಅವನ ಮೇಲೆ ಭಯದ ಆತ್ಮವನ್ನು ಬರ ಮಾಡುವೆನು. ಅವನು ಒಂದು ಸುದ್ದಿಯನ್ನು ಕೇಳಿ ತಿರುಗಿಕೊಂಡು ಸ್ವದೇಶಕ್ಕೆ ಹೋಗಿ, ಅಲ್ಲಿ ಕತ್ತಿಯಿಂದ ಬೀಳುವಂತೆ ಮಾಡುವೆನು ಎಂಬ ಯೆಹೋವನ ಮಾತನ್ನು ನಿಮ್ಮ ಯಜಮಾನನಿಗೆ ಹೇಳಿರಿ” ಎಂಬುದಾಗಿ ಉತ್ತರಕೊಟ್ಟನು.
[8] ರಬ್ಷಾಕೆಯು ಹಿಂದಿರುಗಿ ಹೋಗುವಾಗ ದಾರಿಯಲ್ಲಿ ಅಶ್ಶೂರದ ಅರಸನು ಲಾಕೀಷನ್ನು ಬಿಟ್ಟು ಹೋದನೆಂಬ ವರ್ತಮಾನವನ್ನು ಕೇಳಿ ಲಿಬ್ನಕ್ಕೆ ಹೋಗಿ, ಅಲ್ಲಿ ಅವನನ್ನು ಕಂಡನು. ಆಗ ಅವನು ಆ ಪಟ್ಟಣದ ವಿರುದ್ಧವಾಗಿ ಯುದ್ಧಮಾಡುತ್ತಾ ಇದ್ದನು.
[9] ಅಷ್ಟರಲ್ಲಿ ಕೂಷಿನ ಅರಸನಾದ ತಿರ್ಹಾಕನು ತನ್ನ ವಿರುದ್ಧವಾಗಿ ಹೊರಟಿದ್ದಾನೆಂಬ ಸುದ್ದಿಯನ್ನು ಅಶ್ಶೂರದ ಅರಸನಾದ ಸನ್ಹೇರೀಬನು ಕೇಳಿ, ಹಿಜ್ಕೀಯನ ಬಳಿಗೆ ದೂತರನ್ನು ಕಳುಹಿಸಿ,
[10] “ಹಿಜ್ಕೀಯನೇ, ನೀನು ನಂಬುವ ದೇವರು, ‘ಯೆರೂಸಲೇಮು ಅಶ್ಶೂರದ ಅರಸನಿಗೆ ವಶವಾಗುವುದಿಲ್ಲವೆಂದು ಹೇಳಿ ನಿನ್ನನ್ನು ಮೋಸಗೊಳಿಸಾನು.’
[11] ಅಶ್ಶೂರದ ಅರಸರು ಎಲ್ಲಾ ರಾಜ್ಯಗಳನ್ನು ಸಂಪೂರ್ಣವಾಗಿ ನಾಶಮಾಡಿದರೆಂದು ಕೇಳಿದಿಯಲ್ಲಾ? ಹೀಗಿದ್ದ ಮೇಲೆ ನೀನು ಉಳಿಯುವಿಯೋ?
[12] ನನ್ನ ತಂದೆತಾತಂದಿರು ಗೋಜಾನ್, ಖಾರಾನ್, ರೆಚೆಫ್ ಎಂಬ ಪಟ್ಟಣಗಳ ಜನರನ್ನೂ ತೆಲಸ್ಸಾರ್ ಪ್ರಾಂತ್ಯದಲ್ಲಿರುವ ಎದೆನಿನ ಜನರನ್ನೂ ನಾಶಮಾಡುವುದಕ್ಕೆ ಹೋದಾಗ ಅವರ ದೇವತೆಗಳು ಅವರನ್ನು ಕಾಪಾಡಿದವೋ?
[13] ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ, ಇವ್ವಾ ಎಂಬ ಪಟ್ಟಣಗಳ ಅರಸರು ಏನಾದರು ಎಂಬ ನನ್ನ ಮಾತನ್ನು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಿರಿ” ಎಂಬುದಾಗಿ ದೂತರನ್ನು ಹಿಜ್ಕೀಯನ ಬಳಿಗೆ ಕಳುಹಿಸಿದನು.
[14] ಹಿಜ್ಕೀಯನು ಆ ದೂತರು ತಂದ ಪತ್ರವನ್ನು ತೆಗೆದುಕೊಂಡು ಓದಿದ ನಂತರ ಯೆಹೋವನ ಆಲಯಕ್ಕೆ ಹೋಗಿ ಅದನ್ನು ಯೆಹೋವನ ಮುಂದೆ ತೆರೆದಿಟ್ಟನು.
[15] ಹಿಜ್ಕೀಯನು ಯೆಹೋವನನ್ನು ಕುರಿತು
[16] “ಕೆರೂಬಿಗಳ ಮೇಲೆ ಆಸೀನನಾಗಿರುವಾತನೇ, ಇಸ್ರಾಯೇಲ್ ದೇವರೇ, ಸೇನಾಧೀಶ್ವರನಾದ ಯೆಹೋವನೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀನೊಬ್ಬನೇ, ಪರಲೋಕ ಭೂಲೋಕಗಳನ್ನು ಉಂಟುಮಾಡಿದವನು ನೀನೇ.
[17] ಯೆಹೋವನೇ, ಕಿವಿಗೊಟ್ಟು ಕೇಳು. ಯೆಹೋವನೇ, ಕಣ್ಣಿಟ್ಟು ನೋಡು. ಸನ್ಹೇರೀಬನು ಜೀವಸ್ವರೂಪ ದೇವರಾದ ನಿನ್ನನ್ನು ನಿಂದಿಸುವುದಕ್ಕೋಸ್ಕರ ಹೇಳಿ ಕಳುಹಿಸಿದ ಮಾತುಗಳನ್ನೆಲ್ಲಾ ಮನಸ್ಸಿಗೆ ತಂದುಕೋ.
[18] ಯೆಹೋವನೇ, ಅಶ್ಶೂರದ ಅರಸರು ಸಕಲ ಜನಾಂಗಗಳನ್ನೂ, ಅವರ ದೇಶಗಳನ್ನೂ ಹಾಳು ಮಾಡಿದ್ದು ನಿಜ.
[19] ಅವರ ದೇವತೆಗಳನ್ನು ಬೆಂಕಿಯಲ್ಲಿ ಹಾಕಿದರು, ಏಕೆಂದರೆ ಅವು ದೇವತೆಗಳಲ್ಲ, ಮನುಷ್ಯರು ಕೆತ್ತಿದ ಕಲ್ಲು ಮರಗಳ ಬೊಂಬೆಗಳಷ್ಟೆ. ಆದುದರಿಂದಲೇ ಅವು ಅವರಿಂದ ಹಾಳಾದವು.
[20] ಹೀಗಿರುವುದರಿಂದ ಯೆಹೋವನೇ, ನಮ್ಮ ದೇವರೇ, ನೀನೇ ಅದ್ವಿತೀಯನಾದ ಯೆಹೋವನೆಂಬುದನ್ನು ಭೂರಾಜ್ಯಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು ಎಂದು ಪ್ರಾರ್ಥಿಸಿದನು.”
[21] ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿಕಳುಹಿಸಿದ್ದೇನೆಂದರೆ, “ಇಸ್ರಾಯೇಲ್ ದೇವರಾದ ಯೆಹೋವನ ಈ ಮಾತುಗಳನ್ನು ಕೇಳು, ‘ನೀನು ಅಶ್ಶೂರದ ಅರಸನಾದ ಸನ್ಹೇರೀಬನ ವಿಷಯವಾಗಿ ಮಾಡಿದ ಬಿನ್ನಹಗಳನ್ನು ಕೇಳಿದೆನು.’
[22] ಯೆಹೋವನು ಅವನನ್ನು ಕುರಿತು ಹೇಳುವುದೇನೆಂದರೆ, ‘ಕನ್ನಿಕೆಯಾಗಿರುವ ಚೀಯೋನ್ ಕುವರಿಯು ನಿನ್ನನ್ನು ತಿರಸ್ಕರಿಸಿ ಪರಿಹಾಸ್ಯಮಾಡುತ್ತಾಳೆ, ಯೆರೂಸಲೇಮ್ ಕುವರಿಯು ನಿನ್ನ ಹಿಂದೆ ತಲೆಯಾಡಿಸುತ್ತಾಳೆ.
[23] ನೀನು ಯಾರನ್ನು ನಿಂದಿಸಿ ಯಾರನ್ನು ದೂಷಿಸಿದ್ಡೀ? ಯಾರ ವಿರುದ್ಧವಾಗಿ ಬಾಯ್ದೆರೆದು ಧ್ವನಿಯೆತ್ತಿದ್ದೀ? ನೀನು ಸೊಕ್ಕಿನಿಂದ ನೋಡಿದ್ದು ಯಾರನ್ನು? ಇಸ್ರಾಯೇಲರ ಸದಮಲಸ್ವಾಮಿಯನ್ನಲ್ಲವೇ!’
[24] ನೀನು ನಿನ್ನ ಸೇವಕರ ಮುಖಾಂತರವಾಗಿ ಕರ್ತನನ್ನು ನಿಂದಿಸಿ, ‘ನನ್ನ ರಥಸಮೂಹದೊಡನೆ ಪರ್ವತಶಿಖರಗಳನ್ನು ಹತ್ತಿದ್ದೇನೆ. ಲೆಬನೋನಿನ ದುರ್ಗಮಸ್ಥಳಗಳಿಗೆ ಹೋಗಿದ್ದೇನೆ; ಅದರ ಎತ್ತರವಾದ ದೇವದಾರು ವೃಕ್ಷಗಳನ್ನೂ, ಶ್ರೇಷ್ಠವಾದ ತುರಾಯಿ ಮರಗಳನ್ನೂ ಕಡಿದು ಬಿಟ್ಟಿದ್ದೇನೆ; ಅಲ್ಲಿನ ಬಹುದೂರದ ಶಿಖರವನ್ನೂ, ಉದ್ಯಾನವನಗಳನ್ನೂ ಪ್ರವೇಶಿಸಿದ್ದೇನೆ.
[25] ಪರದೇಶಗಳಲ್ಲಿ ಅಗೆದು ನೀರು ತೆಗೆದುಕೊಂಡು ಕುಡಿದಿದ್ದೇನೆ; ನನ್ನ ಪಾದಗಳಿಂದ ಐಗುಪ್ತದ ಎಲ್ಲಾ ಹೊಳೆಗಳನ್ನು ಬತ್ತಿಸಿದ್ದೇನೆ’ ಎಂಬುದಾಗಿ ನೀನು ಕೊಚ್ಚಿಕೊಂಡಿದ್ದಿ.
[26] ಇದನ್ನು ನೀನು ಕೇಳಲಿಲ್ಲವೋ? ಹೀಗಾಗಬೇಕೆಂದು ಬಹುಕಾಲದ ಹಿಂದೆಯೇ ಗೊತ್ತುಮಾಡಿದೆನು. ಪೂರ್ವಕಾಲದಲ್ಲಿ ನಿರ್ಣಯಿಸಿದ್ದನ್ನು ಈಗ ನೆರವೇರಿಸಿದ್ದೇನೆ. ಆದುದರಿಂದ ಕೋಟೆಕೊತ್ತಲುಗಳ ಪಟ್ಟಣಗಳನ್ನು ಹಾಳುದಿಬ್ಬಗಳನ್ನಾಗಿ ಮಾಡುವುದು ನಿನಗೆ ಸಾಧ್ಯವಾಯಿತು.
[27] ಅವುಗಳ ನಿವಾಸಿಗಳು ಬಲವಿಲ್ಲದವರಾಗಿ ಆಶಾಭಂಗಪಟ್ಟು ಕಳವಳಗೊಂಡರು. ಅವರು ಹೊಲದ ಗಿಡಕ್ಕೂ, ಹಸಿರು ಹುಲ್ಲಿಗೂ, ಮಾಳಿಗೆಯ ಮೇಲಣ ಹುಲ್ಲಿಗೂ, ಹೊಡೆಯುವುದಕ್ಕಿಂತ ಮೊದಲೇ ಒಣಗಿ ಹೋದ ಪೈರಿಗೂ ಸಮಾನರಾದರು.
[28] ನೀನು ಕುಳಿತುಕೊಳ್ಳುವುದೂ, ಹೊರಗೆ ಹೋಗುವುದೂ, ಒಳಗೆ ಬರುವುದೂ ನನಗೆ ಗೊತ್ತುಂಟು. ನೀನು ನನ್ನ ಮೇಲೆ ರೌದ್ರಾವೇಶನಾಗಿರುವುದನ್ನೂ ಬಲ್ಲೆನು.
[29] ಏಕೆಂದರೆ ನೀನು ನನ್ನ ವಿರುದ್ಧ ಕೋಪಗೊಂಡಿರುವುದೂ, ಅಸಮಾಧಾನವಾಗಿರುವುದೂ ನನಗೆ ತಿಳಿದುಬಂತು. ಆದುದರಿಂದ ನಿನಗೆ ಮೂಗುದಾರವನ್ನೂ, ಕಡಿವಾಣವನ್ನೂ ಹಾಕಿ ಬಂದ ದಾರಿಯಿಂದಲೇ ನಿನ್ನನ್ನು ಹಿಂದಕ್ಕೆ ಎಳೆದುಕೊಂಡು ಹೋಗುವೆನು” ಎಂಬುದಾಗಿ ಹೇಳಿದ್ದಾನೆ.
[30] ಈ ಮಾತುಗಳು ನೆರವೇರುವುದು ಎಂಬುದಕ್ಕೆ, ನೀವು ಈ ವರ್ಷದಲ್ಲಿ ಕೂಳೆಬೆಳೆಯನ್ನೂ, ಮುಂದಿನ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ, ಮೂರನೆಯ ವರ್ಷ ಹೊಲಗಳಲ್ಲಿ ಬಿತ್ತಿ ಕೊಯ್ದದ್ದನ್ನೂ, ದ್ರಾಕ್ಷಿತೋಟಗಳಲ್ಲಿ ವ್ಯವಸಾಯಮಾಡಿ ಕೂಡಿಸಿದ್ದನ್ನೂ ಅನುಭವಿಸುವುದೇ ಗುರುತಾಗಿರುವುದು.
[31] ತಪ್ಪಿಸಿಕೊಂಡು ಉಳಿದ ಯೆಹೂದ್ಯರು ದೇಶದಲ್ಲಿ ನೆಲೆಗೊಂಡು ಅಭಿವೃದ್ಧಿಯಾಗುವರು.
[32] ಯೆರೂಸಲೇಮಿನಲ್ಲಿ ಉಳಿದವರು ಹರಡಿಕೊಳ್ಳುವರು, ಚೀಯೋನ್ ಪರ್ವತದಲ್ಲಿ ತಪ್ಪಿಸಿಕೊಂಡವರು ಅಭಿವೃದ್ಧಿಹೊಂದುವರು; ಸೇನಾಧೀಶ್ವರನಾದ ಯೆಹೋವನ ಅನುಗ್ರಹವು ಇದನ್ನು ನೆರವೇರಿಸುವುದು.
[33] ಆತನು ಅಶ್ಶೂರದ ಅರಸನನ್ನು ಕುರಿತು, “ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ, ಅದಕ್ಕೆ ಬಾಣವನ್ನೆಸೆಯುವುದಿಲ್ಲ, ಗುರಾಣಿ ಹಿಡಿದಿರುವವರನ್ನು ಕಳುಹಿಸುವುದಿಲ್ಲ, ಅದನ್ನು ಕೆಡವಿ ಬಿಡುವುದಕ್ಕೋಸ್ಕರ ಅದರ ಎದುರಾಗಿ ಮಣ್ಣಿನ ದಿಬ್ಬವನ್ನು ಮಾಡುವುದಿಲ್ಲ.
[34] ಅವನು ಬಂದ ದಾರಿಯಿಂದಲೇ ಹಿಂದಿರುಗಿ ಹೋಗುವನು; ಈ ಪಟ್ಟಣಕ್ಕೆ ಬರುವುದೇ ಇಲ್ಲ.
[35] ನನಗೋಸ್ಕರವಾಗಿಯೂ, ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ ಪಟ್ಟಣವನ್ನು ಉಳಿಸಿ ಕಾಪಾಡುವೆನು” ಎಂದು ಹೇಳುತ್ತಾನೆ ಎಂಬುದೇ.
[36] ಆಗ ಯೆಹೋವನ ದೂತನು ಹೊರಟು ಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿ ಸೈನಿಕರನ್ನು ಸಂಹರಿಸಿದನು. ಬೆಳಿಗ್ಗೆ ಎದ್ದು ನೋಡುವಲ್ಲಿ ಅವರೆಲ್ಲರು ಹೆಣಗಳಾಗಿದ್ದರು.
[37] ಆಗ ಅಶ್ಶೂರ್ಯರ ಅರಸನಾದ ಸನ್ಹೇರೀಬನು ಹಿಂದಿರುಗಿ ನಿನವೆ ಪಟ್ಟಣಕ್ಕೆ ಹೋಗಿ ಅಲ್ಲಿ ವಾಸಿಸಿದನು.
[38] ಅವನು ಒಂದು ದಿನ ಗುಡಿಗೆ ಹೋಗಿ ತನ್ನ ದೇವರಾದ ನಿಸ್ರೋಕನನ್ನು ಮನೆಯಲ್ಲಿ ಪೂಜಿಸುತ್ತಿರುವಾಗ ಅದ್ರಮ್ಮೆಲೆಕ್, ಸರೆಚೆರ್ ಎಂಬ ಅವನ ಮಕ್ಕಳು ಅವನನ್ನು ಕತ್ತಿಯಿಂದ ಕೊಂದು, ಅರರಾಟ್ ದೇಶಕ್ಕೆ ಓಡಿಹೋದರು. ಅವನಿಗೆ ಬದಲಾಗಿ ಅವನ ಮಗನಾದ ಏಸರ್ ಹದ್ದೋನನು ಅರಸನಾದನು.